ಸಂಸದರಾಗಿ ಪ್ರಮಾಣ ವಚನ ಸ್ವೀಕಾರದ ವೇಳೆ ಜೈ ಹಿಂದೂ ರಾಷ್ಟ್ರ ಘೋಷಣೆ ಕೂಗಿದ ಛತ್ರಪಾಲ್ ಸಿಂಗ್ ಗಂಗ್ವಾರ್

|

Updated on: Jun 25, 2024 | 8:34 PM

Chhatrapal Singh Gangwar: ಬಿಜೆಪಿ ಸಂಸದ ಛತ್ರಪಾಲ್ ಸಿಂಗ್ ಗಂಗ್ವಾರ್ ಇಂದು 18ನೇ ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ವೇಳೆ "ಜೈ ಹಿಂದೂ ರಾಷ್ಟ್ರ, ಜೈ ಭಾರತ್" ಎಂಬ ಘೋಷಣೆಗಳೊಂದಿಗೆ ತಮ್ಮ ಪ್ರಮಾಣವಚನವನ್ನು ಮುಕ್ತಾಯಗೊಳಿಸಿದರು. ಇದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ವಿರೋಧ ಪಕ್ಷದ ನಾಯಕರಿಂದ ಆಕ್ಷೇಪ ವ್ಯಕ್ತಪಡಿಸಿದರು.

ಸಂಸದರಾಗಿ ಪ್ರಮಾಣ ವಚನ ಸ್ವೀಕಾರದ ವೇಳೆ ಜೈ ಹಿಂದೂ ರಾಷ್ಟ್ರ ಘೋಷಣೆ ಕೂಗಿದ ಛತ್ರಪಾಲ್ ಸಿಂಗ್ ಗಂಗ್ವಾರ್
ಛತ್ರಪಾಲ್ ಸಿಂಗ್ ಗಂಗ್ವಾರ್
Follow us on

ನವದೆಹಲಿ: ಸೋಮವಾರದಿಂದ ಲೋಕಸಭಾ ಅಧಿವೇಶನ (Parliament Session) ಆರಂಭವಾಗಿದ್ದು, ಲೋಕಸಭೆ ಚುನಾವಣೆ (Lok Sabha Election) ಮುಗಿದ ನಂತರ ಸಂಸತ್ ಅಧಿವೇಶನದ ಎರಡನೇ ದಿನವಾದ ಇಂದು ಅನೇಕ ಸಂಸದರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ವೇಳೆ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ತಮ್ಮ ಪ್ರಮಾಣವಚನವನ್ನು ಮುಕ್ತಾಯಗೊಳಿಸುತ್ತಿದ್ದಂತೆ ‘ಜೈ ಭೀಮ್, ಜೈ ತೆಲಂಗಾಣ, ಜೈ ಪ್ಯಾಲೆಸ್ತೀನ್’ ಎಂಬ ಘೋಷಣೆ ಕೂಗಿದ ನಂತರ ವಿವಾದ ಭುಗಿಲೆದ್ದಿತು. ಇದಾದ ನಂತರ ಪ್ರಮಾಣವಚನ ಸ್ವೀಕರಿಸಿದ ಬಿಜೆಪಿ ಸಂಸದ ಛತ್ರಪಾಲ್ ಸಿಂಗ್ ಗಂಗ್ವಾರ್ (Chhatrapal Singh Gangwar) ಜೈ ಹಿಂದೂ ರಾಷ್ಟ್ರ, ಜೈ ಭಾರತ್ ಎಂದು ಘೋಷಣೆ ಕೂಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಒಟ್ಟು 262 ಹೊಸ ಸಂಸದರು ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ ನಂತರ ಬಿಜೆಪಿ ನಾಯಕ ಛತ್ರಪಾಲ್ ಸಿಂಗ್ ಗಂಗ್ವಾರ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಛತ್ರಪಾಲ್ ಸಿಂಗ್ ಗಂಗ್ವಾರ್ ಇಂದು ಉತ್ತರ ಪ್ರದೇಶದ ಬರೇಲಿಯಿಂದ ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ, ಸಂಸತ್ ಅಧಿವೇಶನದ 2ನೇ ದಿನದಂದು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ 68 ವರ್ಷದ ನಾಯಕ ಛತ್ರಪಾಲ್ ಸಿಂಗ್ ಗಂಗ್ವಾರ್ ‘ಜೈ ಹಿಂದೂ ರಾಷ್ಟ್ರ, ಜೈ ಭಾರತ್’ ಎಂದು ಹೇಳಿ ವಿವಾದಕ್ಕೆ ಎಡೆಮಾಡಿಕೊಟ್ಟರು.


