‘ತಾಳ್ಮೆ ಪರೀಕ್ಷಿಸಬೇಡಿ’; ಸೋನಮ್ ವಾಂಗ್‌ಚುಕ್ ಜೊತೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರಕ್ಕೆ ಅಣ್ಣಾ ಹಜಾರೆ ಒತ್ತಾಯ
ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರೊಂದಿಗೆ ಮಾತುಕತೆ ಆರಂಭಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಸರ್ಕಾರವು ವಾಂಗ್ಚುಕ್ ಅವರ ತಾಳ್ಮೆಯನ್ನು ಪರೀಕ್ಷಿಸಬಾರದು ಮತ್ತು ಮಾತುಕತೆಯ ಮೂಲಕ ಅವರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಅವರು ಹೇಳಿದ್ದಾರೆ. ಕಳೆದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವಾಂಗ್‌ಚುಕ್ ಅವರನ್ನು ನಿನ್ನೆ ಆಸ್ಪತ್ರೆಗೆ ಸೇರಿಸಲಾಗಿತ್ತು.

ನವದೆಹಲಿ, ಜುಲೈ 19: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಶಿಕ್ಷಣ ತಜ್ಞ ಹಾಗೂ ಹೋರಾಟಗಾರ ಸೋನಮ್ ವಾಂಗ್‌ಚುಕ್ (Sonam Wangchuk) ಅವರ ಆರೋಗ್ಯ ಸ್ಥಿತಿ ತೀವ್ರವಾಗಿ ಕ್ಷೀಣಿಸಿದೆ. 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಅವರನ್ನು ದೆಹಲಿ ಪೊಲೀಸರು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಸೋನಗ್ ವಾಂಗ್‌ಚುಕ್ ಪರವಾಗಿ ಧ್ವನಿ ಎತ್ತಿದ್ದು, “ಸರ್ಕಾರ ಅವರ ತಾಳ್ಮೆಯ ಗಡಿಯನ್ನು ಪರೀಕ್ಷಿಸಬಾರದು” ಎಂದು ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ.
“ಕೇಂದ್ರ ಸರ್ಕಾರ ವಾಂಗ್ಚುಕ್ ಅವರ ತಾಳ್ಮೆಯನ್ನು ಪರೀಕ್ಷಿಸಬಾರದು. ಅವರ ಬೇಡಿಕೆಗಳಿಗೆ ‘ಹೌದು’ ಅಥವಾ ‘ಇಲ್ಲ’ ಎಂದು ಹೇಳಿ. ಅವರೊಂದಿಗೆ ಮಾತುಕತೆ ನಡೆಸಲು ಇರುವ ತೊಂದರೆಯಾದರೂ ಏನು?” ಎಂದು ಪ್ರಶ್ನಿಸಿದ್ದಾರೆ. 2011ರಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಅಣ್ಣಾ ಹಜಾರೆ ನಡೆಸಿದ್ದ ಭ್ರಷ್ಟಾಚಾರ ವಿರೋಧಿ ಉಪವಾಸ ಸತ್ಯಾಗ್ರಹವು ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿ, ಲೋಕಪಾಲ್ ಕಾಯ್ದೆ ಜಾರಿಗೆ ಕಾರಣವಾಗಿತ್ತು. ಹೀಗಾಗಿ, ಅವರ ಈ ಇಂದಿನ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ: ಸೋನಂ ವಾಂಗ್‌ಚುಕ್ ಉಪವಾಸ ಸತ್ಯಾಗ್ರಹಕ್ಕೆ ದೀಪಿಕಾ ಪಡುಕೋಣೆ ಬೆಂಬಲ? ಅಸಲಿ ಕಥೆ ಇಲ್ಲಿದೆ
ಸತ್ಯಾಗ್ರಹಿಯ ತಾಳ್ಮೆ ಪರೀಕ್ಷಿಸುವುದು ಸರಿಯಲ್ಲ:
ಈ ಬಗ್ಗೆ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅಣ್ಣಾ ಹಜಾರೆ, “ಸೋನಮ್ ವಾಂಗ್‌ಚುಕ್ ಅವರು ದೇಶದ ಪರಿಸರ ಮತ್ತು ಲಡಾಖ್‌ನ ಜನರ ಹಿತಾಸಕ್ತಿಗಾಗಿ ಶಾಂತಿಯುತವಾಗಿ ಹೋರಾಡುತ್ತಿದ್ದಾರೆ. ಒಬ್ಬ ಸತ್ಯಾಗ್ರಹಿಯ ತಾಳ್ಮೆಯನ್ನು ಪರೀಕ್ಷಿಸುವುದು ಪ್ರಜಾಪ್ರಭುತ್ವ ಸರ್ಕಾರಕ್ಕೆ ಶೋಭೆಯಲ್ಲ. ಕೇಂದ್ರ ಸರ್ಕಾರ ತಕ್ಷಣವೇ ಅವರೊಂದಿಗೆ ಮಾತುಕತೆ ನಡೆಸಿ ಬಿಕ್ಕಟ್ಟನ್ನು ಬಗೆಹರಿಸಬೇಕು” ಎಂದು ಆಗ್ರಹಿಸಿದ್ದಾರೆ.
