Russia-Ukraine Crisis: ಕಾಯಬೇಡಿ, ತಕ್ಷಣ ವಾಪಾಸ್ ಬನ್ನಿ; ಉಕ್ರೇನ್​ನಲ್ಲಿರುವ ವಿದ್ಯಾರ್ಥಿಗಳಿಗೆ ಭಾರತೀಯ ರಾಯಭಾರ ಕಚೇರಿ ಸೂಚನೆ

ಉಕ್ರೇನ್‌ನಲ್ಲಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ಹೆಚ್ಚಿನ ಮಟ್ಟದ ಉದ್ವಿಗ್ನತೆ ಮತ್ತು ಅನಿಶ್ಚಿತತೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಉಕ್ರೇನ್​ನಲ್ಲಿ ಉಳಿದುಕೊಳ್ಳುವುದು ಅನಿವಾರ್ಯವಲ್ಲದ ಎಲ್ಲಾ ಭಾರತೀಯ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಉಕ್ರೇನ್ ತೊರೆಯಲು ಸೂಚಿಸಲಾಗಿದೆ.

Russia-Ukraine Crisis: ಕಾಯಬೇಡಿ, ತಕ್ಷಣ ವಾಪಾಸ್ ಬನ್ನಿ; ಉಕ್ರೇನ್​ನಲ್ಲಿರುವ ವಿದ್ಯಾರ್ಥಿಗಳಿಗೆ ಭಾರತೀಯ ರಾಯಭಾರ ಕಚೇರಿ ಸೂಚನೆ
ಉಕ್ರೇನ್
Follow us
| Updated By: ಸುಷ್ಮಾ ಚಕ್ರೆ

Updated on:Feb 22, 2022 | 2:05 PM

ನವದೆಹಲಿ: ಉಕ್ರೇನ್ ಮತ್ತು ರಷ್ಯಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯಗಳಿಂದ ಆನ್‌ಲೈನ್ ತರಗತಿಗಳ ದೃಢೀಕರಣಕ್ಕಾಗಿ ಕಾಯುವ ಬದಲು ತಕ್ಷಣ ಸ್ವದೇಶಕ್ಕೆ ವಾಪಾಸಾಗಿ ಎಂದು ಭಾರತೀಯ ವಿದ್ಯಾರ್ಥಿಗಳಿಗೆ ಉಕ್ರೇನ್‌ನಲ್ಲಿರುವ (Ukraine) ಭಾರತೀಯ ರಾಯಭಾರ ಕಚೇರಿ ಹೇಳಿದೆ. ಭಾರತೀಯ ರಾಯಭಾರ ಕಚೇರಿಯು ವೈದ್ಯಕೀಯ ವಿಶ್ವವಿದ್ಯಾಲಯಗಳಿಂದ ಆನ್‌ಲೈನ್ ತರಗತಿಗಳ ದೃಢೀಕರಣದ ಕುರಿತು ಹೆಚ್ಚಿನ ಸಂಖ್ಯೆಯ ಕರೆಗಳನ್ನು ಸ್ವೀಕರಿಸುತ್ತಿದೆ. ಈ ನಿಟ್ಟಿನಲ್ಲಿ, ಮೊದಲೇ ತಿಳಿಸಿದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಶಿಕ್ಷಣ ಪ್ರಕ್ರಿಯೆಯನ್ನು ಸುಗಮಗೊಳಿಸಲು ರಾಯಭಾರ ಕಚೇರಿಯು ಆಯಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದೆ. ವಿದ್ಯಾರ್ಥಿಗಳು ತಮ್ಮ ಸುರಕ್ಷತೆಯ ದೃಷ್ಟಿಯಿಂದ ವಿಶ್ವವಿದ್ಯಾನಿಲಯಗಳಿಂದ ಅಧಿಕೃತ ದೃಢೀಕರಣಕ್ಕಾಗಿ ಕಾಯುವ ಬದಲು ತಾತ್ಕಾಲಿಕವಾಗಿ ಉಕ್ರೇನ್ ತೊರೆಯಲು ಸಲಹೆ ನೀಡಲಾಗುತ್ತಿದೆ.

