Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮೋ ಭಾರತ್ ಹೈಸ್ಪೀಡ್ ರೈಲು ಸೇವೆಗೆ ಪ್ರಧಾನಿ ಮೋದಿ ಇಂದು ಹಸಿರು ನಿಶಾನೆ

ಭಾರತದ ಮೊದಲ ಪ್ರಾದೇಶಿಕ ಹೈಸ್ಪೀಡ್ ರೈಲು ಸೇವೆ ರ್ಯಾಪಿಡ್​ಎಕ್ಸ್​ಗೆ ನಮೋ ಭಾರತ್ ಎಂದು ನಾಮಕರಣ ಮಾಡಲಾಗಿದೆ. 30,274 ಕೋಟಿ ರೂ. ವೆಚ್ಚದಲ್ಲಿ ಆರಂಭವಾಗಿರುವ ಈ ಯೋಜನೆಯ ಕಾರಿಡಾರ್ 82 ಕಿಲೋಮೀಟರ್ ಉದ್ದವಿದ್ದು, ದೆಹಲಿಯ ಸರಾಯ್ ಕಾಲೇ ಖಾನ್ ನಿಲ್ದಾಣದಿಂದ ಮೀರತ್‌ನ ಮೋದಿಪುರಂವರೆಗೆ ವಿಸ್ತರಿಸಲಿದೆ.

ನಮೋ ಭಾರತ್ ಹೈಸ್ಪೀಡ್ ರೈಲು ಸೇವೆಗೆ ಪ್ರಧಾನಿ ಮೋದಿ ಇಂದು ಹಸಿರು ನಿಶಾನೆ
ರಾಪಿಡ್ ಎಕ್ಸ್​ ರೈಲು
Follow us
ಸುಷ್ಮಾ ಚಕ್ರೆ
|

Updated on: Oct 20, 2023 | 6:30 AM

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು (ಅಕ್ಟೋಬರ್ 20) ಭಾರತ ದೇಶದ ಮೊದಲ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯನ್ನು (ಆರ್‌ಆರ್‌ಟಿಎಸ್) ಉದ್ಘಾಟಿಸಲಿದ್ದಾರೆ. ದೆಹಲಿ-ಗಾಜಿಯಾಬಾದ್-ಮೀರತ್ ಕಾರಿಡಾರ್‌ನ 17 ಕಿಲೋಮೀಟರ್ ಉದ್ದದ ರೈಲು ಸೇವೆಯ ಮೊದಲ ಹಂತ ಸಿದ್ಧವಾಗಿದ್ದು, ಈ ರೈಲಿಗೆ ‘ನಮೋ ಭಾರತ್’ ಎಂದು ಹೆಸರಿಡಲಾಗಿದೆ. 30,274 ಕೋಟಿ ರೂ. ವೆಚ್ಚದಲ್ಲಿ ಆರಂಭವಾಗಿರುವ ಈ ಯೋಜನೆಯ ಕಾರಿಡಾರ್ 82 ಕಿಲೋಮೀಟರ್ ಉದ್ದವಿದ್ದು, ದೆಹಲಿಯ ಸರಾಯ್ ಕಾಲೇ ಖಾನ್ ನಿಲ್ದಾಣದಿಂದ ಮೀರತ್‌ನ ಮೋದಿಪುರಂವರೆಗೆ ವಿಸ್ತರಿಸಲಿದೆ. ಮೇಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಮಾರ್ಗಕ್ಕೆ ಒಂದೂವರೆ ಗಂಟೆ ಮತ್ತು ಮೀರತ್ ಮತ್ತು ದೆಹಲಿ ನಡುವೆ ಸ್ಥಳೀಯ ರೈಲಿನಲ್ಲಿ 2 ಗಂಟೆಗಳ ಪ್ರಯಾಣ ಮಾಡಬೇಕಾಗುತ್ತದೆ. ಆದರೆ, ರಾಪಿಡ್​ ಎಕ್ಸ್​ ರೈಲು ಕೇವಲ 55-60 ನಿಮಿಷಗಳಲ್ಲಿ ದೆಹಲಿಯಿಂದ ಮೀರತ್​ಗೆ ತಲುಪುತ್ತದೆ.