ಇದನ್ನೂ ಓದಿ: Asaduddin Owaisi: ಸದನದಲ್ಲಿ ಜೈ ಭೀಮ್, ಜೈ ಪ್ಯಾಲೆಸ್ತೀನ್ ಘೋಷಣೆ ಕೂಗಿದ ಅಸಾದುದ್ದೀನ್ ಓವೈಸಿ; ವಿಡಿಯೋ ವೈರಲ್

ಗಂಗ್ವಾರ್ ಅವರ ಹೇಳಿಕೆಗೆ ವಿರೋಧ ಪಕ್ಷದ ನಾಯಕರು ಆಕ್ಷೇಪ ವ್ಯಕ್ತಪಡಿಸಿ ಇದು “ಸಂವಿಧಾನಕ್ಕೆ ವಿರುದ್ಧ” ಎಂದು ಟೀಕಿಸಿದರು. ಇಂದು ಲೋಕಸಭೆಯಲ್ಲಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಅಸಾದುದ್ದೀನ್ ಓವೈಸಿ ಪ್ಯಾಲೆಸ್ತೀನ್‌ಗೆ ಬೆಂಬಲವಾಗಿ ಜೈ ಪ್ಯಾಲೆಸ್ತೀನ್ ಘೋಷಣೆ ಕೂಗಿದರು. ಹೈದರಾಬಾದ್ ಸಂಸದ ಓವೈಸಿ ಅವರು ಜೈ ಪ್ಯಾಲೆಸ್ತೀನ್ ಘೋಷಣೆ ಕೂಗಿದ ನಂತರ ಸಂಸತ್ತಿನಲ್ಲಿ ಮತ್ತು ಹೊರಗೆ ಕೋಲಾಹಲ ಉಂಟಾಯಿತು. ಆದರೆ, ಬಿಜೆಪಿಯ ಶೋಭಾ ಕರಂದ್ಲಾಜೆ ಆಕ್ಷೇಪ ವ್ಯಕ್ತಪಡಿಸಿದ ನಂತರ, ರಾಧಾಮೋಹನ್ ಸಿಂಗ್ ಅದನ್ನು ದಾಖಲೆಯಿಂದ ತೆಗೆದುಹಾಕುವಂತೆ ಸೂಚನೆ ನೀಡಿದರು.

ಅಸಾದುದ್ದೀನ್ ಓವೈಸಿ ತಮ್ಮ ಪ್ರಮಾಣವಚನ ಸ್ವೀಕಾರದ ವೇಳೆ ಜೈ ಪ್ಯಾಲೆಸ್ತೀನ್ ಎಂದು ಘೋಷಣೆ ಕೂಗಿದ ಕೂಡಲೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಆಕ್ಷೇಪ ವ್ಯಕ್ತಪಡಿಸಿದರು. ಇದಾದ ಬಳಿಕ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪ್ರಮಾಣ ವಚನ ಸ್ವೀಕರಿಸುವಾಗ ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು ಸಮಾರೋಪದಲ್ಲಿ ‘ಜೈ ಹಿಂದ್, ಜೈ ಸಂವಿಧಾನ’ ಎಂದು ಘೋಷಣೆ ಕೂಗಿದ್ದಾರೆ.

ಇದನ್ನೂ ಓದಿ: ನಿಮಗಿನ್ನು ಇಬ್ಬರು ಸಂಸದರು; ವಯನಾಡಿನ ಜನತೆಗೆ ರಾಹುಲ್ ಗಾಂಧಿ ಸಂದೇಶ

18ನೇ ಲೋಕಸಭೆಯ ಮೊದಲ ಅಧಿವೇಶನ ಸೋಮವಾರ ಪ್ರಾರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಮಂತ್ರಿ ಮಂಡಳಿಯ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕೇಂದ್ರ ಸಚಿವರಾದ ಜಿ. ಕಿಶನ್ ರೆಡ್ಡಿ, ಚಿರಾಗ್ ಪಾಸ್ವಾನ್, ಕಿರಣ್ ರಿಜಿಜು, ನಿತಿನ್ ಗಡ್ಕರಿ ಮತ್ತು ಮನ್ಸುಖ್ ಮಾಂಡವಿಯಾ 18ನೇ ಲೋಕಸಭೆಯ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಕೇಂದ್ರ ಸಚಿವರಾದ ಭೂಪೇಂದರ್ ಯಾದವ್, ಗಿರಿರಾಜ್ ಸಿಂಗ್, ಗಜೇಂದ್ರ ಸಿಂಗ್ ಶೇಖಾವತ್, ಜೆಡಿಯು ಸಂಸದ ರಾಜೀವ್ ರಂಜನ್ (ಲಾಲನ್) ಸಿಂಗ್, ಬಿಜೆಪಿ ಸಂಸದ ಪಿಯೂಷ್ ಗೋಯಲ್ ಮತ್ತು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಕೂಡ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