ಹಿಮಾಚಲ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ; 6 ಮಂದಿ ದುರ್ಮರಣ, 12ಕ್ಕೂ ಹೆಚ್ಚು ಜನರಿಗೆ ಗಾಯ
ಕಳೆದ ವರ್ಷ ಫೆಬ್ರವರಿಯಲ್ಲಿ ತಮಿಳುನಾಡಿನ ವಿರುದುನಗರ ಜಿಲ್ಲೆಯ ವೆಂಬಕೊಟ್ಟೈ ಬಳಿಯ ಶ್ರೀ ಮರಿಯಮ್ಮಳ್ ಪಟಾಕಿ ಘಟಕದಲ್ಲಿ ಸ್ಫೋಟವುಂಟಾಗಿ ಸುಮಾರು 20 ಕಾರ್ಮಿಕರು ಮೃತಪಟ್ಟಿದ್ದರು.
ದೆಹಲಿ: ಹಿಮಾಚಲ ಪ್ರದೇಶದ (Himachal Pradesh) ಉನಾ ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ (Fireworks Factory) ಸ್ಫೋಟವುಂಟಾಗಿ ಆರು ಮಂದಿ ಮೃತಪಟ್ಟಿದ್ದು, 12 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉನಾ ಜಿಲ್ಲೆಯ ತಹ್ಲಿವಾಲ್ ಕೈಗಾರಿಕಾ ಪ್ರದೇಶದಲ್ಲಿ ಇರುವ ಕಾರ್ಖಾನೆಯಲ್ಲಿ ಈ ದುರ್ಘಟನೆ ನಡೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ನಡೆದ ಬೆನ್ನಲ್ಲೇ, ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ತೆರಳಿದ್ದಾರೆ. ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು. ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪಟಾಕಿ ಕಾರ್ಖಾನೆಗಳಲ್ಲಿ ಆಗಾಗ ಸ್ಫೋಟ, ಬೆಂಕಿಯಿಂದ ಅನಾಹುತವಾಗುತ್ತಲೇ ಇರುತ್ತದೆ. ಅಲ್ಲಿನ ಕೆಲಸಗಾರರು ಸದಾ ಅಪಾಯದಲ್ಲೇ ಕೆಲಸ ಮಾಡುತ್ತಿರುತ್ತಾರೆ. ಕಳೆದ ವರ್ಷ ಫೆಬ್ರವರಿಯಲ್ಲಿ ತಮಿಳುನಾಡಿನ ವಿರುದುನಗರ ಜಿಲ್ಲೆಯ ವೆಂಬಕೊಟ್ಟೈ ಬಳಿಯ ಶ್ರೀ ಮರಿಯಮ್ಮಳ್ ಪಟಾಕಿ ಘಟಕದಲ್ಲಿ ಸ್ಫೋಟವುಂಟಾಗಿ ಸುಮಾರು 20 ಕಾರ್ಮಿಕರು ಮೃತಪಟ್ಟಿದ್ದರು. 33ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಇತ್ತೀಚಿನ ವರ್ಷಗಳಲ್ಲೇ ನಡೆದ ಭೀಕರ ಪಟಾಕಿ ಕಾರ್ಖಾನೆ ದುರಂತ ಎಂದು ಹೇಳಲಾಗಿತ್ತು. ಹಾಗೇ, 2022 ರ ಜನವರಿಯಲ್ಲಿ ಶಿವಕಾಶಿಯ ಪುಡುಪುಟ್ಟಿ ಬಳಿಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟಗೊಂಡು 5ಮಂದಿ ಸಾವನ್ನಪ್ಪಿದ್ದರು.
ಇದನ್ನೂ ಓದಿ: ಸ್ವಿಸ್ ಬ್ಯಾಂಕ್ನಲ್ಲಿ ಅಕ್ರಮ ಆಸ್ತಿ; ಸಾವಿರಾರು ಆರೋಪಿಗಳ ಪಟ್ಟಿಯಲ್ಲಿದೆ ಪಾಕಿಸ್ತಾನ ಐಎಸ್ಐ ಮಾಜಿ ಮುಖ್ಯಸ್ಥನ ಹೆಸರು !
Published On - 1:42 pm, Tue, 22 February 22