ಸಂಸತ್ ಅಧಿವೇಶನದಲ್ಲಿ ಗದ್ದಲ, ಸರ್ಕಾರದ ವಿರುದ್ಧ ಘೋಷಣೆ; ಮಹಾಕುಂಭದ ಕಾಲ್ತುಳಿತದ ಬಗ್ಗೆ ಚರ್ಚೆಗೆ ವಿಪಕ್ಷಗಳ ಒತ್ತಾಯ
ಲೋಕಸಭಾ ಸಂಸತ್ ಅಧಿವೇಶನದ 3ನೇ ದಿನವಾದ ಇಂದು ಕೂಡ ವಿಪಕ್ಷಗಳು ಕಲಾಪವನ್ನು ಅಡ್ಡಿಪಡಿಸಿವೆ. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಸದನದಲ್ಲಿ ವಿರೋಧ ಪಕ್ಷಗಳ ಸಂಸದರು ಗಲಾಟೆಯೆಬ್ಬಿಸಿದ್ದಾರೆ. ಮಹಾಕುಂಭದ ಕಾಲ್ತುಳಿತದ ಬಗ್ಗೆ ಚರ್ಚೆ ನಡೆಯಬೇಕೆಂದು ಘೋಷಣೆ ಕೂಗಲಾಯಿತು. ಪ್ರಶ್ನೋತ್ತರ ಅವಧಿ ಮುಗಿದ ನಂತರ ಮಹಾಕುಂಭ ಕಾಲ್ತುಳಿತದ ವಿಷಯವನ್ನು ಪ್ರಸ್ತಾಪಿಸುವಂತೆ ಸ್ಪೀಕರ್ ಓಂ ಬಿರ್ಲಾ ನಿರ್ದೇಶನ ನೀಡಿದ್ದರೂ ವಿರೋಧ ಪಕ್ಷದ ನಾಯಕರು ಲೋಕಸಭೆಯಲ್ಲಿ ಘೋಷಣೆಗಳನ್ನು ಮುಂದುವರೆಸಿದರು.

ನವದೆಹಲಿ: ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭ ಉತ್ಸವದಲ್ಲಿ 30 ಜನರು ಸಾವನ್ನಪ್ಪಿ, 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದ ಕಾಲ್ತುಳಿತದ ಬಗ್ಗೆ ಚರ್ಚಿಸಬೇಕೆಂದು ಒತ್ತಾಯಿಸಿ ವಿರೋಧ ಪಕ್ಷದ ಸಂಸದರು ಇಂದು ಸಂಸತ್ತಿನಲ್ಲಿ ಘೋಷಣೆಗಳನ್ನು ಕೂಗಿದರು. ಕೋಪಗೊಂಡ ವಿಪಕ್ಷಗಳ ಸಂಸದರು ಕುಂಭ ಮೇಳದ ದುರಂತಕ್ಕೆ ಉತ್ತರ ಬೇಕು ಎಂದು ಸದನದ ಬಾವಿಗಿಳಿದು ಘೋಷಣೆ ಕೂಗತೊಡಗಿದರು. ಕಾಲ್ತುಳಿತದಲ್ಲಿ ಮೃತಪಟ್ಟವರನ್ನು ಗುರುತಿಸುವ ಪಟ್ಟಿಯನ್ನು ನೀಡುವಂತೆ ವಿರೋಧ ಪಕ್ಷದ ಸಂಸದರು ಒತ್ತಾಯಿಸಿದರು. ನೀವು 30 ಜನ ಮೃತಪಟ್ಟಿದ್ದಾರೆ ಎಂದು ಹೇಳುತ್ತಿದ್ದೀರಿ. ಆದರೆ, ಈ ಸಂಖ್ಯೆ ಇನ್ನೂ ಹೆಚ್ಚಾಗಿದೆ. ಈ ಘಟನೆಯ ನಂತರ ಹಲವು ಗಂಟೆಗಳ ಕಾಲ ಸಾವುಗಳನ್ನು ದೃಢೀಕರಿಸಲು ಸಮಯ ತೆಗೆದುಕೊಂಡ ಉತ್ತರ ಪ್ರದೇಶ ಸರ್ಕಾರವು ನಿಜವಾದ ಸಾವಿನ ಸಂಖ್ಯೆಯನ್ನು ಮರೆಮಾಡುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಮಹಾಕುಂಭ ಮೇಳದ ಸಂದರ್ಭದಲ್ಲಿ ನಡೆದ ಕಾಲ್ತುಳಿತದ ಬಗ್ಗೆ ಚರ್ಚಿಸಬೇಕೆಂದು ವಿರೋಧ ಪಕ್ಷದ ಸದಸ್ಯರು ಒತ್ತಾಯಿಸಿದಾಗ ಲೋಕಸಭೆಯಲ್ಲಿ ಜೋರಾಗಿ ಘೋಷಣೆಗಳು ಕೇಳಿಬಂದವು. “ಭಾರತದ ಜನರು ನಿಮ್ಮನ್ನು ಆಯ್ಕೆ ಮಾಡಿದ್ದು ಸಂಸತ್ತಿನಲ್ಲಿ ಮೇಜು ಒಡೆಯಲು ಅಥವಾ ಘೋಷಣೆಗಳನ್ನು ಕೂಗಲು ಅಲ್ಲ” ಎಂದು ಈ ವೇಳೆ ಲೋಕಸಭೆಯ ಸ್ಪೀಕರ್ ವಿರೋಧ ಪಕ್ಷದ ಸಂಸದರನ್ನು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: PM Modi Reaction on Budget: ಸರ್ಕಾರದ ಬೊಕ್ಕಸ ತುಂಬುವುದಲ್ಲ, ಜನರ ಜೇಬು ತುಂಬುವ ಬಜೆಟ್: ಮೋದಿ
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ನಿರಂತರವಾಗಿ ಘೋಷಣೆಗಳನ್ನು ಕೂಗುವ ಮೂಲಕ ಲೋಕಸಭೆಯ ಕಲಾಪಕ್ಕೆ ಅಡ್ಡಿಪಡಿಸದಂತೆ ವಿರೋಧ ಪಕ್ಷಗಳ ಬಳಿ ಮನವಿ ಮಾಡಿದರು. “ಸದನವನ್ನು ಅಡ್ಡಿಪಡಿಸದಂತೆ ನಾನು ಪ್ರತಿಪಕ್ಷಗಳನ್ನು ವಿನಂತಿಸುತ್ತೇನೆ” ಎಂದು ಅವರು ಹೇಳಿದರು. ಪ್ರಶ್ನೋತ್ತರ ಅವಧಿ ಮುಗಿದ ನಂತರ ಮಹಾಕುಂಭ ಕಾಲ್ತುಳಿತದ ವಿಷಯವನ್ನು ಪ್ರಸ್ತಾಪಿಸುವಂತೆ ಸ್ಪೀಕರ್ ಓಂ ಬಿರ್ಲಾ ನಿರ್ದೇಶನ ನೀಡಿದ್ದರೂ ವಿರೋಧ ಪಕ್ಷವು ಲೋಕಸಭೆಯಲ್ಲಿ ಘೋಷಣೆಗಳನ್ನು ಮುಂದುವರೆಸಿತು.
#WATCH | Opposition MPs in Lok Sabha raise slogans against Uttar Pradesh’s Yogi Adityanath government over Maha Kumbh stampede issue
(Video source: Sansad TV/YouTube) pic.twitter.com/8Fl2KXlY9a
— ANI (@ANI) February 3, 2025
ಇದನ್ನೂ ಓದಿ: ವಿದೇಶಿ ಹಸ್ತಕ್ಷೇಪವಿಲ್ಲದೆ ಮೊದಲ ಅಧಿವೇಶನ ನಡೆಯುತ್ತಿದೆ, ರಾಹುಲ್ಗೆ ಮೋದಿ ಟಾಂಗ್
ಶನಿವಾರವೂ ಲೋಕಸಭೆಯಲ್ಲಿ ಕೋಲಾಹಲ ಉಂಟಾಗಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಕೇಂದ್ರ ಬಜೆಟ್ ಭಾಷಣವನ್ನು ಓದುತ್ತಿದ್ದಂತೆ ವಿಪಕ್ಷಗಳು ಘೋಷಣೆ ಕೂಗುತ್ತಾ ಸದನದಿಂದ ಹೊರನಡೆದು ಗಲಾಟೆ ಸೃಷ್ಟಿಸಿದ್ದರು. ಅಖಿಲೇಶ್ ಯಾದವ್ ಮತ್ತು ಅವರ ಸಮಾಜವಾದಿ ಪಕ್ಷವು ಆ ಪ್ರತಿಭಟನೆಯ ನೇತೃತ್ವ ವಹಿಸಿತ್ತು.
ಇದೇ ವೇಳೆ ರಾಜ್ಯಸಭೆಯಲ್ಲೂ ಮಹಾಕುಂಭದ ಕಾಲ್ತುಳಿತದ ಬಗ್ಗೆ ಚರ್ಚಿಸಬೇಕೆಂಬ ಒತ್ತಾಯ ಕೇಳಿಬಂದಿದೆ. ಸರ್ಕಾರದ ವಿರುದ್ಧ ಪ್ರತಿಭಟಿಸಿದ ವಿರೋಧ ಪಕ್ಷಗಳ ಸಂಸದರು ರಾಜ್ಯಸಭೆ ಕಲಾಪದಿಂದ ಹೊರನಡೆದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:16 pm, Mon, 3 February 25