AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಮತ | ವೇಷ ತೊಟ್ಟ ದೇಶಭಕ್ತಿಗಿಂತ.. ತಪ್ಪು, ಒಪ್ಪುಗಳ ನಡುವೆ ಸಾಗುವ ಭಾರತೀಯರಾಗುವುದು ಮೇಲು

ನಮ್ಮ ಸಾಧಕ-ಭಾದಕಗಳನ್ನು ಮುಕ್ತ ಮನಸ್ಸಿನಿಂದ ತೆರೆದಿಟ್ಟಷ್ಟೂ ವಿಶಾಲರಾಗುತ್ತಾ, ವಿಶ್ವಾಸಿಗಳಾಗುತ್ತಾ ಹೋಗುತ್ತೇವೆ. ಅದರ ಬದಲಾಗಿ ಜಗತ್ತಿನ ಕಣ್ಣಿಗೆ ಬಟ್ಟೆ ಕಟ್ಟಿ ನಾವೇ ಶ್ರೇಷ್ಠ, ನಾವು ಮಾಡಿದ್ದೆಲ್ಲಾ ಸರಿ ಎಂದು ನಂಬಿಸುವ ದಾರ್ಷ್ಟ್ಯಕ್ಕೆ ಬಿದ್ದರೆ ನಾವು ವೇಷ ಹಾಕಿದ ದೇಶಭಕ್ತರಾಗಿಯಷ್ಟೇ ಉಳಿಯುವುದು ಸಾಧ್ಯ.

ಅಭಿಮತ | ವೇಷ ತೊಟ್ಟ ದೇಶಭಕ್ತಿಗಿಂತ.. ತಪ್ಪು, ಒಪ್ಪುಗಳ ನಡುವೆ ಸಾಗುವ ಭಾರತೀಯರಾಗುವುದು ಮೇಲು
ಪ್ರಾತಿನಿಧಿಕ ಚಿತ್ರ
Follow us
Skanda
| Updated By: ಆಯೇಷಾ ಬಾನು

Updated on: Jan 05, 2021 | 7:17 AM

ಭಾರತದಲ್ಲಿ ಯಾವುದೇ ವಿಚಾರಗಳು ಮುನ್ನೆಲೆಗೆ ಬಂದರೂ ಅವುಗಳೊಂದಿಗೆ ದೇಶಪ್ರೇಮ ಮತ್ತು ರಾಜಕೀಯದ ಒಣಜಗಳಗಳು ತಳುಕು ಹಾಕಿಕೊಳ್ಳುತ್ತವೆ. ಅಂತೆಯೇ, ವೈಜ್ಞಾನಿಕವಾಗಿ ಪರೀಕ್ಷೆಗೆ ಒಳಪಡಬೇಕಾಗಿದ್ದ ಕೊರೊನಾ ಲಸಿಕೆ ಸಹ ಭಾರತದಲ್ಲೀಗ ದೇಶಪ್ರೇಮ ಮತ್ತು ರಾಜಕೀಯ ಎಂಬ ಬಲೆಗೆ ಸಿಕ್ಕು ಪರದಾಡುತ್ತಿದೆ.

ಆಕ್ಸ್​ಫರ್ಡ್​ ವಿಶ್ವವಿದ್ಯಾನಿಲಯ ಮತ್ತು ಆಸ್ಟ್ರಾಜೆನೆಕಾ ಸಂಸ್ಥೆಯ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದ, ಭಾರತದಲ್ಲಿ ಸೆರಮ್​ ಸಂಸ್ಥೆಯಿಂದ ತಯಾರಾದ ಕೊವಿಶೀಲ್ಡ್​ ಲಸಿಕೆಯ ತುರ್ತು ಬಳಕೆಗೆ ಭಾರತದಲ್ಲಿ ನಿನ್ನೆಯಷ್ಟೇ ಒಪ್ಪಿಗೆ ಸಿಕ್ಕಿದೆ. ಅದೊಂದಿಗೆ ಭಾರತ್​ ಬಯೋಟೆಕ್​ ಸಂಸ್ಥೆಯ ಕೊವ್ಯಾಕ್ಸಿನ್​ ಲಸಿಕೆಯೂ ಅನುಮತಿ ಗಿಟ್ಟಿಸಿಕೊಂಡಿದೆ. ಆದರೆ, ಕೊವ್ಯಾಕ್ಸಿನ್​ ಲಸಿಕೆಗೆ ಅಸ್ತು ಎಂದಿರುವ ವಿಷಯ ಈಗ ವಿವಾದವಾಗಿ ಬದಲಾಗಿದೆ.

