G Kishan Reddy: ಗೋವಾದಲ್ಲಿ ಬಿಜೆಪಿ ಜಯಭೇರಿ; ಈ ವಿಕ್ಟರಿಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದು ಕೇಂದ್ರ ಸಚಿವ ಜಿ.ಕಿಶನ್​ ರೆಡ್ಡಿ

ಗೋವಾದಲ್ಲಿ ಬಿಜೆಪಿ ಪರ ಪ್ರಚಾರದ ಸಹ ಉಸ್ತುವಾರಿಯನ್ನಾಗಿ ಜಿ. ಕಿಶನ್​ ರೆಡ್ಡಿಯವರನ್ನು ಪಕ್ಷದ ವರಿಷ್ಠರು ನೇಮಕ ಮಾಡಿದ್ದರು. ಆಗಿನಿಂದಲೇ ಕಾರ್ಯಪ್ರವೃತ್ತರಾದ ಕಿಶನ್​ ರೆಡ್ಡಿ, ಅಲ್ಲಿ ಬಿಜೆಪಿ ಗೆಲುವಿಗಾಗಿ ಅವಿರತ ಕೆಲಸವನ್ನೂ ಮಾಡಿದ್ದರು.

G Kishan Reddy: ಗೋವಾದಲ್ಲಿ ಬಿಜೆಪಿ ಜಯಭೇರಿ; ಈ ವಿಕ್ಟರಿಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದು ಕೇಂದ್ರ ಸಚಿವ ಜಿ.ಕಿಶನ್​ ರೆಡ್ಡಿ
ಜಿ.ಕಿಶನ್​ ರೆಡ್ಡಿ
Follow us
| Updated By: Lakshmi Hegde

Updated on:Mar 11, 2022 | 3:42 PM

ಗೋವಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಗೆಲುವಿಗೆ ಮುಖ್ಯ ಕಾರಣ ಕೇಂದ್ರ ಸಚಿವ ಜಿ.ಕಿಶನ್​ ರೆಡ್ಡಿ(G.Kishan Reddy). ಗೋವಾಕ್ಕೆ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಉಸ್ತುವಾರಿಯಾಗಿದ್ದರು. ಅವರೊಂದಿಗೆ ಜಿ.ಕಿಶನ್​ ರೆಡ್ಡಿ ಕೂಡ ಕೈಜೋಡಿ, ಸಹ ಉಸ್ತುವಾರಿಯಾಗಿದ್ದುಕೊಂಡು ಗೋವಾದಲ್ಲಿ ಬಿಜೆಪಿ ಗೆಲುವಿಗೆ ತುಂಬ ಶ್ರಮಿಸಿದ್ದಾರೆ. ಅದ್ಭುತ ತಂತ್ರಗಳನ್ನು ಹೆಣೆದು, ವಿರೋಧಿಗಳನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.  ಕೇಂದ್ರ ಸಂಸ್ಕೃತಿ, ಅಭಿವೃದ್ಧಿ ಮತ್ತು  ಈಶಾನ್ಯ ಪ್ರದೇಶಾಭಿವೃದ್ಧಿ ಇಲಾಖೆ ಸಚಿವರಾಗಿರುವ ಅವರು, ಟೂಲ್ಸ್​ ಇಂಜಿನಿಯರಿಂಗ್​ನಲ್ಲಿ ಡಿಪ್ಲೋಮಾ ಓದಿದ್ದಾರೆ. 2002ರಿಂದ 2005ರವರೆಗೆ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾಗಿದ್ದರು. ಈ ಬಾರಿ ಮತ್ತೆ ಗೋವಾದಲ್ಲಿ ಬಿಜೆಪಿಯೇ ಸರ್ಕಾರ ರಚನೆ ಮಾಡುತ್ತಿದೆ ಅಂದರೆ, ಇದರ ಹಿಂದೆ ಕಿಶನ್​ ರೆಡ್ಡಿಯವರ 100 ಪರ್ಸೆಂಟ್ ಪ್ರಯತ್ನ ಇದೆ.

