ಜಮೂಯಿಯಲ್ಲಿ ಗೆಳೆಯನನ್ನು ಥಳಿಸಿ, 10ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಬಿಹಾರ ಸರ್ಕಾರದ ವಿರುದ್ಧ ಜನರ ಆಕ್ರೋಶ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ರಾತ್ರಿಯ ವೇಳೆಯಲ್ಲಿ ಗುಂಪೊಂದು ಅಪ್ರಾಪ್ತ ಬಾಲಕ-ಬಾಲಕಿಯನ್ನು ಸುತ್ತುವರಿದಿದ್ದಾರೆ. ಆ ಗುಂಪಿನಲ್ಲಿದ್ದ ವ್ಯಕ್ತಿಗಳು ಬಾಲಕಿಯನ್ನು ಬೆದರಿಸಿ ಆಕೆಯ ಜೊತೆಯಲ್ಲಿದ್ದ ಬಾಲಕನನ್ನು ಪಕ್ಕಕ್ಕೆ ಸರಿಸುತ್ತಾರೆ. ಮುಖ ಮುಚ್ಚಿಕೊಂಡಿದ್ದ ಒಬ್ಬ ವ್ಯಕ್ತಿಯು ಬಾಲಕಿಗೆ ಅನುಚಿತವಾಗಿ ಸ್ಪರ್ಶಿಸಿ, ಆಕೆಯನ್ನು ಕೆಳಗಿನಿಂದ ಎತ್ತಿಕೊಂಡು ಹೋಗಲು ಯತ್ನಿಸುತ್ತಾನೆ. ಈ ವೇಳೆ ಬಾಲಕಿ ಆತನಿಂದ ಬಿಡಿಸಿಕೊಳ್ಳಲು ಚೀರಾಡುತ್ತಾ ಪ್ರತಿಭಟಿಸುತ್ತಾಳೆ ಹಾಗೂ ಬಾಲಕನು ಮಧ್ಯಪ್ರವೇಶಿಸಲು ಯತ್ನಿಸುತ್ತಾನೆ.

ಜಮೂಯಿಯಲ್ಲಿ ಗೆಳೆಯನನ್ನು ಥಳಿಸಿ, 10ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಬಿಹಾರ ಸರ್ಕಾರದ ವಿರುದ್ಧ ಜನರ ಆಕ್ರೋಶ
ಜಮೂಯಿಯಲ್ಲಿ ಗೆಳೆಯನನ್ನು ಥಳಿಸಿ, ಬಾಲಕಿಗೆ ಲೈಂಗಿಕ ಕಿರುಕುಳ
Image Credit source: TV9

Updated on: Sep 21, 2026 | 3:18 PM

ಜಮೂಯಿ, ಸೆಪ್ಟೆಂಬರ್ 21: ಬಿಹಾರದ ಜಮೂಯಿಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿಯನ್ನು ಸುತ್ತುವರಿದು, ಲೈಂಗಿಕ ಕಿರುಕುಳ ನೀಡಿದ ಭೀಕರ ಘಟನೆಗೆ ಸಂಬಂಧಿಸಿದಂತೆ ಬಿಹಾರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ದೌರ್ಜನ್ಯದ ವಿಡಿಯೋ ವೈರಲ್ ಆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಆಕೆಯ ಜೊತೆಗಿದ್ದ ಗೆಳೆಯನನ್ನೂ ಥಳಿಸಿ, ಆಕೆಯನ್ನು ಹಿಡಿದು ಎಳೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಆದರೆ, ಆಕೆಯನ್ನು ಆಕೆಯ ಜೊತೆಗಿದ್ದ ಗೆಳೆಯ ರಕ್ಷಿಸಿ, ಸುರಕ್ಷಿತವಾಗಿ ಕರೆದುಕೊಂಡು ಹೋಗಿದ್ದಾನೆ.

ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಸ್ಥಳ, ವ್ಯಕ್ತಿಗಳ ಬಗ್ಗೆ ಮಾಹಿತಿ ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಶನಿವಾರ ಸಂಜೆ ಅಪ್ರಾಪ್ತ ಯುವಕ-ಯುವತಿ ಕೋಚಿಂಗ್ ಕ್ಲಾಸ್ ಮುಗಿಸಿ ಜಮೂಯಿ-ಲಖಿಸರಾಯ್ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಈ ಪುಂಡರ ಗುಂಪು ಅವರನ್ನು ತಡೆದು ನಿಲ್ಲಿಸಿದೆ. ಆಗ ಅವರು ಅಪ್ರಾಪ್ತ ಬಾಲಕನ ಶರ್ಟ್ ಕಾಲರ್ ಹಿಡಿದು ಆತನನ್ನು ಬಾಲಕಿಯಿಂದ ದೂರ ಎಳೆದುಕೊಂಡು ಹೋಗಿದ್ದಾರೆ. ಬಳಿಕ ಆ ಹುಡುಗಿಯನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಆಗ ಆಕೆ ಗಟ್ಟಿಯಾಗಿ ಚೀರಾಡುತ್ತಾ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ.


