ಒಂದು ಸೇಡಿನ ಕತೆ; ಯುಪಿಎಸ್ಸಿ ಆಕಾಂಕ್ಷಿಯನ್ನು ಕೊಂದು, ತುಪ್ಪ, ಆಲ್ಕೋಹಾಲ್ ಸುರಿದು ಬೆಂಕಿ ಹಚ್ಚಿದ ಪ್ರೇಯಸಿ
ಯುಪಿಎಸ್ಸಿ ಪಾಸ್ ಮಾಡಬೇಕೆಂದು ಆಸೆಯಿಟ್ಟುಕೊಂಡಿದ್ದ ಆತ ಪ್ರೀತಿಯಲ್ಲಿ ಬಿದ್ದಿದ್ದ. ಪ್ರೀತಿಯಲ್ಲಿ ನಂಬಿಕೆ ಮುಖ್ಯ. ಆದರೆ, ಆತನಿಗೂ ತನ್ನ ಪ್ರೇಯಸಿ ಮೇಲೆ ನಂಬಿಕೆ ಇರಲಿಲ್ಲ, ಆಕೆಗೂ ಆತನ ಮೇಲೆ ಸಂಪೂರ್ಣ ನಂಬಿಕೆ ಇರಲಿಲ್ಲ. ಆತ ತನ್ನ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿಟ್ಟುಕೊಂಡಿದ್ದಾನೆ ಎಂಬ ಅನುಮಾನ ಆಕೆಗೆ ಮೂಡಿತ್ತು. ಆತ ಕೂಡ ಆಕೆ ತನ್ನನ್ನು ಬಿಟ್ಟುಹೋಗಬಾರದೆಂದು ಈ ರೀತಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದ. ಕೊನೆಗೆ ಈ ಅನುಮಾನದ ಕಾರಣದಿಂದಲೇ ಆತ ಭೀಕರವಾಗಿ ಕೊಲೆಯಾಗಿದ್ದಾನೆ. ಆ ಭಯಾನಕತೆ ಎಷ್ಟಿತ್ತೆಂದರೆ ಪೊಲೀಸರಿಗೆ ಆತನ ದೇಹವನ್ನು ಪತ್ತೆಹಚ್ಚಲು ಕೂಡ ಕಷ್ಟವಾಗುವಷ್ಟು ಆ ದೇಹ ಸುಟ್ಟು ಕರಕಲಾಗಿತ್ತು!

ನವದೆಹಲಿ, ಅಕ್ಟೋಬರ್ 27: ಅದು ಅಕ್ಟೋಬರ್ 6. ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ದೆಹಲಿಯ (Delhi) ಗಾಂಧಿ ವಿಹಾರ್‌ನ ನಾಲ್ಕನೇ ಮಹಡಿಯ ರೂಂ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರಿಗೆ ಕರೆ ಬಂದಿತ್ತು. ಆಕಸ್ಮಿಕವಾಗಿ ಬೆಂಕಿ (Fire Accident) ಹೊತ್ತಿರಬಹುದು, ಶಾರ್ಟ್ ಸರ್ಕ್ಯೂಟ್ ಆಗಿರಬಹುದು ಎಂದುಕೊಂಡ ಪೊಲೀಸರು ಅಲ್ಲಿಗೆ ಹೋಗಿ ನೋಡಿದಾಗ ಬಹುತೇಕ ಪೂರ್ತಿಯಾಗಿ ಸುಟ್ಟುಹೋಗಿದ್ದ ವ್ಯಕ್ತಿಯೊಬ್ಬನ ದೇಹದ ಅವಶೇಷಗಳು ಸಿಕ್ಕಿತ್ತು. ಬೆಂಕಿಯನ್ನು ನಂದಿಸಿದ ನಂತರ ಆ ದೇಹದ ಭಾಗಗಳನ್ನು ಬಾಚಿಕೊಂಡು ಚೀಲದಲ್ಲಿ ತುಂಬಿಕೊಂಡು ತರಲಾಗಿತ್ತು ಎಂದರೆ ಆ ಬೆಂಕಿ ಅವಘಡದ ತೀವ್ರತೆಯನ್ನು ನೀವೇ ಅರ್ಥಮಾಡಿಕೊಳ್ಳಿ!
ಆ ಶವ ಯಾರದ್ದು ಎಂಬುದನ್ನು ಪತ್ತೆ ಮಾಡಲೂ ಸಾಧ್ಯವಾಗದ ಸ್ಥಿತಿಯಲ್ಲಿತ್ತು. ಕೊನೆಗೆ ಆ ರೂಂ ಯಾರದ್ದು ಎಂದು ತನಿಖೆ ನಡೆಸಿದ ಪೊಲೀಸರಿಗೆ ಆ ದೇಹ ಯುಪಿಎಸ್ಸಿ ಆಕಾಂಕ್ಷಿ ಯುವಕನದ್ದು ಎಂದು ಗೊತ್ತಾಗಿತ್ತು. ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ನಡೆಸಿ, ಕೇಸ್ ದಾಖಲಿಸಲಾಗಿತ್ತು. ಅದೊಂದು ಆಕಸ್ಮಿಕ ಬೆಂಕಿ ಅವಘಡ ಎಂದೇ ಪೊಲೀಸರು ಭಾವಿಸಿದ್ದರು. ಆದರೆ, ಆ ಮೃತನ ಅಣ್ಣ ಪೊಲೀಸ್ ಠಾಣೆಗೆ ಬಂದು ಅದು ಕೊಲೆ ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಸಿಸಿಟಿವಿ ಪರಿಶೀಲಿಸಿದಾಗ ಆ ರೂಂಗೆ ಬೆಂಕಿ ತಗುಲುವ ಮುನ್ನ ಇಬ್ಬರು ಆ ರೂಂನೊಳಗೆ ಹೋಗಿ ಬಂದಿದ್ದು ಪತ್ತೆಯಾಯಿತು.
ಇದನ್ನೂ ಓದಿ: ಯುವಕನಿಗಾಗಿ ಇಬ್ಬರು ವಿವಾಹಿತ ಮಹಿಳೆಯರ ಜಗಳ; ನಂತರ ಆಗಿದ್ದೇನು?
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಅಂದು ರೂಂಗೆ ಹೋಗಿದ್ದು ಮೃತಪಟ್ಟ ಯುವಕನ 21 ವರ್ಷದ ಪ್ರೇಯಸಿ ಮತ್ತು ಆಕೆಯ ಮಾಜಿ ಪ್ರಿಯಕರ ಎಂಬುದು ತಿಳಿಯಿತು. ಇದರಿಂದ ಪೊಲೀಸರಿಗೆ ಅದು ಅಸಹಜ ಸಾವು ಎಂಬ ಅನುಮಾನ ಬಲವಾಯಿತು. ಆ ಇಬ್ಬರನ್ನೂ ವಿಚಾರಣೆ ನಡೆಸಿದಾಗ ಅವರೇ ಆ ಯುವಕನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡರು. ಹಾಗಂತ ಅವರು ಸುಮ್ಮನೆ ಬೆಂಕಿ ಹಚ್ಚಿರಲಿಲ್ಲ. ತುಪ್ಪ, ಆಲ್ಕೋಹಾಲ್ ಎಲ್ಲ ಸೇರಿಸಿ ಬೆಂಕಿ ಹೊತ್ತಿ ಉರಿಯುವಂತೆ ಕಾಕ್ಟೇಲ್ ರೀತಿ ತಯಾರಿಸಿದ್ದ ಅವರು ಆ ದ್ರಾವಣವನ್ನು ಆತನ ಮೇಲೆ ಸುರಿದು ಬೆಂಕಿ ಹಚ್ಚಿದ್ದರು.
ಕೊಲೆಗೆ ಕಾರಣವೇನು?:
ಆರೋಪಿಯಾದ ವಿಧಿವಿಜ್ಞಾನ ವಿಜ್ಞಾನ ವಿದ್ಯಾರ್ಥಿನಿ 21 ವರ್ಷದ ಯುವತಿ ಅದು ಸಹಜ ಸಾವು ಎನಿಸಬೇಕೆಂದು ಪ್ಲಾನ್ ಮಾಡಿದ್ದಳು. ತನಿಖಾಧಿಕಾರಿಗಳನ್ನು ದಾರಿ ತಪ್ಪಿಸಲು ತುಪ್ಪ ಮತ್ತು ವೈನ್ ಅನ್ನು ಬಳಸಿ ಆ ಜಾಗವನ್ನು ಸುಟ್ಟು ಹಾಕಿದ್ದಳು. ಇದರಿಂದ ಸಾಕ್ಷ್ಯ ನಾಶವಾಗುತ್ತದೆ ಎಂದುಕೊಂಡಿದ್ದಳು. ಕೊಲೆಯಾದ ಯುವಕ ಆಕೆಯೊಂದಿಗೆ ಮೇ ತಿಂಗಳಿಂದ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ. ಆದರೆ, ಆತ ಆಕೆಯ ಅಶ್ಲೀಲ ವಿಡಿಯೋ ತೆಗೆದಿಟ್ಟುಕೊಂಡಿದ್ದ. ಅದನ್ನು ಡಿಲೀಟ್ ಮಾಡಲು ಆಕೆ ಮನವಿ ಮಾಡಿದರೂ ಆತ ಒಪ್ಪಿರಲಿಲ್ಲ. ಇದರಿಂದ ಆತನ ಮೇಲೆ ಸೇಡು ತೀರಿಸಿಕೊಳ್ಳಲು ಆಕೆ ತನ್ನ ಮಾಜಿ ಪ್ರಿಯಕರನ ಸಹಾಯ ಪಡೆದಿದ್ದಳು.