ವಿವಾದಕ್ಕೆ ಕಾರಣವಾದ ಅನುಮತಿ ಕೊವ್ಯಾಕ್ಸಿನ್​ ಲಸಿಕೆಯನ್ನು ಪೂರ್ಣ ಪ್ರಯೋಗಕ್ಕೆ ಒಳಪಡಿಸದೇ ತುರ್ತು ಬಳಕೆಯ ಅನುಮತಿ ನೀಡಿರುವುದು ವಿವಾದಕ್ಕೆ ಮೂಲ ಕಾರಣ. ಯಾವ ಅರ್ಹತೆಯ ಮೇಲೆ ಸದರಿ ಲಸಿಕೆಯನ್ನು ಒಪ್ಪಿಕೊಳ್ಳಲಾಗಿದೆ ಎಂದು ತರ್ಕಬದ್ಧ ಪ್ರಶ್ನೆಯನ್ನು ಎತ್ತಿಹಿಡಿಯಲಾಗಿದೆ. ಆ ಕುರಿತು ಇಂದು ಭಾರತ್​ ಬಯೋಟೆಕ್​ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲಾ ಸ್ವತಃ ಮಾತನಾಡಿದ್ದಾರೆ. ವಿಪರ್ಯಾಸವೆಂದರೆ ಸಂಸ್ಥೆಯ ಹೇಳಿಕೆಗೂ ಮುನ್ನ ಅನೇಕರು ವಕಾಲತ್ತು ವಹಿಸಿ ಸಮಸ್ಯೆಯನ್ನು ಬಿಕ್ಕಟ್ಟಾಗಿಸಿದ್ದಾರೆ.

ಹಾಗೆ ನೋಡಿದರೆ ಕೊವ್ಯಾಕ್ಸಿನ್​ ಲಸಿಕೆಯ ತುರ್ತು ಬಳೆಕೆಗೆ ಅನುಮತಿ ನೀಡುವಲ್ಲಿ ಆತುರ ತೋರಲು ಕಾರಣ ಏನು? ಸೆರಮ್​ ಸಂಸ್ಥೆಯ ಕೊವಿಶೀಲ್ಡ್​ ಮತ್ತು ಭಾರತ್​ ಬಯೋಟೆಕ್​ನ ಕೊವ್ಯಾಕ್ಸಿನ್ ನಡುವಿನ ಸಾಮ್ಯತೆ ಮತ್ತು ಭಿನ್ನತೆ ಏನು? 18 ವರ್ಷಕ್ಕಿಂತ ಕೆಳಗಿನವರಿಗೆ ಕೊವಿಶೀಲ್ಡ್ ನೀಡುವಂತಿಲ್ಲ ಹಾಗೂ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೊವ್ಯಾಕ್ಸಿನ್​ ನೀಡುವಂತಿಲ್ಲ ಎಂದು DCGI ಹೊರಡಿಸಿರುವ ಮಾರ್ಗಸೂಚಿಯ ಹಿಂದಿರುವ ತರ್ಕವೇನು? ಎಂಬಲ್ಲಿಂದ ಹಿಡಿದು ದೇಶದಲ್ಲಿ ಕೊವ್ಯಾಕ್ಸಿನ್​ ಮತ್ತು ಕೊವಿಶೀಲ್ಡ್​ ಲಸಿಕೆಗಳ ಹಂಚಿಕೆ ಯಾವ ಆಧಾರದ ಮೇಲೆ ಆಗಲಿದೆ? ಎಂಬ ಹತ್ತು ಹಲವು ಸೂಕ್ಷ್ಮ ವಿಚಾರಗಳು ಪ್ರಶ್ನಾತೀತವೇನಲ್ಲ ಎಂದು ಬರಹಗಾರ ಆ್ಯಂಡಿ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಇದ್ಯಾವುದಕ್ಕೂ ಸ್ಪಷ್ಟನೆ ಇಲ್ಲದ ಹೊತ್ತಿನಲ್ಲಿ ಯಾರಾದರೂ ಈ ಲಸಿಕೆಗಳ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನಿಸಿದರೆ ಅದಕ್ಕೆ ಸಂಯಮದಿಂದ ಸೂಕ್ತ ಉತ್ತರ ನೀಡುವುದು ಸರ್ಕಾರದ ಜವಾಬ್ದಾರಿ ಆಗಿರುತ್ತದೆ. ಆದರೆ, ಸಂದೇಹ ನಿವಾರಿಸುವ ಬದಲಾಗಿ ಪ್ರಶ್ನೆ ಕೇಳಿದವರನ್ನೇ ಕಟಕಟೆಯಲ್ಲಿ ನಿಲ್ಲಿಸುವಂತಹ ಉಢಾಳತನ ತೋರಿದರೆ ಅದು ಆಕ್ಷೇಪಾರ್ಹವೂ, ಅತ್ಯಂತ ಕೆಳಮಟ್ಟದ ನಡೆಯೂ ಎಂದು ನಿಸ್ಸಂದೇಹವಾಗಿ ಪರಿಗಣಿಸಬಹುದು.