ಗೋವಾದಲ್ಲಿ ಬಿಜೆಪಿ ಪರ ಪ್ರಚಾರದ ಸಹ ಉಸ್ತುವಾರಿಯನ್ನಾಗಿ ಜಿ. ಕಿಶನ್​ ರೆಡ್ಡಿಯವರನ್ನು ಪಕ್ಷದ ವರಿಷ್ಠರು ನೇಮಕ ಮಾಡಿದ್ದರು. ಆಗಿನಿಂದಲೇ ಕಾರ್ಯಪ್ರವೃತ್ತರಾದ ಕಿಶನ್​ ರೆಡ್ಡಿ, ಅಲ್ಲಿ ಬಿಜೆಪಿ ಗೆಲುವಿಗಾಗಿ ಅವಿರತ ಕೆಲಸವನ್ನೂ ಮಾಡಿದ್ದರು. ಆದರೆ ಚುನಾವಣೋತ್ತರ ಸಮೀಕ್ಷೆಗಳೆಲ್ಲ ಗೋವಾದಲ್ಲಿ ಅತಂತ್ರ ವಿಧಾನಸಭೆಯ ಊಹೆ ಮಾಡಿದ್ದವು. ಅಲ್ಲಿ ಸಚಿವ ಕಿಶನ್​ ರೆಡ್ಡಿ ತಂತ್ರಗಾರಿಕೆ ಫಲಿಸಲಿಲ್ಲ ಎಂದೇ ಹೇಳಿದ್ದವು. ಆದರೆ ಊಹೆಗಳೆಲ್ಲ ತಲೆಕೆಳಗಾಗಿವೆ. ಈಗಾಗಲೇ ಎಂಜಿಪಿ ಪಕ್ಷದ ಇಬ್ಬರು ಶಾಸಕರು ಬಿಜೆಪಿಗೆ ಬೆಂಬಲ ಕೊಡುವುದಾಗಿ ಹೇಳಿದ್ದು, ಬಿಜೆಪಿ ಸರ್ಕಾರ ರಚನೆಗೆ ಸಜ್ಜಾಗಿದೆ ನಿಂತಿದೆ. ಬಿಜೆಪಿ ಮನೋಹರ್ ಪರಿಕ್ಕರ್ ಇಲ್ಲದೆ ಎದುರಿಸಿದ ಮೊದಲ ಚುನಾವಣೆ ಇದಾಗಿದ್ದು, ಈ ಗೆಲುವಿನ ಯಶಸ್ಸು ಸಚಿವ ಕಿಶನ್​ ರೆಡ್ಡಿಯವರಿಗೆ ಸಲ್ಲುತ್ತದೆ.

ಗೋವಾದಲ್ಲಿ ಬಿಜೆಪಿ  ಉಸ್ತುವಾರಿಯಾಗಿದ್ದ ದೇವೇಂದ್ರ ಫಡ್ನವೀಸ್​ ಜತೆ ಸೇರಿ ಜಿ.ಕಿಶನ್​ ರೆಡ್ಡಿಯವರು, ಅಧಿಕಾರ ವಿರೋಧಿ ಅಂಶಗಳನ್ನು ನಾಜೂಕಾಗಿ  ದೂರ ಇಡಲು ಮಾಡಿದ ತಂತ್ರಗಾರಿಕೆ ಯಶಸ್ವಿಯಾಗಿದೆ. ಇವರು ಗೋವಾದಲ್ಲಿ, ಶೇ.67 ರಷ್ಟು ವಿರೋಧ ಪಕ್ಷಗಳ ಮತ ಹಂಚಿಕೆಯನ್ನು ಆಧರಿಸಿ ಚುನಾವಣಾ ತಂತ್ರ ರೂಪಿಸಿದ್ದರು. ಇನ್ನು ಗೋವಾದಲ್ಲಿ ಈ ಬಾರಿ ಟಿಎಂಸಿ, ಆಮ್​ ಆದ್ಮಿ ಪಕ್ಷ, ರೆವೊಲ್ಯೂಷನರಿ ಗೋವನ್ಸ್ ಪಾರ್ಟಿ ಗಳೆಲ್ಲ ಚುನಾವಣಾ ಕಣಕ್ಕೆ ಧುಮುಕಿದ್ದವು. ಹೀಗಾಗಿ ಅಲ್ಲಿ ಸ್ಪರ್ಧೆಯೂ ಕಠಿಣವಾಗಿಯೇ ಇತ್ತು. ಇದೆಲ್ಲದ ಮಧ್ಯೆ ಬಿಜೆಪಿ ತನ್ನ ಶೇ.33 ಮತ ಹಂಚಿಕೆ ಉಳಿಸಿಕೊಂಡು, ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಕಿಶನ್​ ರೆಡ್ಡಿ ಲೆಕ್ಕಾಚಾರ ಸರಿಯಾಯ್ತೇ? 

