ಬಜೆಟ್​ ಮಂಡಿಸಲು ಸಗಣಿ ಬ್ಯಾಗ್​ ಹಿಡಿದು ವಿಧಾನಸಭೆಗೆ ಬಂದ ಛತ್ತೀಸ್​ಗಢ ಮುಖ್ಯಮಂತ್ರಿ ಭೂಪೇಶ್​ ಬಾಘೇಲ್​

| Updated By: Lakshmi Hegde

Updated on: Mar 09, 2022 | 2:25 PM

ಛತ್ತೀಸ್​ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್​ ಗೋಧನ್​ ನ್ಯಾಯ ಯೋಜನೆಯನ್ನು ಘೋಷಿಸಿದ್ದಾರೆ. ಅದರಡಿಯಲ್ಲಿ ಹೆಚ್ಚೆಚ್ಚು ಸಗಣಿಯನ್ನು ಸಂಗ್ರಹ ಮಾಡುವಂತೆ ರೈತರು, ಜಾನುವಾರು ಮಾಲೀಕರಿಗೆ ಸೂಚಿಸಲಾಗಿದೆ.

ಬಜೆಟ್​ ಮಂಡಿಸಲು ಸಗಣಿ ಬ್ಯಾಗ್​ ಹಿಡಿದು ವಿಧಾನಸಭೆಗೆ ಬಂದ ಛತ್ತೀಸ್​ಗಢ ಮುಖ್ಯಮಂತ್ರಿ ಭೂಪೇಶ್​ ಬಾಘೇಲ್​
ಭೂಪೇಶ್ ಬಾಘೇಲ್​
Follow us on

ಬಜೆಟ್​ ಮಂಡನೆಯ ದಿನ ಸಾಮಾನ್ಯವಾಗಿ ಬಜೆಟ್​ ಮಂಡನೆ ಮಾಡುವವರು ಒಂದು ಬ್ರೀಫ್​ಕೇಸ್​, ಫೈಲ್​​ ಹಿಡಿದು ಬರುತ್ತಾರೆ. ಹಾಗೇ, ಇಂದು ಛತ್ತೀಸ್​ಗಢ್​ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ (Bhupesh Baghel)​ ಅವರೂ ಬಜೆಟ್​ ಮಂಡನೆ ಮಾಡಿದ್ದಾರೆ. ಆದರೆ ಬಜೆಟ್​ ಮಂಡಿಸಲು ವಿಧಾನಸಭೆಗೆ ಬರುವಾಗ ಅವರು ಹಿಡಿದುಕೊಂಡು ಬಂದ ಬ್ರೀಫ್​ಕೇಸ್​ ಈಗ ಭರ್ಜರಿ ಸುದ್ದಿಯಲ್ಲಿದೆ. 2022-23ನೇ ಸಾಲಿನ ಆಯವ್ಯಯ ಮಂಡಿಸಲು ಬಂದ ಅವರು ಕೈಯಲ್ಲಿ ಚೌಕಾಕಾರದ, ಹಸುವಿನ ಸಗಣಿಯಿಂದ ನಿರ್ಮಿಸಲ್ಪಟ್ಟ ಬ್ರೀಫ್​ಕೇಸ್​ ಹಿಡಿದು ಬಂದಿದ್ದಾರೆ. ತಮ್ಮ ಬ್ಯಾಗ್​​ ಹಿಡಿದುಕೊಂಡು ಫೋಟೋಕ್ಕೆ ಪೋಸ್​ ನೀಡಿದ್ದಾರೆ.