ಲಸಿಕೆ ಅನುಮತಿ ಬಗ್ಗೆ ಪ್ರಶ್ನಿಸಿದ್ರೆ ದೇಶದ್ರೋಹಿ ಪ್ರಸ್ತುತ ಭಾರತದಲ್ಲಿ ನಾವು ಪದೇಪದೇ ಎಡವುತ್ತಿರುವುದು ಇದೇ ವಿಚಾರದಲ್ಲಿ. ಅಧಿಕಾರದಲ್ಲಿರುವವರು ಮತ್ತು ಅವರ ಅನುಯಾಯಿಗಳು ವಿರೋಧಿಗಳ ಬಾಯ್ಮುಚ್ಚಿಸಲು ದೇಶಪ್ರೇಮದ ಬಾವುಟ ಹಾರಿಸುವ ಮಾರ್ಗಕ್ಕೆ ಅಂಟಿಕೊಂಡಿದ್ದಾರೆ. ದುರಂತವೆಂದರೆ ಲಸಿಕೆಗೆ ಆತುರದ ಅನುಮತಿ ನೀಡಿದ್ದೇಕೆ ಎಂದು ಕೇಳಿದವರನ್ನೂ ಈಗ ದೇಶದ್ರೋಹಿಗಳು ಎಂಬಂತೆ ಬಿಂಬಿಸಲಾಗುತ್ತಿದೆ. ಅವರ ಹಳೆಯ ಹೇಳಿಕೆಗಳನ್ನೇ ತಿರುಗುಬಾಣವಾಗಿಸಲು ಕೆಲವರು ಪಣತೊಟ್ಟು ನಿಂತಿದ್ದಾರೆ.

ಪ್ರಸ್ತುತ ದೊಡ್ಡಮಟ್ಟದಲ್ಲಿ ಲಸಿಕೆ ಉತ್ಪಾದಿಸುವತ್ತ ಹೆಜ್ಜೆ ಇಟ್ಟಿರುವ ಭಾರತದ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ಈ ಜವಾಬ್ದಾರಿ ಕೇವಲ ಭಾರತೀಯರ ವಿಶ್ವಾಸ ಗಳಿಸುವುದು ಮತ್ತು ಜೀವ ಉಳಿಸುವುದಕ್ಕಷ್ಟೇ ಸೀಮಿತವಾದದ್ದೂ ಅಲ್ಲ. ವಿಶ್ವದ ಬಹುತೇಕ ರಾಷ್ಟ್ರಗಳು ಲಸಿಕೆಗಾಗಿ ಹಪಹಪಿಸುತ್ತಿದ್ದು, ಪಾಶ್ಚಿಮಾತ್ಯ ರಾಷ್ಟ್ರಗಳ ಬಲಿಷ್ಠ ತೆಕ್ಕೆಯಿಂದ ಲಸಿಕೆಯನ್ನು ಪಡೆಯಲಾಗದ ದೇಶಗಳು ಸಹಜವಾಗಿ ಭಾರತದತ್ತ ಆಸೆಗಣ್ಣಿನಿಂದ ನೋಡುತ್ತಿರುತ್ತವೆ.

ಇಂತಹ ಸಂದರ್ಭದಲ್ಲಿ ನಾವು ತಯಾರಿಸಿದ ಲಸಿಕೆಗಳ ವಿಶ್ವಾಸಾರ್ಹತೆ ವೈಜ್ಞಾನಿಕವಾಗಿ ಸಾಬೀತಾಗುವ ತನಕ ತಾಳ್ಮೆಯಿಂದ ಕಾಯಬೇಕೇ ವಿನಃ. ಆತುರಕ್ಕೆ ಬಿದ್ದು ದೇಶಪ್ರೇಮದ ಲೇಪನ ಮಾಡಿ ಅವುಗಳನ್ನು ನಂಬಿಸುವುದಕ್ಕಾಗುವುದಿಲ್ಲ. ನಾವೀಗ ನಮ್ಮ ಲಸಿಕೆಗಳ ಸಾಧಕ-ಬಾಧಕಗಳನ್ನು ಮುಕ್ತ ಮನಸ್ಸಿನಿಂದ ತೆರೆದಿಟ್ಟಷ್ಟೂ ವಿಶಾಲರಾಗುತ್ತಾ, ವಿಶ್ವಾಸಿಗಳಾಗುತ್ತಾ ಹೋಗುತ್ತೇವೆ. ಅದರ ಬದಲಾಗಿ ಜಗತ್ತಿನ ಕಣ್ಣಿಗೆ ಬಟ್ಟೆ ಕಟ್ಟಿ ನಮ್ಮ ಲಸಿಕೆಯೇ ಶ್ರೇಷ್ಠ, ನಾವು ಮಾಡಿದ್ದೆಲ್ಲಾ ಸರಿ ಎಂದು ನಂಬಿಸುವ ದಾರ್ಷ್ಟ್ಯಕ್ಕೆ ಬಿದ್ದರೆ ನಾವು ವೇಷ ಹಾಕಿದ ದೇಶಭಕ್ತರಾಗಿಯಷ್ಟೇ ಉಳಿಯುವುದು ಸಾಧ್ಯ ಎಂದು ಆ್ಯಂಡಿ ಮುಖರ್ಜಿ ವಿಷಾದಿಸಿದ್ದಾರೆ.

ಕೊರೊನಾ ಲಸಿಕೆಯೊಂದಿಗೆ ರಾಜಕೀಯ ಬೆರಕೆ.. ಒಬ್ಬೊಬ್ಬರದ್ದೂ ಒಂದೊಂದು ರಾಗ: ಆರೋಗ್ಯ ಸಚಿವರು ಹೇಳಿದ್ದೇನು?