ದುರದೃಷ್ಟಕರ ಘಟನೆ; ಮಹಾ ಕುಂಭ ಮೇಳದಲ್ಲಿ ಕಾಲ್ತುಳಿತದ ಅರ್ಜಿ ವಿಚಾರಣೆಗೆ ನಿರಾಕರಿಸಿದ ಸುಪ್ರೀಂ ಕೋರ್ಟ್
Mahakumbh Stampede: ಮಹಾ ಕುಂಭ ಮೇಳದಲ್ಲಿ ಕಾಲ್ತುಳಿತ ಸಂಭವಿಸಿ 30 ಜನರು ಮೃತಪಟ್ಟಿದ್ದರು, 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಕಾಲ್ತುಳಿತ ಉಂಟಾಗಿದ್ದು ದುರದೃಷ್ಟಕರ ಘಟನೆ ಎಂದಿರುವ ಸುಪ್ರೀಂ ಕೋರ್ಟ್ ಈ ಪ್ರಕರಣದ ಪಿಐಎಲ್ ವಿಚಾರಣೆಗೆ ನಿರಾಕರಿಸಿದೆ. ಅರ್ಜಿದಾರರು ಅಲಹಾಬಾದ್ ಹೈಕೋರ್ಟ್ ಮೊರೆ ಹೋಗುವಂತೆ ಸೂಚಿಸಿದೆ. ಉತ್ತರ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸುವ ವಕೀಲರು ಈ ವಿಷಯದ ಬಗ್ಗೆ ನ್ಯಾಯಾಂಗ ಆಯೋಗವನ್ನು ಈಗಾಗಲೇ ಸ್ಥಾಪಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಪೀಠದ ಮುಂದೆ ಹೇಳಿದರು. ಈ ನಿಟ್ಟಿನಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ನವದೆಹಲಿ: ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭದಲ್ಲಿ ಇತ್ತೀಚೆಗೆ ನಡೆದ ಕಾಲ್ತುಳಿತದ ಹಿನ್ನೆಲೆಯಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆಗೆ ಸುಪ್ರೀಂ ಕೋರ್ಟ್ ಇಂದು (ಫೆಬ್ರವರಿ 3) ನಿರಾಕರಿಸಿದೆ. ಅರ್ಜಿದಾರರು ಅಲಹಾಬಾದ್ ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ ನಿರ್ದೇಶಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠವು ಮಹಾಕುಂಭದ ಕಾಲ್ತುಳಿತದ ಪಿಐಎಲ್ ವಿಚಾರಣೆಗೆ ನಿರಾಕರಿಸಿದ್ದರೂ ಇದೊಂದು ದುರದೃಷ್ಟಕರ ಘಟನೆ ಎಂದು ಹೇಳಿದೆ. ಅರ್ಜಿದಾರರು ಈ ಬಗ್ಗೆ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರುವಂತೆ ಪೀಠ ಸೂಚಿಸಿದೆ.
ಸುಪ್ರೀಂ ಕೋರ್ಟ್ ಅರ್ಜಿದಾರರ ವಕೀಲ ವಿಶಾಲ್ ತಿವಾರಿ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವಂತೆ ಕೇಳಿತು. “ಇದು ದುರದೃಷ್ಟಕರ ಘಟನೆ. ಆದರೆ, ನೀವು ಅಲಹಾಬಾದ್ ಹೈಕೋರ್ಟ್‌ಗೆ ಹೋಗಿ,” ಎಂದು ಪೀಠವು ತಿವಾರಿ ಅವರಿಗೆ ಸೂಚಿಸಿತು.
Supreme Court says the stampede at the Maha Kumbh in Uttar Pradesh’s Prayagraj is an “unfortunate incident” and refuses to entertain a PIL seeking directions to put in place safety measures and guidelines for pilgrims from across the country.
Supreme Court asks the lawyer who… pic.twitter.com/rNNBVaF48r
— ANI (@ANI) February 3, 2025
ಉತ್ತರ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸುವ ವಕೀಲರು ಈ ವಿಷಯದ ಬಗ್ಗೆ ನ್ಯಾಯಾಂಗ ಆಯೋಗವನ್ನು ಈಗಾಗಲೇ ಸ್ಥಾಪಿಸಲಾಗಿದೆ ಎಂದು ನ್ಯಾಯಪೀಠದ ಮುಂದೆ ಸಲ್ಲಿಸಿದರು. ಈ ನಿಟ್ಟಿನಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು. ಅರ್ಜಿ ಸಲ್ಲಿಕೆಗಳನ್ನು ಆಲಿಸಿದ ನಂತರ, ನ್ಯಾಯಪೀಠವು ಅರ್ಜಿದಾರರಿಗೆ ಹೈಕೋರ್ಟ್‌ಗೆ ತೆರಳಲು ಸೂಚಿಸಿ, ಪಿಐಎಲ್ ಅನ್ನು ವಜಾಗೊಳಿಸಿತು.
