ಮಾರ್ಚ್ 20ರೊಳಗೆ ಬಿಜೆಪಿಗೆ ಹೊಸ ರಾಷ್ಟ್ರಾಧ್ಯಕ್ಷರ ಆಯ್ಕೆ ಸಾಧ್ಯತೆ
ದೆಹಲಿ ವಿಧಾನಸಭಾ ಚುನಾವಣೆ ಮತ್ತು ರಾಜ್ಯ ಘಟಕಗಳಲ್ಲಿ ಬಾಕಿ ಇರುವ ಚುನಾವಣೆಗಳಿಂದಾಗಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯೂ ವಿಳಂಬವಾಯಿತು. ರಾಜ್ಯಗಳಲ್ಲಿ ಚುನಾವಣಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಬಿಜೆಪಿ ಪ್ರಯತ್ನಗಳನ್ನು ತೀವ್ರಗೊಳಿಸುತ್ತಿದೆ.ಈ ನಡುವೆ ಬಿಜೆಪಿಗೆ ಮಾರ್ಚ್ 20ರೊಳಗೆ ಹೊಸ ರಾಷ್ಟ್ರೀಯ ಅಧ್ಯಕ್ಷರ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಬಾಕಿ ಇದ್ದು, ರಾಜ್ಯ ಘಟಕಗಳಲ್ಲಿನ ಪಕ್ಷದ ಚುನಾವಣೆಗಳ ನಂತರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ನವದೆಹಲಿ: ಬಿಜೆಪಿಗೆ ಇನ್ನೂ ಹೊಸ ರಾಷ್ಟ್ರಾಧ್ಯಕ್ಷರ ಘೋಷಣೆಯಾಗಿಲ್ಲ. ಜೆ.ಪಿ. ನಡ್ಡಾ ಅವರನ್ನೇ ಬಿಜೆಪಿ ರಾಷ್ಟ್ರಾಧ್ಯಕ್ಷರನ್ನಾಗಿ ಮುಂದುವರೆಸಲಾಗುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ನಡೆಯಲಿದ್ದು, ಜನವರಿಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕಿತ್ತು. ಆದರೆ, ದೆಹಲಿ ವಿಧಾನಸಭಾ ಚುನಾವಣೆಗಳು ಮತ್ತು ಬಾಕಿ ಇರುವ ರಾಜ್ಯ ಘಟಕದ ಚುನಾವಣೆಗಳಿಂದಾಗಿ ಜೆ.ಪಿ. ನಡ್ಡಾ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವಲ್ಲಿ ವಿಳಂಬವಾಯಿತು.ಬಿಜೆಪಿ ಸಂವಿಧಾನದ ಪ್ರಕಾರ, ಅರ್ಧದಷ್ಟು ರಾಜ್ಯಗಳಲ್ಲಿ ಚುನಾವಣೆಗೂ ಮುನ್ನ ಬಿಜೆಪಿ ಅಧ್ಯಕ್ಷರ ಚುನಾವಣೆ ನಡೆಸಿಲ್ಲ. ಇಲ್ಲಿಯವರೆಗೆ, ಬಿಜೆಪಿ 28 ರಾಜ್ಯಗಳ ಪೈಕಿ 12 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣೆಗಳನ್ನು ಪೂರ್ಣಗೊಳಿಸಿದೆ. ಮಾನದಂಡಗಳನ್ನು ಪೂರೈಸಲು ಬಿಜೆಪಿ ಮುಂಬರುವ ವಾರಗಳಲ್ಲಿ 6 ರಾಜ್ಯಗಳಲ್ಲಿ ಬಿಜೆಪಿ ಅಧ್ಯಕ್ಷೀಯ ಚುನಾವಣೆ ನಡೆಸುವ ಸಾಧ್ಯತೆಯಿದೆ.
ಜೆ.ಪಿ ನಡ್ಡಾ ಅವರನ್ನು ಆರಂಭದಲ್ಲಿ 2019ರ ಜೂನ್ 17ರಂದು ಬಿಜೆಪಿ ಕಾರ್ಯನಿರತ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಜನವರಿ 20, 2020ರವರೆಗೆ ಆ ಸ್ಥಾನದಲ್ಲಿ ಅವರೇ ಮುಂದುವರೆದರು. ಜನವರಿ 20, 2020ರಂದು ಅವರು ಪಕ್ಷದ 11ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದರು. ಅಂದಿನಿಂದ ಅವರೇ ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಗೃಹಜ್ಯೋತಿ ದುಡ್ಡು ಸರ್ಕಾರ ಕೊಡದಿದ್ರೆ ಜನರಿಂದಲೇ ವಸೂಲಿ? ಎಸ್ಕಾಂಗಳ ಪ್ರಸ್ತಾವಕ್ಕೆ ಬಿಜೆಪಿ ಕಿಡಿ
ಅಟಲ್ ಬಿಹಾರಿ ವಾಜಪೇಯಿ 1980ರಿಂದ 1986ರವರೆಗೆ ಬಿಜೆಪಿಯ ಮೊದಲ ಅಧ್ಯಕ್ಷರಾಗಿದ್ದರು. ಲಾಲ್ ಕೃಷ್ಣ ಅಡ್ವಾಣಿ ಹಲವಾರು ಅವಧಿಗೆ ಈ ಹುದ್ದೆಯನ್ನು ಅಲಂಕರಿಸಿದ್ದರು. ಬಳಿಕ, ಮುರಳ ಮನೋಹರ ಜೋಶಿ, ಬಂಗಾರು ಲಕ್ಷ್ಮಣ್, ಎಂ. ವೆಂಕಯ್ಯ ನಾಯ್ಡು, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಅಮಿತ್ ಶಾ ಮುಂತಾದವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




