ತಮ್ಮಂತೆಯೇ ಬಟ್ಟೆ ತೊಟ್ಟು ಮದುವೆ ಮನೆಯಲ್ಲಿ ಭಾರಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಪುರುಷರ ವೇಷ ಕಳಚಿದ ಮಂಗಳಮುಖಿಯರು
ಮಧ್ಯಪ್ರದೇಶದ ಛಿಂದ್ವಾರಾದಲ್ಲಿ ಮದುವೆ ಮನೆಯಲ್ಲಿ ಮಂಗಳಮುಖಿಯರಂತೆ ವೇಷ ಧರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಪುರುಷರ ಗ್ಯಾಂಗ್ ಗ್ರಾಮಸ್ಥರಿಂದ ಸಿಕ್ಕಿಬಿದ್ದಿದೆ. ಅತಿಯಾದ ಹಣ ಕೇಳಿದಾಗ ಸಂಶಯಗೊಂಡ ಗ್ರಾಮಸ್ಥರು ನಿಜವಾದ ಮಂಗಳಮುಖಿಯರನ್ನು ಕರೆಸಿ ಪರಿಶೀಲಿಸಿದಾಗ ಅವರ ವಂಚನೆ ಬಯಲಾಯಿತು. ಇದರಿಂದ ಆಕ್ರೋಶಗೊಂಡ ಮಹಿಳೆಯರು ಮತ್ತು ಗ್ರಾಮಸ್ಥರು ಅವರನ್ನು ಥಳಿಸಿ, ಮುಖವಾಡ ಕಳಚಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಇಂತಹ ವಂಚಕರ ಬಗ್ಗೆ ಜಾಗೃತಿ ಮೂಡಿಸಿದೆ.

ಛಿಂದ್ವಾರಾ, ಜೂನ್ 09: ಮದುವೆ ಸಮಾರಂಭಗಳಲ್ಲಿ ನವ ಜೋಡಿ ಹರಸಿ ಅವರು ಕೊಟ್ಟಷ್ಟು ಹಣವನ್ನು ಪಡೆದು ಹೋಗುವ ಮಂಗಳಮುಖಿ(Transgenders)ಯರು ಒಂದು ಕಡೆಯಾದರೆ, ಇತ್ತ ಪುರುಷರು ಮಂಗಳಮುಖಿಯರಂತೆ ವೇಷ ತೊಟ್ಟು ಮದುವೆ ಮನೆಯಲ್ಲಿ ಭಾರಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಗುಂಪು ಇನ್ನೊಂದು ಕಡೆ. ಈ ಗುಂಪನ್ನು ಜನರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮದುವೆ ಹಾಗೂ ಇತರ ಮಂಗಳಕರ ಸಮಾರಂಭಗಳ ಸಂದರ್ಭದಲ್ಲಿ ಹಣದ ಹೆಸರಿನಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ನಕಲಿ ಗ್ಯಾಂಗ್ ಒಂದನ್ನು ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ನಾಗರಿಕರು ಅತ್ಯಂತ ಜಾಣಾಕ್ಷತನದಿಂದ ಪತ್ತೆಹಚ್ಚಿದ್ದಾರೆ. ಜಿಲ್ಲೆಯ ಪರಸಿಯಾ ಪ್ರದೇಶದ ದರ್ಬಾಯ್ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಮಂಗಳಮುಖಿಯರಂತೆ ವೇಷ ಧರಿಸಿ ಭಾರಿ ಮೊತ್ತದ ಹಣಕ್ಕೆ ಬೇಡಿಕೆ ಇಡುತ್ತಿದ್ದ ಯುವಕರ ಅಸಲಿ ಮುಖವಾಡವನ್ನು ಸ್ಥಳೀಯರು ಬಯಲಿಗೆಳೆದಿದ್ದಾರೆ.
ಈ ಘಟನೆಯ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಇಂತಹ ವಂಚಕರ ಬಗ್ಗೆ ಜಾಗೃತಿ ಮೂಡಿಸುತ್ತಿದೆ.
ಅನುಮಾನ ಮೂಡಿಸಿದ ಅತಿಯಾದ ಬೇಡಿಕೆ, ಬಯಲಾಯ್ತು ವಂಚನೆ ದರ್ಬಾಯ್ ಗ್ರಾಮದಲ್ಲಿ ವೈಭವದ ಮದುವೆ ಸಮಾರಂಭ ನಡೆಯುತ್ತಿದ್ದಾಗ, ಮಂಗಳಮುಖಿಯರಂತೆ ಉಡುಪು, ಮೇಕಪ್ ಮಾಡಿಕೊಂಡ ಪುರುಷರು ವಧು-ವರರ ಕುಟುಂಬಸ್ಥರ ಬಳಿ ದೊಡ್ಡ ಮೊತ್ತದ ಹಣವನ್ನು ನೀಡುವಂತೆ ಪಟ್ಟು ಹಿಡಿದರು. ಆದರೆ, ಅವರ ವರ್ತನೆ ಮತ್ತು ಅತಿಯಾದ ಒತ್ತಾಯವು ಅಲ್ಲಿದ್ದ ಗ್ರಾಮಸ್ಥರಲ್ಲಿ ತೀವ್ರ ಅನುಮಾನವನ್ನು ಹುಟ್ಟುಹಾಕಿತು.
ಮತ್ತಷ್ಟು ಓದಿ: ಅವನ ಸಹವಾಸ ಬೇಡ ಅಂದ್ರೂ ಕೇಳಿಲ್ಲ: ಪ್ರಿಯಕರನ ಅಸಲಿಮುಖ ಬಿಚ್ಚಿಟ್ಟ ಮಂಗಳಮುಖಿ
ಗ್ರಾಮಸ್ಥರು ತಕ್ಷಣವೇ ಸ್ಥಳೀಯ ಮಂಗಳಮುಖಿಯರ ಸಮುದಾಯದ ಮುಖಂಡರಿಗೆ ಫೋನ್ ಮೂಲಕ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿಕೊಂಡರು. ಸ್ಥಳಕ್ಕೆ ಬಂದ ತೃತೀಯ ಲಿಂಗಿ ಸಮುದಾಯದ ಸದಸ್ಯರು ಈ ಅಪರಿಚಿತರ ಗುರುತನ್ನು ಪರಿಶೀಲಿಸಿದಾಗ, ಅವರು ಮಂಗಳಮುಖಿಯರಲ್ಲ ಬದಲಿಗೆ ಹಣದ ಆಸೆಗೆ ಸೀರೆ ಉಟ್ಟು ವೇಷ ಧರಿಸಿದ್ದ ಯುವಕರು ಎಂಬ ಆಘಾತಕಾರಿ ಸತ್ಯ ಬಹಿರಂಗವಾಯಿತು.
ವಿಡಿಯೋ
मध्य प्रदेश के छिंदवाड़ा जिले के परासिया क्षेत्र के दरबई गांव में नकली किन्नर बनकर नेग मांगने पहुंचे कुछ युवकों का भंडाफोड़ हो गया। शादी समारोह में बड़ी रकम की मांग किए जाने पर ग्रामीणों को शक हुआ, जिसके बाद किन्नर समुदाय को सूचना दी गई। मौके पर पहुंचे किन्नर समाज के लोगों ने… pic.twitter.com/BJFh6Urlzu
— Prime News (@PrimeNewsInd) June 7, 2026
ಸ್ಥಳದಲ್ಲೇ ತರಾಟೆಗೆ ತಗೆದುಕೊಂಡ ಮಹಿಳೆಯರು ವಂಚನೆ ಸಂಪೂರ್ಣವಾಗಿ ಜಗಜ್ಜಾಹೀರಾಗುತ್ತಿದ್ದಂತೆ ಮದುವೆ ಮನೆಯಲ್ಲಿದ್ದ ಮಹಿಳೆಯರು ಮತ್ತು ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಧಾರ್ಮಿಕ ನಂಬಿಕೆ ಹಾಗೂ ಸಾಂಪ್ರದಾಯಿಕ ಭಾವನೆಗಳನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಮಹಿಳೆಯರು ಆ ನಕಲಿ ವ್ಯಕ್ತಿಗಳಿಗೆ ಕಪಾಳಮೋಕ್ಷ ಮಾಡಿ, ಅವರ ಮುಖವಾಡ ಮತ್ತು ವೇಷಭೂಷಣಗಳನ್ನು ಕಳಚಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಪಕ್ಕದಲ್ಲಿದ್ದವರು ಇಡೀ ಘಟನೆಯನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದು, ಸಮಾಜಕ್ಕೆ ವಂಚಿಸುವ ಇಂತಹ ಗ್ಯಾಂಗ್‌ಗಳ ವಿರುದ್ಧ ಜಾಗರೂಕರಾಗಿರಲು ಈ ವಿಡಿಯೋ ನೆರವಾಗುತ್ತಿದೆ.
ಸ್ಥಳೀಯ ನಿವಾಸಿಗಳ ಪ್ರಕಾರ, ಈ ನಕಲಿ ಗ್ಯಾಂಗ್ ಈ ಹಿಂದೆಯೂ ಜಿಲ್ಲೆಯ ಹಲವಾರು ಮದುವೆಗಳು, ಮಗುವಿನ ಜನನ ಹಾಗೂ ಗೃಹಪ್ರವೇಶದಂತಹ ಆಚರಣೆಗಳಿಗೆ ಮಂಗಳಮುಖಿಯರಂತೆ ನಟಿಸುತ್ತಾ ನುಗ್ಗಿ, ಅಮಾಯಕ ಕುಟುಂಬಗಳಿಂದ ಸಾವಿರಾರು ರೂಪಾಯಿಗಳನ್ನು ದೋಚುತ್ತಿತ್ತು ಎನ್ನುವ ಮಾಹಿತಿ ತಿಳಿದುಬಂದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