ಇದನ್ನೂ ಓದಿ: ಮಹಾಕುಂಭದಲ್ಲಿ ಬಸಂತ ಪಂಚಮಿ ಪ್ರಯುಕ್ತ ಬೆಳ್ಳಂಬೆಳಗ್ಗೆ 62 ಲಕ್ಷಕ್ಕೂ ಹೆಚ್ಚು ಭಕ್ತರಿಂದ ಅಮೃತ ಸ್ನಾನ
ಪ್ರಯಾಗ್‌ರಾಜ್ ಮಹಾಕುಂಭದಲ್ಲಿ ನಡೆದ ಕಾಲ್ತುಳಿತದ ಸ್ಥಿತಿಗತಿ ವರದಿಯನ್ನು ಕೋರಿದ ಪಿಐಎಲ್ ಮತ್ತು ಅದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತ್ತು. ಹಿಂದಿ ಮಾತನಾಡದ ಸಂದರ್ಶಕರಿಗೆ ಸಹಾಯ ಮಾಡಲು ಪ್ರತಿ ರಾಜ್ಯವು ಕುಂಭಮೇಳ ಪ್ರದೇಶದಲ್ಲಿ ಸೌಲಭ್ಯ ಕೇಂದ್ರವನ್ನು ಸ್ಥಾಪಿಸಬೇಕೆಂದು ಅದು ಒತ್ತಾಯಿಸಿತು. ಅಂತಹ ಕಾರ್ಯಕ್ರಮಗಳ ಸಮಯದಲ್ಲಿ ಸಾರ್ವಜನಿಕರಿಗೆ ಸ್ಥಳಾವಕಾಶವನ್ನು ಆದ್ಯತೆ ನೀಡಲು ವಿಐಪಿ ಚಲನೆಯನ್ನು ಸೀಮಿತಗೊಳಿಸಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.
ಎಲ್ಲಾ ರಾಜ್ಯಗಳು ಮಹಾಕುಂಭದಲ್ಲಿ ತಮ್ಮ ಸೌಲಭ್ಯ ಕೇಂದ್ರಗಳನ್ನು ಸರಿಯಾದ ರೀತಿಯಲ್ಲಿ ಸ್ಥಾಪಿಸಬೇಕು. ಈ ಕೇಂದ್ರಗಳು ತಮ್ಮ ರಾಜ್ಯಗಳಿಂದ ಬರುವ ವ್ಯಕ್ತಿಗಳಿಗೆ ಸುರಕ್ಷತಾ ಕ್ರಮಗಳು ಮತ್ತು ಮಾರ್ಗಸೂಚಿಗಳ ಬಗ್ಗೆ ಮೂಲಭೂತ ಮಾಹಿತಿಯನ್ನು ಒದಗಿಸಬೇಕು. ತುರ್ತು ಸಂದರ್ಭಗಳಲ್ಲಿ ಈ ಕೇಂದ್ರಗಳು ಯಾವುದೇ ಸಹಾಯಕ್ಕೂ ಸಿದ್ಧವಾಗಿರಬೇಕು ಎಂದು ಕಾಲ್ತುಳಿತದ ಘಟನೆಗಳನ್ನು ತಡೆಗಟ್ಟಲು ಮತ್ತು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಸಮಾನತೆ ಮತ್ತು ಜೀವನದ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಕೋರುತ್ತಾ ಪಿಐಎಲ್ ಸಲ್ಲಿಸಲಾಗಿತ್ತು.
ಇದನ್ನೂ ಓದಿ: ಸಂಸತ್ ಅಧಿವೇಶನದಲ್ಲಿ ಗದ್ದಲ, ಸರ್ಕಾರದ ವಿರುದ್ಧ ಘೋಷಣೆ; ಮಹಾಕುಂಭದ ಕಾಲ್ತುಳಿತದ ಬಗ್ಗೆ ಚರ್ಚೆಗೆ ವಿಪಕ್ಷಗಳ ಒತ್ತಾಯ
ಜನವರಿ 29ರ ಮುಂಜಾನೆ ಲಕ್ಷಾಂತರ ಯಾತ್ರಿಕರು ಮೌನಿ ಅಮವಾಸ್ಯೆಯ ಶುಭ ಸಂದರ್ಭದಲ್ಲಿ ಪವಿತ್ರ ಸ್ನಾನ ಮಾಡಲು ಧಾವಿಸಿದಾಗ ಮಹಾಕುಂಭದ ತ್ರಿವೇಣಿ ಸಂಗಮ ಪ್ರದೇಶದಲ್ಲಿ ಕಾಲ್ತುಳಿತ ಉಂಟಾಗಿತ್ತು. ಇದರಲ್ಲಿ 30 ಜನರು ಪ್ರಾಣ ಕಳೆದುಕೊಂಡರು ಮತ್ತು 60 ಜನರು ಗಾಯಗೊಂಡಿದ್ದರು. ಈ ಘಟನೆ ಬೆಳಗಿನ ಜಾವ 1-2 ಗಂಟೆಯ ನಡುವೆ ಸಂಭವಿಸಿತ್ತು. ಜನವರಿ 13ರಂದು ಪ್ರಯಾಗ್‌ರಾಜ್‌ನಲ್ಲಿ ಪ್ರಾರಂಭವಾದ ಮಹಾಕುಂಭ ಮೇಳ ಫೆಬ್ರವರಿ 26ರವರೆಗೆ ನಡೆಯಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