20 ಜೆಡಿಎಸ್ ಶಾಸಕರ ಜೊತೆ ಹೈದರಾಬಾದ್​ಗೆ ತೆರಳಿದ ಹೆಚ್​ಡಿ ಕುಮಾರಸ್ವಾಮಿ; ಕೆಸಿಆರ್​ ಅವರ ಹೊಸ ಪಕ್ಷದ ಉದ್ಘಾಟನೆಯಲ್ಲಿ ಭಾಗಿ

ಜೆಡಿಎಸ್‌ ನಾಯಕ ಹೆಚ್​ಡಿ ಕುಮಾರಸ್ವಾಮಿ ಹಾಗೂ ಶಾಸಕರು ವಿಶೇಷ ವಿಮಾನದ ಮೂಲಕ ಹೈದರಾಬಾದ್‌ಗೆ ತೆರಳಿದ್ದಾರೆ. ಕೆಸಿಆರ್​ ಹೊಸ ಪಕ್ಷದ ಘೋಷಣೆಯ ಬಳಿಕ ಇಂದು ಸಂಜೆ ಹೆಚ್​ಡಿ ಕುಮಾರಸ್ವಾಮಿ ತಮ್ಮ ಶಾಸಕರೊಂದಿಗೆ ಬೆಂಗಳೂರಿಗೆ ವಾಪಾಸಾಗಲಿದ್ದಾರೆ.

20 ಜೆಡಿಎಸ್ ಶಾಸಕರ ಜೊತೆ ಹೈದರಾಬಾದ್​ಗೆ ತೆರಳಿದ ಹೆಚ್​ಡಿ ಕುಮಾರಸ್ವಾಮಿ; ಕೆಸಿಆರ್​ ಅವರ ಹೊಸ ಪಕ್ಷದ ಉದ್ಘಾಟನೆಯಲ್ಲಿ ಭಾಗಿ
ಹೈದರಾಬಾದ್​​ನಲ್ಲಿ ಹೆಚ್​ಡಿ ಕುಮಾರಸ್ವಾಮಿ ಅವರನ್ನು ಸ್ವಾಗತಿಸಿದ ಸಚಿವ ಕೆಟಿ ರಾಮರಾವ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Oct 05, 2022 | 5:25 PM

ಹೈದರಾಬಾದ್‌: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (ಕೆಸಿಆರ್​) ಅವರನ್ನು ಬೆಂಬಲಿಸಲು ಹಿರಿಯ ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ (HD Kumaraswamy) ತಮ್ಮ ಪಕ್ಷದ 20 ಶಾಸಕರೊಂದಿಗೆ ನಿನ್ನೆ (ಮಂಗಳವಾರ) ಬೆಂಗಳೂರಿನಿಂದ ಹೈದರಾಬಾದ್‌ಗೆ ತೆರಳಿದ್ದಾರೆ. ಇಂದು ಕೆಸಿಆರ್​ (KCR) ಅವರ ಹೊಸ ರಾಷ್ಟ್ರೀಯ ಪಕ್ಷ ಘೋಷಣೆಯಾಗಲಿದ್ದು, ಈ ಕಾರ್ಯಕ್ರಮದಲ್ಲಿ ಹೆಚ್​ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್​ (JDS) ಶಾಸಕರು ಪಾಲ್ಗೊಳ್ಳುವ ಮೂಲಕ ತಮ್ಮ ಬೆಂಬಲ ಸೂಚಿಸಲಿದ್ದಾರೆ.

ಈಗಿರುವ ಟಿಆರ್‌ಎಸ್ ಪಕ್ಷವನ್ನೇ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂದು ಮುಖ್ಯಮಂತ್ರಿ ಕೆಸಿಆರ್​ ಮರುನಾಮಕರಣ ಮಾಡಲಿದ್ದಾರೆ ಎಂದು ಟಿಆರ್​ಎಸ್​ ಪಕ್ಷದ ಮೂಲಗಳು ತಿಳಿಸಿವೆ. ಜೆಡಿಎಸ್‌ ನಾಯಕ ಹೆಚ್​ಡಿ ಕುಮಾರಸ್ವಾಮಿ ಹಾಗೂ ಶಾಸಕರು ಮಂಗಳವಾರ ವಿಶೇಷ ವಿಮಾನದ ಮೂಲಕ ಹೈದರಾಬಾದ್‌ಗೆ ತೆರಳಿದ್ದಾರೆ. ಕೆಸಿಆರ್​ ಹೊಸ ಪಕ್ಷದ ಘೋಷಣೆಯ ಬಳಿಕ ಇಂದು ಸಂಜೆ ಹೆಚ್​ಡಿ ಕುಮಾರಸ್ವಾಮಿ ತಮ್ಮ ಶಾಸಕರೊಂದಿಗೆ ಬೆಂಗಳೂರಿಗೆ ವಾಪಾಸಾಗಲಿದ್ದಾರೆ.