ಕಾಂಗ್ರೆಸ್​ ಗೋವಾದಲ್ಲಿ ಅಂತಲ್ಲ, ಈಗಾಗಲೇ ಬಹುತೇಕ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದ್ದು, ಜನರು ಪರ್ಯಾಯವಾಗಿ ಬೇರೆ ಪ್ರಾದೇಶಿಕ ಪಕ್ಷಗಳತ್ತ ಒಲವು ತೋರುತ್ತಿದ್ದಾರೆ. ಈ ಬಗ್ಗೆ ಹಿಂದೊಮ್ಮೆ ಕಾಂಗ್ರೆಸ್ ಮಾಜಿ ಸಚಿವ ರಮಾಕಾಂತ್ ಖಿಲಾಪ್ ಮಾತನಾಡಿ, ಕಾಂಗ್ರೆಸ್​​ನಲ್ಲಿ ದುರ್ಬಲ ಸಂಘಟನೆಯಿದೆ. ಮತ ಹಂಚಿಕೆಯ ಕೊರತೆಯಿದೆ. ಅಲ್ಲದೆ, ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಪಕ್ಷ ಎಡವುತ್ತಿದೆ. ಹೀಗಾಗಿಯೇ ಅಧಿಕಾರದಿಂದಲೂ ವಂಚಿತವಾಗುತ್ತಿದೆ ಎಂದು ಹೇಳಿದ್ದರು. ಇದನ್ನು ಜಿ.ಕಿಶನ್​ ರೆಡ್ಡಿ ಕೂಡ ಸರಿಯಾಗಿಯೇ ಲೆಕ್ಕಚಾರ ಹಾಕಿ ಅರ್ಥ ಮಾಡಿಕೊಂಡಿದ್ದಾರೆ. ಅದನ್ನು ಗೋವಾದಲ್ಲಿ ಅನ್ವಯ ಮಾಡಿದ ಅವರು, ಕರಾವಳಿ ರಾಜ್ಯ ಗೋವಾದ ದಕ್ಷಿಣ ಭಾಗದ ಮತದಾರರು ಕಾಂಗ್ರೆಸ್​ಗೆ ಪರ್ಯಾಯವಾಗಿ ಟಿಎಂಸಿ, ಆಪ್​ ಪಕ್ಷಗಳಿಗೆ ಮತ ಹಾಕಿದರೆ, ಅದು ಸಹಜವಾಗಿಯೇ ಬಿಜೆಪಿಗೆ ಅನುಕೂಲವಾಗಿದೆ ಎಂದು ಅವರು ಅರಿತುಕೊಂಡಿದ್ದರು.  ದೇವೇಂದ್ರ ಫಡ್ನವೀಸ್​, ಜಿ.ಕಿಶನ್​ ರೆಡ್ಡಿ ಮತ್ತು ಸಿಎಂ ಪ್ರಮೋದ್​ ಸಾವಂತ್​ ಸೇರಿ, ಗೋವಾದ ಪ್ರತಿ ಕ್ಷೇತ್ರ, ಬೇರೆ ಪಕ್ಷಗಳ ಅಭ್ಯರ್ಥಿಗಳ ನ್ಯೂನತೆ ಮತ್ತು ಅರ್ಹತೆಯನ್ನು ಅಳೆದು ತೂಗಿ, ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಸಜ್ಜುಗೊಳಿಸಿದ್ದರು. ಅದಕ್ಕೆ ತಕ್ಕಂತೆ ಪ್ರಚಾರವನ್ನೂ ನಡೆಸಿದ್ದರು. ಈ ಎಲ್ಲ ಕಾರಣದಿಂದ ಗೋವಾದಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ.

ಜಿ.ಕಿಶನ್​ ರೆಡ್ಡಿ ರಾಜಕೀಯ ಜರ್ನಿ

ಕಿಶನ್​ ರೆಡ್ಡಿ ತೆಲಂಗಾಣದ ಬಿಜೆಪಿ ನಾಯಕ. ತೆಲಂಗಾಣ ರಾಜ್ಯ ರಚನೆಗೊಂಡ ಮೇಲೆ ಅಲ್ಲಿಂದ ಕೇಂದ್ರ ಸಂಪುಟಕ್ಕೆ ಹೋದ ಮೊದಲ ನಾಯಕ. ಮೊದಲಿಗೆ 2019ರಲ್ಲಿ ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವರಾಗಿ ಆಯ್ಕೆಯಾದರು. ಈ ಬಾರಿ ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ಪ್ರದೇಶಾಭಿವೃದ್ಧಿ ಸಚಿವರಾಗಿದ್ದಾರೆ. ಒಬ್ಬ ಸಾಮಾನ್ಯ ಬಿಜೆಪಿ ಕಾರ್ಯಕರ್ತನಾಗಿದ್ದವರು, ಕಠಿಣ ಪರಿಶ್ರಮ, ಸಾರ್ವಜನಿಕರಲ್ಲಿ ಇವರು ಹುಟ್ಟಿಸಿರುವ ನಂಬಿಕೆ, ಪ್ರಾಮಾಣಿಕತೆಯಿಂದ ಕೆಲಸ ಮಾಡುವ ವೈಖರಿಯಿಂದಲೇ ಇಂದು ಸಚಿವನ ಸ್ಥಾನಕ್ಕೆ ಏರಿದ್ದಾರೆ. ಇವರ ಪಕ್ಷ ಸಂಘಟನಾ ಸಾಮರ್ಥ್ಯ ಮತ್ತು ತಳಮಟ್ಟದಿಂದಲೇ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಅದ್ಭುತ ಕಲೆಯನ್ನು  ಅರಿತಿದ್ದ ಬಿಜೆಪಿ ಹೈಕಮಾಂಡ್ ಈ ಬಾರಿ ಗೋವಾಕ್ಕೆ ಬಿಜೆಪಿ ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಿತು.

