ಪಟ್ಟು ಬಿಡದ ರಾಹುಲ್ ಗಾಂಧಿ; ಅಮರ್​ ಜವಾನ್​ ಜ್ಯೋತಿ ನಿರ್ಮಾಣಕ್ಕೆ ಫೆ.3ರಂದು ಶಂಕುಸ್ಥಾಪನೆ ಮಾಡಲಿರುವ ಕಾಂಗ್ರೆಸ್ ನಾಯಕ, ಎಲ್ಲಿ ಗೊತ್ತಾ?

ಕೇಂದ್ರ ಸರ್ಕಾರ ಅಮರ್​ ಜವಾನ್​ ಜ್ಯೋತಿಯನ್ನು ಆರಿಸುತ್ತಿಲ್ಲ, ಅದನ್ನು ವಿಲೀನಗೊಳಿಸುತ್ತಿದೆ ಎಂದು ಸ್ಪಷ್ಟನೆ ನೀಡಿಯೇ ಈ ಕೆಲಸ ಮಾಡಿದೆ. ಹಾಗಿದ್ದಾಗ್ಯೂ ಕೂಡ ರಾಹುಲ್​ ಗಾಂಧಿ ತಮ್ಮ ಪಟ್ಟು ಬಿಡುತ್ತಿಲ್ಲ.

ಪಟ್ಟು ಬಿಡದ ರಾಹುಲ್ ಗಾಂಧಿ; ಅಮರ್​ ಜವಾನ್​ ಜ್ಯೋತಿ ನಿರ್ಮಾಣಕ್ಕೆ ಫೆ.3ರಂದು ಶಂಕುಸ್ಥಾಪನೆ ಮಾಡಲಿರುವ ಕಾಂಗ್ರೆಸ್ ನಾಯಕ, ಎಲ್ಲಿ ಗೊತ್ತಾ?
ರಾಹುಲ್ ಗಾಂಧಿ
Follow us
TV9 Web
| Updated By: Lakshmi Hegde

Updated on:Jan 29, 2022 | 5:16 PM

ದೆಹಲಿ: ಛತ್ತೀಸ್​ಗಢ್​​ನಲ್ಲಿ ಅಮರ್​ ಜವಾನ್ ಜ್ಯೋತಿ (Amar Jawan Jyoti) ನಿರ್ಮಾಣಕ್ಕೆ ಫೆಬ್ರವರಿ 3ರಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅಡಿಗಲ್ಲು ಸ್ಥಾಪನೆ ಮಾಡಲಿದ್ದಾರೆ ಎಂದು ಅಲ್ಲಿನ ಮುಖ್ಯಮಂತ್ರಿ ಭೂಪೇಶ್ ಬಾಘೇಲ್​ ಇಂದು ತಿಳಿಸಿದ್ದಾರೆ. ಇಂಡಿಯಾ ಗೇಟ್​ ಬಳಿ ಕಳೆದ 50ವರ್ಷಗಳಿಂದ ಉರಿಯುತ್ತಿದ್ದ ಅಮರ ಜವಾನ್​ ಜ್ಯೋತಿಯನ್ನು ಇತ್ತೀಚೆಗಷ್ಟೇ ಅಂದರೆ ಜನವರಿ 21ರಂದು ರಾಷ್ಟ್ರೀಯ ಯುದ್ಧ ಸ್ಮಾರಕ ಜ್ಯೋತಿಯಲ್ಲಿ ಲೀನಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಈ ಕ್ರಮವನ್ನು ರಾಹುಲ್​ ಗಾಂಧಿ ಕಟುವಾಗಿ ವಿರೋಧಿಸಿದ್ದರು. ಕೆಲವರಿಗೆ ದೇಶಭಕ್ತಿ ಎಂದರೇನು ಎಂಬುದೇ ಗೊತ್ತಿಲ್ಲ ಎಂದು ಹೇಳಿದ್ದರು. ಗಣರಾಜ್ಯೋತ್ಸವದಂದು ಕೂಡ ರಾಹುಲ್​ ಗಾಂಧಿ ಈ ಅಮರ್​ ಜವಾನ್​ ಜ್ಯೋತಿಯ ಬಗ್ಗೆಯೇ ಮಾತನಾಡಿದ್ದರು.

