Breaking News: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಯುಯು ಲಲಿತ್ ನೇಮಕಕ್ಕೆ ಸಿಜೆಐ ಎನ್​ವಿ ರಮಣ ಶಿಫಾರಸು

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 04, 2022 | 11:55 AM

ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಉದಯ್ ಉಮೇಶ್ ಲಲಿತ್ (ಯು.ಯು.ಲಲಿತ್) ಅವರನ್ನು ಸುಪ್ರೀಂಕೋರ್ಟ್​ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಬಹುದು ಎಂದು ಕೇಂದ್ರ ಸರ್ಕಾರಕ್ಕೆ ಲಿಖಿತ ಶಿಫಾರಸು ಮಾಡಿದ್ದಾರೆ.

Breaking News: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಯುಯು ಲಲಿತ್ ನೇಮಕಕ್ಕೆ ಸಿಜೆಐ ಎನ್​ವಿ ರಮಣ ಶಿಫಾರಸು
NV Ramana and YU Lalit
Follow us on

ದೆಹಲಿ: ಸುಪ್ರೀಂಕೋರ್ಟ್​ನ ಹಾಲಿ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ (NV Ramana) ಅವರು ಉದಯ್ ಉಮೇಶ್ ಲಲಿತ್ (ಯು.ಯು.ಲಲಿತ್ – UU Lalit) ಅವರನ್ನು ಸುಪ್ರೀಂಕೋರ್ಟ್​ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ (Chief Justice of India) ನೇಮಿಸಬಹುದು ಎಂದು ಕೇಂದ್ರ ಸರ್ಕಾರಕ್ಕೆ ಲಿಖಿತ ಶಿಫಾರಸು ಮಾಡಿದ್ದಾರೆ. ಎನ್​.ವಿ.ರಮಣ ಅವರು ಆಗಸ್ಟ್ 26ಕ್ಕೆ ನಿವೃತ್ತರಾಗಲಿದ್ದಾರೆ. ತಮ್ಮ ಉತ್ತರಾಧಿಕಾರಿಯನ್ನು ಹೆಸರಿಸುವಂತೆ ಕೇಂದ್ರ ಕಾನೂನು ಮತ್ತು ನ್ಯಾಯಾಂಗ ವ್ಯವಹಾರಗಳ ಸಚಿವ ಕಿರಣ್ ಕಿಜಿಜು ಇತ್ತೀಚೆಗಷ್ಟೇ ಎನ್​.ವಿ.ರಮಣ ಅವರನ್ನು ವಿನಂತಿಸಿದ್ದರು.

ಸುಪ್ರೀಂಕೋರ್ಟ್​ನ ಹಾಲಿ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಉದಯ್ ಉಮೇಶ್ ಲಲಿತ್ (ಯು.ಯು.ಲಲಿತ್) ಅವರನ್ನು ಸುಪ್ರೀಂಕೋರ್ಟ್​ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಬಹುದು ಎಂದು ಕೇಂದ್ರ ಸರ್ಕಾರಕ್ಕೆ ಲಿಖಿತ ಶಿಫಾರಸು ಮಾಡಿದ್ದಾರೆ.