ಇದನ್ನೂ ಓದಿ: Telangana: ಇಂದು ತೆಲಂಗಾಣ ಸಿಎಂ ಕೆಸಿಆರ್​ ಹೊಸ ರಾಷ್ಟ್ರೀಯ ಪಕ್ಷ ಘೋಷಣೆ

ಹೆಚ್ ಡಿ ಕುಮಾರಸ್ವಾಮಿ ಜೊತೆ ಜೆಡಿಎಸ್ ಶಾಸಕರಾದ ಎಚ್ ಡಿ ರೇವಣ್ಣ, ಸಾ.ರಾ ಮಹೇಶ್ ಹಾಗೂ ನಿಖಿಲ್ ಕುಮಾರಸ್ವಾಮಿ ಮುಂತಾದವರು ಹೈದರಾಬಾದ್​ಗೆ ತೆರಳಿದ್ದಾರೆ. ಟಿಆರ್‌ಎಸ್ ಅಧ್ಯಕ್ಷ ಕೆಸಿಆರ್ ಕಳೆದ ಮೇ ತಿಂಗಳಲ್ಲಿ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಹೆಚ್‌ಡಿ ದೇವೇಗೌಡ ಮತ್ತು ಅವರ ಪುತ್ರ ಹೆಚ್​ಡಿ ಕುಮಾರಸ್ವಾಮಿ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ತಮ್ಮ ಹೊಸ ಪಕ್ಷದ ಬಗ್ಗೆ ಚರ್ಚೆ ನಡೆಸಿದ್ದರು. ಕುಮಾರಸ್ವಾಮಿ ಅವರು ಕೂಡ ಇತ್ತೀಚೆಗೆ ಹೈದರಾಬಾದ್‌ಗೆ ಭೇಟಿ ನೀಡಿ ಕೆಸಿಆರ್​ ಜೊತೆ ಸಂವಾದ ನಡೆಸಿದ್ದರು.

2024ರ ಲೋಕಸಭೆ ಚುನಾವಣೆಗೆ ಕೆಸಿಆರ್​ ಅವರ ಹೊಸ ಪಕ್ಷವು ಹಲವು ರಾಜ್ಯಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಟಿಆರ್‌ಎಸ್ ಮೂಲಗಳು ತಿಳಿಸಿವೆ. ಹೊಸ ಪಕ್ಷದ ಪ್ರಾರಂಭಕ್ಕೆ ಇಂದು ಮಧ್ಯಾಹ್ನ 1.19ಕ್ಕೆ ಶುಭ ಮುಹೂರ್ತವನ್ನು ನಿಗದಿಪಡಿಸಲಾಗಿದೆ. ಹೊಸ ಪಕ್ಷವನ್ನು ಭಾರತೀಯ ರಾಷ್ಟ್ರ ಸಮಿತಿ ಎಂದು ಕರೆಯುವ ಸಾಧ್ಯತೆಯಿದೆ. ಭಾನುವಾರ ತೆಲಂಗಾಣದ ಮುಖ್ಯಮಂತ್ರಿ ಕೆಸಿಆರ್ ತಮ್ಮ ಸಂಪುಟ ಸಹೋದ್ಯೋಗಿಗಳು ಮತ್ತು ಪಕ್ಷದ ಎಲ್ಲಾ 33 ಜಿಲ್ಲಾಧ್ಯಕ್ಷರೊಂದಿಗೆ ಉಪಾಹಾರ ಕೂಟವನ್ನು ನಡೆಸಿದರು. ಈ ವೇಳೆ ಕೆಸಿಆರ್ ರಾಷ್ಟ್ರೀಯ ಪಕ್ಷ ಆರಂಭಿಸುವ ಮಾರ್ಗಸೂಚಿ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Big News: ನನ್ನ ತಂದೆಯನ್ನು ಕುತಂತ್ರದಿಂದ ಕೊಲ್ಲಲಾಯಿತು; ಕೆಸಿಆರ್​ ವಿರುದ್ಧ ವೈಎಸ್​ಆರ್ ಪುತ್ರಿ ಶರ್ಮಿಳಾ ಗಂಭೀರ ಆರೋಪ

ಕೆಸಿಆರ್​ ಅವರ ಹೊಸ ಪಕ್ಷವು ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ದೆಹಲಿಯ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಹಾಗೇ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೆಸಿಆರ್ ನೇತೃತ್ವದ ಬಿಆರ್‌ಎಸ್ ಪಕ್ಷವು ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ಇತರ ಕೆಲವು ರಾಜ್ಯಗಳ 100 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ.

ಹೈದರಾಬಾದ್‌ನಲ್ಲಿ ನಡೆಯಲಿರುವ ಸಭೆಯ ನಂತರ ಕೆಸಿಆರ್ ತಮ್ಮ ಪಕ್ಷದ ಕಾರ್ಯಸೂಚಿಯನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ. ಸಂಸತ್ತಿನ ಮತ್ತು ವಿಧಾನಸಭೆಯ ಚುನಾಯಿತ ಸದಸ್ಯರು, ವಿಧಾನ ಪರಿಷತ್ತಿನ ಸದಸ್ಯರು, ಜಿಲ್ಲಾ ಪರಿಷತ್ತಿನ ಅಧ್ಯಕ್ಷರು, ಮೇಯರ್‌ಗಳು ಮತ್ತು ಪುರಸಭೆಯ ಅಧ್ಯಕ್ಷರು ಸೇರಿ 283 ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 12:31 pm, Wed, 5 October 22