ಇದೀಗ ಛತ್ತೀಸ್​ಗಢ್​​ನಲ್ಲಿ ಅಮರ್​ ಜವಾನ್​ ಜ್ಯೋತಿ ನಿರ್ಮಾಣಕ್ಕೆ ಅಡಿಗಲ್ಲು ಸ್ಥಾಪಿಸಲು ರಾಹುಲ್​ ಗಾಂಧಿ ಆಗಮಿಸಲಿದ್ದಾರೆ ಎಂದು ಹೇಳಿರುವ ಭೂಪೇಶ್ ಬಾಘೇಲ್​, ಹುತಾತ್ಮರ ತ್ಯಾಗದ ಐತಿಹಾಸಿಕ ಕತೆಗಳು, ಎಲ್ಲ ಪೀಳಿಗೆಗೂ ಮಾದರಿ. ಯಾರು ದೇಶಕ್ಕಾಗಿ ಹೋರಾಟ ಮಾಡಿಲ್ಲವೋ ಅವರಿಗೆ ಇಂಥವೆಲ್ಲ ಅರ್ಥವಾಗುವುದಿಲ್ಲ ಎಂದು ಬಿಜೆಪಿ-ಆರ್​ಎಸ್​ಎಸ್​ ವಿರುದ್ಧ ವಾಗ್ದಾಳಿ ನಡೆಸಿದರು.  ಕೇಂದ್ರ ಸರ್ಕಾರ ಅಮರ್​ ಜವಾನ್​ ಜ್ಯೋತಿಯನ್ನು ಆರಿಸುತ್ತಿಲ್ಲ, ಅದನ್ನು ವಿಲೀನಗೊಳಿಸುತ್ತಿದೆ ಎಂದು ಸ್ಪಷ್ಟನೆ ನೀಡಿಯೇ ಈ ಕೆಲಸ ಮಾಡಿದೆ. ಹಾಗಿದ್ದಾಗ್ಯೂ ಕೂಡ ರಾಹುಲ್​ ಗಾಂಧಿ ತಮ್ಮ ಪಟ್ಟು ಬಿಡುತ್ತಿಲ್ಲ. ಅಮರ್​ ಜವಾನ್​ ಜ್ಯೋತಿಯನ್ನು ನಾವು ಇನ್ನೊಮ್ಮೆ ಬೆಳಗುತ್ತೇವೆ ಎಂದು ಹಿಂದಿಯಲ್ಲಿ ಟ್ವೀಟ್​ ಮಾಡಿದ್ದರು. ಅದರಂತೆ ಛತ್ತೀಸ್​ಗಢ್​​ನಲ್ಲಿ ಶಂಕುಸ್ಥಾಪನೆ ನೆರವೇರಿಸಲು ಮುಂದಾಗಿದ್ದಾರೆ.

ಅಮರ ಜ್ಯೋತಿಯನ್ನು ಅಲ್ಲಿಂದ ತೆಗೆದಿದ್ದು ಯಾಕೆ?: ಇದಕ್ಕೆ ಹಲವು ಕಾರಣಗಳನ್ನು ಅಧಿಕಾರಿಗಳು ತಿಳಿಸಿದ್ದಾರೆ. ರಾಜಕೀಯ ವಿವಾದವು ಭುಗಿಲೆದ್ದ ನಂತರ ಸರ್ಕಾರದ ಮೂಲಗಳ ಪ್ರಕಾರ ಜ್ವಾಲೆಯನ್ನು ನಂದಿಸುವುದಿಲ್ಲ. ಅದಕ್ಕೊಂದು “ಸರಿಯಾದ ದೃಷ್ಟಿಕೋನ” ನೀಡುವುದಕ್ಕಾಗಿಯೇ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಲೀನವಾಗಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. 1971 ರ ಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಅಮರ ಜ್ಯೋತಿಯು ಗೌರವ ಸಲ್ಲಿಸಿದೆ, ಆದರೆ ಅವರ ಹೆಸರನ್ನು ಉಲ್ಲೇಖಿಸಿಲ್ಲ ಮತ್ತು ಇಂಡಿಯಾ ಗೇಟ್ “ನಮ್ಮ ವಸಾಹತುಶಾಹಿ ಗತಕಾಲದ ಸಂಕೇತ” ಎಂದು ಮೂಲಗಳು ತಿಳಿಸಿವೆ.

