
ನವದೆಹಲಿ, ಸೆಪ್ಟೆಂಬರ್ 11: ನವದೆಹಲಿಯಲ್ಲಿ ಆಯೋಜಿಸಲಾಗಿರುವ 18ನೇ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ನಡುವೆ ಇಂದು ಬಹುನಿರೀಕ್ಷಿತ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. 2020 ಗಲ್ವಾನ್ ಕಣಿವೆ ರಕ್ತಸಿಕ್ತ ಗಡಿ ಸಂಘರ್ಷದ ನಂತರ ಚೀನಾ ಅಧ್ಯಕ್ಷರು ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಸುಮಾರು 400 ಉನ್ನತ ಅಧಿಕಾರಿಗಳ ಬೃಹತ್ ನಿಯೋಗದೊಂದಿಗೆ ಬಂದಿಳಿದಿರುವ ಷಿ ಜಿನ್‌ಪಿಂಗ್ ಅವರೊಂದಿಗೆ, ಗಡಿ ಉದ್ವಿಗ್ನತೆ ಶಮನ ಹಾಗೂ ದಾಖಲೆಯ ವ್ಯಾಪಾರ ಅಸಮತೋಲನವನ್ನು ಸರಿದೂಗಿಸುವ ವಿಚಾರದಲ್ಲಿ ಪ್ರಧಾನಿ ಮೋದಿ ಚರ್ಚಿಸಲಿದ್ದಾರೆ.
ಗಡಿ ಸಮಸ್ಯೆಗಳ ಇತ್ಯರ್ಥಕ್ಕೆ ಒತ್ತು: 1962ರ ಯುದ್ಧ ಹಾಗೂ 2020ರ ಸಂಘರ್ಷದ ಬಳಿಕ ಹದಗೆಟ್ಟಿದ್ದ ಸಂಬಂಧವನ್ನು ಸರಿದೂಗಿಸಲು ಉಭಯ ನಾಯಕರು ಸಮಾಲೋಚನೆ ನಡೆಸಲಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ನಡುವಿನ ಸಭೆಯ ನಂತರ ಗಡಿ ವ್ಯಾಪಾರ ಮತ್ತು ಯಾತ್ರೆಗಳ ಪುನರಾರಂಭಕ್ಕೆ ಮುನ್ನುಡಿ ಬರೆಯಲಾಗಿದೆ.
ದಾಖಲೆಯ ವ್ಯಾಪಾರ ಕೊರತೆ ಚಿಂತೆ: ಮಾರ್ಚ್ 2026ರ ವೇಳೆಗೆ ಭಾರತ-ಚೀನಾ ದ್ವಿಪಕ್ಷೀಯ ವ್ಯಾಪಾರವು ಏರಿಕೆಯಾಗಿದೆ. ಆದರೆ, ಇದರಲ್ಲಿ ಭಾರತದ ವ್ಯಾಪಾರ ಕೊರತೆಯೇ ಬರೋಬ್ಬರಿ ಸುಮಾರು 9.3 ಲಕ್ಷ ಕೋಟಿ ರೂ.) ತಲುಪಿದೆ. ಚೀನಾ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳಿಗೆ ಮುಕ್ತ ಪ್ರವೇಶ ನೀಡುವಂತೆ ನವದೆಹಲಿ ಒತ್ತಾಯಿಸಲಿದೆ.
ನೇರ ವಿಮಾನ ಮತ್ತು ಹೂಡಿಕೆ ಸಡಿಲಿಕೆ: ಸಂಘರ್ಷದ ಬಳಿಕ ಸ್ಥಗಿತಗೊಂಡಿದ್ದ ನೇರ ವಿಮಾನಯಾನ ಸೇವೆಗಳನ್ನು ಪುನರಾರಂಭಿಸಲಾಗಿದ್ದು, ಚೀನಾದ ಹೂಡಿಕೆ ನಿಯಮಗಳನ್ನು ಭಾರತ ಸ್ವಲ್ಪಮಟ್ಟಿಗೆ ಸಡಿಲಿಸಿದೆ. ಆದಾಗ್ಯೂ, ರಾಷ್ಟ್ರೀಯ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯ ಹೆಜ್ಜೆ ಇಡಲಾಗುತ್ತಿದೆ.