Ralegan, Maharashtra: Social activist Anna Hazare says, “During Sonam Wangchuk’s hunger strike, he was taken away and admitted to a hospital… This is a matter concerning society, and as much as possible, the situation should be handled peacefully. If there is any forceful… pic.twitter.com/5OBmLFrGvU
— IANS (@ians_india) July 18, 2026
“ಉಪವಾಸ ನಿರತ ಹೋರಾಟಗಾರನ ಆರೋಗ್ಯದ ಭದ್ರತೆ ಸರ್ಕಾರದ ಜವಾಬ್ದಾರಿಯಾಗಿದೆ. ಸರ್ಕಾರ ಮಾತುಕತೆಗೆ ಮುಂದಾಗದೆ ಹೀಗೆಯೇ ನಿರ್ಲಕ್ಷ್ಯ ಧೋರಣೆ ಮುಂದುವರಿಸಿದರೆ ಸೋನಮ್ ವಾಂಗ್‌ಚುಕ್ ಅವರಿಗೆ ಬೆಂಬಲವಾಗಿ ದೇಶದ ವಿವಿಧ ಭಾಗಗಳಲ್ಲಿ ನಾಗರಿಕರು ಬೀದಿಗೆ ಇಳಿಯಬೇಕಾಗುತ್ತದೆ” ಎಂದು ಅಣ್ಣಾ ಹಜಾರೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸೋನಮ್ ವಾಂಗ್‌ಚುಕ್ ಅವರ ಉಪವಾಸ ಸತ್ಯಾಗ್ರಹವು 20 ದಿನಗಳನ್ನು ದಾಟಿದ್ದು, ಅಂಗಾಂಗ ವೈಫಲ್ಯದ ಭೀತಿ ಎದುರಾಗಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ದೆಹಲಿ ಹೈಕೋರ್ಟ್ ಈಗಾಗಲೇ ಅವರ ಆರೋಗ್ಯದ ಮೇಲೆ ನಿರಂತರ ನಿಗಾ ಇಡಲು ವೈದ್ಯಕೀಯ ಮಂಡಳಿಗೆ ಸೂಚಿಸಿದೆ. ದೆಹಲಿ ಹೈಕೋರ್ಟ್‌ನ ನಿರ್ದೇಶನ ಹಾಗೂ ವೈದ್ಯಕೀಯ ತಜ್ಞರ ಸಲಹೆಯ ಮೇರೆಗೆ ವಾಂಗ್‌ಚುಕ್ ಅವರನ್ನು ಪೊಲೀಸರು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.
ಇದನ್ನೂ ಓದಿ: 20 ದಿನಗಳ ಉಪವಾಸದ ಬಳಿಕ ಸೋನಮ್ ವಾಂಗ್ಚುಕ್ ಆಸ್ಪತ್ರೆಗೆ ದಾಖಲು
ಸೋನಮ್ ವಾಂಗ್‌ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಿದರೂ ಹೋರಾಟ ನಿಂತಿಲ್ಲ. ಈ ಹಿಂದೆಯೇ ನಿಗದಿಯಾದಂತೆ ಜುಲೈ 20ರಂದು ಸಂಸತ್ತಿಗೆ ಹಮ್ಮಿಕೊಂಡಿರುವ ಬೃಹತ್ ರ‍್ಯಾಲಿ ನಡೆಯುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಾಂಗ್‌ಚುಕ್ ಅವರನ್ನು ಬಲವಂತವಾಗಿ ತೆರವುಗೊಳಿಸಿದ ಪೊಲೀಸರ ಕ್ರಮಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರ ನೀಟ್ ಅಕ್ರಮಗಳನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ಆರೋಪಿಸಿವೆ.
ಕೇಜ್ರಿವಾಲ್ ಮತ್ತು ಇತರ ನಾಯಕರ ಬೆಂಬಲ:
ಆಪ್ (AAP) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಈಗಾಗಲೇ ವಾಂಗ್‌ಚುಕ್ ಅವರನ್ನು ಭೇಟಿಯಾಗಿ ಬೆಂಬಲ ಸೂಚಿಸಿದ್ದು, ಜಂತರ್ ಮಂತರ್ ಪ್ರತಿಭಟನೆಗೆ ಸೇರುವಂತೆ ಜನರಿಗೆ ಕರೆ ನೀಡಿದ್ದಾರೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಡಿಎಂಕೆ ಸಂಸದೆ ಕನಿಮೊಳಿ ಮತ್ತು ಶಿವಸೇನೆಯ ಆದಿತ್ಯ ಠಾಕ್ರೆ ಅವರು ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿದ್ದಾರೆ.
ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳು:
- ನೀಟ್ ಹಗರಣದ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು.
- ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA)ಯನ್ನು ವಿಸರ್ಜಿಸಬೇಕು.
- ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಅನ್ನು ರದ್ದುಗೊಳಿಸಬೇಕು.
- ದೇಶದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಗಟ್ಟಲು ಕಠಿಣ ಕಾನೂನು ಜಾರಿಗೆ ತರಬೇಕು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




