
ನವದೆಹಲಿ, ಅಕ್ಟೋಬರ್ 15: ಪಾಕಿಸ್ತಾನದಿಂದ ಪ್ರಾಯೋಜಿತವಾಗುವ ಯಾವುದೇ ಹೊಸ ಭಯೋತ್ಪಾದನಾ ಕೃತ್ಯ ನಡೆದರೂ ಭಾರತೀಯ ಸೇನೆಯು ಈ ಹಿಂದೆಂದಿಗಿಂತಲೂ ಅತ್ಯಂತ ಕಠಿಣ ಹಾಗೂ ಬಲವಾದ ತಿರುಗೇಟು ನೀಡಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಸಿದ್ದಾರೆ. ಭಯೋತ್ಪಾದನೆಯ ವಿರುದ್ಧ ಭಾರತದ ಶೂನ್ಯ ಸಹಿಷ್ಣುತಾ ನಿಲುವನ್ನು ಪುನರುಚ್ಚರಿಸಿದ ಅವರು, ಭಾರತ ಶಾಂತಿ ಮತ್ತು ಮಾತುಕತೆಗೆ ನೀಡುವ ಆದ್ಯತೆಯನ್ನು ಎಂದಿಗೂ ನಮ್ಮ ದೌರ್ಬಲ್ಯವೆಂದು ಭಾವಿಸಬಾರದು ಎಂದಿದ್ದಾರೆ.
ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟದ ವಿಧಾನವು ಸಂಪೂರ್ಣವಾಗಿ ಬದಲಾಗಿದ್ದು, ಬೆದರಿಕೆಗಳನ್ನು ಅವುಗಳ ಮೂಲದಲ್ಲೇ ನಿರ್ಮೂಲನೆ ಮಾಡುವ ಗುರಿಯನ್ನು ಭಾರತೀಯ ಸೇನೆ ಹೊಂದಿದೆ ಎಂದು ಸ್ಪಷ್ಟಪಡಿಸಿದರು.
ಭಯೋತ್ಪಾದನೆಗೆ ಮೂಲದಲ್ಲೇ ತಿರುಗೇಟು ನೀಡುವ ಭಾರತದ ನೂತನ ಕಾರ್ಯತಂತ್ರಕ್ಕೆ ಆಪರೇಷನ್ ಸಿಂಧೂರ್, ಬಾಲಾಕೋಟ್ ಏರ್ಸ್ಟ್ರೈಕ್ ಮತ್ತು ಸರ್ಜಿಕಲ್ ಸ್ಟ್ರೈಕ್ಗಳು ಪ್ರತ್ಯಕ್ಷ ನಿದರ್ಶನಗಳಾಗಿವೆ. 2014ರಿಂದೀಚೆಗೆ ಉಗ್ರರನ್ನು ಸದೆಬಡಿಯುವ ಪ್ರಮಾಣ ಹೆಚ್ಚಾಗಿದ್ದು, ಶಸ್ತ್ರಾಸ್ತ್ರ ಹಿಡಿದು ಭಾರತದ ವಿರುದ್ಧ ನಿಲ್ಲುವ ಉಗ್ರರನ್ನು ಭದ್ರತಾ ಪಡೆಗಳು ಒಂದು ವರ್ಷದೊಳಗೇ ಎನ್ಕೌಂಟರ್ ಮಾಡುತ್ತಿವೆ ಎಂದು ಅವರು ವಿವರಿಸಿದರು.
ದಾಖಲೆಯ ರಕ್ಷಣಾ ಉತ್ಪಾದನೆ:
ಭಾರತದ ರಕ್ಷಣಾ ಉತ್ಪಾದನೆಯು 2014ರಲ್ಲಿ 40,000 ಕೋಟಿ ರೂ. ಇದ್ದದ್ದು ಈಗ 1.78 ಲಕ್ಷ ಕೋಟಿ ರೂ. ದಾಟಿದ್ದು, ಸಾರ್ವಕಾಲಿಕ ದಾಖಲೆ ಬರೆದಿದೆ. ರಕ್ಷಣಾ ರಫ್ತು 39,000 ಕೋಟಿ ರೂ.ಗೆ ತಲುಪಿದ್ದು, ಭಾರತೀಯ ರಕ್ಷಣಾ ಉತ್ಪನ್ನಗಳು ಪ್ರಪಂಚದ ಸುಮಾರು 100 ದೇಶಗಳನ್ನು ತಲುಪುತ್ತಿವೆ. 2029ರ ವೇಳೆಗೆ 50,000 ಕೋಟಿ ರೂ. ರಫ್ತು ಸಾಧಿಸುವ ಗುರಿಯಿದೆ. ಸಶಸ್ತ್ರ ಪಡೆಗಳು ಬಳಸುವ 175 ಯುದ್ಧಸಾಮಗ್ರಿ ವಿಧಗಳಲ್ಲಿ 159 ವಿಧಗಳನ್ನು (ಶೇ. 90ಕ್ಕಿಂತ ಹೆಚ್ಚು) ಈಗ ಭಾರತದಲ್ಲೇ ತಯಾರಿಸಲಾಗುತ್ತಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