ಬಿಹಾರ ಉಪಚುನಾವಣೆ: ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷಕ್ಕೆ ಪರೀಕ್ಷೆ: ಬಂಕಿಪುರದಲ್ಲಿ ತ್ರಿಕೋನ ಸ್ಪರ್ಧೆ

ಬಿಹಾರ, ಮಧ್ಯಪ್ರದೇಶ, ಗುಜರಾತ್‌ ಉಪಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದೆ. ಬಿಹಾರದ ಬಂಕಿಪುರ ಕ್ಷೇತ್ರ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷಕ್ಕೆ ಮಹತ್ವದ ಪರೀಕ್ಷೆಯಾಗಿದೆ. ಸಾಂಪ್ರದಾಯಿಕ ಪಕ್ಷಗಳಾದ ಬಿಜೆಪಿ ಮತ್ತು ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಸವಾಲಾಗಿರುವ ಜನ್ ಸುರಾಜ್ ಜನಪ್ರಿಯತೆ, ಪ್ರಭಾವ ಈ ಫಲಿತಾಂಶದಿಂದ ಸ್ಪಷ್ಟವಾಗಲಿದೆ. ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಇದು ದಿಕ್ಸೂಚಿಯಾಗಲಿದೆ.

ಬಿಹಾರ ಉಪಚುನಾವಣೆ: ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷಕ್ಕೆ ಪರೀಕ್ಷೆ: ಬಂಕಿಪುರದಲ್ಲಿ ತ್ರಿಕೋನ ಸ್ಪರ್ಧೆ
ಪ್ರಶಾಂತ್ ಕಿಶೋರ್

Updated on: Aug 03, 2026 | 8:31 AM

ನವದೆಹಲಿ, ಆಗಸ್ಟ್ 03: ಬಿಹಾರ, ಮಧ್ಯಪ್ರದೇಶ ಮತ್ತು ಗುಜರಾತ್‌ ರಾಜ್ಯಗಳ ಮೂರು ಪ್ರಮುಖ ವಿಧಾನಸಭಾ ಕ್ಷೇತ್ರಗಳಿಗೆ ಜುಲೈ 30 ರಂದು ನಡೆದಿದ್ದ ಉಪಚುನಾವಣೆಯ ಮತಎಣಿಕೆ ಬೆಳಗ್ಗೆ 8 ಗಂಟೆಯಿಂದ ಆರಂಭಗೊಂಡಿದೆ. ಆರಂಭದಲ್ಲಿ ಅಂಚೆ ಮತಗಳ ಎಣಿಕೆ ನಡೆಯುತ್ತಿದ್ದು, ನಂತರ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ (EVM) ದಾಖಲಾದ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಈ ಫಲಿತಾಂಶವು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಮಾತ್ರವಲ್ಲದೆ, ಬಿಹಾರದ ಪ್ರಶಾಂತ್ ಕಿಶೋರ್(Prashant Kishor) ನೇತೃತ್ವದ ‘ಜನ್ ಸುರಾಜ್’ ಪಕ್ಷಕ್ಕೂ ಅತ್ಯಂತ ನಿರ್ಣಾಯಕವಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ರಾಜೀನಾಮೆಯಿಂದ ತೆರವಾದ ಈ ಕ್ಷೇತ್ರವನ್ನು ಬಿಜೆಪಿಯ ಸುರಕ್ಷಿತ ‘ನಗರ ಭದ್ರಕೋಟೆ’ ಎಂದೇ ಪರಿಗಣಿಸಲಾಗಿದೆ. ಈ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಮಧ್ಯಪ್ರದೇಶದ ದಾಟಿಯಾ ಕ್ಷೇತ್ರವು ಬಿಜೆಪಿಯ ಮತ್ತೊಂದು ಸಾಂಪ್ರದಾಯಿಕ ಭದ್ರಕೋಟೆಯಾಗಿದ್ದು, ಇಲ್ಲಿ ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡಿದೆ. ಗುಜರಾತ್‌ನ ಮಂಜಲ್ಪುರ ಕ್ಷೇತ್ರದಲ್ಲೂ ಭಾರಿ ಮತದಾನ ದಾಖಲಾಗಿದ್ದು, ಫಲಿತಾಂಶದತ್ತ ಎಲ್ಲರ ಕುತೂಹಲ ನೆಟ್ಟಿದೆ.