ಸಿಜೆಐ ರಮಣ ಅವರ ಶಿಫಾರಸಿನಿಂದ ಲಲಿತ್ ಅವರ ಆಯ್ಕೆಯನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಿದರೆ ಇದೊಂದು ಚಾರಿತ್ರಿಕ ನಿರ್ಧಾರ ಎನಿಸುತ್ತದೆ. ವಕೀಲಿಕಿಯಿಂದ ನೇರವಾಗಿ ಸುಪ್ರೀಂಕೋರ್ಟ್​ ನ್ಯಾಯಾಧೀಶ ಸ್ಥಾನಕ್ಕೆ ಬಂದವರು ಮುಖ್ಯ ನ್ಯಾಯಮೂರ್ತಿಗಳಾಗುವುದು ಭಾರತದಲ್ಲಿ ಅಪರೂಪದ ವಿದ್ಯಮಾನ. 1971ರಲ್ಲಿ ಸುಪ್ರೀಂಕೋರ್ಟ್​ ಎಸ್​.ಎಂ.ಸಿಕ್ರಿ ಅವರನ್ನು ಅಂದಿನ ಸರ್ಕಾರ ಮೊದಲ ಬಾರಿಗೆ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡುವ ಮೂಲಕ ಈ ಪರಂಪರೆಗೆ ಮೇಲ್ಪಂಕ್ತಿ ಹಾಕಿಕೊಟ್ಟಿತ್ತು. ಇದೀಗ ಲಲಿತ್ ಅವರು ಆಯ್ಕೆಯಾದರೆ, ಅವರು ಹೀಗೆ ಮಹತ್ವದ ಸ್ಥಾನಕ್ಕೆ ಬಂದ ಎರಡನೇ ನ್ಯಾಯಾಧೀಶರಾಗುತ್ತಾರೆ.

ಮಹಾರಾಷ್ಟ್ರ ಮೂಲದ ನ್ಯಾಯಮೂರ್ತಿ ಲಲಿತ್ ಅವರು ಭಾರತದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಅವರ ಕಾರ್ಯಾವಧಿ ಸಮಯ ಮೂರು ತಿಂಗಳಿಗಿಂತಲೂ ಕಡಿಮೆ ಇರುತ್ತದೆ. ಲಲಿತ್ ಅವರು ನವೆಂಬರ್ 8, 2022ಕ್ಕೆ ನಿವೃತ್ತರಾಗುತ್ತಾರೆ. ಸುಪ್ರೀಂಕೋರ್ಟ್​ನಲ್ಲಿ ಹಿರಿಯ ವಕೀಲರಾಗಿದ್ದ ಲಲಿತ್ ಅವರಿಗೆ ಆಗಸ್ಟ್ 13, 2014ರಂದು ನ್ಯಾಯಮೂರ್ತಿಗಳ ಜವಾಬ್ದಾರಿ ನೀಡಲಾಗಿತ್ತು. ಇವರ ತಂದೆ ಯು.ಆರ್.ಲಲಿತ್ ಅವರು ದೆಹಲಿ ಹೈಕೋರ್ಟ್​ನ ನ್ಯಾಯಮೂರ್ತಿಗಳಾಗಿದ್ದರು.

2019ರಲ್ಲಿ ಅಯೋಧ್ಯೆ ಪ್ರಕರಣದ ವಿಚಾರಣೆಗೆ ರಚಿಸಿದ್ದ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಲಲಿತ್ ಅವರು, ವಿಚಾರಣೆಯಿಂದ ಹಿಂದೆ ಸರಿದಿದ್ದರು. ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅಂದಿನ ಉತ್ತರ ಪ್ರದೇಶ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ಪರವಾಗಿ ವಾದ ಮಂಡಿಸಿದ್ದ ಕಾರಣವನ್ನು ಅವರು ಉಲ್ಲೇಖಿಸಿದ್ದರು. ಮರಣದಂಡನೆ ವಿಧಿಸುವಾಗ ನ್ಯಾಯಮೂರ್ತಿಗಳ ವಿವೇಚನಾಧಿಕಾರಕ್ಕೆ ಸೂಕ್ತ ರೀತಿಯಲ್ಲಿ ಕಡಿವಾಣ ಇರಬೇಕು ಎಂದು ಲಲಿತ್ ಅವರು ಇತ್ತೀಚೆಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರ. ಮರಣದಂಡನೆ ವಿಧಿಸುವ ವಿಧಿವಿಧಾನಗಳ ಕುರಿತು ಸ್ವಯಂಪ್ರೇರಿತ ವಿಚಾರಣೆ ನಡೆಸಿದ್ದರು.

