AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಹಲ್ಗಾಮ್ ದಾಳಿಯಿಂದ ಹೆಚ್ಚಿದ ಉದ್ವಿಗ್ನತೆ; ರಾಜಸ್ಥಾನ ಗಡಿಯ ಬಂಕರ್​ಗಳಲ್ಲಿ ಪಾಕಿಸ್ತಾನದ ಸೇನೆ ನಿಯೋಜನೆ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ರಾಜಸ್ಥಾನದ ಗಡಿಯ ಬಳಿಯ ಬಂಕರ್‌ಗಳಲ್ಲಿಯೇ ಪಾಕಿಸ್ತಾನ ತನ್ನ ಸೇನೆಯನ್ನು ಇರಲು ಸೂಚಿಸಿದೆ. ಭಾರತ ಪಹಲ್ಗಾಮ್​ನಲ್ಲಿ ದಾಳಿ ನಡೆಸಿದ ಉಗ್ರರಿಗಾಗಿ ಇನ್ನೂ ಶೋಧ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಹಾಗೇ, ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳೊಂದಿಗೆ ಸಂಬಂಧ ಹೊಂದಿರುವ ಸ್ಥಳೀಯ ಉಗ್ರರನ್ನು ಗುರುತಿಸುತ್ತಿದೆ.

ಪಹಲ್ಗಾಮ್ ದಾಳಿಯಿಂದ ಹೆಚ್ಚಿದ ಉದ್ವಿಗ್ನತೆ; ರಾಜಸ್ಥಾನ ಗಡಿಯ ಬಂಕರ್​ಗಳಲ್ಲಿ ಪಾಕಿಸ್ತಾನದ ಸೇನೆ ನಿಯೋಜನೆ
Representative Image
ಸುಷ್ಮಾ ಚಕ್ರೆ
|

Updated on: Apr 26, 2025 | 8:02 PM

Share

ಜೈಪುರ, ಏಪ್ರಿಲ್ 26: ರಾಜಸ್ಥಾನದ ಗಡಿಯಲ್ಲಿ ಒಂದು ಪ್ರಮುಖ ಬೆಳವಣಿಗೆ ನಡೆದಿದೆ. ಪಹಲ್ಗಾಮ್ ಉಗ್ರರ ದಾಳಿಯಿಂದ ಈ ಪ್ರದೇಶದಲ್ಲಿ ಕೂಡ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಪಾಕಿಸ್ತಾನ (Pakistan) ತನ್ನ ಮಿಲಿಟರಿಗೆ ಬಂಕರ್‌ಗಳಲ್ಲಿಯೇ ಇರಲು ಸೂಚಿಸಿದೆ ಎಂದು ವರದಿಯಾಗಿದೆ. ಹೆಚ್ಚಿನ ಭದ್ರತಾ ಕ್ರಮಗಳ ಭಾಗವಾಗಿ ಪಾಕಿಸ್ತಾನಿ ರೇಂಜರ್‌ಗಳು ಮತ್ತು ಗಡಿ ಕ್ರಿಯಾ ತಂಡ (ಬಿಎಟಿ)ವನ್ನು ಈ ಬಂಕರ್‌ಗಳಲ್ಲಿ ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ, ವೈದ್ಯಕೀಯ ತಂಡವು ಸಿಂಧ್‌ನಲ್ಲಿ ಬೀಡುಬಿಟ್ಟಿದೆ. ಇದು ಸಂಭಾವ್ಯ ಸಂಘರ್ಷಕ್ಕೆ ಸಿದ್ಧತೆಯನ್ನು ಸೂಚಿಸುತ್ತದೆ. ಪರಿಸ್ಥಿತಿ ತೀವ್ರಗೊಳ್ಳುತ್ತಿದ್ದಂತೆ ಪಾಕಿಸ್ತಾನ ಯುದ್ಧ ವಲಯಕ್ಕೆ ಅಗತ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಸಂಗ್ರಹಿಸುತ್ತಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪಹಲ್ಗಾಮ್ ದಾಳಿಯಲ್ಲಿ ಹಲವಾರು ಭಾರತೀಯ ಪ್ರಜೆಗಳು ಪ್ರಾಣ ಕಳೆದುಕೊಂಡರು. ಇದಕ್ಕೆ ಕೂಡಲೆ ಪ್ರತಿಕ್ರಿಯಿಸಿದ ಭಾರತ ಪಾಕಿಸ್ತಾನದ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿತು. ಇದು ಪಾಕಿಸ್ತಾನದಲ್ಲಿ ಕಳವಳವನ್ನುಂಟುಮಾಡಿದೆ. ಭಾರತದ ಮಿಲಿಟರಿ ನಿಲುವು ಕಾರ್ಯಾಚರಣೆಗೆ ಸಿದ್ಧತೆಯನ್ನು ಸೂಚಿಸುತ್ತಿರುವುದರಿಂದ ಪಾಕಿಸ್ತಾನ ಹೆಚ್ಚು ಆತಂಕಕ್ಕೊಳಗಾಗುತ್ತಿರುವಂತೆ ಕಾಣುತ್ತಿದೆ.