“1971 ರ ಎಲ್ಲಾ ಯುದ್ಧಗಳು ಮತ್ತು ಅದರ ಮೊದಲು ಮತ್ತು ನಂತರದ ಯುದ್ಧಗಳು ಸೇರಿದಂತೆ ಎಲ್ಲಾ ಭಾರತೀಯ ಹುತಾತ್ಮರ ಹೆಸರುಗಳನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಇರಿಸಲಾಗಿದೆ. ಆದ್ದರಿಂದ ಜ್ವಾಲೆಯು ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ನಿಜವಾದ ಗೌರವವಾಗಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.

2019 ರಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕ ಬಂದಾಗ, ಭಾರತೀಯ ರಾಜಕೀಯ ಮತ್ತು ಮಿಲಿಟರಿ ನಾಯಕರು ಮತ್ತು ವಿದೇಶಿ ಗಣ್ಯರು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಮಡಿದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದರು, ಇದು ಮೊದಲು ಅಮರ್ ಜವಾನ್ ಜ್ಯೋತಿಯಲ್ಲಿ ಸಂಭವಿಸುತ್ತಿತ್ತು ಎಂದು ರಕ್ಷಣಾ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಬದಲಾವಣೆಯೊಂದಿಗೆ ಎರಡು ಜ್ವಾಲೆಯ ಅಗತ್ಯವಿಲ್ಲ ಎಂದು ಭಾವಿಸಲಾಗಿದೆ. ಆದರೆ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ನಿರ್ಮಿಸಿದಾಗ ಅಧಿಕಾರಿಗಳು ಎರಡೂ ಜ್ವಾಲೆಗಳನ್ನು ನಂದಾ ಜ್ಯೋತಿಯಾಗಿಯೇ ಇರಿಸಲಾಗುವುದು ಎಂದು ಹೇಳಿದ್ದರು.

ಆದರೆ ಇನ್ನೊಂದು ಕಾರಣವೆಂದರೆ ಅಮರ್ ಜವಾನ್ ಜ್ಯೋತಿಯು ದೇಶದ ಭಾವನಾತ್ಮಕ ಮನಸ್ಸಿನಲ್ಲಿ ಎಷ್ಟು ಬಲವಾಗಿ ಕೆತ್ತಲ್ಪಟ್ಟಿದೆಯೆಂದರೆ, ಹೊಸ ಯುದ್ಧ ಸ್ಮಾರಕವು ಸರ್ಕಾರದ ನಿರೀಕ್ಷೆಯಂತೆ ಗಮನ ಸೆಳೆಯಲಿಲ್ಲ. ಮತ್ತು ಸರ್ಕಾರವು 2019 ರಲ್ಲಿ ನಿರ್ಮಿಸಿದ ಹೊಸ ಸ್ಮಾರಕವನ್ನು ಪ್ರಚಾರ ಮಾಡಲು ಬಯಸುತ್ತದೆ. ಇದಲ್ಲದೆ, ಇಂಡಿಯಾ ಗೇಟ್, ಅಮರ್ ಜವಾನ್ ಜ್ಯೋತಿ ಮತ್ತು ರಾಷ್ಟ್ರೀಯ ಯುದ್ಧ ಸ್ಮಾರಕಗಳ ಭಾಗವಾಗಿರುವ ಸಂಪೂರ್ಣ ಸೆಂಟ್ರಲ್ ವಿಸ್ಟಾದ ಸರ್ಕಾರದ ಪುನರಾಭಿವೃದ್ಧಿಯ ಭಾಗವಾಗಿಯೂ ಇದನ್ನು ಕಾಣಬಹುದು ಎಂದು ದಿ ಇಂಡಿಯನ್ ಎಕ್ಸ್​​ಪ್ರೆಸ್  ವರದಿ ಹೇಳಿದೆ.

ಇದನ್ನೂ ಓದಿ: ರಾಹುಲ್, ರೋಹಿತ್, ವಿರಾಟ್…ಯಾರ ವಿಕೆಟ್ ಹೆಚ್ಚು ಖುಷಿ ಕೊಡ್ತು? ಅಫ್ರಿದಿ ಉತ್ತರ ಹೀಗಿದೆ

Published On - 5:09 pm, Sat, 29 January 22