Cocaine in Mumbai: ಮುಂಬೈಗೆ ಮಾದಕ ವಸ್ತುಗಳು ಹೊಸತಲ್ಲ, ಕೊಕೇನ್ ಬಳಕೆಗೆ ಇದೆ ಶತಮಾನದ ಇತಿಹಾಸ
ಸುಮಾರು ಒಂದು ಶತಮಾನಗಳಷ್ಟು ಹಿಂದೆಯೇ ಮುಂಬೈನಲ್ಲಿ ಡ್ರಗ್ಸ್ ಪಿಡುಗು ಆವರಿಸಿಕೊಳ್ಳಲು ಆರಂಭಿಸಿತ್ತು
ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನದ ನಂತರ ಮುಂಬೈನಲ್ಲಿ ಡ್ರಗ್ಸ್ ದಂಧೆಯ ಬಗ್ಗೆ ಎಲ್ಲರ ಗಮನ ನೆಟ್ಟಿದೆ. ಆದರೆ ಮುಂಬೈ ನಗರಿಗೆ ಡ್ರಗ್ಸ್ ದಂಧೆ ಹೊಸದಲ್ಲ. ಸುಮಾರು ಒಂದು ಶತಮಾನದಷ್ಟು ಹಿಂದೆಯೇ ಮುಂಬೈನಲ್ಲಿ ಡ್ರಗ್ಸ್ ಪಿಡುಗು ಆವರಿಸಿಕೊಳ್ಳಲು ಆರಂಭಿಸಿತ್ತು. ಹಲವು ಬಗೆಯ ಮಾದಕ ವಸ್ತುಗಳು ಲಭ್ಯವಿತ್ತಾದರೂ ಕೊಕೇನ್ಗೆ ದಾಸರಾದವರ ಸಂಖ್ಯೆ ಹೆಚ್ಚಾಗಿತ್ತು. ಕೊಕಾ ಎಲೆಗಳಿಂದ ಕೊಕೇನ್ ತಯಾರಾಗುತ್ತಿತ್ತು.
ಕೊಕೇನ್ ಹೆಚ್ಚು ಬೇಡಿಕೆ ಪಡೆದುಕೊಳ್ಳುವ ಮೊದಲು ಗಾಂಜಾ ಬಳಕೆ ಹೆಚ್ಚಾಗಿ ಕಂಡು ಬರುತ್ತಿತ್ತು. ಗಾಂಜಾ ಸೇದಲೆಂದೇ ರೂಪಿಸಿದ ಗುಡಿಸಲು ಅಥವಾ ಮದಕ್ ಮನೆಗಳು ಮುಂಬೈನಲ್ಲಿ ಕಂಡು ಬರುತ್ತಿದ್ದವು. ಕಡಿಮೆ ಘಾಟಿನ ಗಾಂಜಾ ಸೇವನೆಗೆ ಮದಕ್ ಮತ್ತು ಹೆಚ್ಚು ಘಾಟಿನ ಗಾಂಜಾ ಸೇವನೆಗೆ ಚಂಡು ಎಂದು ಕರೆಯುತ್ತಿದ್ದರು. ಈ ಎರಡೂ ರೂಪಗಳಲ್ಲಿ ಗಾಂಜಾ ಸೇವನೆ ಚಾಲ್ತಿಯಲ್ಲಿತ್ತು.
ಭಾರತದಲ್ಲಿ ಗಾಂಜಾ ಸೇವನೆಯ ಬಗ್ಗೆ ವಿಚಾರಣೆ ನಡೆಸಲು 1893ರಲ್ಲಿ ಬ್ರಿಟಿಷ್ ಸರ್ಕಾರವು ಸಂಸದೀಯ ಆಯೋಗವನ್ನು ರಚಿಸಿತ್ತು. ವೈದ್ಯಕೀಯ ಕಾರಣಗಳು ಹೊರತುಪಡಿಸಿ, ಇತರೆಲ್ಲ ವಿಧಾನಗಳ ಗಾಂಜಾ ಸೇವನೆಯನ್ನು ರದ್ದುಪಡಿಸಬೇಕೆಂದು ಈ ಆಯೋಗವು ಶಿಫಾರಸು ಮಾಡಿತ್ತು. ಈ ಶಿಫಾರಸಿನ ಆಧಾರದ ಮೇಲೆ ಅದೇ ವರ್ಷ ಸ್ಥಳೀಯ ಆಡಳಿತವು ಗಾಂಜಾ ಸೇವನೆಗೆಂದು ಹುಟ್ಟಿಕೊಂಡಿದ್ದ ಗುಡಿಸಲುಗಳನ್ನು ತೆರವುಗೊಳಿಸಿತು.
