ಶಾಹೀನ್​ ಭಾಗ್ ವಿವಾದದ ನಡುವೆ ದೆಹಲಿಯ ವಿವಿಧೆಡೆ ಮತ್ತೆ ಬುಲ್​ಡೋಜರ್ ಘರ್ಜನೆ

ದೆಹಲಿಯ ನಗರಾಡಳಿತ ಸಂಸ್ಥೆಗಳು ನಗರ ವ್ಯಾಪ್ತಿಯಲ್ಲಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ನಡೆಸುತ್ತಿರುವ ಪ್ರಯತ್ನದ ಭಾಗವಾಗಿ ಈ ಕಾರ್ಯಾಚರಣೆ ನಡೆಯುತ್ತಿದೆ.

ಶಾಹೀನ್​ ಭಾಗ್ ವಿವಾದದ ನಡುವೆ ದೆಹಲಿಯ ವಿವಿಧೆಡೆ ಮತ್ತೆ ಬುಲ್​ಡೋಜರ್ ಘರ್ಜನೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 10, 2022 | 1:17 PM

ದೆಹಲಿ: ರಾಷ್ಟ್ರ ರಾಜಧಾನಿಯ ಹಲವೆಡೆ ಬುಲ್​ಡೋಜರ್​ಗಳು ಮತ್ತೆ ಘರ್ಜಿಸಿವೆ. ಉತ್ತರ ದೆಹಲಿಯ ಮಂಗಳಪುರಿ ಮತ್ತು ದಕ್ಷಿಣ ದೆಹಲಿಯ ಫ್ರೆಂಡ್ಸ್ ಕಾಲೊನಿ ಪ್ರದೇಶಗಳಲ್ಲಿ ಬುಲ್​ಡೋಜರ್​ಗಳನ್ನು ಬಳಸಿ ಅತಿಕ್ರಮಣ ತೆರವುಗೊಳಿಸಲಾಯಿತು. ದೆಹಲಿಯ ನಗರಾಡಳಿತ ಸಂಸ್ಥೆಗಳು ನಗರ ವ್ಯಾಪ್ತಿಯಲ್ಲಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ನಡೆಸುತ್ತಿರುವ ಪ್ರಯತ್ನದ ಭಾಗವಾಗಿ ಈ ಕಾರ್ಯಾಚರಣೆ ನಡೆಯುತ್ತಿದೆ. ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಯುವ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಯಾವುದೇ ಅನಪೇಕ್ಷಿತ ಬೆಳವಣಿಗೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಪ್ರತಿಭಟನಾಕಾರರು ಸ್ಥಳಕ್ಕೆ ಪ್ರವೇಶಿಸಲು ಅವಕಾಶ ನಿರಾಕರಿಸಲಾಗಿದೆ.

ಮಂಗಲಪುರಿಯು ಉತ್ತರ ದೆಹಲಿ ನಗರ ಪಾಲಿಕೆ ವ್ಯಾಪ್ತಿಗೆ ಬಂದರೆ, ನ್ಯೂ ಫ್ರೆಂಡ್ಸ್ ಕಾಲೊನಿಯು ದಕ್ಷಿಣ ದೆಹಲಿ ನಗರ ಪಾಲಿಕೆ ವ್ಯಾಪ್ತಿಗೆ ಬರುತ್ತದೆ. ಈ ಎರಡೂ ನಗರ ಪಾಲಿಕೆಗಳಲ್ಲಿ ಬಿಜೆಪಿ ಆಳ್ವಿಕೆಯಿದೆ. ಎಎನ್​ಐ ಸುದ್ದಿಸಂಸ್ಥೆ ಹಂಚಿಕೊಂಡಿರುವ ವಿಡಿಯೊ ತುಣುಕುಗಳಲ್ಲಿ ಬುಲ್​ಡೋಜರ್​ಗಳು ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುತ್ತಿರುವುದನ್ನು ಗಮನಿಸಬಹುದಾಗಿದೆ.