ಪ್ರಶಾಂತ್ ಕಿಶೋರ್ ಹಾಗೂ ಜನ್ ಸುರಾಜ್ ಭವಿಷ್ಯಕ್ಕೆ ಅಗ್ನಿಪರೀಕ್ಷೆ
ರಾಜಕೀಯ ಪ್ರವೇಶದ ನಂತರದ ಪ್ರಮುಖ ಪರೀಕ್ಷೆ: ಪ್ರಸಿದ್ಧ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ತಮ್ಮ ‘ಜನ್ ಸುರಾಜ್’ ಪಾದಯಾತ್ರೆಯ ನಂತರ ಅಧಿಕೃತ ರಾಜಕೀಯ ಪಕ್ಷವಾಗಿ ‘ಜನ್ ಸುರಾಜ್ ಪಾರ್ಟಿ’ಯನ್ನು ಸ್ಥಾಪಿಸಿ ಬಿಹಾರದ ರಾಜಕೀಯ ಅಖಾಡಕ್ಕೆ ಧುಮುಕಿದ್ದಾರೆ.

ಮತ್ತಷ್ಟು ಓದಿ: ಬಂಕಿಪುರ ಉಪಚುನಾವಣೆ : ಪ್ರಶಾಂತ್ ಕಿಶೋರ್ ಕುಟುಂಬದ ಒಟ್ಟು ಆಸ್ತಿ 198 ಕೋಟಿ ರೂ.ಗೂ ಅಧಿಕ!

ಬಂಕಿಪುರ ಉಪಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಅವರ ಪಕ್ಷವು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಸಾಂಪ್ರದಾಯಿಕ ಆರ್‌ಜೆಡಿ-ಕಾಂಗ್ರೆಸ್ (ಮಹಾಘಟಬಂಧನ) ಹಾಗೂ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟಕ್ಕೆ ಪರ್ಯಾಯವಾಗಿ ಯುವಜನತೆ ಮತ್ತು ನಗರವಾಸಿಗಳ ಮತಗಳನ್ನು ಸೆಳೆಯುವ ತಂತ್ರ ಹೆಣೆದಿದೆ.

ಬಿಹಾರ ಮುಂಬರುವ ವಿಧಾನಸಭಾ ಚುನಾವಣೆಗೆ ಸಿದ್ಧವಾಗುತ್ತಿರುವ ಈ ಸಮಯದಲ್ಲಿ, ಈ ಉಪಚುನಾವಣೆಯ ಫಲಿತಾಂಶವು ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷದ ನಿಜವಾದ ‘ಜನಪ್ರಿಯತೆ’ ಮತ್ತು ಪ್ರಭಾವ ಎಷ್ಟಿದೆ ಎಂಬುದನ್ನು ಸಾಬೀತುಪಡಿಸಲಿದೆ. ಜುಲೈ 30 ರಂದು ನಡೆದ ಮತದಾನದಲ್ಲಿ ಮೂರೂ ಕ್ಷೇತ್ರಗಳಲ್ಲಿ ಶಾಂತಿಯುತವಾಗಿ ಭಾರಿ ಪ್ರಮಾಣದ ಮತದಾನ ದಾಖಲಾಗಿತ್ತು.

ಮಧ್ಯಪ್ರದೇಶ ಮತ್ತು ಬಿಹಾರದಲ್ಲಿ ಆಡಳಿತಾರೂಢ ಬಿಜೆಪಿ ಮೈತ್ರಿಕೂಟಕ್ಕೆ ಈ ಸಣ್ಣ ಉಪಚುನಾವಣೆಗಳು ರಾಜ್ಯ ನಾಯಕತ್ವ ಮತ್ತು ಆಡಳಿತ ವೈಖರಿಯ ಮೇಲಿನ ‘ಪ್ರಜಾಪ್ರಭುತ್ವದ ತೀರ್ಪು’ ಎಂದು ವಿಶ್ಲೇಷಿಸಲಾಗುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us