ಬಾಂಬೆಯಲ್ಲಿ 1909ರಿಂದ 1916ರ ಅವಧಿಯಲ್ಲಿ ಪೊಲೀಸ್ ಕಮಿಷನರ್ ಆಗಿದ್ದ ಎಸ್.ಎಂ.ಎಡ್ವರ್ಡ್ಸ್ ಬಾಂಬೆ ಪೊಲೀಸರ ಬಗ್ಗೆ ಬರೆದಿರುವ ಪುಸ್ತಕದಲ್ಲಿ ಮಾದಕ ವ್ಯಸನದ ಬಗ್ಗೆ ಪ್ರಸ್ತಾಪಿಸಿದ್ದಾರೆ. ‘ಗಾಂಜಾ ಸೇವನೆಯನ್ನು ಕಾನೂನು ಮತ್ತು ಕಟ್ಟಳೆಗಳ ಮೂಲಕ ಸಂಪೂರ್ಣವಾಗಿ ನಿರ್ಬಂಧಿಸಲು ಆಗುವುದಿಲ್ಲ. ಮಾದಕ ವಸ್ತು ಪೂರೈಕೆಯನ್ನು ಏಕಾಏಕಿ ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಳಿಸಿದರೆ ಚಟಕ್ಕೆ ದಾಸರಾದವರು ಇನ್ನಷ್ಟು ಹಾನಿಕಾರಕ ವಿಧಾನಗಳನ್ನು ಆವಿಷ್ಕರಿಸಲು ಮುಂದಾಗುತ್ತಾರೆ. ಮುಂಬೈನಲ್ಲಿ ಗಾಂಜಾ ಅಂಗಡಿಗಳನ್ನು ಮುಚ್ಚಿಸಿದ ನಂತರ ಕುಡಿತದ ಪ್ರಮಾಣ ಹೆಚ್ಚಾಯಿತು. ನಂತರದ ವರ್ಷಗಳಲ್ಲಿ ಗಾಂಜಾಕ್ಕಿಂತಲೂ ಹಾನಿಕಾರಕ ಎನಿಸಿದ ಕೊಕೇನ್ ಬಳಸುವವರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂತು ಎಂದು ಅವರು ಹೇಳುತ್ತಾರೆ.
1909ರ ಹೊತ್ತಿಗೆ ಕೊಕೇನ್ ಸೇವನೆಯ ಪಿಡುಗು ಬಾಂಬೆಯಲ್ಲಿ ವ್ಯಾಪಿಸಿತು. ಸಮಾಜದ ಕೆಳ ವರ್ಗಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸಹ ಕೊಕೇನ್ ಸೇವನೆಗೆ ದಾಸರಾಗಿದ್ದುದು ಕಂಡು ಬರುತ್ತಿತ್ತು. 1909ಕ್ಕೂ ಮೊದಲಿನಿಂದಲೇ ವೈದ್ಯಕೀಯ ಬಳಕೆಗಾಗಿ ಕೊಕೇನ್ ಸೇವಿಸಲು ಅವಕಾಶವಿತ್ತು. ಸಾಮಾನ್ಯ ನೆಗಡಿಯಿಂದ ಗಾಂಜಾ ವ್ಯಸನ ಮುಕ್ತಗೊಳಿಸುವವರೆಗೆ ಹಲವು ಉದ್ದೇಶಗಳಿಗೆ ಕೊಕೇನ್ ಬಳಸಲು ಅವಕಾಶವಿತ್ತು.