ಕೊನೆಗೆ ಆಕೆಯ ಜೊತೆಗಿದ್ದ ಬಾಲಕ ಆ ಪುಂಡರಿಂದ ತಪ್ಪಿಸಿಕೊಂಡು ಬಂದು ಆಕೆಯ ಕೈಹಿಡಿದುಕೊಂಡು ಓಡಿಹೋಗಿ ಸ್ಕೂಟರ್​​ನಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ, ಪುಂಡರು ಮತ್ತೆ ಆ ಬಾಲಕಿಯ ಕೈ ಹಿಡಿದು ಎಳೆದಿದ್ದಾರೆ. ಈ ವೇಳೆ ಬಾಲಕಿ ಕೈಮುಗಿದು ಬೇಡಿಕೊಳ್ಳುವ ದೃಶ್ಯ ವೈರಲ್ ಆಗಿದೆ. ಆಗ ಅವರು ಆಕೆಯ ಫೋನ್ ನಂಬರ್ ನೀಡುವಂತೆ ಪೀಡಿಸಿದ್ದಾರೆ.


ಇದನ್ನೂ ಓದಿ: ಲೈಂಗಿಕ ಕಿರುಕುಳದ ಸುಳ್ಳು ಕೇಸ್ ಹಾಕಿದ್ದನ್ನು ಒಪ್ಪಿಕೊಂಡ ಶಿಲ್ಪಾ ಶಿಂಧೆ; ನಟಿಯ ಬಂಧನಕ್ಕೆ ಒತ್ತಾಯ

ಜಮೂಯಿ ಪೊಲೀಸ್ ವರಿಷ್ಠಾಧಿಕಾರಿ ವಿಶ್ವಜೀತ್ ದಯಾಳ್ ಈ ಘಟನೆಯನ್ನು ದೃಢೀಕರಿಸಿದ್ದು, “ವಿಡಿಯೋ ವೈರಲ್ ಆದ ತಕ್ಷಣವೇ ಸಂತ್ರಸ್ತ ಅಪ್ರಾಪ್ತರನ್ನು ಸಂಪರ್ಕಿಸಿ ಅವರಿಂದ ದೂರನ್ನು ಪಡೆದು ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ವಿಡಿಯೋ ಆಧಾರದ ಮೇಲೆ ಮೂವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಇತರ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ.

ರಾಹುಲ್ ಗಾಂಧಿ ಆಕ್ರೋಶ:

ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಕೈಮುಗಿದು ಬೇಡಿಕೊಳ್ಳುತ್ತಿದ್ದ ಬಾಲಕಿಯನ್ನು ಗೂಂಡಾಗಳು ಎಳೆದೊಯ್ದು ಕಿರುಕುಳ ನೀಡಿದ್ದಾರೆ. ಈ ರೀತಿ ವರ್ತಿಸಲು ಇವರಿಗೆ ಸ್ವಾತಂತ್ರ್ಯ ಕೊಟ್ಟವರು ಯಾರು? ಇದು ಸಂಸ್ಕೃತಿಯಲ್ಲ, ಬದಲಿಗೆ ಪುರುಷಪ್ರಧಾನ ಮನಸ್ಥಿತಿ. ಯಾವುದೇ ಪುರುಷನು ಹುಡುಗಿಯ ದೇಹ, ಆಕೆಯ ವರ್ತನೆ ಮತ್ತು ಆಯ್ಕೆಗಳನ್ನು ನಿಯಂತ್ರಿಸಬಹುದು ಎಂಬ ಕೆಟ್ಟ ನಂಬಿಕೆ ಇದಾಗಿದೆ.” ಎಂದು ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ ಅವರು, ಸಂಜೆ 7 ಗಂಟೆಗೆ ಸಾರ್ವಜನಿಕ ರಸ್ತೆಯಲ್ಲಿ ಹೆಣ್ಣುಮಗಳಿಗೆ ಭದ್ರತೆ ಇಲ್ಲದಿರುವುದಕ್ಕೆ ಬಿಹಾರ ಸರ್ಕಾರ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಅತ್ಯಾಚಾರ ಪ್ರಕರಣ; ತರುಣ್ ತೇಜ್‌ಪಾಲ್‌ಗೆ 2 ವಾರಗಳೊಳಗೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶ

ಬಿಹಾರ ಸರ್ಕಾರದ ಸ್ಪಷ್ಟನೆ:

ರಾಹುಲ್ ಗಾಂಧಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಹಾರ ಸಚಿವ ಸುನಿಲ್ ಕುಮಾರ್, “ಸ್ಥಳೀಯ ಆಡಳಿತವು ಸರ್ಕಾರದ ಪರವಾಗಿ ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ತಪ್ಪು ಮಾಡಿದವರ ವಿರುದ್ಧ ತಕ್ಷಣವೇ ಕ್ರಮ ತೆಗೆದುಕೊಳ್ಳಲಾಗಿದೆ. ಈ ಘಟನೆ ಖಂಡನೀಯ ನಿಜ, ಆದರೆ ಒಂದೇ ಒಂದು ಘಟನೆಯನ್ನು ಇಟ್ಟುಕೊಂಡು ಇಡೀ ಬಿಹಾರದಲ್ಲಿ ‘ಜಂಗಲ್ ರಾಜ್’ ಇದೆ ಎಂದು ಬಿಂಬಿಸುವುದು ಸರಿಯಲ್ಲ. ಪೊಲೀಸರು ಈಗಾಗಲೇ ತನಿಖೆ ಚುರುಕುಗೊಳಿಸಿದ್ದು, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಲಿದೆ” ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us