ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಜುಬೇರ್ ವಿರುದ್ಧ ಹೊಸ ಪ್ರಕರಣ ದಾಖಲಿಸಿದ ದೆಹಲಿ ಪೊಲೀಸರು
ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ವಿರುದ್ಧ ದೆಹಲಿ ಪೊಲೀಸರು ಹೊಸ ಪ್ರಕರಣವನ್ನು ದಾಖಲಿಸಿದ್ದಾರೆ. ಪೊಲೀಸರು 14 ದಿನಗಳ ಕಾಲ ತಮ್ಮ ಕಸ್ಟಡಿಗೆ ಜುಬೇರ್ನನ್ನು ನೀಡುವಂತೆ ಮನವಿ ಮಾಡಿದ್ದಾರೆ
ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ವಿರುದ್ಧ ದೆಹಲಿ ಪೊಲೀಸರು ಹೊಸ ಪ್ರಕರಣವನ್ನು ದಾಖಲಿಸಿದ್ದಾರೆ. ಪೊಲೀಸರು 14 ದಿನಗಳ ಕಾಲ ತಮ್ಮ ಕಸ್ಟಡಿಗೆ ಜುಬೇರ್ನನ್ನು ನೀಡುವಂತೆ ಮನವಿ ಮಾಡಿದ್ದಾರೆ. 2018ರ ಜುಬೈರ್ ಟ್ವೀಟ್‌ಗೆ ಸಂಬಂಧಿಸಿದ ತನಿಖೆಯ ಭಾಗವಾಗಿ ದೆಹಲಿ ಪೊಲೀಸ್ ತಂಡ ಆಲ್ಟ್‌ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ನನ್ನು ಬೆಂಗಳೂರಿಗೆ ಕರೆತಂದು ಸುಮಾರು ಮೂರು ಗಂಟೆಗಳ ಕಾಲ ಅವರ ಮನೆಯಲ್ಲಿ ಶೋಧಕಾರ್ಯ ನಡೆಸಿತ್ತು.
ತಮ್ಮ ಟ್ವೀಟ್‌ಗಳ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಆತನನ್ನು ಬಂಧಿಸಿದ್ದರು ಮತ್ತು ಅದೇ ದಿನ ನ್ಯಾಯಾಲಯವು ಒಂದು ದಿನದ ಪೊಲೀಸ್ ಕಸ್ಟಡಿಗೆ ಕಳುಹಿಸಿತ್ತು. ಇದೀಗ ಜುಬೇರ್ ವಿರುದ್ಧ ಸಾಕ್ಷ್ಯ ನಾಶ ಹಾಗೂ ಕ್ರಿಮಿನಲ್ ಪಿತೂರಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಸೆಕ್ಷನ್ 35 ಹಾಗೂ ಎಫ್ಸಿಆರ್ಎ ಅಥವಾ ಫಾರಿನ್ ಕಾಂಟ್ರಿಬ್ಯೂಷನ್ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜೂನ್ 27ರಂದು ಮೊಹಮ್ಮದ್ ಜುಬೇರ್ನನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ದೆಹಲಿ ಪೊಲೀಸರು ಜುಬೇರ್ ಖಾತೆ ವಿವರಗಳು ಮತ್ತು ಇತರ ಹಣಕಾಸು ವಹಿವಾಟುಗಳ ಬಗ್ಗೆ ಮಾಹಿತಿ ಕೋರಿ ಅನೇಕ ಬ್ಯಾಂಕ್‌ಗಳಿಗೆ ಪತ್ರ ಬರೆಯಲಾಗಿತ್ತು.
ಬೆಂಗಳೂರಿನ ಕಾವಲ್ ಬೈರಸಂದ್ರ ಬಳಿಯ ಅವರ ನಿವಾಸದ ಮೊದಲ ಮತ್ತು ನೆಲಮಹಡಿಯಲ್ಲಿ ನಾಲ್ವರ ತಂಡ ಶೋಧ ನಡೆಸಿತ್ತು. ಹೊರಡುವಾಗ ದೆಹಲಿ ಪೊಲೀಸ್ ತಂಡದ ಸದಸ್ಯರೊಬ್ಬರು ಕೈಯಲ್ಲಿ ಲ್ಯಾಪ್‌ಟಾಪ್ ಬ್ಯಾಗ್ ಹಿಡಿದುಕೊಂಡು ಹೋಗುತ್ತಿರುವುದು ಕಂಡುಬಂದಿತು.
ಬೆಂಗಳೂರು ಪೊಲೀಸರು ಶೋಧ ಕಾರ್ಯಾಚರಣೆಯಲ್ಲಿ ದೆಹಲಿಯ ಪೊಲೀಸರಿಗೆ ನೆರವು ನೀಡಿದ್ದರು. ಪ್ರಸ್ತುತ ಪೊಲೀಸ್ ವಶದಲ್ಲಿರುವ ಜುಬೇರ್ ಜೊತೆಗೆ ನಮ್ಮ ನಾಲ್ವರ ತಂಡ ಬೆಂಗಳೂರಿನಲ್ಲಿರುವ ಆತನ ಮನೆಗೆ ತಲುಪಿದೆ.
ಪ್ರಕರಣಕ್ಕೆ ಸಂಬಂಧಿಸಿದ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಸಂಗ್ರಹಿಸಲು ನಮ್ಮ ತಂಡದ ಸದಸ್ಯರು ಇದ್ದಾರೆ. ಇದರಲ್ಲಿ ಆತನ ಮೊಬೈಲ್ ಫೋನ್ ಅಥವಾ ಲ್ಯಾಪ್‌ಟಾಪ್ ಕೂಡ ಸೇರಿದೆ. ಪ್ರಶ್ನಾರ್ಹ ಟ್ವೀಟ್ ಅನ್ನು ಪೋಸ್ಟ್ ಮಾಡಲು ಇವುಗಳನ್ನು ಬಳಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಆಲ್ಟ್-ನ್ಯೂಸ್ ವೆಬ್‌ಸೈಟ್‌ನ ಸಹ-ಸಂಸ್ಥಾಪಕರು ಬಳಸುತ್ತಿರುವ ಮೊಬೈಲ್ ಫೋನ್ ಅನ್ನು ಫಾರ್ಮ್ಯಾಟ್ ಮಾಡಲಾಗಿದೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹೊಂದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.