ನಾವು ಉದ್ಯೋಗಗಳನ್ನು ಸೃಷ್ಟಿಸುತ್ತಿದ್ದೇವೋ, ಅಥವಾ ಕೇವಲ ಕೆಲಸಗಾರರನ್ನು ಸೃಷ್ಟಿಸುತ್ತಿದ್ದೇವೋ? ವಾಸ್ತವ ತಿಳಿಯಿರಿ

Santosh Nair's article in 'Your India' series: ಭಾರತದಲ್ಲಿ ಉದ್ಯೋಗ ಅಂಕಿಅಂಶಗಳು ವಾಸ್ತವವನ್ನು ಮರೆಮಾಚುತ್ತವೆ. ಅಧಿಕೃತವಾಗಿ ಅನೇಕರು ಉದ್ಯೋಗದಲ್ಲಿದ್ದರೂ, ಶೇ. 90ರಷ್ಟು ಜನರು ಅನೌಪಚಾರಿಕ ವಲಯದಲ್ಲಿದ್ದು, ಭದ್ರತೆ, ವೇತನ ಸಹಿತ ರಜೆ ಇಲ್ಲದೆ ದುಡಿಯುತ್ತಿದ್ದಾರೆ. ಕೇವಲ ಜೀವನಾಧಾರಕ್ಕೆ ಸಾಕಾಗುವಷ್ಟು ಸಂಪಾದಿಸುವ ಇವರಿಗೆ ಭವಿಷ್ಯದ ಯೋಜನೆಗಳಿಲ್ಲ. ದೇಶಕ್ಕೆ ಅಗತ್ಯವಿರುವುದು ಕೇವಲ ಜನರನ್ನು ಬ್ಯುಸಿಯಾಗಿ ಇಡುವ ಕೆಲಸಗಳಲ್ಲ, ಬದಲಿಗೆ ಭದ್ರತೆ ಮತ್ತು ಉತ್ತಮ ಗುಣಮಟ್ಟದ ಉದ್ಯೋಗಗಳು.

ನಾವು ಉದ್ಯೋಗಗಳನ್ನು ಸೃಷ್ಟಿಸುತ್ತಿದ್ದೇವೋ, ಅಥವಾ ಕೇವಲ ಕೆಲಸಗಾರರನ್ನು ಸೃಷ್ಟಿಸುತ್ತಿದ್ದೇವೋ? ವಾಸ್ತವ ತಿಳಿಯಿರಿ
ಬೆಂಗಳೂರಿನ ಬೀದಿಬದಿ ವ್ಯಾಪಾರಿ ದುಃಖದಲ್ಲಿರುವ ಒಂದು ಚಿತ್ರ
Image Credit source: PTI
Edited By:

Updated on: Oct 11, 2026 | 1:26 PM

ರಸ್ತೆ ಬದಿಯ ಸಿಗ್ನಲ್‌ನಲ್ಲಿ ತಳ್ಳುಗಾಡಿಯಲ್ಲಿ ತರಕಾರಿ ಮಾರುವ ವ್ಯಕ್ತಿಯೊಬ್ಬನನ್ನು ಅವನು ಏನು ಮಾಡುತ್ತಿದ್ದಾನೆ ಎಂದು ಕೇಳಿದರೆ, ತಾನು ಸ್ವಂತವಾಗಿ ಕೆಲಸ ಮಾಡುತ್ತಿರುವುದಾಗಿ ಹೇಳುತ್ತಾನೆ. ಸರ್ಕಾರದ ಸಮೀಕ್ಷೆಯೊಂದು ಅದೇ ಪ್ರಶ್ನೆಯನ್ನು ಕೇಳಿದಾಗ ಅದೂ ಕೂಡ ಇದನ್ನು ಒಪ್ಪಿಕೊಳ್ಳುತ್ತದೆ. ಆತನನ್ನು ಉದ್ಯೋಗದಲ್ಲಿದ್ದಾನೆ ಎಂದೇ ಪರಿಗಣಿಸಲಾಗುತ್ತದೆ.

ತಾಂತ್ರಿಕವಾಗಿ ಇದು ಸತ್ಯವೇ. ಆದರೆ ಪ್ರಾಯೋಗಿಕವಾಗಿ ಇದು ಒಂದು ಪ್ರಮುಖ ಸಂಗತಿಯನ್ನು ಮರೆಮಾಚುತ್ತದೆ.

ಭಾರತದ ಪ್ರಮುಖ ಉದ್ಯೋಗ ಸಮೀಕ್ಷೆಯಾದ ‘ಆವರ್ತಕ ಕಾರ್ಮಿಕ ಶಕ್ತಿ ಸಮೀಕ್ಷೆ’ಯು (Periodic Labour Force Survey), ಉಲ್ಲೇಖಿತ ಒಂದೇ ಒಂದು ವಾರದಲ್ಲಿ ಕೇವಲ ಒಂದು ಗಂಟೆ ಕೆಲಸ ಮಾಡಿದ್ದರೂ — ಅದು ಕುಟುಂಬದ ಜಮೀನಿನಲ್ಲಿ ಅಥವಾ ಅಂಗಡಿಯಲ್ಲಿ ವೇತನವಿಲ್ಲದೆ ಕೆಲಸ ಮಾಡಿದ್ದರೂ ಸಹ — ವ್ಯಕ್ತಿಯೊಬ್ಬರನ್ನು ಉದ್ಯೋಗಿ ಎಂದೇ ಪರಿಗಣಿಸುತ್ತದೆ. ಇದು ಸಮೀಕ್ಷೆಯ ದೋಷವಲ್ಲ. ದೇಶಗಳ ನಡುವೆ ಹೋಲಿಕೆ ಮಾಡಲು ಬಳಸಲಾಗುವ ಪ್ರಮಾಣಿತ ಅಂತರರಾಷ್ಟ್ರೀಯ ಪದ್ಧತಿಯಿದು. ಆದರೆ ಇದರರ್ಥ, ಭಾರತದ ಒಟ್ಟಾರೆ ಉದ್ಯೋಗ ಅಂಕಿಅಂಶಗಳು ಸಮಾಧಾನಕರವಾಗಿ ಕಾಣಿಸಬಹುದಾದರೂ, ಆ ಕೆಲಸದ ಗುಣಮಟ್ಟದ ಬಗ್ಗೆ ಅವು ನಮಗೆ ಅತ್ಯಲ್ಪ ಮಾಹಿತಿಯನ್ನಷ್ಟೇ ನೀಡುತ್ತವೆ.