ಇದನ್ನೂ ಓದಿ: ಉಗ್ರರ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳಿವು

ಇದನ್ನೂ ಓದಿ
Image
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌
Image
ಛತ್ತೀಸ್​ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಮನೆ ಸೇರಿ ಹಲವೆಡೆ ಇಡಿ ದಾಳಿ
Image
ಮೊಬೈಲ್​ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದು ವಿದ್ಯಾರ್ಥಿ ಸಾವು
Image
ಮದುವೆ ಮನೆಗಳಲ್ಲಿ ಇನ್ಮುಂದೆ ನೀರಿನ ಪ್ಲಾಸ್ಟಿಕ್ ಬಾಟಲಿ ಬಳಕೆ ಮಾಡುವಂತಿಲ್ಲ

ದಕ್ಷಿಣ ಕಾಶ್ಮೀರದಲ್ಲಿ, ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸೇರಿದಂತೆ ಭದ್ರತಾ ಪಡೆಗಳು ಬೃಹತ್ ಸುತ್ತುವರಿದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ಭದ್ರತಾ ಸಿಬ್ಬಂದಿ ಮನೆಗಳು ಮತ್ತು ಕೊಠಡಿಗಳ ಮೇಲೆ ಸಂಪೂರ್ಣ ಶೋಧ ನಡೆಸುತ್ತಿದ್ದಾರೆ. ಎಲ್ಲಾ ಪ್ರದೇಶಗಳನ್ನು ಅತ್ಯಂತ ಎಚ್ಚರಿಕೆಯಿಂದ ಪರಿಶೀಲಿಸಲಾಗುತ್ತಿದೆ. ಉಗ್ರರನ್ನು ಬಂಧಿಸುವ ಗುರಿಯನ್ನು ಹೊಂದಿರುವ ಭದ್ರತಾ ಕ್ರಮಗಳ ಭಾಗವಾಗಿ ರಸ್ತೆಗಳನ್ನು ಸಹ ತೆರವುಗೊಳಿಸಲಾಗುತ್ತಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 14 ಸ್ಥಳೀಯ ಉಗ್ರರ ಪಟ್ಟಿಯನ್ನು ಗುಪ್ತಚರ ಸಂಸ್ಥೆಗಳು ಬಿಡುಗಡೆ ಮಾಡಿವೆ. ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ, ಗುಪ್ತಚರ ಸಂಸ್ಥೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ 14 ಸ್ಥಳೀಯ ಉಗ್ರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. 20ರಿಂದ 40 ವರ್ಷ ವಯಸ್ಸಿನ ಈ ವ್ಯಕ್ತಿಗಳು ಪಾಕಿಸ್ತಾನದಿಂದ ಈ ಪ್ರದೇಶಕ್ಕೆ ನುಸುಳುತ್ತಿರುವ ವಿದೇಶಿ ಉಗ್ರರಿಗೆ ನೆಲಮಟ್ಟದ ಸಹಾಯ ಮತ್ತು ವಸತಿ ವ್ಯವಸ್ಥೆಯನ್ನು ಒದಗಿಸುತ್ತಿದ್ದಾರೆ. ಮೂಲಗಳ ಪ್ರಕಾರ, ಈ ಉಗ್ರರು ಪಾಕಿಸ್ತಾನ ಮೂಲದ ಮೂರು ಪ್ರಮುಖ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಅವುಗಳೆಂದರೆ, ಹಿಜ್ಬುಲ್ ಮುಜಾಹಿದ್ದೀನ್, ಲಷ್ಕರ್-ಎ-ತೈಬಾ (LeT), ಮತ್ತು ಜೈಶ್-ಎ-ಮೊಹಮ್ಮದ್ (JeM).

ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿದ ವಿಶ್ವಸಂಸ್ಥೆ: ಭಯೋತ್ಪಾದನೆ ನಿರ್ಮೂಲನೆಗೆ ಒಂದಾಗಿ ಹೋರಾಡುವಂತೆ ಕರೆ

ಗುರುತಿಸಲಾದ ಉಗ್ರರಲ್ಲಿ ಮೂವರು ಹಿಜ್ಬುಲ್ ಮುಜಾಹಿದ್ದೀನ್, ಎಂಟು ಮಂದಿ ಲಷ್ಕರ್-ಎ-ತೈಬಾ ಮತ್ತು ಮೂವರು ಜೈಶ್-ಎ-ಮೊಹಮ್ಮದ್‌ಗೆ ಸೇರಿದವರು. ಈ ಉಗ್ರರು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಈ ಪ್ರದೇಶದ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಪ್ರತಿಜ್ಞೆ ಮಾಡಿದ್ದಾರೆ. ಗಡಿಯಾಚೆಗಿನ ಭಯೋತ್ಪಾದನೆಗೆ ಸಹಾಯ ಮಾಡುವ ಸ್ಥಳೀಯ ಉಗ್ರಗಾಮಿಗಳ ಜಾಲವನ್ನು ಕಿತ್ತೊಗೆಯಲು ಈ ವ್ಯಕ್ತಿಗಳ ಬಂಧನವು ನಿರ್ಣಾಯಕವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