AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಪ್ತಪದಿ ಸೇರಿ ಸಂಪ್ರದಾಯಬದ್ಧ ವಿಧಿ-ವಿಧಾನಗಳಿಲ್ಲದ ಹಿಂದೂ ವಿವಾಹ ಮಾನ್ಯವಲ್ಲ: ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು

ಸಪ್ತಪದಿ ಸೇರಿದಂತೆ ಸಾಂಪ್ರದಾಯಿಕ ವಿಧಿ-ವಿಧಾನಗಳಿಲ್ಲದ ಹಿಂದೂ ವಿವಾಹ ಮಾನ್ಯವಲ್ಲ ಎಂದು ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕೇವಲ ವಿವಾಹ ನೋಂದಣಿ ಮಾಡಿಸುವುದರಿಂದ ಮದುವೆ ಕಾನೂನುಬದ್ಧವಾಗುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಹಿಂದೂ ವಿವಾಹವು ಸಂಪ್ರದಾಯಬದ್ಧ ವಿಧಿ-ವಿಧಾನಗಳ ಪ್ರಕಾರ ನೆರವೇರಬೇಕು. ವಿಶೇಷವಾಗಿ ಸಪ್ತಪದಿ ಹಿಂದೂ ವಿವಾಹದ ಪ್ರಮುಖ ಮತ್ತು ಅವಿಭಾಜ್ಯ ಅಂಗವಾಗಿದೆ. ಈ ವಿಧಿ ನೆರವೇರಿದಾಗ ಮಾತ್ರ ವಿವಾಹವು ಧಾರ್ಮಿಕ, ಸಾಮಾಜಿಕ ಮತ್ತು ಕಾನೂನುಬದ್ಧ ಮಾನ್ಯತೆ ಪಡೆಯುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಸಪ್ತಪದಿ ಸೇರಿ ಸಂಪ್ರದಾಯಬದ್ಧ ವಿಧಿ-ವಿಧಾನಗಳಿಲ್ಲದ ಹಿಂದೂ ವಿವಾಹ ಮಾನ್ಯವಲ್ಲ: ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು
ಸಾಂದರ್ಭಿಕ ಚಿತ್ರImage Credit source: Getty Images
ಪ್ರಸನ್ನ ಹೆಗಡೆ
|

Updated on: Jul 01, 2026 | 2:28 PM

Share

ಅಹಮದಾಬಾದ್, ಜುಲೈ 01: ಕೇವಲ ವಿವಾಹ ನೋಂದಣಿ ಮಾಡಿಸಿಕೊಂಡರೆ ಮಾತ್ರ ಹಿಂದೂ ವಿವಾಹ ಕಾನೂನುಬದ್ಧವಾಗುವುದಿಲ್ಲ. ಸಪ್ತಪದಿ ಸೇರಿದಂತೆ ಹಿಂದೂ ಸಂಪ್ರದಾಯದ ಅಗತ್ಯ ವಿಧಿ-ವಿಧಾನಗಳು ನೆರವೇರಿದಾಗ ಮಾತ್ರ ವಿವಾಹ ಮಾನ್ಯವಾಗುತ್ತದೆ ಎಂದು ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಜೂನ್ 23ರಂದು ನೀಡಿದ ತೀರ್ಪಿನಲ್ಲಿ ನ್ಯಾಯಮೂರ್ತಿಗಳಾದ ಇಲೇಶ್ ವೋರಾ ಮತ್ತು ಆರ್.ಟಿ. ವಚ್ಛಾನಿ ಅವರ ವಿಭಾಗೀಯ ಪೀಠ, ಹಿಂದೂ ವಿವಾಹವು ಕೇವಲ ಔಪಚಾರಿಕ ಕಾರ್ಯಕ್ರಮವಲ್ಲ, ಅದು ಧಾರ್ಮಿಕ ಸಂಸ್ಕಾರ ಮತ್ತು ಪವಿತ್ರ ಬಂಧವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಪ್ರಕರಣ ಏನು?

ಬ್ರಿಟನ್‌ನಲ್ಲಿ ನೆಲೆಸಿರುವ ಕೌಶಲ್ ಸೋನಾರ್ ಅವರು, ಅಹಮದಾಬಾದ್‌ನ ಮಹಿಳೆಯೊಬ್ಬರೊಂದಿಗೆ ತನ್ನ ವಿವಾಹ ನಡೆದಿದೆ ಎಂಬುದನ್ನು ಅಮಾನ್ಯ ಎಂದು ಘೋಷಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ತನ್ನ ಪೋಷಕರಿಗೆ ವಿವಾಹ ಪ್ರಮಾಣಪತ್ರ ತೋರಿಸಿ ಮಹಿಳೆ ತಾನು ಕಾನೂನುಬದ್ಧ ಪತ್ನಿ ಎಂದು ಹೇಳಿದಾಗ ಮಾತ್ರ ಈ ವಿಷಯ ತಿಳಿದಿದೆ. ಅಲ್ಲದೆ, ತಮ್ಮ ಒಪ್ಪಿಗೆಯಿಲ್ಲದೆ ವಿವಾಹ ದಾಖಲೆಗಳಲ್ಲಿ ಸಹಿ ಪಡೆಯಲಾಗಿದೆ. ಯಾವುದೇ ಹಿಂದೂ ಸಂಪ್ರದಾಯದ ವಿಧಿ-ವಿಧಾನಗಳು ನಡೆದಿಲ್ಲ ಹಾಗೂ ಪತಿ-ಪತ್ನಿಯಾಗಿ ಎಂದಿಗೂ ಒಟ್ಟಿಗೆ ವಾಸಿಸಿಲ್ಲ ಎಂದು ಅವರು ವಾದಿಸಿದ್ದರು.

