ಇಂಡಿಗೋ ವಿಮಾನದಲ್ಲಿ ಹರ ಹರ ಮಹಾದೇವ್ ಎನ್ನುತ್ತಾ ಅನುಚಿತವಾಗಿ ವರ್ತಿಸಿದ ಕುಡುಕ
ಇಂಡಿಗೋ ದೆಹಲಿ-ಕೋಲ್ಕತ್ತಾ ವಿಮಾನದಲ್ಲಿ ಕುಡಿದ ಮತ್ತಿನಲ್ಲಿ ವಕೀಲರೊಬ್ಬರು'ಹರ ಹರ ಮಹಾದೇವ್' ಎಂದು ಘೋಷಣೆ ಕೂಗಿ, ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅವರನ್ನು ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಲಾಗಿದೆ. ಸೋಮವಾರ ಈ ಘಟನೆ ನಡೆದಿದೆ. ದೆಹಲಿಯಿಂದ ಕೋಲ್ಕತ್ತಾಗೆ ಹಾರುತ್ತಿದ್ದ ಇಂಡಿಗೋ ವಿಮಾನ 6E 6571 ಪಾರ್ಕಿಂಗ್ ಬೇಯಲ್ಲಿ 30 ನಿಮಿಷಗಳಿಗೂ ಹೆಚ್ಚು ಕಾಲ ವಿಳಂಬವಾಗಿದ್ದಾಗ ಈ ಘಟನೆ ಸಂಭವಿಸಿದೆ.

ನವದೆಹಲಿ, ಸೆಪ್ಟೆಂಬರ್ 3: ಸೋಮವಾರ (ಸೆಪ್ಟೆಂಬರ್ 1) ದೆಹಲಿಯಿಂದ ಕೋಲ್ಕತ್ತಾಗೆ ಹಾರುತ್ತಿದ್ದ ಇಂಡಿಗೋ ವಿಮಾನ 6E 6571ನಲ್ಲಿ ವಕೀಲರೊಬ್ಬರು “ಹರ ಹರ ಮಹಾದೇವ್” ಎಂದು ಘೋಷಣೆ ಕೂಗಿ ಸಹ ಪ್ರಯಾಣಿಕರ ಹಾಗೂ ಸಿಬ್ಬಂದಿಯ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಇಂಡಿಗೋ (Indigo Flight) ವಿಮಾನಯಾನ ಸಂಸ್ಥೆಯು ಅವರನ್ನು “ಅಶಿಸ್ತಿನ ಪ್ರಯಾಣಿಕ” ಎಂದು ಕರೆದು ಕೊಲ್ಕತ್ತಾದಲ್ಲಿ ಲ್ಯಾಂಡ್ ಆಗುವಾಗ ಭದ್ರತಾ ಸಿಬ್ಬಂದಿಗೆ ಅವರನ್ನು ಒಪ್ಪಿಸಿದೆ.
ದೆಹಲಿಯ ಪಾರ್ಕಿಂಗ್ ಬೇಯಲ್ಲಿ ವಿಮಾನ 30 ನಿಮಿಷಗಳಿಗೂ ಹೆಚ್ಚು ಕಾಲ ವಿಳಂಬವಾಗಿದ್ದಾಗ ಈ ಘಟನೆ ಸಂಭವಿಸಿದೆ. 31D ಸೀಟಿನಲ್ಲಿ ಕುಳಿತಿದ್ದ ಆ ಪ್ರಯಾಣಿಕ ವಿಮಾನದ ವಿಳಂಬದ ಸಮಯದಲ್ಲಿ ಮತ್ತು ಟೇಕ್ ಆಫ್ ನಂತರ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಹಾಗೇ, ಇತರರಿಗೆ ತೊಂದರೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಇಂಡಿಗೋ ದೂರು ದಾಖಲಿಸಿ, ಅವರ ದುರ್ವರ್ತನೆಯನ್ನು ಖಂಡಿಸಿತು.
ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ತಾಳಲಾರದೆ ಟೆರೇಸಿನಿಂದ ಹಾರಿದ ಮೇಲೂ ಥಳಿಸಿದ ಅತ್ತೆ-ಮಾವ!
