Kiran Choudhry: ಹರಿಯಾಣ ಕಾಂಗ್ರೆಸ್ ಶಾಸಕಿ ಕಿರಣ್ ಚೌಧರಿ ಇಂದು ಬಿಜೆಪಿಗೆ ಸೇರ್ಪಡೆ
ಕಾಂಗ್ರೆಸ್ ನಾಯಕಿ ಮತ್ತು ಶಾಸಕಿ ಕಿರಣ್ ಚೌಧರಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ನಾಯಕರು ಒಬ್ಬ ವ್ಯಕ್ತಿ ಕೇಂದ್ರಿತರಾಗಿ ತಮ್ಮ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಕಿರಣ್ ಚೌಧರಿ ಆರೋಪಿಸಿದ್ದಾರೆ.
ನವದೆಹಲಿ: ಕಾಂಗ್ರೆಸ್ ನಾಯಕಿ ಹಾಗೂ ಶಾಸಕಿ ಕಿರಣ್ ಚೌಧರಿ (Kiran Choudhry) ಇಂದು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಅವರೊಂದಿಗೆ ಅವರ ಪುತ್ರಿಯಾಗಿರುವ ಮಾಜಿ ಸಂಸದೆ ಶ್ರುತಿ ಚೌಧರಿ ಕೂಡ ಬಿಜೆಪಿ ಸೇರಲಿದ್ದಾರೆ. ಇವರಿಬ್ಬರೂ ಇಂದು (ಬುಧವಾರ) ಬೆಳಗ್ಗೆ 11 ಗಂಟೆಗೆ ದೆಹಲಿಯಲ್ಲಿ ಬಿಜೆಪಿ (BJP) ಸೇರುವ ಸಾಧ್ಯತೆ ಇದೆ. ಕಿರಣ್ ಚೌಧರಿ ಹರಿಯಾಣದ ತೋಷಮ್ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದಾರೆ.
ಅವರು ತಮ್ಮ ಮಗಳಿಗೆ ಭಿವಾನಿ ಮಹೇಂದ್ರಗಢ ಕ್ಷೇತ್ರದಿಂದ ಕಾಂಗ್ರೆಸ್ ಲೋಕಸಭೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದರು. ಆದರೆ, ಕಾಂಗ್ರೆಸ್ ತಮ್ಮ ಮಗಳಿಗೆ ಟಿಕೆಟ್ ನೀಡದ ಕಾರಣದಿಂದಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಶಾಸಕ ರಾವ್ ದಾನ್ ಸಿಂಗ್ ಅವರನ್ನು ಮಹಿಂದರ್‌ಗಢ ಲೋಕಸಭೆಯಿಂದ ತನ್ನ ಅಭ್ಯರ್ಥಿಯನ್ನಾಗಿ ಮಾಡಿತ್ತು. ಆದರೆ, ಚುನಾವಣೆಯಲ್ಲಿ ಅವರು ಸೋತರು. ಅದರ ನಂತರ, ರಾವ್ ದಾನ್ ಸಿಂಗ್ ಅವರು ಕಿರಣ್ ಚೌಧರಿಯ ಹೆಸರನ್ನು ಹೇಳದೆ ಟೀಕಾ ಪ್ರಹಾರ ನಡೆಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಿರಣ್ ಚೌಧರಿ ಸರಿಯಾಗಿ ಟಿಕೆಟ್ ಹಂಚಿಕೆ ಮಾಡಿದ್ದರೆ ಇಲ್ಲಿಂದ ಕಾಂಗ್ರೆಸ್ ಗೆಲ್ಲಬಹುದಿತ್ತು ಎಂದಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಫ್ಯಾಮಿಲಿ ಬಿಸಿನೆಸ್; ವಯನಾಡಿನಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆಗೆ ಬಿಜೆಪಿ ಲೇವಡಿ
ಕಿರಣ್ ಚೌಧರಿ 2 ದಿನಗಳ ಹಿಂದೆ ಭಿವಾನಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ಪಕ್ಷ ತೊರೆಯುವ ಸುಳಿವು ನೀಡಿದ್ದರು. ಕಿರಣ್ ಪ್ರಭಾವಿ ರಾಜಕೀಯ ಕುಟುಂಬದಿಂದ ಬಂದವರು. ಆಕೆಯ ಮಾವ ಬನ್ಸಿ ಲಾಲ್ ಹರಿಯಾಣದ ಮುಖ್ಯಮಂತ್ರಿಯಾಗಿದ್ದರು. ಈಗಾಗಲೇ ಕಿರಣ್ ಚೌಧರಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಕಿರಣ್ ಚೌಧರಿ ಜೊತೆಗೆ ಅವರ ಪುತ್ರಿ ಶ್ರುತಿ ಚೌಧರಿ ಕೂಡ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಇದಲ್ಲದೆ, ಶ್ರುತಿ ಚೌಧರಿ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಪತ್ರದಲ್ಲಿ ಕಾಂಗ್ರೆಸ್ ಅನ್ನು ಗುರಿಯಾಗಿಸಿದ್ದಾರೆ. ಹರಿಯಾಣ ಕಾಂಗ್ರೆಸ್ ಏಕ ವ್ಯಕ್ತಿ ಕೇಂದ್ರಿತವಾಗಿದೆ, ಆದ್ದರಿಂದ ಪಕ್ಷದ ಹಿತಾಸಕ್ತಿಯೊಂದಿಗೆ ರಾಜಿ ಮಾಡಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