
ನವದೆಹಲಿ, ಅಕ್ಟೋಬರ್ 15: ‘ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್’ (ಎಐಎಸ್ಎ) ಅಧ್ಯಕ್ಷೆ ನೇಹಾ ಬೋರಾ ಬಾಂಗ್ಲಾದೇಶದ ಯುವಜನರ ‘ಜೆನ್-ಜಿ’ ಚಳವಳಿಯನ್ನು ಶ್ಲಾಘಿಸಿ ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತಿರುವುದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. “ನೇಹಾ ಬೋರಾ ಬಾಯಿಯಿಂದ ಹೊರಬರುತ್ತಿರುವ ಮಾತುಗಳು ಅವರದ್ದಾಗಿದ್ದರೂ, ಅದರ ಹಿಂದಿರುವ ಸಿದ್ಧಾಂತ ಮತ್ತು ಆಲೋಚನೆ ಸಂಪೂರ್ಣವಾಗಿ ರಾಹುಲ್ ಗಾಂಧಿಯವರದ್ದು. ಇಬ್ಬರೂ ಸೇರಿ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಬಯಸುತ್ತಿದ್ದಾರೆ” ಎಂದು ಬಿಜೆಪಿ ನಾಯಕ ಪ್ರದೀಪ್ ಭಂಡಾರಿ ಆಕ್ರೋಶ ಹೊರಹಾಕಿದ್ದಾರೆ.
ಎಸ್ಐಆರ್ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ನೇಹಾ ಬೋರಾ ಪ್ರಮುಖ ಪಾತ್ರ ವಹಿಸಿದ್ದು, ಈ ಹೇಳಿಕೆಯು ನೂತನ ರಾಜಕೀಯ ಸಮರಕ್ಕೆ ಕಾರಣವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, “ರಾಹುಲ್ ಗಾಂಧಿಯವರ ಪ್ರಮುಖ ಮುಖವಾಗಿರುವ ನೇಹಾ ಬೋರಾ, ವಿಪಕ್ಷಗಳ ಈ ಪ್ರತಿಭಟನೆಯು ಕೇವಲ ರಾಜಕೀಯವಲ್ಲ, ಬದಲಿಗೆ ಸರ್ಕಾರವನ್ನು ಉರುಳಿಸುವ ಉದ್ದೇಶದ್ದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಮಾತುಗಳು ನೇಹಾ ಬೋರಾ ಅವರದ್ದಾಗಿದ್ದರೂ, ಇದರ ಹಿಂದಿರುವ ಸಿದ್ಧಾಂತ ರಾಹುಲ್ ಗಾಂಧಿಯವರದ್ದು. ಬಾಂಗ್ಲಾದೇಶದಲ್ಲಿ ನಡೆದಂತೆ ಭಾರತದಲ್ಲೂ ಅರಾಜಕತೆಯ ಜೆನ್-ಜಿ ಚಳವಳಿ ರೂಪಿಸಿ, ಭಾರತೀಯ ಪ್ರಜಾಪ್ರಭುತ್ವವನ್ನು ಧ್ವಂಸ ಮಾಡಲು ರಾಹುಲ್ ಗಾಂಧಿ ಮತ್ತು ಅವರ ವಲಯವು ಸಂಚು ರೂಪಿಸುತ್ತಿದೆ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ನಮಗೆ ದಾರಿ ತೋರಿಸಿದ್ದು ನೀವೇ: ಭಾರತದ ಜೆನ್-ಝಿ ಹೋರಾಟಕ್ಕೆ ಬಾಂಗ್ಲಾದೇಶವೇ ಸ್ಫೂರ್ತಿ ಎಂದ ನೇಹಾ ಬೋರಾ
“ಬಾಂಗ್ಲಾದೇಶದಲ್ಲಿ ಹಿಂಸಾತ್ಮಕ ಜನಸಂದಣಿ ಮತ್ತು ಅರಾಜಕತೆಯನ್ನು ಬಳಸಿಕೊಂಡು ಇಡೀ ಸರ್ಕಾರವನ್ನು ಉರುಳಿಸಲಾಯಿತು. ಈಗ ಭಾರತದಲ್ಲೂ ಅದೇ ಮಾದರಿಯ ಅರಾಜಕತೆಯ ಚಳವಳಿಯನ್ನು ತರಲು ನೇಹಾ ಬೋರಾ ಮತ್ತು ರಾಹುಲ್ ಗಾಂಧಿ ಸಂಚು ರೂಪಿಸುತ್ತಿದ್ದಾರೆ. ಪ್ರಜಾಸತ್ತಾತ್ಮಕ ಚುನಾವಣಾ ಹಾದಿಯಲ್ಲಿ ಗೆಲ್ಲಲು ಸಾಧ್ಯವಾಗದಿದ್ದಾಗ ಇಂತಹ ಪ್ರಜಾಪ್ರಭುತ್ವ ವಿರೋಧಿ ಹಾದಿ ಹಿಡಿದಿದ್ದಾರೆ” ಎಂದು ಪ್ರದೀಪ್ ಭಂಡಾರಿ ಆರೋಪಿಸಿದ್ದಾರೆ.