ತ್ರಿವಳಿ ತಲಾಖ್ ಸಂವಿಧಾನ ಬಾಹಿರ ಎಂದು ಘೋಷಿಸಿದ್​ದ ಸಂವಿಧಾನ ಪೀಠದಲ್ಲಿ ಲಲಿತ್ ಸಹ ಇದ್ದರು. ಕೇರಳದ ಪದ್ಮನಾಭಸ್ವಾಮಿ ದೇಗುಲವನ್ನು ತಿರುವನಂತಪುರದ ರಾಜಮನೆಕ್ಕೆ ಒಪ್ಪಿಸುವ ಆದೇಶ ನೀಡಿದ ನ್ಯಾಯಪೀಠದ ನೇತೃತ್ವವನ್ನು ಲಲಿತ್ ಅವರೇ ವಹಿಸಿದ್ದರು. ಬಾಂಬೆ ಹೈಕೋರ್ಟ್ ನೀಡಿದ್ದ ವಿವಾದಿತ ‘ಸ್ಕಿನ್ ಟು ಸ್ಕಿನ್’ (ಚರ್ಮ ಸ್ಪರ್ಶ) ಅತ್ಯಾಚಾರ ತೀರ್ಪನ್ನು ತಡೆಹಿಡಿದು, ಪೊಕ್ಸೊ ಕಾಯ್ದೆಯ ಪ್ರಕಾರ ಅಪ್ರಾಪ್ತರ ಮೇಲೆ ಲೈಂಗಿತ ತೃಷೆ ಹಿಂಗಿಸಿಕೊಳ್ಳುವ ಉದ್ದೇಶದಿಂದ ನಡೆಯುವ ಯಾವುದೇ ಕ್ರಿಯೆಯನ್ನು ಅಪರಾಧ ಎಂದು ಘೋಷಿಸಿದ್ದರು. ಲೈಂಗಿಕ ದೌರ್ಜನ್ಯ ಎಂದು ನಿರೂಪಿಸಲು ಚರ್ಮ ಸ್ಪರ್ಶವಾಗಲೇ ಬೇಕಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ವಕೀಲರಾಗಿ ಹಲವು ಪ್ರತಿಷ್ಠಿತ ಪ್ರಕರಣಗಳಲ್ಲಿ ವಾದ ಮಂಡಿಸಿದ್ದರು. 2011ರಲ್ಲಿ 2ಜಿ ಹಗರಣದ ವಿಚಾರಣೆ ವೇಳೆ ಲಲಿತ್ ಅವರನ್ನು ಸುಪ್ರೀಂಕೋರ್ಟ್​ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಿಸಿತ್ತು.

ನವೆಂಬರ್ 9, 1957ರಂದು ಜನಿಸಿದ ನ್ಯಾಯಮೂರ್ತಿ ಲಲಿತ್, ಜನವರಿ 1983ರಲ್ಲಿ ವಕೀಲರಾಗಿ ನೋಂದಣಿ ಮಾಡಿಕೊಂಡರು. 1985ರ ಡಿಸೆಂಬರ್ ವರೆಗೂ ಬಾಂಬೆ ಹೈಕೋರ್ಟ್​ನಲ್ಲಿ ವಕೀಲಿಕೆ ಮಾಡಿದರು. ಜನವರಿ 1986ರಿಂದ ದೆಹಲಿಯನ್ನು ತಮ್ಮ ಕಾರ್ಯಕ್ಷೇತ್ರವಾಗಿಸಿಕೊಂಡರು. ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿ ಅವರೊಂದಿಗೆ 1986ರಿಂದ 1992ರವರೆಗೆ ಕೆಲಸ ಮಾಡಿದ್ದರು. ಏಪ್ರಿಲ್ 2004ರಂದು ಸುಪ್ರೀಂಕೋರ್ಟ್​ನ ಹಿರಿಯ ವಕೀಲರಾಗಿ ಗುರುತಿಸಲಾಯಿತು.

Published On - 11:33 am, Thu, 4 August 22