ಈ ಕುರಿತಾಗಿ ಇಂಡಿಗೋ ಅಧಿಕೃತ ಹೇಳಿಕೆಯನ್ನು ಹೊರಡಿಸಿದೆ. “ಸೆಪ್ಟೆಂಬರ್ 1, 2025ರಂದು ದೆಹಲಿಯಿಂದ ಕೋಲ್ಕತ್ತಾಗೆ ಕಾರ್ಯನಿರ್ವಹಿಸುತ್ತಿದ್ದ ಇಂಡಿಗೋ 6E 6571 ವಿಮಾನದಲ್ಲಿ ಅಶಿಸ್ತಿನ ವರ್ತನೆಯ ಘಟನೆಯ ಬಗ್ಗೆ ನಮಗೆ ತಿಳಿದುಬಂದಿದೆ. ವಿಮಾನದಲ್ಲಿದ್ದ ಗ್ರಾಹಕರಲ್ಲಿ ಒಬ್ಬರು ಮದ್ಯದ ಅಮಲಿನಲ್ಲಿ ಕ್ಯಾಬಿನ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು ಮತ್ತು ಸಹ ಪ್ರಯಾಣಿಕರಿಗೆ ತೊಂದರೆ ನೀಡುತ್ತಿದ್ದರು ಎಂದು ಕಂಡುಬಂದಿದೆ.” ಎಂದು ಇಂಡಿಗೋ ತಿಳಿಸಿದೆ.
An IndiGo Spokesperson says, “We are aware of an incident of unruly behaviour onboard IndiGo flight 6E 6571 operating from Delhi to Kolkata on 01 September 2025. One of the customers onboard, under the influence of alcohol, was found to be misbehaving with the cabin crew and…
— ANI (@ANI) September 3, 2025
ವಿಮಾನಯಾನ ಸಂಸ್ಥೆಯ ಪ್ರಕಾರ, ಆ ಪ್ರಯಾಣಿಕ ಮದ್ಯವನ್ನು ಸಾಫ್ಟ್ ಡ್ರಿಂಕ್ ಬಾಟಲಿಯಂತೆ ಕಾಣುತ್ತಿದ್ದ ಬಾಟಲಿಯಲ್ಲಿ ಹಾಕಿಕೊಂಡಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ಅವರು ಬೇಗ ಆ ಡ್ರಿಂಕ್ಸ್ ಕುಡಿದರು. ನಂತರ ಸಿಬ್ಬಂದಿಯೊಬ್ಬರ ಮೇಲೆ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದರು. ಈ ಬಗ್ಗೆ ಅಧಿಕಾರಿಗಳಿಗೆ ಔಪಚಾರಿಕ ದೂರು ದಾಖಲಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: Video: ಸತ್ತು ಹೋದ ಆನೆಯ ತಲೆಬುರುಡೆಯನ್ನು ಕಂಡು ರೋಧಿಸಿದ ಹೆಣ್ಣಾನೆ
ಆದರೆ, ಆ ವಕೀಲರು ವಿಮಾನದಲ್ಲಿ ಮದ್ಯ ಸೇವಿಸಿರುವುದನ್ನು ನಿರಾಕರಿಸಿದ್ದಾರೆ. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಾನು ಖರೀದಿ ಮಾಡಿದ ರಶೀದಿಯನ್ನು ತೋರಿಸಿರುವ ಅವರು ತಾನು ಬಿಯರ್ ಮಾತ್ರ ಸೇವಿಸಿದ್ದೇನೆ ಎಂದು ಹೇಳಿದ್ದಾರೆ. ಸಿಬ್ಬಂದಿಗೆ “ಹರ್ ಹರ್ ಮಹಾದೇವ್” ಎಂದು ಶುಭಾಶಯ ಕೋರಿರುವುದು ನಿಜ. ನಾನು ಎಲ್ಲರಿಗೂ ಹಾಗೇ ಶುಭಾಶಯ ಕೋರುವುದು ಎಂದು ಅವರು ಹೇಳಿದ್ದಾರೆ. ವಿಮಾನಯಾನ ಸಿಬ್ಬಂದಿ ನನಗೆ ಕಿರುಕುಳ ನೀಡಿದ್ದಾರೆ ಮತ್ತು ಸೇವೆಗಳನ್ನು ನಿರಾಕರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಆ ಪ್ರಯಾಣಿಕ ಕೂಡ ಇಂಡಿಗೋ ಮೇಲೆ ದೂರು ದಾಖಲಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