ಇದನ್ನೂ ಓದಿ: ಮದ್ರಾಸ್ ಹೈಕೋರ್ಟ್​​ನ ಗೋಹತ್ಯೆ ನಿಷೇಧ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ಸರ್ಕಾರ

ಹೈಕೋರ್ಟ್ ಅಭಿಪ್ರಾಯ

ಯಾವುದೇ ವಿವಾಹ ವಿಧಿ-ವಿಧಾನಗಳು ನಡೆದಿಲ್ಲ ಹಾಗೂ ಇಬ್ಬರೂ ಪತಿ-ಪತ್ನಿಯಾಗಿ ಬದುಕಿಲ್ಲ ಎಂದು ಮಹಿಳೆಯೇ ಕುಟುಂಬ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದರೂ, ಅರ್ಜಿಯನ್ನು ತಿರಸ್ಕರಿಸಿದ್ದ ಕುಟುಂಬ ನ್ಯಾಯಾಲಯದ ಆದೇಶ ತಪ್ಪಾಗಿದೆ ಎಂದು ಹೈಕೋರ್ಟ್ ಹೇಳಿದೆ. ಹಿಂದೂ ವಿವಾಹ ಕಾಯ್ದೆ, 1955ರ ಸೆಕ್ಷನ್ 7 ಅನ್ನು ನ್ಯಾಯಾಲಯವು ಉಲ್ಲೇಖಿಸಿದ್ದು, ಹಿಂದೂ ವಿವಾಹವು ಸಂಪ್ರದಾಯಬದ್ಧ ವಿಧಿ-ವಿಧಾನಗಳ ಪ್ರಕಾರ ನೆರವೇರಬೇಕು. ವಿಶೇಷವಾಗಿ ಸಪ್ತಪದಿ ಹಿಂದೂ ವಿವಾಹದ ಪ್ರಮುಖ ಮತ್ತು ಅವಿಭಾಜ್ಯ ಅಂಗವಾಗಿದೆ. ಈ ವಿಧಿ ನೆರವೇರಿದಾಗ ಮಾತ್ರ ವಿವಾಹವು ಧಾರ್ಮಿಕ, ಸಾಮಾಜಿಕ ಮತ್ತು ಕಾನೂನುಬದ್ಧ ಮಾನ್ಯತೆ ಪಡೆಯುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

‘ಹಾಡು-ನೃತ್ಯಕ್ಕಷ್ಟೇ ಮದುವೆ ಸೀಮಿತವಲ್ಲ’

ಹಿಂದೂ ವಿವಾಹವು ಕೇವಲ ಹಾಡು, ನೃತ್ಯ, ಔತಣಕೂಟ ಅಥವಾ ವಾಣಿಜ್ಯ ವ್ಯವಹಾರವಲ್ಲ. ಅದು ಇಬ್ಬರು ವ್ಯಕ್ತಿಗಳು ಜೀವನಪರ್ಯಂತ ಸಮಾನತೆ, ಪರಸ್ಪರ ಒಪ್ಪಿಗೆ, ಗೌರವ ಮತ್ತು ಆರೋಗ್ಯಕರ ಸಂಬಂಧದೊಂದಿಗೆ ಕುಟುಂಬ ಕಟ್ಟುವ ಪವಿತ್ರ ಸಂಸ್ಥೆಯಾಗಿದೆ ಎಂದು ಹೈಕೋರ್ಟ್ ತಿಳಿಸಿದೆ. ಹಿಂದೂ ಸಂಪ್ರದಾಯದಲ್ಲಿ ಪತ್ನಿಯನ್ನು ‘ಅರ್ಧಾಂಗಿ’ ಎಂದು ಪರಿಗಣಿಸಲಾಗುತ್ತದೆ. ವಿವಾಹವು ಹೊಸ ಕುಟುಂಬದ ಅಡಿಪಾಯವಾಗಿದ್ದು, ಧಾರ್ಮಿಕ ಸಂಸ್ಕಾರ ಎಂಬ ಸ್ಥಾನಮಾನ ಹೊಂದಿದೆ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿದೆ ಎಂದು ಎನ್​​ಡಿಟಿವಿ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us