Cyclone Asani: ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಅಬ್ಬರ; ವಿಮಾನ ಸಂಚಾರ ರದ್ದು, ತೀರ ಪ್ರದೇಶಗಳಲ್ಲಿ ಜನರ ತೆರವು
ಒಡಿಶಾ ಮತ್ತು ಆಂಧ್ರ ಪ್ರದೇಶದ ಕರಾವಳಿಯತ್ತ ಧಾವಿಸಿ ಬಂದ ಚಂಡಮಾರುತ ನಿಧಾನವಾಗಿ ವೇಗ ಕಳೆದುಕೊಂಡಿದೆ
ಚೆನ್ನೈ: ಭಾರತದ ಪೂರ್ವ ಕರಾವಳಿ ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಅಸಾನಿ ಚಂಡಮಾರುತದಿಂದ ಭಾರಿ ಮಳೆ ಬೀಳಬಹುದು ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. ಒಡಿಶಾ ಮತ್ತು ಆಂಧ್ರ ಪ್ರದೇಶದ ಕರಾವಳಿಯತ್ತ ಧಾವಿಸಿ ಬಂದ ಚಂಡಮಾರುತ ನಿಧಾನವಾಗಿ ವೇಗ ಕಳೆದುಕೊಂಡಿದೆ. ತೀರ ಪ್ರದೇಶದಲ್ಲಿ ಬಿರುಗಾಳಿ ಬೀಸದಿದ್ದರೂ ವ್ಯಾಪಕವಾಗಿ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಮೊದಲು ಚಂಡಮಾರುತವು ಒಡಿಶಾ ಅಥವಾ ಆಂಧ್ರ ಪ್ರದೇಶದ ಕಡಲ ತೀರದಲ್ಲಿ ನೆಲಕ್ಕೆ ಅಪ್ಪಳಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಮಂಗಳವಾರ ನಸುಕಿನ ನಂತರ ಚಂಡಮಾರುತವು ಪೂರ್ವ ತೀರಕ್ಕೆ ಸಮಾನಾಂತರವಾಗಿ ಸಂಚರಿಸಿ ಭಾರೀ ಮಳೆಗೆ ಕಾರಣವಾಗಬಹುದು ಎಂದು ಹವಾಮಾನ ಇಲಾಖೆಯ ಪ್ರಧಾನ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದರು. ಈ ನಡುವೆ ಚೆನ್ನೈಗೆ ಬರುತ್ತಿದ್ದ 10 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ. ಹೈದರಾಬಾದ್, ವಿಶಾಖಪಟ್ಟಣ, ಜೈಪುರ ಮತ್ತು ಮುಂಬೈ ನಗರಗಳಿಂದ ಈ ವಿಮಾನಗಳು ಚೆನ್ನೈಗೆ ಬರಬೇಕಿತ್ತು. ವಿಮಾನಗಳು ರದ್ದುಪಡಿಸಿರುವ ಕುರಿತು ಪ್ರಯಾಣಿಕರಿಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಪ್ರಕ್ಷುಬ್ಧ ಕಡಲಿನಲ್ಲಿ ಸಿಲುಕಿದ್ದ 11 ಮೀನುಗಾರರನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ರಕ್ಷಿಸಿದ್ದಾರೆ. ಮೇ 7ರಂದು ಈ ಮೀನುವಾರರು ಆಂಧ್ರ ಪ್ರದೇಶದ ವಿಶಾಖಪಟ್ಟಣಂದಿಂದ ಹೊಸದಾಗಿ ಮೀನುಗಾರಿಕೆ ದೋಣಿ ಖರೀದಿಸಿ ತಮ್ಮ ಊರಿಗೆ ಹಿಂದಿರುಗುತ್ತಿದ್ದರು. ಈ ಸಂದರ್ಭದಲ್ಲಿ ದೋಣಿಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು.
ಚಂಡಮಾರುತದಿಂದ ಹಾನಿಯಾಗುವ ಸಾಧ್ಯತೆಯಿರುವ ನಾಲ್ಕು ಕರಾವಳಿ ಜಿಲ್ಲೆಗಳಿಂದ ಜನರನ್ನು ಸ್ಥಳಾಂತರಿಸಲು ಒಡಿಶಾ ಸರ್ಕಾರ ಮುಂದಾಗಿದೆ. ರಾಜ್ಯದ ಯಾವುದೇ ಬಂದರು ಸಮೀಪಕ್ಕೆ ಹಡಗುಗಳು ಬರಬಾರದು ಎಂದು ಸರ್ಕಾರ ಸೂಚನೆ ನೀಡಿದೆ. ಆಂಧ್ರ ಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿಯೂ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಚಂಡಮಾರುತ ಪ್ರಭಾವದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹೈದರಾಬಾದ್ನ ಹವಾಮಾನ ಮುನ್ಸೂಚನಾ ಕೇಂದ್ರ ಎಚ್ಚರಿಸಿದೆ.
ಪಶ್ಚಿಮ ಬಂಗಾಳದ ಕೊಲ್ಕತ್ತಾ, ಹೌರಾ, ಪೂರ್ವ ಮೇದಿನಿಪುರ, ಉತ್ತರ ಮತ್ತು ದಕ್ಷಿಣ 24 ಪರಗಣ ಹಾಗೂ ನಾಡಿಯಾ ಜಿಲ್ಲೆಗಳಲ್ಲಿ ಗುರುವಾರದವರೆಗೆ ಮಳೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಕೊಲ್ಕತ್ತಾ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಸೋಮವಾರದಿಂದಲೇ ಭಾರೀ ಮಳೆಯಾಗುತ್ತಿದ್ದು, ನಗರದ ವಿವಿಧೆಡೆ ನೀರು ನಿಂತಿದೆ. ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿ ಜನರು ಮನೆಗಳನ್ನು ತಲುಪಲು ಪರದಾಡಬೇಕಾಯಿತು. ಜಾರ್ಖಂಡ್ನಲ್ಲಿ ಗುಡುಗು, ಸಿಡಿಲಿನ ಆರ್ಭಟ ಹೆಚ್ಚಾಗಿರಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: Cyclone Asani: ಅಸಾನಿ ಚಂಡಮಾರುತ ಅಬ್ಬರ; ಒಡಿಶಾ, ಬಂಗಾಳ, ಆಂಧ್ರ ಪ್ರದೇಶದಲ್ಲಿ ಭಾರೀ ಮಳೆ
ಇದನ್ನೂ ಓದಿ: Karnataka Rain: ಬೆಂಗಳೂರು, ಮಲೆನಾಡು, ಕರಾವಳಿಯಲ್ಲಿ ಇನ್ನೆರಡು ದಿನ ಮಳೆ; ಒಡಿಶಾದಲ್ಲಿ ಚಂಡಮಾರುತದ ಎಚ್ಚರಿಕೆ
Published On - 11:16 am, Tue, 10 May 22