ನೇಹಾ ಬೋರಾ ಅವರನ್ನು ರಾಹುಲ್ ಗಾಂಧಿಯವರ “ಪೋಸ್ಟರ್ ಗರ್ಲ್” ಎಂದು ಟೀಕಿಸಿರುವ ಬಿಜೆಪಿ, ವಿಪಕ್ಷಗಳು ಚುನಾವಣಾ ಆಯೋಗದ ನೆಪವನ್ನಿಟ್ಟುಕೊಂಡು ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಯತ್ನಿಸುತ್ತಿವೆ ಎಂದು ವಾಗ್ದಾಳಿ ನಡೆಸಿದೆ.
ಕರ್ನಾಟಕ ಬಿಜೆಪಿ ನಾಯಕ ಸಿ.ಟಿ. ರವಿ ಸೇರಿದಂತೆ ವಿವಿಧ ಬಿಜೆಪಿ ನಾಯಕರು ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ವಿದ್ಯಾರ್ಥಿ ಹೋರಾಟದ ಮುಖವಾಡ ಧರಿಸಿ ದೇಶದಲ್ಲಿ ರಾಜಕೀಯ ಅಸ್ಥಿರತೆ ಮತ್ತು ಅರಾಜಕತೆಯನ್ನು ಹರಡಲು ಯತ್ನಿಸುತ್ತಿರುವುದು ಅತ್ಯಂತ ಆತಂಕಕಾರಿ ಮತ್ತು ಖಂಡನೀಯ ಎಂದು ಎಚ್ಚರಿಸಿದ್ದಾರೆ.
ನೇಹಾ ಬೋರಾ ಹೇಳಿದ್ದೇನು?:
ಅಕ್ಟೋಬರ್ 14ರಂದು ಬಿಡುಗಡೆಯಾದ ವಿಡಿಯೋ ಸಂದೇಶದಲ್ಲಿ, ಬಾಂಗ್ಲಾದೇಶದ ‘ಸೋಷಿಯಲಿಸ್ಟ್ ಸ್ಟೂಡೆಂಟ್ಸ್ ಫ್ರಂಟ್’ ಸಂಸ್ಥೆಯ 6ನೇ ರಾಷ್ಟ್ರೀಯ ಸಮ್ಮೇಳನಕ್ಕೆ ಶುಭ ಕೋರಿದ್ದ ನೇಹಾ ಬೋರಾ, ಬಾಂಗ್ಲಾದೇಶದ ವಿದ್ಯಾರ್ಥಿ ಚಳವಳಿಯಿಂದ ಭಾರತದ ಯುವ ಕಾರ್ಯಕರ್ತರು ಪ್ರೇರಣೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದರು.
“ಇಡೀ ದೇಶದಲ್ಲಿ ನಾವು ಕಾಣುತ್ತಿರುವ ಜೆನ್-ಜಿ ಚಳವಳಿಯು ಮೊದಲು ಆರಂಭವಾಗಿದ್ದು ಬಾಂಗ್ಲಾದೇಶದಲ್ಲಿ. ಭಾರತದ ಯುವಜನತೆಗೆ ದಾರಿ ತೋರಿಸಿದ್ದಕ್ಕಾಗಿ ಮತ್ತು ಬೆಂಬಲ ಸೂಚಿಸಿದ್ದಕ್ಕಾಗಿ ನಿಮಗೆ ಅಭಿನಂದನೆಗಳು. ಬಾಂಗ್ಲಾದೇಶದಲ್ಲಿ ಆರಂಭವಾದ ಈ ಹೋರಾಟವು ಪ್ರಜಾಸತ್ತಾತ್ಮಕ ಹಾಗೂ ಮತದಾನದ ಹಕ್ಕುಗಳಿಗಾಗಿ ಆಗಿತ್ತು. ನಾವು ನಿಮಗೆ ಸಂಪೂರ್ಣ ಬೆಂಬಲ ನೀಡುತ್ತೇವೆ ಮತ್ತು ನಿಮ್ಮ ಹೋರಾಟಗಳಿಂದ ಸ್ಫೂರ್ತಿ ಪಡೆಯುತ್ತೇವೆ. ಬಾಂಗ್ಲಾದೇಶ ಮತ್ತು ಭಾರತದ ಯುವಜನತೆ ಒಂದಾಗಿ ಉತ್ತಮ ದಕ್ಷಿಣ ಏಷ್ಯಾ ಹಾಗೂ ಉತ್ತಮ ಜಗತ್ತಿಗಾಗಿ ಹೋರಾಡಲು ಸಾಧ್ಯವಿದೆ” ಎಂದು ಅವರು ಹೇಳಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