ಅಸ್ಸಾಂನಿಂದ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ ತೆಗೆದುಹಾಕಲಾಗುತ್ತದೆ ಎಂಬ ವಿಶ್ವಾಸವಿದೆ: ಅಮಿತ್ ಶಾ

ಅಸ್ಸಾಂನಿಂದ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ ತೆಗೆದುಹಾಕಲಾಗುತ್ತದೆ ಎಂಬ ವಿಶ್ವಾಸವಿದೆ: ಅಮಿತ್ ಶಾ
ಅಸ್ಸಾಂನಲ್ಲಿ ಅಮಿತ್ ಶಾ

ಉಗ್ರ ಸಂಘಟನೆಗಳು ರಾಜ್ಯ ಸರ್ಕಾರದೊಂದಿಗೆ ಶಾಂತಿ ಒಪ್ಪಂದಗಳಿಗೆ ಸಹಿ ಹಾಕುವುದರೊಂದಿಗೆ ಅಸ್ಸಾಂನಲ್ಲಿ ಬಂಡಾಯವು ಶೀಘ್ರವಾಗಿ ಕ್ಷೀಣಿಸುತ್ತಿದೆ. ಅಸ್ಸಾಂನಲ್ಲಿ ದಂಗೆಕೋರ ಸಂಘಟನೆ ನಿರ್ನಾಮವಾಗುವ ಸಮಯ ದೂರವಿಲ್ಲ ಎಂದು ಶಾ ಹೇಳಿದರು.

TV9kannada Web Team

| Edited By: test

May 10, 2022 | 2:46 PM

ಗುವಾಹಟಿ: ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (AFSPA)ಯನ್ನು ಶೀಘ್ರದಲ್ಲೇ ಇಡೀ ಅಸ್ಸಾಂ ರಾಜ್ಯದಿಂದ ತೆಗೆದುಹಾಕಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah ) ಮಂಗಳವಾರ ಹೇಳಿದ್ದಾರೆ. ಗುವಾಹಟಿಯಲ್ಲಿ ಅಸ್ಸಾಂ ಪೊಲೀಸರಿಗೆ ಪ್ರೆಸಿಡೆಂಟ್ಸ್ ಕಲರ್ (President’s Colour) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಶಾ, 1990 ರಿಂದ ಈ ಕಾಯ್ದೆ ಜಾರಿಯಲ್ಲಿದೆ ಮತ್ತು ಏಳು ಬಾರಿ ವಿಸ್ತರಿಸಲಾಗಿದೆ ಎಂದು ಹೇಳಿದರು. ಮೋದಿಯವರ ಎಂಟು ವರ್ಷಗಳ ಅಧಿಕಾರದ ನಂತರ, ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯಿಂದಾಗಿ ಅಸ್ಸಾಂನ 23 ಜಿಲ್ಲೆಗಳಿಂದ ಕಾಯ್ದೆಯನ್ನು ತೆಗೆದುಹಾಕಲಾಗಿದೆ. ಶೀಘ್ರದಲ್ಲೇ ಇಡೀ ರಾಜ್ಯದಿಂದ ಎಎಫ್‌ಎಸ್‌ಪಿಎ ತೆಗೆದುಹಾಕಲಾಗುವುದು ಎಂದು ನನಗೆ ವಿಶ್ವಾಸವಿದೆ ಶಾ ಹೇಳಿದ್ದಾರೆ. “ಒಂದು ಹಂತದಲ್ಲಿ, ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ ಇತ್ತು, ಈಗ ಯುವಕರು ವಿಕಾಸ್ (ಅಭಿವೃದ್ಧಿ) ಮತ್ತು ಉಜ್ವಲ ಭವಿಷ್ಯದ ವಿಶೇಷ ಶಕ್ತಿಯನ್ನು ಪಡೆಯುತ್ತಾರೆ ಎಂದು ಅವರು ಹೇಳಿದರು. ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ರಾಜ್ಯ ಸರ್ಕಾರದ ಮಂಗಳವಾರ ಒಂದು ವರ್ಷ ಪೂರೈಸಿದ್ದು ಅಮಿತ್ ಶಾ ಸರ್ಕಾರದ ಕೆಲಸವನ್ನು ಶ್ಲಾಘಿಸಿದ್ದಾರೆ.