ಸವಾಲು ಎದುರಿಸುವಲ್ಲಿ ನಿಸ್ಸೀಮರು

2002ರಿಂದ 2005ರವರೆಗೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದ ಜಿ.ಕಿಶನ್​ ರೆಡ್ಡಿ, 2004ರಲ್ಲಿ ಹಿಮಾಯತ್​ನಗರ ವಿಧಾನಸಭೆ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದು, ಶಾಸಕರಾದರು. ಈ ಮೂಲಕ ಆಂಧ್ರಪ್ರದೇಶದಲ್ಲಿ ಬಿಜೆಪಿ ಖಾತೆ ತೆರೆದ ಮೊದಲ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾದರು. 2019ರಲ್ಲಿ ತೆಲಂಗಾಣದ ಸಿಕಂದರಾಬಾದ್​​ನಲ್ಲಿ ಗೆದ್ದರು. ಕಿಶನ್​ ರೆಡ್ಡಿಯವರಿದ್ದಲ್ಲಿ ಗೆಲುವು ಖಚಿತ ಎಂಬ ನಂಬಿಕೆ ಹುಟ್ಟಿಸಿಕೊಂಡರು. ಆಗಿನಿಂದಲೂ ಆಗಾಗ ಅವರಿಗೆ ಕಷ್ಟಕರ, ಸವಾಲಿನ ಜವಾಬ್ದಾರಿಗಳನ್ನು ಪಕ್ಷ ನೀಡುತ್ತಲೇ ಬರುತ್ತಿದೆ. ಅದನ್ನು ಯಶಸ್ವಿಯಾಗಿ ನಿಭಾಯಿಸುತ್ತಲೇ ಬರುತ್ತಿದ್ದಾರೆ. ಆ ಸಾಲಿಗೆ ಇದೀಗ ಗೋವಾ ಚುನಾವಣೆಯ ಗೆಲುವೂ ಸೇರಿಕೊಂಡಿದೆ.

ಪ್ರಧಾನಿ ಮೋದಿ ಸರ್ಕಾರದ ತ್ರಿಪಲ್​ ತಲಾಖ್​, ಆರ್ಟಿಕಲ್​ 370 ರದ್ದತಿ, ಸೈಬರ್​ ಕ್ರೈಮ್​ ಪೋರ್ಟಲ್​ ಜಾರಿಗಳಲ್ಲಿ ಕೂಡ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ. ಕೊರೊನಾ ಸಾಂಕ್ರಾಮಿಕ ಕೆಲಸದಲ್ಲೂ ಮಹತ್ವದ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಯುನಿಸೆಫ್​ನಿಂದ, ಅತ್ಯುತ್ತಮ ಮಕ್ಕಳ ಸ್ನೇಹಿ ಜನಪ್ರತಿನಿಧಿ ಪ್ರಶಸ್ತಿ ಪಡೆದಿದ್ದಾರೆ. ಅಷ್ಟೇ ಅಲ್ಲ, ಅಮೆರಿಕಾದಿಂದ ಲೀಡರ್ ಶಿಪ್​ ಅವಾರ್ಡ್​ ಕೂಡ ಸ್ವೀಕರಿಸಿದ್ದಾರೆ.  ಇದೀಗ ಗೋವಾ ಚುನಾವಣೆ ಗೆಲುವಿನ ಬೆನ್ನಲ್ಲೇ ಪಕ್ಷ ಕಿಶನ್​ ರೆಡ್ಡಿಯವರನ್ನು ಶ್ಲಾಘಿಸುತ್ತಿದೆ.

ಇದನ್ನೂ ಓದಿ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಉತ್ತರ ಪ್ರದೇಶದಲ್ಲಿ ‘ಮಿಷನ್ ಬಿಜೆಪಿ’ ಮೂಲಕ ಕಾರ್ಯಕರ್ತರಲ್ಲಿ ಚೈತನ್ಯ ತುಂಬಿದ್ದು ಹೀಗೆ

Published On - 3:03 pm, Fri, 11 March 22