ಶಾಹೀನ್​ ಭಾಗ್​ನಲ್ಲಿ ನಡೆದ ಇಂಥದ್ದೇ ತೆರವು ಕಾರ್ಯಾಚರಣೆಯಲ್ಲಿ ಮಹಿಳೆಯರು ಉಗ್ರ ಪ್ರತಿಭಟನೆ ನಡೆಸಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಹೋರಾಟದ ಕೇಂದ್ರ ಬಿಂದುವಾಗಿದ್ದ ಶಾಹೀನ್ ಭಾಗ್​ನಲ್ಲಿ ತೆರವು ಕಾರ್ಯಾಚರಣೆಗೆ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತ್ತುಲ್ಲಾ ಮತ್ತು ವ್ಯಾಪಾರಿಗಳಿಂದಲೂ ವಿರೋಧ ವ್ಯಕ್ತವಾಗಿತ್ತು. ಕೊನೆಗೆ ದೆಹಲಿ ಪಾಲಿಕೆ ತೆರವು ಕಾರ್ಯಾಚರಣೆ ಕೈಬಿಟ್ಟಿತ್ತು.

ದೆಹಲಿಯ ಜಹಂಗೀರ್​ಪುರಿ ಪ್ರದೇಶದಲ್ಲಿ ಹನುಮಾನ್ ಜಯಂತಿ ಮೆರವಣಿಗೆ ವೇಳೆ ಕೋಮು ಸಂಘರ್ಷ ನಡೆದ ನಂತರ ಆರಂಭವಾದ ಈ ತೆರವು ಕಾರ್ಯಾಚರಣೆಗಳು ನಿರ್ದಿಷ್ಟ ಸಮುದಾಯವನ್ನು ಗಮನದಲ್ಲಿರಿಸಿಕೊಂಡಿವೆ ಎಂದು ಪ್ರತಿಪಕ್ಷಗಳು ಆಕ್ಷೇಪಿಸಿವೆ. ಈ ಪ್ರದೇಶದಲ್ಲಿ ನಡೆದಿದ್ದ ಗಲಭೆಯಲ್ಲಿ ಎಂಟು ಪೊಲೀಸ್ ಸಿಬ್ಬಂದಿ ಓರ್ವ ನಾಗರಿಕ ಗಾಯಗೊಂಡಿದ್ದರು. ಸಂಘರ್ಷದ ನಂತರ ಬಿಜೆಪಿ ದೆಹಲಿ ಘಟಕದ ಮುಖ್ಯಸ್ಥ ಆದೇಶ್ ಗುಪ್ತಾ ಉತ್ತರ ದೆಹಲಿ ಮೇಯರ್​ಗೆ ಪತ್ರ ಬರೆದು, ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದರು.

ಅತಿಕ್ರಮಣ ತೆರವು ಕಾರ್ಯಾಚರಣೆಗಳು ದೈನಂದಿನ ಕಾರ್ಯನಿರ್ವಹಣೆಯ ಭಾಗವಷ್ಟೇ ಆಗಿವೆ ಎಂದು ಮೇಯರ್ ರಾಜಾ ಇಕ್ಬಾಲ್ ಸಿಂಗ್ ಹೇಳಿದ್ದಾರೆ. ಆದರೆ ಈ ಕಾರ್ಯಾಚರಣೆಯ ಅವಧಿಯು ಈ ಕಾರ್ಯಾಚರಣೆಯ ಹಿಂದೆ ಇರುವ ರಾಜಕೀಯ ಉದ್ದೇಶಗಳ ಬಗ್ಗೆ ಪ್ರಶ್ನೆಗಳನ್ನು ಕೇಳುವಂತೆ ಮಾಡಿದೆ.

ಇದನ್ನೂ ಓದಿ: ಬುಲ್​ಡೋಜರ್ ರಾಜಕಾರಣ ಕರ್ನಾಟಕಕ್ಕೆ ಬೇಡ: ಬಿಜೆಪಿಗೆ ಎಚ್​ ವಿಶ್ವನಾಥ್ ತಾಕೀತು

ಇದನ್ನೂ ಓದಿ: ಬುಲ್​ಡೋಜರ್ ರಾಜಕೀಯ ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಮುಸ್ಲಿಂ ಸಂಘಟನೆ ಅರ್ಜಿ