ಕಾಂಗ್ರೆಸ್ ಪಕ್ಷ ಒಡೆತನದ ನ್ಯಾಷನಲ್ ಹೆರಾಲ್ಡ್ ಕಚೇರಿಗೆ ಇಡಿ ಬೀಗ ಮುದ್ರೆ
ತನಿಖಾ ಸಂಸ್ಥೆಯಿಂದ ಪೂರ್ವಾನುಮತಿ ಪಡೆಯದೆ ಕಚೇರಿ ತೆರೆಯಬಾರದು ಎಂದು ಜಾರಿ ನಿರ್ದೇಶನಾಲಯ ಸೂಚನೆ ನೀಡಿದೆ.
ದೆಹಲಿ: ಜಾರಿ ನಿರ್ದೇಶನಾಲಯವು (Enforcement Directorate) ನವದೆಹಲಿಯ ಐಟಿಒನಲ್ಲಿರುವ ಕಾಂಗ್ರೆಸ್ ಪಕ್ಷದ ಒಡೆತನದ ನ್ಯಾಷನಲ್ ಹೆರಾಲ್ಡ್ (National Herald)ಕಚೇರಿಗೆ ಬುಧವಾರ ಬೀಗ ಮುದ್ರೆ ಹಾಕಿದೆ. ತನಿಖಾ ಸಂಸ್ಥೆಯಿಂದ ಪೂರ್ವಾನುಮತಿ ಪಡೆಯದೆ ಕಚೇರಿ ತೆರೆಯಬಾರದು ಎಂದು ಸೂಚನೆ ನೀಡಿದೆ.ಅಕ್ರಮ ಹಣ ವ್ಯವಹಾರ ಬಗ್ಗೆ ಜಾರಿ ನಿರ್ದೇಶನಾಲಯ ದೆಹಲಿಯಲ್ಲಿರುವ ನ್ಯಾಷನಲ್ ಹೆರಾಲ್ಡ್ ಮುಖ್ಯ ಕಚೇರಿ ಮತ್ತು ಇತರ 11 ಸ್ಥಳಗಳಲ್ಲಿ ದಾಳಿ ನಡೆಸಿದ ನಂತರ ಬೀಗ ಮುದ್ರೆ ಕ್ರಮಕೈಗೊಂಡಿದೆ.ಹಣ ವರ್ಗಾವಣೆ ತಡೆ ಕಾಯ್ದೆ (PMLA)ಯ ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ನಿಧಿ ಎಲ್ಲಿಂದ ಬಂತು ಎಂಬುದರ ಬಗ್ಗೆ ಹೆಚ್ಚುವರಿ ಪುರಾವೆಗಳನ್ನು ಸಂಗ್ರಹಿಸಲು ಮತ್ತು ಅವರು ನ್ಯಾಷನಲ್ ಹೆರಾಲ್ಡ್-ಸಂಬಂಧಿತ ವಹಿವಾಟುಗಳಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳ ವಿರುದ್ಧ ಇಡಿ ದಾಳಿ ನಡೆಸಿತ್ತು.
ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಮಗ ರಾಹುಲ್ ಗಾಂಧಿಗೆ ಸೇರಿದ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಯಂಗ್ ಇಂಡಿಯನ್ ಲಿಮಿಟೆಡ್ ಒಡೆತನದಲ್ಲಿದೆ. ಸೆಂಟ್ರಲ್ ದೆಹಲಿಯ ಐಟಿಒನಲ್ಲಿರುವ ಬಹದ್ದೂರ್ ಶಾ ಜಾಫರ್ ಮಾರ್ಗದಲ್ಲಿರುವ ನ್ಯಾಷನಲ್ ಹೆರಾಲ್ಡ್ ಕಚೇರಿಯು ಪತ್ರಿಕೆಯನ್ನು ಪ್ರಕಟಿಸುವ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಹೆಸರಿನಲ್ಲಿ ನೋಂದಾಯಿಸಲಾಗಿದೆ.
ಅಕ್ರಮ ಹಣ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆ ಇತ್ತೀಚೆಗೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ವಿಚಾರಣೆಗೊಳಪಡಿಸಿತ್ತು.
Published On - 6:47 pm, Wed, 3 August 22