ಸಾಮಾನ್ಯವಾಗಿ ಅಂದಿನ ಜನರು ಎಲೆ-ಅಡಿಕೆಯೊಂದಿಗೆ ಕೊನೇನ್ ಬೆರೆಸಿ ಸೇವಿಸುತ್ತಿದ್ದರು. ‘ಬಾಂಬೆಯ ಜೈಲುಗಳಲ್ಲಿ ವೈದ್ಯಾಧಿಕಾರಿಗೆ ಪ್ರತಿದಿನ ಒಬ್ಬರಲ್ಲ ಒಬ್ಬರು ಕೊಕೇನ್ ಸೇವಿಸುವ, ಕೊಕೇನ್ ಇರಿಸಿಕೊಂಡಿರುವ ಅಥವಾ ಮಾರುತ್ತಿರುವ ವ್ಯಕ್ತಿಗಳು ಸಿಗುತ್ತಲೇ ಇದ್ದರು ಎಂದು 1914ರ ಇಂಡಿಯನ್ ಮೆಡಿಕಲ್ ಗೆಜೆಟ್ನಲ್ಲಿ ಬಾಂಬೆ ಪ್ರೆಸಿಡೆನ್ಸಿಯ ಸರ್ಜನ್ ಆಗಿದ್ದ ಮೇಜರ್ ಎ.ಡಬ್ಲ್ಯು.ಟ್ಯುಕ್ ದಾಖಲಿಸಿದ್ದಾರೆ. ಅಂದಿನ ದಿನಗಳಲ್ಲಿ ಬಾಂಬೆಗೆ ಜರ್ಮನಿಯಿಂದ ಕೊಕೇನ್ ಕಳ್ಳ ಮಾರ್ಗಗಳಲ್ಲಿ ಬರುತ್ತಿತ್ತು. ಕೊಕೇನ್ಗೆ ಮರ್ಕ್ ಎಂಬ ಅಡ್ಡಹೆಸರು ಇತ್ತು. ಇಂದಿನ ಭುಲೇಶ್ವರದಲ್ಲಿರುವ ನಲ್ ಬಜಾರ್ ಅಂದು ಮಾದಕ ವಸ್ತು ದಂಧೆಯ ಕೇಂದ್ರ ಎನಿಸಿತ್ತು. ಮಾದಕದ್ರವ್ಯ ಸೇವನೆಯ ಬಹುತೇಕ ಪ್ರಕರಣಗಳು ಇಲ್ಲಿಯೇ ದಾಖಲಾಗುತ್ತಿದ್ದವು.
20ನೇ ಶತಮಾನದ ಆರಂಭದಲ್ಲಿಯೂ ಮಾದಕ ದ್ರವ್ಯ ನಿಯಂತ್ರಣಕ್ಕಾಗಿ ಎರಡು ಪ್ರತ್ಯೇಕ ಸರ್ಕಾರಿ ಸಂಸ್ಥೆಗಳು ಕೆಲಸ ಮಾಡುತ್ತಿದ್ದವು. ಡ್ರಗ್ಸ್ ವ್ಯಾಪಾರ ನಿಯಂತ್ರಣಕ್ಕಾಗಿ ಪೊಲೀಸರೊಂದಿಗೆ ಅಬಕಾರಿ ಇಲಾಖೆಯ ಸಾಕಷ್ಟು ಸಿಬ್ಬಂದಿ ಶ್ರಮಿಸುತ್ತಿದ್ದರು. ಅಂದಿನ ಬಾಂಬೆ ಪ್ರೆಸಿಡೆನ್ಸಿಯ ಕಲೆಕ್ಟರ್ಗೆ ಇವರು ನೇರವಾಗಿ ವರದಿ ಮಾಡಿಕೊಳ್ಳುತ್ತಿದ್ದರು. ಬಾಂಬೆ ಪೊಲೀಸರು 1911ರಲ್ಲಿ ಮಾದಕ ದ್ರವ್ಯ ವಹಿವಾಟು ನಿರ್ಬಂಧಿಸಲು ವಿಶೇಷ ಕಾರ್ಯಾಚರಣೆ ನಡೆಸಿದ್ದರು. ಓರ್ವ ಐರೋಪ್ಯ ಇನ್ಸ್ಪೆಕ್ಟರ್ ಹಾಗೂ ಕೆಲ ಕಾನ್ಸ್ಟೆಬಲ್ ಸಿಬ್ಬಂದಿಯನ್ನು ಈ ಕಾರ್ಯಕ್ಕಾಗಿ ನಿಯೋಜಿಸಿದ್ದರು. ಭುಲೇಶ್ವರ, ನಲ್ ಬಜಾರ್ ಮತ್ತು ದೊಭಿ ತಲಾಬ್ ಪ್ರದೇಶದಲ್ಲಿ ಸುಮಾರು 2 ತಿಂಗಳು ಕಾರ್ಯಾಚರಣೆ ನಡೆಸಿದ್ದ ಈ ವಿಶೇಷ ತಂಡವು ಸುಮಾರು 600 ವ್ಯಕ್ತಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಹಲವರಿಗೆ ಶಿಕ್ಷೆಯೂ ಆಗಿತ್ತು.
ಅವಧಿಯಲ್ಲಿ ನಗರಕ್ಕೆ ಕೊಕೇನ್ ತರಲು ಕಳ್ಳಸಾಗಣೆದಾರರು ಹಲವು ಹೊಸ ದಾರಿಗಳನ್ನು ಕಂಡುಕೊಂಡಿದ್ದರು. 1911ರಲ್ಲಿ ನಡೆದ ಇಂಥದ್ದೇ ಪ್ರಯತ್ನವೊಂದು ಮುಂಬೈ ಇತಿಹಾಸದಲ್ಲಿ ದಾಖಲಾಗಿದೆ. ಹಡಗಿನಲ್ಲಿ ಕೆಲಸ ಮಾಡುತ್ತಿದ್ದ ಆಸ್ಟ್ರಿಯನ್ ನಾಗರಿಕನೊಬ್ಬ ತನ್ನ ಬೂಟಿನ ಸೋಲ್ನಲ್ಲಿ ಕೊಕೇನ್ ಅಡಗಿಸಿಟ್ಟುಕೊಂಡು ನಗರ ಪ್ರವೇಶಿಸಲು ಯತ್ನಿಸಿದ್ದ.
1912-13ರಲ್ಲಿ ಕೊಕೇನ್ ತುಂಬಿದ್ದ ಎರಡು ದೊಡ್ಡ ಕಸೈನ್ಮೆಂಟ್ಗಳನ್ನೇ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಈ ಕಸೈನ್ಮೆಂಟ್ಗಳಲ್ಲಿದ್ದ ಕೊಕೇನ್ನ ಮೊತ್ತ ಸುಮಾರು ₹ 45,500 ಹಾಗೂ ₹ 17,000 ಎಂದು ಅಂದಾಜಿಸಲಾಗಿತ್ತು. ಕಸೈನ್ಮೆಂಟ್ ವಶಪಡಿಸಿಕೊಂಡ ವಿದ್ಯಮಾನವು ಸ್ಥಳೀಯ ಮಾದಕದ್ರವ್ಯ ಮಾರುಕಟ್ಟೆಯಲ್ಲಿ ಸಂಚಲನವನ್ನೇ ಮೂಡಿಸಿತ್ತು. ಆದರೆ ನಂತರದ ದಿನಗಳಲ್ಲಿ ಕೊಕೇನ್ ಬದಲಿಗೆ ಮ್ಯಾಗ್ನೇಶಿಯಾ ಮತ್ತು ಎಪ್ಸೊಮ್ ಉಪ್ಪನ್ನು ಬಳಕೆದಾರರಿಗೆ ಒದಗಿಸಲು ಆರಂಭಿಸಿದರು. 1914ರಲ್ಲಿ ಮೊದಲ ಮಹಾಯುದ್ಧ ಶುರುವಾದ ನಂತರ ಕೊಕೇನ್ ಸಾಗಣೆ ಮತ್ತಷ್ಟು ಕಷ್ಟವಾಯಿತು. ಯುರೋಪ್ನಿಂದ ಪೌರ್ವಾತ್ಯ ದೇಶಗಳಿಗೆ ಸರಕು ಸಾಗಿಸುತ್ತಿದ್ದ ಖಂಡಾಂತರ ಉಗಿ ಹಡಗುಗಳು ಸ್ಥಗಿತಗೊಂಡವು. ಆದರೆ ಇದು ಹೆಚ್ಚು ದಿನ ಮುಂದುವರಿಯಲಿಲ್ಲ. 1930ರಿಂದ ಮತ್ತೆ ಮುಂಬೈಗೆ ಮಾದಕ ದ್ರವ್ಯಗಳು ಬರುವುದು ಶುರುವಾಯಿತು.
(ಡ್ರಗ್ಸ್ ತೆಗೆದುಕೊಳ್ಳುವುದನ್ನು ಸಮರ್ಥಿಸುವುದು ಅಥವಾ ಡ್ರಗ್ಸ್ ವಿರುದ್ಧ ರೇಡ್ ಮಾಡಿದ್ದನ್ನು ತಪ್ಪು ಎಂದು ಹೇಳುವುದು ಈ ಲೇಖನದ ಉದ್ದೇಶ ಅಲ್ಲ. ಇತಿಹಾಸ ಈ ರೀತಿ ಇತ್ತು ಎಂದು ಹೇಳುವುದು ಮಾತ್ರ ನಮ್ಮ ಉದ್ದೇಶ)
ಇದನ್ನೂ ಓದಿ: ‘ಖಾನ್ ಎಂಬ ಒಂದೇ ಕಾರಣಕ್ಕೆ ಅವರು ಟಾರ್ಗೆಟ್ ಆಗಿದ್ದಾರೆ..‘-ಡ್ರಗ್ಸ್ ಕೇಸ್ ಬಗ್ಗೆ ಮೆಹಬೂಬ್ ಮುಫ್ತಿ ಹೇಳಿಕೆ ಇದನ್ನೂ ಓದಿ: ‘ಅದಾನಿ ಬಂದರು ಡ್ರಗ್ಸ್ ಮತ್ತು ರೈತರ ಕೊಲೆ ಮರೆಮಾಚಲು ಶಾರುಖ್ ಮಗ ಟಾರ್ಗೆಟ್’: ವಿಶಾಲ್ ದದ್ಲಾನಿ
Published On - 5:25 pm, Mon, 11 October 21