ನವದೆಹಲಿ, ಜೂನ್ 13: ಗುಜರಾತ್ನ ಅಹಮದಾಬಾದ್ನಲ್ಲಿ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI171 ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನವಾಗಿ (Ahmedabad plane crash) ಭಾರಿ ದುರಂತ ಸಂಭವಿಸಿದೆ. ವಿಮಾನದಲ್ಲಿದ್ದ 242 ಜನರಲ್ಲಿ ಒಬ್ಬರು ಮಾತ್ರ ಪವಾಡ ಸದೃಶರಾಗಿ ಬದುಕುಳಿದಿದ್ದಾರೆ. ವಿಮಾನವು ಅಹಮದಾಬಾದ್ನ ಮೇಘನಿನಗರದಲ್ಲಿರುವ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ಗೆ ಅಪ್ಪಳಿಸಿದ್ದರಿಂದ ಅಲ್ಲಿದ್ದವರೂ ಸಾವಿಗೀಡಾಗಿದ್ದಾರೆ. ಪರಿಣಾಮವಾಗಿ 265 ಮಂದಿ ಇಹಲೋಕ ತ್ಯಜಿಸಿದ್ದಾರೆ. ಸದ್ಯ, ಅಪಘಾತಕ್ಕೆ ಕಾರಣಗಳೇನು ಎಂಬುದನ್ನು ಕಂಡುಹಿಡಿಯಲು ವಿಮಾನಯಾನ ತಜ್ಞರು ಬ್ಲ್ಯಾಕ್ ಬಾಕ್ಸ್ ಶೋಧ ಹಾಗೂ ವಿಶ್ಲೇಷಣೆ ಸೇರಿದಂತೆ ಇತರ ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಈಗಾಗಲೇ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO) ನಿಗದಿಪಡಿಸಿದ ಅಂತರರಾಷ್ಟ್ರೀಯ ಪ್ರೋಟೋಕಾಲ್ಗಳಿಗೆ ಅನುಗುಣವಾಗಿ ಔಪಚಾರಿಕ ತನಿಖೆಯನ್ನು ಪ್ರಾರಂಭಿಸಿದೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯವೂ ಒಳಗೊಂಡಂತೆ ವಿಮಾನಯಾನಕ್ಕೆ ಸಂಬಂಧಿಸಿದ ವಿವಿಧ ಸಂಸ್ಥೆಗಳ ತಜ್ಞರ ತಂಡ ಶೀಘ್ರದಲ್ಲೇ ಅಪಘಾತದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಲಿದೆ. ಹಾಗಾದರೆ, ವಿಮಾನ ಅಪಘಾತದ ನಂತರ ತನಿಖೆ ಪ್ರಕ್ರಿಯೆ ಹೇಗಿರುತ್ತದೆ? ಹಂತಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.
ಬ್ಲ್ಯಾಕ್ ಬಾಕ್ಸ್ ಶೋಧ ಮಾಡಿ ಸಂಗ್ರಹಿಸುವುದು ಮತ್ತು ಅದನ್ನು ಪರೀಕ್ಷೆಗೆ ಒಳಪಡಿಸುವುದು ಮೊದಲ ಹಂತವಾಗಿದೆ.
ವಿಮಾನ ಅಪಘಾತ ಸಂಭವಿಸಿದಾಗ, ಫ್ಲೈಟ್ ಡೇಟಾ ರೆಕಾರ್ಡರ್ (FDR) ಮತ್ತು ಕಾಕ್ಪಿಟ್ ವಾಯ್ಸ್ ರೆಕಾರ್ಡರ್ (CVR) ಸೇರಿದಂತೆ ಇತರ ರೆಕಾರ್ಡರ್ಗಳಲ್ಲಿ ಸಂಗ್ರಹವಾದ ಡೇಟಾವನ್ನು ಪಡೆಯುವುದು ಮತ್ತು ವಿಶ್ಲೇಷಿಸುವುದರೊಂದಿಗೆ ತನಿಖೆ ಆರಂಭವಾಗುತ್ತದೆ.
ಬ್ಲ್ಯಾಕ್ ಬಾಕ್ಸ್ ಮತ್ತು ಇತರ ರೆಕಾರ್ಡರ್ಗಳನ್ನು ಪ್ರಯೋಗಾಲಯಕ್ಕೆ ತಂದ ನಂತರ, ತಜ್ಞರು ಅವುಗಳ ಸ್ಥಿತಿಯನ್ನು ಪರಿಶೀಲಿಸುತ್ತಾರೆ. ಡೇಟಾವನ್ನು ಸುಲಭವಾಗಿ ರಿಟ್ರೀವ್ ಮಾಡಬಹುದೇ ಎಂದು ಪರಿಶೀಲಿಸುತ್ತಾರೆ. ಅವುಗಳು ಸಮರ್ಪಕ ಸ್ಥಿತಿಯಲ್ಲಿದ್ದರೆ ಡೇಟಾವನ್ನು ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಆದರೆ, ಹಾನಿಗೊಳಗಾಗಿದ್ದರೆ ಡೇಟಾ ರಿಟ್ರೀವ್ ಮಾಡಲು ಹೆಚ್ಚಿನ ಶ್ರಮ ಬೇಕಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ತನಿಖೆಯ ಅತ್ಯಂತ ಸೂಕ್ಷ್ಮ ಅಂಶವೆಂದರೆ, ಕಾಕ್ಪಿಟ್ ಧ್ವನಿ ರೆಕಾರ್ಡರ್ ಅನ್ನು ಪರಿಶೀಲಿಸುವುದು ಎಂದೂ ಅವರು ವಿವರಿಸಿದ್ದಾರೆ.
ವಿಮಾನದ ಒಳಗಿನ ವ್ಯವಸ್ಥೆಗಳ ಬಗ್ಗೆ ನೂರಾರು ವಿವರಗಳನ್ನು ಫ್ಲೈಟ್ ಡೇಟಾ ರೆಕಾರ್ಡರ್ಗಳು ಸಂಗ್ರಹಿಸುತ್ತವೆ. ಇದು ತನಿಖಾಧಿಕಾರಿಗಳು ಅಪಘಾತದ ಮೊದಲು ಏನಾಯಿತು ಎಂಬ ಮಾಹಿತಿ ಕಲೆಹಾಕಲು ಸಹಾಯ ಮಾಡುತ್ತದೆ.
ಅಹಮದಾಬಾದ್ನಲ್ಲಿ ಸಂಭವಿಸಿದಂತೆ ಪ್ರಮುಖವಿಮಾನ ಅಪಘಾತಗಳ ಸಂದರ್ಭದಲ್ಲಿ ಅವಶೇಷಗಳನ್ನು ಪರೀಕ್ಷಿಸಲು, ವೀಡಿಯೊಗ್ರಾಫ್ ಮಾಡಲು ಮತ್ತು ಛಾಯಾಚಿತ್ರ ಸೆರೆಹಿಡಿಯಲು ಒಂದು ತಂಡವನ್ನು ನಿಯೋಜಿಸಲಾಗುತ್ತದೆ. ಈ ತಂಡ ಸಂಗ್ರಹಿಸಿದ ವಿಡಿಯೋ, ಫೋಟೊಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಗಳಿಗೆ ಕಳುಹಿಸಲಾಗುತ್ತದೆ. ಈ ಪರೀಕ್ಷಾ ಫಲಿತಾಂಶಗಳು ಲ್ಯಾಂಡಿಂಗ್, ವೇಗ ಮತ್ತು ಕೋನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಬಹುದು.
ಇದನ್ನೂ ಓದಿ: ಅಪಘಾತಕ್ಕೀಡಾದ ಬೋಯಿಂಗ್ 787-8 ಡ್ರೀಮ್ಲೈನರ್ ಅಸಾಮಾನ್ಯ ಸಾಮರ್ಥ್ಯವಿರುವ ವಿಮಾನ; ಆದರೂ ಹೀಗಾಗಿದ್ದು ಆಶ್ಚರ್ಯ !
