G-23 meeting ಗುಲಾಂ ನಬಿ ಆಜಾದ್ರ ನಿವಾಸದಲ್ಲಿ ಸಭೆ ಸೇರಿದ ಜಿ-23 ನಾಯಕರು; ಶಶಿ ತರೂರ್ ಭಾಗಿ
'ಜಿ -23' ಸಭೆಯಲ್ಲಿ ಆನಂದ್ ಶರ್ಮಾ, ಕಪಿಲ್ ಸಿಬಲ್, ಮನೀಶ್ ತಿವಾರಿ, ಶಶಿ ತರೂರ್ ಮತ್ತು ಸಂದೀಪ್ ದೀಕ್ಷಿತ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.
ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ನಂತರ ಪಕ್ಷದ ಕಾರ್ಯಕರ್ತರು ಮತ್ತು ನಿಷ್ಠಾವಂತರ ನಡುವೆ ಬಹಿರಂಗ ವಾಕ್ ಸಮರಗಳ ನಡುವೆಯೇ ಕೆಲವು ಹಿರಿಯ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಮಾಜಿ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad) ಅವರ ನಿವಾಸದಲ್ಲಿ ಇಂದು (ಬುಧವಾರ) ಭೇಟಿಯಾದರು. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ(CWC) ಪಕ್ಷದ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ (Sonia Gandhi) ಮುಂದುವರಿಯುತ್ತಾರೆ ಎಂದು ಸರ್ವಾನುಮತದಿಂದ ನಿರ್ಧರಿಸಲಾಗಿತ್ತು. ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಪ್ರದರ್ಶನದ ಹಿನ್ನೆಲೆಯಲ್ಲಿ ಸಿಡಬ್ಲ್ಯುಸಿ ಸಭೆ ನಡೆದಿತ್ತು. ಇನ್ನೊಂದು ಬೆಳವಣಿಗೆಯಲ್ಲಿ ಚುನಾವಣೆಯ ನಂತರದ ಪರಿಸ್ಥಿತಿಯನ್ನು ಅವಲೋಕಿಸಲು ಕಾಂಗ್ರೆಸ್ ಪ್ರತಿ ಐದು ರಾಜ್ಯಗಳಿಗೆ ಒಬ್ಬ ನಾಯಕನನ್ನು ನಿಯೋಜಿಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಸಹಿ ಮಾಡಿರುವ ಪತ್ರದಲ್ಲಿ ಪಕ್ಷವು ರಜನಿ ಪಾಟೀಲ್, ಜೈರಾಮ್ ರಮೇಶ್, ಅಜಯ್ ಮಾಕನ್, ಜಿತೇಂದ್ರ ಸಿಂಗ್ ಮತ್ತು ಅವಿನಾಶ್ ಪಾಂಡೆ ಅವರನ್ನು ಚುನಾವಣೆಯ ನಂತರದ ಪರಿಸ್ಥಿತಿಯನ್ನು ನಿರ್ಣಯಿಸಲು ಮತ್ತು ಇತ್ತೀಚೆಗಷ್ಟೇ ಮುಗಿದ ರಾಜ್ಯಗಳಲ್ಲಿ ಸಾಂಸ್ಥಿಕ ಬದಲಾವಣೆಗಳನ್ನು ಸೂಚಿಸಲು ನೇಮಿಸಿದೆ. ಒಂದು ದಿನದ ಹಿಂದೆ ಸೋನಿಯಾ ಗಾಂಧಿ ಅವರು ಎಲ್ಲಾ ಐದು ರಾಜ್ಯಗಳ ರಾಜ್ಯ ಘಟಕಗಳ ಅಧ್ಯಕ್ಷರನ್ನು ರಾಜೀನಾಮೆ ನೀಡುವಂತೆ ಕೇಳಿಕೊಂಡರು.
Congress has appointed Rajani Patil, Jairam Ramesh, Ajay Maken, Jitendra Singh and Avinash Pandey, to assess the post-poll situation and suggest organizational changes in the recently concluded poll states. pic.twitter.com/Ywqr98AFEl
— ANI (@ANI) March 16, 2022
ಏತನ್ಮಧ್ಯೆ, ಆಜಾದ್ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಬಂಡಾಯ ನಾಯಕರು ಭಾಗವಹಿಸಿದ್ದರು, ಇದನ್ನು ಸಾಮಾನ್ಯವಾಗಿ ‘ಗ್ರೂಪ್ ಆಫ್ 23’ ಅಥವಾ ‘ಜಿ -23’ ಎಂದು ಕರೆಯಲಾಗುತ್ತದೆ. ವರದಿಗಳ ಪ್ರಕಾರ ಜಿ-23 ನಾಯಕರು ಕಪಿಲ್ ಸಿಬಲ್ ಅವರ ನಿವಾಸದಲ್ಲಿ ಔತಣಕೂಟವನ್ನು ಮೊದಲು ಯೋಜಿಸಿದ್ದು, ಕೊನೆಯ ಕ್ಷಣದಲ್ಲಿ ಅದನ್ನು ಬದಲಾಯಿಸಿದ್ದಾರೆ.
ಸಭೆಯಲ್ಲಿ ಆನಂದ್ ಶರ್ಮಾ, ಕಪಿಲ್ ಸಿಬಲ್, ಮನೀಶ್ ತಿವಾರಿ, ಶಶಿ ತರೂರ್ ಮತ್ತು ಸಂದೀಪ್ ದೀಕ್ಷಿತ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.
ಪಟಿಯಾಲಾ ಸಂಸದೆ ಪ್ರಣೀತ್ ಕೌರ್, ಗುಜರಾತ್ ಮಾಜಿ ಮುಖ್ಯಮಂತ್ರಿ ಶಂಕರ್ ಸಿಂಗ್ ವಘೇಲಾ, ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ಮತ್ತು ಹರ್ಯಾಣ ಮಾಜಿ ಸ್ಪೀಕರ್ ಕುಲದೀಪ್ ಶರ್ಮಾ ಅವರು ಸೇರಿಕೊಂಡಿದ್ದರಿಂದ ಈ ಬಾರಿ ಜಿ-23 ಗುಂಪಿನ ಮಹತ್ವಾಕಾಂಕ್ಷೆ ಹೆಚ್ಚಾಗಿದೆ. ಭಾನುವಾರ ನಡೆದ ನಿರ್ಣಾಯಕ ಸಿಡಬ್ಲ್ಯುಸಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ G-23 ರ ಎಲ್ಲಾ ಸದಸ್ಯರಿಗೆ ತಿಳಿಸಲು ಸಭೆಯನ್ನು ಕರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಭಾರತೀಯ ರೈಲ್ವೇಯನ್ನು ಖಾಸಗೀಕರಣಗೊಳಿಸುವ ಯಾವುದೇ ಯೋಜನೆ ಇಲ್ಲ: ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್