ಭದ್ರತಾ ಪಡೆಗಳಿಗೆ ಕಡಿವಾಣವಿಲ್ಲದ ಅಧಿಕಾರವನ್ನು ನೀಡುವ ವಿವಾದಾತ್ಮಕ ಎಎಫ್‌ಎಸ್‌ಪಿಎ ಅನ್ನು ಈ ವರ್ಷದ ಆರಂಭದಲ್ಲಿ ಈಶಾನ್ಯದ ಭಾಗಗಳಿಂದ ಹಿಂತೆಗೆದುಕೊಳ್ಳಲಾಯಿತು.

ಗುವಾಹಟಿಯ ನೆಹರು ಸ್ಟೇಡಿಯಂನಲ್ಲಿ ನಡೆದ ಸಮಾರಂಭದಲ್ಲಿ ಶಾ ಅವರು ಅಸ್ಸಾಂ ಪೊಲೀಸರಿಗೆ ಪ್ರೆಸಿಡೆಂಟ್ಸ್ ಕಲರ್ ಪ್ರದಾನ ಮಾಡಿದರು. ಈ ವೇಳೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಡಿಜಿಪಿ ಭಾಸ್ಕರ್ ಜ್ಯೋತಿ ಮಹಂತ ಉಪಸ್ಥಿತರಿದ್ದರು.

“ಅಸ್ಸಾಂ ಪೊಲೀಸರಿಗೆ ಪ್ರೆಸಿಡೆಂಟ್ಸ್ ಕಲರ್ ಪ್ರದಾನ ಮಾಡಿದ್ದಕ್ಕೆ ನನಗೆ ತುಂಬಾ ಸಂತೋಷ ಮತ್ತು ಹೆಮ್ಮೆಯಿದೆ.ಇದು ಪಡೆಗೆ ಲಭಿಸಿದ ಅರ್ಹವಾದ ಮಾನ್ಯತೆಯಾಗಿದೆ. ಕಳೆದ ದಶಕಗಳಲ್ಲಿ, ಉಲ್ಫಾ, ಎನ್‌ಎಸ್‌ಸಿಎನ್ ಮತ್ತು ಎನ್‌ಡಿಎಫ್‌ಬಿಯಂತಹ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಹೋರಾಡುವಲ್ಲಿ ಪಡೆ ಅನುಕರಣೀಯ ಕೆಲಸ ಮಾಡಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.

ಉಗ್ರ ಸಂಘಟನೆಗಳು ರಾಜ್ಯ ಸರ್ಕಾರದೊಂದಿಗೆ ಶಾಂತಿ ಒಪ್ಪಂದಗಳಿಗೆ ಸಹಿ ಹಾಕುವುದರೊಂದಿಗೆ ಅಸ್ಸಾಂನಲ್ಲಿ ಬಂಡಾಯವು ಶೀಘ್ರವಾಗಿ ಕ್ಷೀಣಿಸುತ್ತಿದೆ. ಅಸ್ಸಾಂನಲ್ಲಿ ದಂಗೆಕೋರ ಸಂಘಟನೆ ನಿರ್ನಾಮವಾಗುವ ಸಮಯ ದೂರವಿಲ್ಲ ಎಂದು ಶಾ ಹೇಳಿದರು.

ಗಡಿಯಾಚೆಗಿನ ಒಳನುಸುಳುವಿಕೆ, ಹಸು ಕಳ್ಳಸಾಗಣೆ ಮತ್ತು ಘೇಂಡಾಮೃಗ ಬೇಟೆಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅಸ್ಸಾಂ ಪೊಲೀಸ್ ಯಶಸ್ವಿಯಾಗಿದೆ ಎಂದು ಕೇಂದ್ರ ಗೃಹ ಸಚಿವರು ರಾಜ್ಯ ಪೊಲೀಸರನ್ನು ಶ್ಲಾಘಿಸಿದರು. ದೇಶದ ಶಾಂತಿ ಮತ್ತು ಯುದ್ಧಕಾಲದಲ್ಲಿ ಸಲ್ಲಿಸಿದ ಅಸಾಧಾರಣ ಸೇವೆಯನ್ನು ಗುರುತಿಸಿ ಯಾವುದೇ ಮಿಲಿಟರಿ ಅಥವಾ ಪೊಲೀಸ್ ಘಟಕಕ್ಕೆ ನೀಡಲಾಗುವ ಅತ್ಯುನ್ನತ ಗೌರವವಾದ ಪ್ರೆಸಿಡೆಂಟ್ಸ್ ಕಲರ್ ಪಡೆದ ದೇಶದ ಹತ್ತನೇ ರಾಜ್ಯವಾಗಿದೆ ಅಸ್ಸಾಂ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada