ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿದ ವಿಶ್ವಸಂಸ್ಥೆ: ಭಯೋತ್ಪಾದನೆ ನಿರ್ಮೂಲನೆಗೆ ಒಂದಾಗಿ ಹೋರಾಡುವಂತೆ ಕರೆ
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಇಡೀ ಭಾರತೀಯರು ಎಲ್ಲೆಡೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹತ್ಯೆ ಖಂಡಿಸಿ, ದೇಶಾದ್ಯಂತ ಪ್ರತಿಭಟನೆ ಮಾಡಲಾಗುತ್ತಿದೆ. ಈ ಮಧ್ಯೆ ಪಹಲ್ಗಾಮ್‌ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ನಡೆಸಿದ ದಾಳಿಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತೀವ್ರವಾಗಿ ಖಂಡಿಸಿದೆ. ಭಯೋತ್ಪಾದನೆಗೆ ಬೆಂಬಲ ನೀಡದಂತೆ ಎಲ್ಲಾ ರಾಷ್ಟ್ರಗಳಿಗೆ ಕರೆ ನೀಡಿದೆ.

ನವದೆಹಲಿ, ಏಪ್ರಿಲ್ 26: ಭಾರತದ ಮುಕುಟ ಮಣಿ, ಪ್ರವಾಸಿಗರ ಸ್ವರ್ಗ ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಅಟ್ಟಹಾಸ (Pahalgam Terror Attack) ಮೆರೆದಿದ್ದರು. ಕರ್ನಾಟಕದ ಇಬ್ಬರು ಸೇರಿದಂತೆ ಒಟ್ಟು 26 ಪ್ರವಾಸಿಗರನ್ನು ಹತ್ಯೆ ಮಾಡಲಾಗಿದೆ. ಪ್ರವಾಸಿಗರ ಮೇಲೆ ನಡೆದ ಉಗ್ರರ ಭೀಕರ ಗುಂಡಿನ ದಾಳಿ ಎದೆಝಲ್ಲೆನಿಸುತ್ತದೆ. ಸದ್ಯ ಈ ಉಗ್ರರ ದಾಳಿಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (United Nations Security Council) ತೀವ್ರವಾಗಿ ಖಂಡಿಸಿದ್ದು, ಭಯೋತ್ಪಾದನೆ ನಿರ್ಮೂಲನೆಗೆ ಎಲ್ಲಾ ದೇಶಗಳು ಒಂದಾಗಿ ಹೋರಾಡುವಂತೆ ಕರೆ ನೀಡಿದೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ, ಕಾಶ್ಮೀರದಲ್ಲಿ ಪ್ರವಾಸಿಗರನ್ನು ಹತ್ಯೆ ಮಾಡಿದ್ದು ಅಮಾನವೀಯ ಕೃತ್ಯ. ಮುಗ್ಧ ಜನರನ್ನು ಕೊಂದಿರುವ ಉಗ್ರರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಎಎನ್ಐ ಟ್ವೀಟ್
#PahalgamTerrorAttack | The members of the Security Council condemned in the strongest terms the terrorist attack in Jammu and Kashmir on 22 April, during which at least 26 people were killed and many more injured. The members of the Security Council underlined the need to hold… pic.twitter.com/Uh2qJqCTWl
— ANI (@ANI) April 26, 2025
ಭಯೋತ್ಪಾದನೆ, ಉಗ್ರರ ಕೃತ್ಯಗಳಿಗೆ ಯಾರೂ ಬೆಂಬಲ ನೀಡಬಾರದು. ಭಯೋತ್ಪಾದನೆ ಇಂದು ಜಾಗತಿಕ ಶಾಂತಿ ವ್ಯವಸ್ಥೆಗೆ ಅಡ್ಡಿಯಾಗಿದೆ. ಹೀಗಾಗಿ ಭಯೋತ್ಪಾದನೆ ನಿರ್ಮೂಲನೆಗೆ ಎಲ್ಲಾ ದೇಶಗಳು ಒಂದಾಗಬೇಕು ಎಂದು ಕರೆ ನೀಡಿದೆ.
ಉಗ್ರರ ದಾಳಿ ಖಂಡಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಇನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿಯನ್ನು ಖಂಡಿಸಿದ್ದಾರೆ. ಕಾಶ್ಮೀರದಲ್ಲಿ ಪ್ರವಾಸಿಗರ ಮೇಲಿನ ಉಗ್ರರ ದಾಳಿ ಒಂದು ಕೆಟ್ಟ ಘಟನೆ. ಇದನ್ನು ಅಮೆರಿಕ ತೀವ್ರವಾಗಿ ಖಂಡಿಸುತ್ತೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿದ್ದಾರೆ 14,000 ಪಾಕಿಸ್ತಾನಿ ಪ್ರಜೆಗಳು; ಪಾಕ್ನಿಂದ 286 ಭಾರತೀಯರು ವಾಪಾಸ್
ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವಾಗಲೂ ಉದ್ವಿಗ್ನತೆ ಇದ್ದು, ಅದು ಈ ಘಟನೆಯಿಂದ ಮತ್ತಷ್ಟು ಹೆಚ್ಚಾಗಿದೆ. ನಿಮಗೆ ತಿಳಿದಿರುವಂತೆ ನಾನು ಭಾರತಕ್ಕೂ ತುಂಬಾ ಹತ್ತಿರವಾಗಿದ್ದೇನೆ ಮತ್ತು ಪಾಕಿಸ್ತಾನಕ್ಕೂ ತುಂಬಾ ಹತ್ತಿರವಾಗಿದ್ದೇನೆ ಎಂದು ಹೇಳಿದ್ದಾರೆ.
ಉಗ್ರರಿಗೆ ನೆರವು ನೀಡಿದ್ದ ಇಬ್ಬರು ಸ್ಥಳೀಯರ ಬಂಧನ
ಇನ್ನು ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಲ್ಗಾಮಾದಲ್ಲಿ ಉಗ್ರರಿಗೆ ನೆರವು ನೀಡಿದ್ದ ಇಬ್ಬರು ಸ್ಥಳೀಯರನ್ನು ಸೇನೆ ಬಂಧಿಸಿದೆ. ಬಂಧಿತರ ಬಳಿಯಿದ್ದ 2 ಪಿಸ್ತೂಲ್, ಮದ್ದುಗುಂಡು ಜಪ್ತಿ ಮಾಡಲಾಗಿದೆ.
ಮತ್ತಷ್ಟು ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:22 am, Sat, 26 April 25