ಮೊದಲ ಹಂತದಲ್ಲಿ ಈ ರಾಪಿಡ್ ರೈಲು ಸಾಹಿಬಾಬಾದ್, ಗಾಜಿಯಾಬಾದ್ ಗುಲ್ಧರ್, ದುಹೈ ಮತ್ತು ದುಹೈ ಡಿಪೋ ಸೇರಿದಂತೆ 5 ನಿಲ್ದಾಣಗಳ ನಡುವೆ ಸಂಚರಿಸಲಿದೆ. ಎನ್‌ಸಿಆರ್‌ನಲ್ಲಿ ಒಟ್ಟು 8 ಆರ್‌ಆರ್‌ಟಿಎಸ್ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ದೆಹಲಿ-ಗಾಜಿಯಾಬಾದ್-ಮೀರತ್ ಕಾರಿಡಾರ್‌ಗೆ ಪ್ರಧಾನ ಮಂತ್ರಿ ಮೋದಿ 2019ರ ಮಾರ್ಚ್ 8ರಂದು ಶಂಕುಸ್ಥಾಪನೆ ನೆರವೇರಿಸಿದ್ದರು.

ಇದನ್ನೂ ಓದಿ: RapidX Train: ಭಾರತದ ಮೊದಲ ರ‍್ಯಾಪಿಡ್​ಎಕ್ಸ್​ ರೈಲಿನ ವಿಶೇಷತೆಗಳೇನು?

ರಾಪಿಡ್ ರೈಲಿನಲ್ಲಿ ಸೀಟುಗಳು ಮತ್ತು ಕಿಟಕಿಗಳನ್ನು ಓರೆಯಾಗಿಸುವುದಲ್ಲದೆ, ಹೈಟೆಕ್ ಕೋಚ್‌ಗಳಲ್ಲಿ ಡಿಜಿಟಲ್ ಪರದೆಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಪ್ರಯಾಣಿಕರು ತಮ್ಮ ರೈಲು ಮಾರ್ಗವನ್ನು ಸುಲಭವಾಗಿ ಪರಿಶೀಲಿಸಬಹುದು. ಇದರೊಂದಿಗೆ ರೈಲು ಓಡುತ್ತಿರುವ ಈಗಿನ ವೇಗವನ್ನೂ ಡಿಜಿಟಲ್ ಪರದೆಯ ಮೇಲೆ ಪತ್ತೆ ಹಚ್ಚಬಹುದು. ಪ್ರೀಮಿಯಂ ಕೋಚ್‌ಗಳಿಗೆ ಪ್ರಯಾಣಿಕರು ಹೆಚ್ಚಿನ ದರವನ್ನು ಪಾವತಿಸಬೇಕಾಗುತ್ತದೆ. ಗುಣಮಟ್ಟದ ಕೋಚ್‌ಗಳಲ್ಲಿ ಒಂದನ್ನು ಮಹಿಳೆಯರಿಗೆ ಮೀಸಲಿಡಲಾಗುವುದು. ರಾಪಿಡ್ ರೈಲಿನಲ್ಲಿ ಶೇ.50ಕ್ಕಿಂತ ಹೆಚ್ಚು ಮಹಿಳಾ ಉದ್ಯೋಗಿಗಳಿರುತ್ತಾರೆ. ಸ್ಥಳೀಯ ಜನರಿಗೆ ಉದ್ಯೋಗಾವಕಾಶ ನೀಡುವ ಉದ್ದೇಶದಿಂದ ದೆಹಲಿ ಮತ್ತು ಮೀರತ್ ನಡುವೆ ವಾಸಿಸುವ ಜನರಿಗೆ ಆದ್ಯತೆ ನೀಡಲಾಗುವುದು.

