ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಬಿಎಸ್ಎಫ್ ಬಗ್ಗೆ ಟಿಎಂಸಿ ಶಾಸಕನ ಗಂಭೀರ ಆರೋಪ; ಸದನದಲ್ಲಿ ಗದ್ದಲ
Udayan Guha ನಿರ್ಣಯದ ಮೇಲಿನ ಚರ್ಚೆಯ ಸಮಯದಲ್ಲಿ ಟಿಎಂಸಿಯ ಉದಯನ ಗುಹಾ “ಮಹಿಳೆಯರು ಗಡಿ ದಾಟಿದಾಗ, ಬಿಎಸ್‌ಎಫ್ ಸಿಬ್ಬಂದಿ ತಪಾಸಣೆಯ ಹೆಸರಿನಲ್ಲಿ ಮಕ್ಕಳ ಮುಂದೆಯೇ ಮಹಿಳೆಯರ ಖಾಸಗಿ ಭಾಗಗಳನ್ನು ಸ್ಪರ್ಶಿಸಿ, ತಪಾಸಣೆ ಮಾಡುತ್ತಾರೆ.

ಕೊಲ್ಕತ್ತಾ: ಭಾರತ-ಬಾಂಗ್ಲಾ ಗಡಿಯಲ್ಲಿ(Indo-Bangla border) ಬಿಎಸ್‌ಎಫ್‌ನ (BSF) ಅಧಿಕಾರ ವ್ಯಾಪ್ತಿಯನ್ನು ಈಗಿರುವ 15 ಕಿಲೋಮೀಟರ್‌ನಿಂದ 50 ಕಿಲೋಮೀಟರ್‌ಗೆ ಹೆಚ್ಚಿಸುವ ಕೇಂದ್ರ ಗೃಹ ಸಚಿವಾಲಯದ ನಿರ್ಧಾರವನ್ನು ಪಶ್ಚಿಮ ಬಂಗಾಳ ರಾಜ್ಯ ವಿಧಾನಸಭೆ (West Bengal State Assembly)ವಿರೋಧಿಸಿ ಮಂಗಳವಾರ ನಿರ್ಣಯವನ್ನು ಅಂಗೀಕರಿಸಿದೆ. ನಿರ್ಣಯ ಪರ 112 ಮತಗಳು ಮತ್ತು ವಿರೋಧ 63 ಮತಗಳು ಲಭಿಸಿವೆ. ಏತನ್ಮಧ್ಯೆ, ನಿರ್ಣಯದ ಮೇಲಿನ ಚರ್ಚೆಯ ಸಮಯದಲ್ಲಿ ಟಿಎಂಸಿಯ ಉದಯನ ಗುಹಾ (Udayan Guha) “ಮಹಿಳೆಯರು ಗಡಿ ದಾಟಿದಾಗ, ಬಿಎಸ್‌ಎಫ್ ಸಿಬ್ಬಂದಿ ತಪಾಸಣೆಯ ಹೆಸರಿನಲ್ಲಿ ಮಕ್ಕಳ ಮುಂದೆಯೇ ಮಹಿಳೆಯರ ಖಾಸಗಿ ಭಾಗಗಳನ್ನು ಸ್ಪರ್ಶಿಸಿ, ತಪಾಸಣೆ ಮಾಡುತ್ತಾರೆ. ಆ ಮಕ್ಕಳು ಭಾರತ್ ಮಾತಾ ಕೀ ಜೈ ಎಂದು ಕೂಗುತ್ತಾರೆ ಅಥವಾ ಅವರು ದೇಶಭಕ್ತರಾಗುತ್ತಾರೆ ಎಂದು ನೀವು ನಿರೀಕ್ಷಿಸಲಾಗುವುದಿಲ್ಲ ಎಂದು ಹೇಳಿ ವಿವಾದಕ್ಕೀಡಾಗಿದ್ದಾರೆ. ಗುಹಾ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಮಿಹಿರ್ ಗೋಸ್ವಾಮಿ ಮತ್ತು ಇತರ ಬಿಜೆಪಿ ಶಾಸಕರು ಸದನದ ಅಂಗಣಕ್ಕೆ ಇಳಿದು ಘೋಷಣೆಗಳನ್ನು ಪ್ರಾರಂಭಿಸಿದರು. ಆಗ ಗುಹಾ “ನಿಮ್ಮ ಒಂದು ಕಾಲು ಈಗಾಗಲೇ ಮುರಿದುಹೋಗಿದೆ, ನಾವು ನಿಮ್ಮ ಇನ್ನೊಂದು ಕಾಲನ್ನು ಮುರಿಯುತ್ತೇವೆ ಎಂದು ಗುಡುಗಿದ್ದಾರೆ.
