
ನವದೆಹಲಿ, ಸೆಪ್ಟೆಂಬರ್ 24: ಚುನಾವಣಾ ಆಯೋಗದ ಕಾರ್ಯಾಚರಣೆಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ), ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರು ಮುಂದಿನ 48 ಗಂಟೆಗಳಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದೆ. ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ನೀಡದಿದ್ದರೆ ದೇಶಾದ್ಯಂತ ಬೃಹತ್ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. “ನಾವು ನವದೆಹಲಿಯಲ್ಲೂ ತೀವ್ರ ಪ್ರತಿಭಟನೆ ನಡೆಸಲಿದ್ದು, ಸಿಇಸಿ ರಾಜೀನಾಮೆ ನೀಡುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ” ಎಂದು ದೀಪ್ಕೆ ಸ್ಪಷ್ಟಪಡಿಸಿದ್ದಾರೆ.
ಚುನಾವಣಾ ಪ್ರಕ್ರಿಯೆಯು ಮೋಸದಿಂದ ಕೂಡಿದೆ ಮತ್ತು ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಸಿಜೆಪಿ “ಚುನಾವಣಾ ಆಯೋಗವನ್ನು ಸರಿಪಡಿಸಿ” ಅಭಿಯಾನವನ್ನು ಪ್ರಾರಂಭಿಸಿದೆ. ಚುನಾವಣೆಗಳಲ್ಲಿ ಅಕ್ರಮ ನಡೆಯುತ್ತಿದೆ ಎಂದು ಭಾವಿಸುವ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ಅವರು ಸಲಹೆ ನೀಡಿದ್ದಾರೆ. ಜ್ಞಾನೇಶ್ ಕುಮಾರ್ ಅವರು ಭಾರತೀಯ ಪ್ರಜಾಪ್ರಭುತ್ವಕ್ಕೆ ಅತ್ಯಂತ ದೊಡ್ಡ ಬೆದರಿಕೆ ಎಂದು ದೂರಿದ ಅಭಿಜೀತ್ ದೀಪ್ಕೆ, “ಯಾರಿಗೆ ಮತದಾನದ ಹಕ್ಕು ಇರಬೇಕು ಎಂಬುದನ್ನು ಆಯೋಗವೇ ನಿರ್ಧರಿಸುತ್ತಿದೆ. ನಮ್ಮ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಜ್ಞಾನೇಶ್ ಕುಮಾರ್ ಯಾರು?” ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಕೊಟ್ಟ ಮಾತಿನಂತೆ ನಡೆದುಕೊಂಡ ಸರ್ಕಾರ; ಸೆಪ್ಟೆಂಬರ್ 5ರ ಪ್ರತಿಭಟನೆ ಕೈಬಿಟ್ಟ ಸಿಜೆಪಿ
13 ಕೋಟಿಗೂ ಹೆಚ್ಚು ಮತದಾರರ ಹೆಸರು ರದ್ದು:
ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಸಮಯದಲ್ಲಿ 30 ರಾಜ್ಯಗಳ ಮತದಾರರ ಪಟ್ಟಿಯಿಂದ 13 ಕೋಟಿಗೂ ಹೆಚ್ಚು ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಸಿಜೆಪಿ ಅಂಕಿಅಂಶಗಳನ್ನು ಹಂಚಿಕೊಂಡಿದೆ:
ಮಹಾರಾಷ್ಟ್ರ: 2 ಕೋಟಿಗೂ ಹೆಚ್ಚು
ಉತ್ತರ ಪ್ರದೇಶ: 2 ಕೋಟಿಗೂ ಹೆಚ್ಚು
ಕರ್ನಾಟಕ: ಸುಮಾರು 1 ಕೋಟಿ
ತಮಿಳುನಾಡು: 97 ಲಕ್ಷ
ಪಶ್ಚಿಮ ಬಂಗಾಳ: 90 ಲಕ್ಷ
ತೆಲಂಗಾಣ: 73 ಲಕ್ಷ
ದೆಹಲಿ: 47 ಲಕ್ಷ
ಕೇರಳ: 24 ಲಕ್ಷ
ಇದನ್ನೂ ಓದಿ: ಬಿಜೆಪಿ ನಾಯಕ ಎಲ್. ಕೆ. ಅಡ್ವಾಣಿ, ಕೇಂದ್ರ ಸಚಿವ ಜೈಶಂಕರ್, ಸಿಬಿಐ ನಿರ್ದೇಶಕ ಪ್ರವೀಣ್ ಸೂದ್ಗೂ ಎಸ್‌ಐಆರ್ ನೋಟಿಸ್
ಚುನಾವಣಾ ಆಯೋಗದೊಳಗೇ ಭುಗಿಲೆದ್ದ ಭಿನ್ನಾಭಿಪ್ರಾಯ:
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಮೂವರು ಸದಸ್ಯರ ಚುನಾವಣಾ ಆಯೋಗದೊಳಗೆ ಆಂತರಿಕ ಪ್ರಶ್ನೆಗಳು ಮತ್ತು ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ ಎನ್ನಲಾಗಿದೆ. ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಎಸ್‌ಐಆರ್ ರಾಷ್ಟ್ರೀಯ ಅನುಷ್ಠಾನದ ವೇಳೆ ತೆಗೆದುಕೊಂಡ ನಿರ್ಧಾರಗಳು ಮತ್ತು ಹೊರಡಿಸಲಾದ ಆದೇಶಗಳನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಕಳೆದ 10 ತಿಂಗಳಲ್ಲಿ ತಮ್ಮ ಗಮನಕ್ಕೆ ತರದೆ ಅಥವಾ ತಮ್ಮ ಅನುಮತಿಯಿಲ್ಲದೆ ಕೈಗೊಂಡ ನಿರ್ಧಾರಗಳ ವಿರುದ್ಧ ಕನಿಷ್ಠ 14 ಬಾರಿ ಆಯೋಗದ ದಾಖಲೆಗಳಲ್ಲೇ ಅಧಿಕೃತವಾಗಿ ಆಕ್ಷೇಪಣೆ ಸಲ್ಲಿಸಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಬಹಿರಂಗಪಡಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:05 pm, Thu, 24 September 26