ಕಸ ಗುಡಿಸುವ ಕೆಲಸದಿಂದ ಪಂಚಾಯತ್ ಅಧ್ಯಕ್ಷೆ ಹುದ್ದೆಯೇರಿದ ಕೇರಳದ ಮಹಿಳೆ
ಕೇರಳದ ಕೊಲ್ಲಂ ಜಿಲ್ಲೆಯ ಪತ್ತನಾಪುರಂ ಬ್ಲಾಕ್ ಪಂಚಾಯತ್ನಲ್ಲಿ ಹತ್ತು ವರ್ಷಗಳ ಹಿಂದೆ ಅರೆಕಾಲಿಕ ನೌಕರರಾಗಿ ಕಸಗುಡಿಸುವ ಕೆಲಸಕ್ಕೆ ಸೇರಿದ ಆನಂದವಲ್ಲಿ ಈಗ ಅದೇ ಕಚೇರಿಯಲ್ಲಿ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೊಲ್ಲಂ: ಕೇರಳದ ಕೊಲ್ಲಂ ಜಿಲ್ಲೆಯ ಪತ್ತನಾಪುರಂ ಬ್ಲಾಕ್ ಪಂಚಾಯತ್ನಲ್ಲಿ ಹತ್ತು ವರ್ಷಗಳ ಹಿಂದೆ ಅರೆಕಾಲಿಕ ನೌಕರರಾಗಿ ಕಸಗುಡಿಸುವ ಕೆಲಸಕ್ಕೆ ಸೇರಿದ ಆನಂದವಲ್ಲಿ ಮುಂದೊಂದು ದಿನ ತಾನು ಪಂಚಾಯತ್ ಅಧ್ಯಕ್ಷೆಯಾಗುತ್ತೇನೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ. ಆದರೆ ಈ ಬಾರಿ ಪಂಚಾಯತ್ ಚುನಾವಣೆಯಲ್ಲಿ ಸಿಪಿಎಂ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ 46ರ ಹರೆಯದ ಆನಂದವಲ್ಲಿ ಪಂಚಾಯತ್ ಅಧ್ಯಕ್ಷೆಯಾಗಿದ್ದಾರೆ
ನಾನು ಕಸಗುಡಿಸುವ ಕೆಲಸ ಮಾಡುತ್ತಿದ್ದ ಅದೇ ಕಚೇರಿಯಲ್ಲಿ ಇಷ್ಟೊಂದು ದೊಡ್ಡ ಹುದ್ದೆ ಅಲಂಕರಿಸುತ್ತೇನೆ ಎಂದು ಊಹಿಸಿರಲಿಲ್ಲ ಅಂತಾರೆ ಇಬ್ಬರು ಮಕ್ಕಳ ತಾಯಿಯಾಗಿರುವ ಆನಂದವಲ್ಲಿ. ಕಳೆದ ತಿಂಗಳು ಕೇರಳದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಿಪಿಎಂ ನೇತೃತ್ವದ ಎಲ್ಡಿಎಫ್ ಬಹುಮತದೊಂದಿಗೆ ಗೆದ್ದಿತ್ತು. ಪತ್ತನಾಪುರಂ ಅಧ್ಯಕ್ಷರ ಆಯ್ಕೆ ವಿಷಯ ಬಂದಾಗ ಪಕ್ಷ ಆನಂದವಲ್ಲಿಯವರ ಹೆಸರು ನಿರ್ದೇಶಿಸಿತ್ತು. ಪರಿಶಿಷ್ಟ ಜಾತಿ ಮೀಸಲಾತಿ ಸೀಟಿನಲ್ಲಿ ಆನಂದವಲ್ಲಿ ಸ್ಪರ್ಧಿಸಿದ್ದರು.
13 ಸದಸ್ಯರಿರುವ ಬ್ಲಾಕ್ ಪಂಚಾಯಿತಿನಲ್ಲಿ ಎಲ್ ಡಿಎಫ್ 7 ಸೀಟುಗಳನ್ನು ಗೆದ್ದಿದ್ದು, ಯುಡಿಎಫ್ 6 ಸೀಟುಗಳನ್ನು ಗಳಿಸಿತ್ತು. ಡಿಸೆಂಬರ್ 31ಕ್ಕೆ ಅಧ್ಯಕ್ಷ ಪದವಿ ಸ್ವೀಕರಿಸಿದ ಆನಂದವಲ್ಲಿ, ನನ್ನ ಗ್ರಾಮದವರಿಗೆ ಖುಷಿಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಸಿಪಿಎಂ ಪಕ್ಷದ ಬೆಂಬಲಿಗರಾಗಿರುವ ಕುಟುಂಬದಿಂದ ಬಂದ ಆನಂದವಲ್ಲಿಯ ಪತಿ ಸಿಪಿಎಂ ಸ್ಥಳೀಯ ಸಮಿತಿ ಸದಸ್ಯರಾಗಿದ್ದಾರೆ.
ಕೇರಳದಲ್ಲಿ ದೇಶದ ಅತಿ ಕಿರಿಯ ಮೇಯರ್?; ಹೊಸ ದಾಖಲೆ ಬರೆಯೋಕೆ ಸಜ್ಜಾದ ಯುವತಿ