ಉಕ್ರೇನ್‌ನಲ್ಲಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ಹೆಚ್ಚಿನ ಮಟ್ಟದ ಉದ್ವಿಗ್ನತೆ ಮತ್ತು ಅನಿಶ್ಚಿತತೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಉಕ್ರೇನ್​ನಲ್ಲಿ ಉಳಿದುಕೊಳ್ಳುವುದು ಅನಿವಾರ್ಯವಲ್ಲದ ಎಲ್ಲಾ ಭಾರತೀಯ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಉಕ್ರೇನ್ ತೊರೆಯಲು ಸೂಚಿಸಲಾಗಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಫೆಬ್ರವರಿ 15ರಂದು ರಾಯಭಾರ ಕಚೇರಿಯು ಭಾರತೀಯರನ್ನು ಸ್ವದೇಶಕ್ಕೆ ಹಿಂತಿರುಗುವಂತೆ ಕೇಳಿತ್ತು. ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಮಧ್ಯೆ ಭಾರತೀಯರನ್ನು ಮರಳಿ ಕರೆತರುವ ಉಕ್ರೇನ್‌ಗೆ ಮೂರು ಏರ್ ಇಂಡಿಯಾ ವಿಮಾನಗಳಲ್ಲಿ ಮೊದಲನೆ ವಿಮಾನ ಇಂದು ಬೆಳಗ್ಗೆ 7.36ಕ್ಕೆ ನವದೆಹಲಿಯ ಐಜಿಐ ವಿಮಾನ ನಿಲ್ದಾಣದಿಂದ ಹೊರಟಿದೆ.

ಏರ್ ಬಬಲ್ ವ್ಯವಸ್ಥೆಯಲ್ಲಿ ಉಕ್ರೇನ್‌ಗೆ ಹೊರಡುವ ವಿಮಾನಗಳ ಸಂಖ್ಯೆಯ ಮೇಲಿನ ನಿರ್ಬಂಧಗಳನ್ನು ಭಾರತ ಸರ್ಕಾರ ತೆಗೆದುಹಾಕಿದ ಬೆನ್ನಲ್ಲೇ ಈ ತಿಂಗಳು ಏರ್ ಇಂಡಿಯಾ ಭಾರತ ಮತ್ತು ಉಕ್ರೇನ್ ನಡುವೆ ಮೂರು ವಂದೇ ಭಾರತ್ ಮಿಷನ್ (ವಿಬಿಎಂ) ವಿಮಾನಗಳನ್ನು ನಿರ್ವಹಿಸುವುದಾಗಿ ಘೋಷಿಸಿತ್ತು. ಇವುಗಳನ್ನು ಇಂದು, (ಫೆಬ್ರವರಿ 22), ಫೆ. 24 ಮತ್ತು ಫೆ. 26 ರಂದು ನಿಗದಿಪಡಿಸಲಾಗಿದೆ. ಉಕ್ರೇನ್‌ನ ಅತಿದೊಡ್ಡ ವಿಮಾನ ನಿಲ್ದಾಣವಾದ ಬೋರಿಸ್ಪಿಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏರ್ ಇಂಡಿಯಾ ವಿಮಾನ ಸಂಚರಿಸಲಿದ್ದು, ಅಲ್ಲಿಂದ ವಾಪಾಸಾಗಲಿವೆ.

ಇದನ್ನೂ ಓದಿ: Russia-Ukraine Crisis: ಉಕ್ರೇನ್​ನಲ್ಲಿ ಹೆಚ್ಚಿದ ಉದ್ವಿಗ್ನತೆ; ಭಾರತೀಯರನ್ನು ಕರೆತರಲು ತೆರಳಿದ ಏರ್ ಇಂಡಿಯಾ ವಿಮಾನ

Russia Ukraine: ಉಕ್ರೇನ್​ನಿಂದ ಹೊರ ಬರುವಂತೆ ಭಾರತೀಯರಿಗೆ ವಿದೇಶಾಂಗ ಇಲಾಖೆ ಸೂಚನೆ

Published On - 2:04 pm, Tue, 22 February 22