ಛತ್ತೀಸ್​ಗಢ್​ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನ ಸೋಮವಾರ (ಮಾರ್ಚ್​  7)ರಿಂದ ಪ್ರಾರಂಭಗೊಂಡಿದ್ದು, ಇಂದು ಬಾಘೇಲ್​ ನೇತೃತ್ವದ ಕಾಂಗ್ರೆಸ್​ ಸರ್ಕಾರದಿಂದ ಬಜೆಟ್​ ಮಂಡಿಸಲ್ಪಟ್ಟಿದೆ. ಭೂಪೇಶ್ ಬಾಘೇಲ್​ ಹಸುವಿನ ಸಗಣಿಗೆ ಮೊದಲಿನಿಂದಲೂ ಮಹತ್ವ ನೀಡುತ್ತಲೇ ಬಂದಿದ್ದಾರೆ. ಇವರು ರಾಜ್ಯದಲ್ಲಿ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಿದ್ದಾರೆ. ಬೀಡಾಡಿ ಹಸುಗಳ ಸಮಸ್ಯೆಗೆ ಪರಿಹಾರ ಕ್ರಮ ಕೈಗೊಂಡಿದ್ದಾರೆ. ಕೃಷಿಯನ್ನು ಲಾಭದಾಯಕ ಮಾಡುವ ನಿಟ್ಟಿನಲ್ಲಿ ವಿವಿಧ ಹೊಸ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಗ್ರಾಮೀಣ ಆರ್ಥಿಕತೆ ಅಭಿವೃದ್ಧಿಗಾಗಿ ನೆರವನ್ನೂ ಘೋಷಿಸಿದ್ದಾರೆ. ರೈತರು ಹಾಗೂ ಹಸು ಸಾಕಣೆ ಮಾಡುವವರಿಂದ ಸರ್ಕಾರ ಹಸುವಿನ ಸಗಣಿಯನ್ನು ಖರೀದಿಸುತ್ತದೆ ಎಂದು ಛತ್ತೀಸ್​ಗಢ ಸರ್ಕಾರ 2020ರಲ್ಲಿ ಘೋಷಿಸಿತ್ತು. ಇದು ದೇಶದಲ್ಲೇ ಮೊದಲಾಗಿತ್ತು.

ಛತ್ತೀಸ್​ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್​ ಗೋಧನ್​ ನ್ಯಾಯ ಯೋಜನೆಯನ್ನು ಘೋಷಿಸಿದ್ದಾರೆ. ಅದರಡಿಯಲ್ಲಿ ಹೆಚ್ಚೆಚ್ಚು ಸಗಣಿಯನ್ನು ಸಂಗ್ರಹ ಮಾಡುವಂತೆ ರೈತರು, ಜಾನುವಾರು ಮಾಲೀಕರಿಗೆ ಸೂಚಿಸಲಾಗಿದೆ. ರಾಜ್ಯದಲ್ಲಿ ರಾಸಾಯನಿಕ ಗೊಬ್ಬರ ಕೊರತೆ ನೀಗಿಸಲು ವರ್ಮಿ ಕಾಂಪೋಸ್ಟ್ ತಯಾರಿಸಲು ಸಗಣಿ ಮೂಲವಾಗಿದೆ. ಭೂಪೇಶ್ ಬಾಘೇಲ್​ ಮಾತ್ರವಲ್ಲ ಪ್ರಧಾನಿ ನರೇಂದ್ರ ಮೋದಿಯವರೂ ಕೂಡ, ಗ್ರಾಮೀಣ ಆರ್ಥಿಕತೆ ಅಭಿವೃದ್ಧಿಯ ಉತ್ತೇಜನ ಹಸುಗಳ ಸಗಣಿಯಿಂದ ಸಾಧ್ಯ ಎಂದು ಹೇಳಿದ್ದಾರೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ಸಾವಯವ ಕೃಷಿಯ ಪ್ರಾಮುಖ್ಯತೆ ವಿವರಿಸಿದ್ದ ಅವರು, ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು ತುಂಬ ಮುಖ್ಯ. ಕೃಷಿ ಉತ್ಪನ್ನಗಳ ರಕ್ಷಣೆಗೆ ರೈತರು ದೇಸಿ ಹಸುಗಳ ಸಗಣಿ, ಮೂತ್ರವನ್ನು ಬಳಸಬಹುದು. ಇವುಗಳಿಂದ ಮಾಡುವ ಕೃಷಿಯಿಂದ ಉತ್ಪಾದನೆಯೂ ಹೆಚ್ಚಿರುತ್ತದೆ ಎಂದು ಹೇಳಿದ್ದರು.

ಇದನ್ನೂ ಓದಿ: ಅನುದಾನ ವಿಚಾರದಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಯಾಕೆ ಅನ್ಯಾಯ: ಬಜೆಟ್ ಮೇಲೆ ಹೆಚ್.ಡಿ. ಕುಮಾರಸ್ವಾಮಿ ಭಾಷಣ

Published On - 2:24 pm, Wed, 9 March 22