ವಿಧಾನಸಭೆಯಲ್ಲಿ ಗದ್ದಲ ಉಂಟಾದ ನಂತರ, ಸ್ಪೀಕರ್ ಬಿಮನ್ ಬ್ಯಾನರ್ಜಿ ಗುಹಾ ಅವರನ್ನು ತಡೆದು, “ಇದು ಅಪೇಕ್ಷಿಸುವುದಿಲ್ಲ ಮತ್ತು ನೀವು ಅದನ್ನು ಪ್ರಚೋದಿಸಬಾರದು” ಎಂದು ಹೇಳಿದರು.
ಗುಹಾ ಹೇಳಿಕೆಯನ್ನು ಬಲವಾಗಿ ವಿರೋಧಿಸಿದ ಬಿಎಸ್ಎಫ್ ಹಿರಿಯ ಅಧಿಕಾರಿಯೊಬ್ಬರು, “ಬಿಎಸ್‌ಎಫ್ ವೃತ್ತಿಪರ ಪಡೆಯಾಗಿದ್ದು, ನಿಯಮಗಳು ಮತ್ತು ನಿಬಂಧನೆಗಳಿಗೆ ಬದ್ಧವಾಗಿ ಯಾವಾಗಲೂ ಕಡ್ಡಾಯ ಕರ್ತವ್ಯಗಳನ್ನು ನಿರ್ವಹಿಸುತ್ತದೆ. ಬಿಎಸ್‌ಎಫ್ ಮಹಿಳಾ ಪ್ರಹರಿಗಳು ಮಹಿಳೆಯರನ್ನು ತಪಾಸಣೆಗೆ ಒಳಪಡಿಸುತ್ತಾರೆ. ಬಿಎಸ್ಎಫ್ ಸಿಬ್ಬಂದಿ ಮಹಿಳೆಯರನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂಬ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ ಎಂದಿದ್ದಾರೆ.
ವಿಧಾನಸಭೆಯ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಗುಹಾ ನಾನು ಹೇಳಿದ್ದೆಲ್ಲವೂ ಸರಿಯಾಗಿದೆ ಮತ್ತು ನಾನು ಹೇಳಿಕೆ ಬದಲಾಯಿಸುವುದಿಲ್ಲ ಎಂದಿದ್ದಾರೆ.
ಆದಾಗ್ಯೂ, ಸಂಸದೀಯ ವ್ಯವಹಾರಗಳ ಸಚಿವ ಪಾರ್ಥ ಚಟರ್ಜಿ, “ಆ ನಿರ್ದಿಷ್ಟ ಹೇಳಿಕೆಯ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಆದರೆ ನಮ್ಮ ಪಕ್ಷ ಮತ್ತು ಸರ್ಕಾರವು ಯಾವಾಗಲೂ ಸದನದೊಳಗೆ ಉತ್ತಮ ಸಂಸ್ಕೃತಿ ಮತ್ತು ಭಾಷೆಯನ್ನು ಕಾಪಾಡಿಕೊಳ್ಳುವ ಪರವಾಗಿರುತ್ತದೆ” ಎಂದು ಹೇಳಿದರು.
“ನೀವು ನಿರ್ಧಾರವನ್ನು ಟೀಕಿಸಬಹುದು. ಪೊಲೀಸರ ಕರ್ತವ್ಯಕ್ಕೆ ಅಡ್ಡಿಯಾಗಲಿದೆ ಎಂದು ನೀವು ಹೇಳಬಹುದು ಮತ್ತು ಅದು ನಿಜವಾಗಿದ್ದರೆ ನಾವು ಕೇಂದ್ರಕ್ಕೆ ಮನವಿ ಮಾಡುತ್ತೇವೆ. ಆದರೆ ನಮ್ಮ ಗಡಿಯನ್ನು ಉಳಿಸಲು ಪಟ್ಟುಬಿಡದೆ ಶ್ರಮಿಸುತ್ತಿರುವ ಬಿಎಸ್‌ಎಫ್ ಬಗ್ಗೆ ಕೆಲವು ನಾಯಕರು ಮಾತನಾಡಿರುವುದು ಅತ್ಯಂತ ದುರದೃಷ್ಟಕರ. ಸೇನಾ ಪಡೆಗಳ ಬಗ್ಗೆ ನಾಯಕರು ಯಾವ ಅಭಿಪ್ರಾಯವನ್ನು ಹೊಂದಿದ್ದಾರೆ ಎಂಬುದನ್ನು ಭಾರತೀಯರು ಕೇಳುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಸುಶಾಂತ್ ಕುಟುಂಬದ 6 ಮಂದಿ ನಿಧನ; ಇನ್ನೂ 4 ಜನರ ಸ್ಥಿತಿ ಗಂಭೀರ