ದೆಹಲಿ-ಗಾಜಿಯಾಬಾದ್-ಮೀರತ್ RRTS ಭಾರತದಲ್ಲಿ ಮೊದಲ ಹಂತದಲ್ಲಿ ಅನುಷ್ಠಾನಕ್ಕೆ ಯೋಜಿಸಲಾದ 3 ಕಾರಿಡಾರ್‌ಗಳಲ್ಲಿ ಮೊದಲನೆಯದು. ಇದರ ನಂತರ ದೆಹಲಿ-ಗುರುಗ್ರಾಮ-ಎಸ್​ಎನ್​ಬಿ-ಅಲ್ವಾರ್ ಮತ್ತು ದೆಹಲಿ-ಪಾಣಿಪತ್ ಕಾರಿಡಾರ್‌ಗಳು ಸಿದ್ಧವಾಗಲಿವೆ. ದೆಹಲಿ-ಮೀರತ್ ಕಾರಿಡಾರ್‌ನ ಒಟ್ಟು ಉದ್ದ 82 ಕಿಲೋಮೀಟರ್ ಆಗಿದ್ದು, ಇದು 1 ಗಂಟೆಯಲ್ಲಿ ದೆಹಲಿಯಿಂದ ಮೀರತ್​ಗೆ ಸಂಚರಿಸುತ್ತದೆ. ಈ ಯೋಜನೆಯನ್ನು 30,274 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಯೋಜನೆಗೆ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್, ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್ ಮತ್ತು ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್‌ ಹಣವನ್ನು ನೀಡಿದೆ.

ಇದನ್ನೂ ಓದಿ: ದೆಹಲಿ-ಮೀರತ್ ಆರ್​ಆರ್​ಟಿಎಸ್ ಕಾರಿಡಾರ್​ಗೆ ನಾಳೆ ಪ್ರಧಾನಿ ಮೋದಿ ಚಾಲನೆ

RRTS ರೈಲುಗಳು ಪ್ರೀಮಿಯಂ ಮಾಡೆಲ್​ನ ಕಾರುಗಳ ರೀತಿ ವಿಶಾಲವಾದ ಸೀಟುಗಳು, ಹೆಚ್ಚು ಲೆಗ್‌ರೂಮ್ ಮತ್ತು ಕೋಟ್ ಹ್ಯಾಂಗರ್‌ಗಳನ್ನು ಹೊಂದಿರುತ್ತದೆ. ಈ ರೈಲುಗಳಲ್ಲಿ ಲಗೇಜ್ ಕ್ಯಾರಿಯರ್‌ಗಳು, ಮಿನಿ ಸ್ಕ್ರೀನ್‌ಗಳು, ವೈ-ಫೈ, ಮೊಬೈಲ್ ಮತ್ತು ಲ್ಯಾಪ್‌ಟಾಪ್ ಚಾರ್ಜಿಂಗ್ ಸೌಲಭ್ಯಗಳನ್ನು ಪ್ರತಿ ಸೀಟಿನಲ್ಲಿಯೂ ಅಳವಡಿಸಲಾಗಿದೆ. ರಾಪಿಡ್​ಎಕ್ಸ್​ ರೈಲು ಪ್ರೀಮಿಯಂ ಕೋಚ್ ಸೇರಿದಂತೆ 6 ಕೋಚ್‌ಗಳನ್ನು ಹೊಂದಿರುತ್ತದೆ. ಪ್ರತಿ ರೈಲಿನಲ್ಲಿ ಒಂದು ಕೋಚ್ ಅನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಇದು ಪ್ರೀಮಿಯಂ ಕೋಚ್‌ನ ಪಕ್ಕದ ಕೋಚ್ ಆಗಿದೆ. ಈ ಕೋಚ್‌ಗಳಲ್ಲಿ ಸೀಟುಗಳನ್ನು ಕ್ರಮವಾಗಿ ನಂಬರ್ ಮಾಡಲಾಗಿದೆ. ಅಲ್ಲದೆ, ಇತರ ಕೋಚ್‌ಗಳಲ್ಲಿ ಮಹಿಳೆಯರು, ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗೆ ಮೀಸಲು ಸೀಟುಗಳಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