ವಿಧಿವಿಜ್ಞಾನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದುದರಿಂದ ಆಕೆ ಸಾಕ್ಷ್ಯ ನಾಶ ಮಾಡಲು ಸೂಕ್ತ ಮಾರ್ಗ ಹುಡುಕಿದ್ದಳು. ತುಪ್ಪ, ವೈನ್ ಎಲ್ಲ ಸೇರಿಸಿ ಬೆಂಕಿ ಹೊತ್ತಿಕೊಳ್ಳುವ ಕಾಕ್ಟೇಲ್ ತಯಾರಿಸಿದ್ದಳು. ಈ ಮೂಲಕ ಆ ಕೊಲೆಯನ್ನು ಆಕಸ್ಮಿಕ ಬೆಂಕಿ ಅವಘಡದಂತೆ ಕಾಣುವಂತೆ ಮಾಡಲು ಅವಳು ಪ್ಲಾನ್ ಮಾಡಿದ್ದಳು.
ಇದನ್ನೂ ಓದಿ: ಎಣ್ಣೆ ಕೊಡಿಸದ್ದಕ್ಕೆ ಕಿರಿಕ್: ಮಾರಮ್ಮ ದೇಗುಲದ ಬಳಿಯೇ ಮಾರಾಮಾರಿ; ಲಾಂಗ್ನಿಂದ ದಾಳಿ
ಅಕ್ಟೋಬರ್ 5ರ ರಾತ್ರಿ ಆಕೆ ತನ್ನ ಮಾಜಿ ಪ್ರಿಯಕರನ ಜೊತೆ ತನ್ನ ಪ್ರಿಯಕರನ ಫ್ಲಾಟ್‌ಗೆ ಹೋದಳು. ಅಲ್ಲಿ ಅವರಿಬ್ಬರು ಆತನ ಕತ್ತು ಹಿಸುಕಿ ಕೊಂದರು. ನಂತರ ತುಪ್ಪ ಮತ್ತು ವೈನ್ ಅನ್ನು ಆತನ ದೇಹದ ಮೇಲೆ ಸುರಿದರು. ತನಿಖಾಧಿಕಾರಿಗಳನ್ನು ದಾರಿ ತಪ್ಪಿಸುವುದು ಹೇಗೆಂದು ಅವಳಿಗೆ ತಿಳಿದಿತ್ತು. ಸಾಕ್ಷ್ಯವನ್ನು ನಾಶಮಾಡಲು ಬೆಂಕಿ ಹೊತ್ತಿಸಿದ್ದಳು. ಆ ದೇಹದ ಮೈಗೆ ತುಪ್ಪ ಸುರಿದು, ಬೆಂಕಿ ಹಚ್ಚಿ, ಆತನ ತಲೆಯ ಬಳಿಯೇ ಗ್ಯಾಸ್ ಸಿಲಿಂಡರ್ ಓಪನ್ ಮಾಡಿಟ್ಟು, ಅಶ್ಲೀಲ ವಿಡಿಯೋವಿದ್ದ ಮೊಬೈಲ್ ಹಾಗೂ ಹಾರ್ಡ್ ಡಿಸ್ಕ್ ಎತ್ತಿಕೊಂಡು ಹೋಗಿದ್ದರು. ಅವರು ಅತ್ತ ಹೋಗುತ್ತಿದ್ದಂತೆ ಬೆಂಕಿ ಪೂರ್ತಿಯಾಗಿ ಹರಡಿ, ಸಿಲಿಂಡರ್ ಸ್ಫೋಟವಾಗಿತ್ತು. ಆದರೆ, ಸಿಸಿಟಿವಿ ವಿಡಿಯೋದಿಂದ ಪೊಲೀಸರಿಗೆ ಅವರ ಮೇಲೆ ಅನುಮಾನ ಬಂದಿತ್ತು. ಇದರಿಂದ ಅವರು ಮಾಡಿದ ಕೊಲೆ ಬಯಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:29 pm, Mon, 27 October 25