ಆದರೆ, ವಿಮಾನವು ಸುಟ್ಟು ಬೂದಿಯಾಗಿದ್ದರೆ ಅಂಥ ಸಂದರ್ಭಗಳಲ್ಲಿ ಅವಶೇಷಗಳ ಪರೀಕ್ಷೆಯು ಹೆಚ್ಚಿನ ಮಾಹಿತಿ ಒದಗಿಸಲಾರದು. ಪ್ರಯಾಣಿಕರ ಆಸನಗಳು, ಪ್ರೊಪೆಲ್ಲರ್ಗಳು ಮತ್ತು ರೆಕ್ಕೆಗಳು ಸಹ ತನಿಖಾಧಿಕಾರಿಗಳಿಗೆ ತನಿಖೆಗೆ ಹೆಚ್ಚಿನ ನೆರವು ನೀಡಬಹುದು ಎಂದು ವಿಮಾನಯಾನ ಸುರಕ್ಷತಾ ಸಂಸ್ಥೆ ‘ಮಾರ್ಟಿನ್ ಕನ್ಸಲ್ಟೆನ್ಸಿ’ಯ ಸಿಇಒ ಮತ್ತು ಸಂಸ್ಥಾಪಕ ಮಾರ್ಕ್ ಮಾರ್ಟಿನ್ ತಿಳಿಸಿರುವುದಾಗಿ ‘ದಿ ಪ್ರಿಂಟ್’ ವರದಿ ಮಾಡಿದೆ.
ವಿಮಾನ ಪತನ ದುರಂತದ ತನಿಖೆಯ ಮುಂದಿನ ಹಂತವೆಂದರೆ, ಮೂವರು ಸದಸ್ಯರನ್ನೊಳಗೊಂಡ ಸಮಿತಿ ರಚನೆ ಮಾಡವುದು. ಈ ಸಮಿತಿಯು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು, ಬದುಕುಳಿದವರ ಸಾಕ್ಷ್ಯಗಳು, ಎಂಜಿನಿಯರ್ಗಳು, ವಿಮಾನಯಾನ ಸಂಸ್ಥೆಯ ಸಿಇಒ, ಎಟಿಸಿ ಸಿಬ್ಬಂದಿ ಮತ್ತು ಅಪಘಾತಕ್ಕೆ ಸಂಬಂಧಿಸಿದ ಮಾಹಿತಿಯುಳ್ಳ ಎಲ್ಲರಿಂದ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸುತ್ತದೆ ಎಂದು ಮಾರ್ಟಿನ್ ಹೇಳಿದ್ದಾರೆ.
ಎಲ್ಲಾ ದತ್ತಾಂಶಗಳನ್ನು ವಿಶ್ಲೇಷಿಸಿದ ನಂತರ, ತಜ್ಞರು ಕಲೆಹಾಕಿದ ಮಾಹಿತಿಗಳ ವರದಿ ಸಂಗ್ರಹ ಮಾಡಲಾಗುತ್ತದೆ. ಆ ವರದಿಯು ಅಪಘಾತದ ವಾಸ್ತವಿಕ ಸಾರಾಂಶ, ತಾಂತ್ರಿಕ ಸಂಶೋಧನೆಗಳು, ಹಾರಾಟದ ದತ್ತಾಂಶದ ವಿಶ್ಲೇಷಣೆ, ಕಾಕ್ಪಿಟ್ ಆಡಿಯೋ, ಅಧಿಕೃತ ಹೇಳಿಕೆಗಳು, ಅಪಘಾತದ ಸಂಭವನೀಯ ಕಾರಣ ಮತ್ತು ಇದೇ ರೀತಿಯ ಘಟನೆಗಳನ್ನು ತಡೆಗಟ್ಟಲು ಸುರಕ್ಷತಾ ಶಿಫಾರಸುಗಳ ಪಟ್ಟಿಯನ್ನು ಒಳಗೊಂಡಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:37 pm, Fri, 13 June 25