ಮತ್ತಷ್ಟು ಓದಿ:
‘ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ’; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
400 ಅಧಿಕಾರಿಗಳ ಮೆಗಾ ನಿಯೋಗ: 2019ರಲ್ಲಿ ಭಾರತಕ್ಕೆ ಬಂದಿದ್ದ ನಿಯೋಗಕ್ಕಿಂತ ಎರಡು ಪಟ್ಟು ದೊಡ್ಡದಾದ, ಸುಮಾರು 400 ಅಧಿಕಾರಿಗಳ ತಂಡದೊಂದಿಗೆ ಷಿ ಜಿನ್‌ಪಿಂಗ್ ದೆಹಲಿಗೆ ಆಗಮಿಸಿದ್ದು, ಆರ್ಥಿಕ ಹಾಗೂ ರಾಜತಾಂತ್ರಿಕ ಸಂಬಂಧಗಳನ್ನು ಮರುಜೋಡಿಸಲು ಬೀಜಿಂಗ್ ಕೂಡ ಉತ್ಸುಕವಾಗಿದೆ ಎಂಬುದನ್ನು ಇದು ತೋರಿಸುತ್ತದೆ.
ಟ್ರಂಪ್ ಸುಂಕ ನೀತಿಯ ಪರಿಣಾಮ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಭಾರತ ಮತ್ತು ಚೀನಾ ಎರಡೂ ದೇಶಗಳ ಮೇಲೆ ಕಠಿಣ ಆಮದು ಸುಂಕಗಳನ್ನು ಮತ್ತು ವ್ಯಾಪಾರ ನಿರ್ಬಂಧಗಳನ್ನು ಹೇರುತ್ತಿರುವುದು, ನವದೆಹಲಿ ಮತ್ತು ಬೀಜಿಂಗ್ ತಮ್ಮ ನಡುವಿನ ಶೀತಲ ಸಮರವನ್ನು ತಣಿಸಿ ಆರ್ಥಿಕವಾಗಿ ಹತ್ತಿರವಾಗಲು ಪ್ರಮುಖ ಕಾರಣವಾಗಿದೆ.
ತಂತ್ರಜ್ಞಾನ ಮತ್ತು ಪೂರೈಕೆ ಸರಪಳಿ ಸಮರ: ಭಾರತವು ವಿಶ್ವದಲ್ಲೇ 2ನೇ ಅತಿ ದೊಡ್ಡ ಮೊಬೈಲ್ ಉತ್ಪಾದನಾ ರಾಷ್ಟ್ರವಾಗಿ ಬೆಳೆದಿದ್ದು, ಆಪಲ್ ಐಫೋನ್ ತಯಾರಿಕೆಯನ್ನು ಚೀನಾದಿಂದ ಭಾರತಕ್ಕೆ ಸ್ಥಳಾಂತರಿಸುತ್ತಿದೆ. ಆದರೆ, ಇವಿ ಬ್ಯಾಟರಿಗಳು, ಸೌರ ಫಲಕಗಳು ಮತ್ತು ಅಪರೂಪದ ಖನಿಜಗಳಿಗೆ ಭಾರತ ಈಗಲೂ ಚೀನಾವನ್ನೇ ಹೆಚ್ಚಾಗಿ ಅವಲಂಬಿಸಿರುವುದು ಭಾರತದ ಪಾಲಿಗೆ ದೊಡ್ಡ ಆರ್ಥಿಕ ಮತ್ತು ಭದ್ರತಾ ಸವಾಲಾಗಿದೆ.
ಮುಂದುವರಿದ ಅಪನಂಬಿಕೆ: ಮಾತುಕತೆಗಳು ನಡೆಯುತ್ತಿದ್ದರೂ, ಆಗಸ್ಟ್‌ನಲ್ಲಿ ಅರುಣಾಚಲ ಪ್ರದೇಶ ಗಡಿ ಭಾಗ ಹಾಗೂ ಪ್ರಮುಖ ಗಸ್ತು ಕೇಂದ್ರಗಳಲ್ಲಿ ಚೀನಾ ಸೇನೆ ಕ್ಯಾತೆ ತೆಗೆದಿದೆ ಎಂಬ ವರದಿಗಳಿದ್ದು, ಉಭಯ ದೇಶಗಳ ನಡುವಿನ ಅಪನಂಬಿಕೆಯ ಕಂದಕ ಸಂಪೂರ್ಣ ಮುಚ್ಚಲು ಎರಡೂ ಕಡೆಯಿಂದ ಇನ್ನಷ್ಟು ಬಲವಾದ ಬದ್ಧತೆ ಅಗತ್ಯವಿದೆ ಎಂದು ರಾಜತಾಂತ್ರಿಕ ತಜ್ಞರು ವಿಶ್ಲೇಷಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:14 am, Fri, 11 September 26