ಇಲ್ಲಿ ಯಾರನ್ನಾದರೂ ಚಿಂತನೆಗೆ ಹಚ್ಚಬೇಕಾದ ಅಂಕಿಅಂಶವೊಂದಿದೆ. ಭಾರತದ ಒಟ್ಟು ಕಾರ್ಯಪಡೆಯ ಸುಮಾರು ಶೇಕಡಾ ತೊಂಬತ್ತರಷ್ಟು ಭಾಗವು ಅನೌಪಚಾರಿಕ ವಲಯದಲ್ಲೇ (Informal sector) ಕೆಲಸ ಮಾಡುತ್ತಿದೆ. ಅಂದರೆ, ನಿಜವಾದ ಉದ್ಯೋಗವೆಂದು ಜನರು ಸಾಮಾನ್ಯವಾಗಿ ಭಾವಿಸುವ ಲಿಖಿತ ಒಪ್ಪಂದ, ವೇತನ ಸಹಿತ ರಜೆ, ಭವಿಷ್ಯ ನಿಧಿ (PF) ಕೊಡುಗೆಗಳು ಅಥವಾ ಕೆಲಸ ಹಠಾತ್ತನೆ ನಿಂತುಹೋದಾಗ ಸಿಗುವ ಯಾವುದೇ ರಕ್ಷಣೆಗಳು ಇವರಿಗೆ ಇರುವುದಿಲ್ಲ. ಇವರಲ್ಲಿ ಅನೇಕರು ಸಣ್ಣ ಅಂಗಡಿ ನಡೆಸುವುದು, ಬಾಡಿಗೆ ಆಟೋ ಓಡಿಸುವುದು, ಸಣ್ಣ ಜಮೀನಿನಲ್ಲಿ ಬೇಸಾಯ ಮಾಡುವುದು ಅಥವಾ ತಳ್ಳುಗಾಡಿಯಲ್ಲಿ ಮಾರಾಟ ಮಾಡುವ ಮೂಲಕ ಸ್ವಯಂ ಉದ್ಯೋಗಿಗಳಾಗಿದ್ದಾರೆ. ಆದರೆ ಮಳೆ ಬಂದರೂ, ಅನಾರೋಗ್ಯ ಕಾಡಿದರೂ ಅಥವಾ ವ್ಯಾಪಾರ ಸಂಪೂರ್ಣವಾಗಿ ನಿಂತುಹೋದರೂ ಆಪತ್ತಿಗೆ ನೆರವಾಗಲು ಯಾವುದೇ ಉಳಿತಾಯವಿಲ್ಲದೆ, ಕೇವಲ ಆ ವಾರವನ್ನು ಕಳೆಯಲಲಷ್ಟೇ ಸಾಕಾಗುವಷ್ಟು ಸಂಪಾದನೆಯನ್ನು ಇವರು ಹೊಂದಿರುತ್ತಾರೆ.

ಹಾಗಾಗಿ ನಾವು ಭಾರತವು “ಉದ್ಯೋಗಗಳನ್ನು ಸೃಷ್ಟಿಸುತ್ತಿದೆಯೇ” ಎಂದು ಕೇಳುವಾಗ, ವಾಸ್ತವವಾಗಿ ನಾವು ಏಕಕಾಲದಲ್ಲಿ ಎರಡು ಸಂಪೂರ್ಣ ಭಿನ್ನ ಪ್ರಶ್ನೆಗಳನ್ನು ಕೇಳುತ್ತಿರುತ್ತೇವೆ ಮತ್ತು ಅವುಗಳ ಉತ್ತರಗಳನ್ನು ಗೊಂದಲ ಮಾಡಿಕೊಳ್ಳುತ್ತೇವೆ.

ಇದನ್ನೂ ಓದಿ: ಯುವಕರ ವಿದ್ಯಾರ್ಹತೆ ಹೆಚ್ಚಿದರೂ ಉದ್ಯೋಗಾರ್ಹತೆ ಹೆಚ್ಚುತ್ತಿಲ್ಲವಾ? ಆಲೋಚಿಸಬೇಕಾದ ವಿಚಾರಗಳು…

ಮೊದಲನೆಯ ಪ್ರಶ್ನೆ ಎಂದರೆ, ಜನರು ಕೆಲಸ ಮಾಡಲು ಮತ್ತು ಏನನ್ನಾದರೂ ಸಂಪಾದಿಸಲು ಯಾವುದಾದರೂ ದಾರಿಯನ್ನು ಕಂಡುಕೊಳ್ಳುತ್ತಿದ್ದಾರೆಯೇ ಎಂಬುದು. ಈ ಮಾನದಂಡದ ಪ್ರಕಾರ, ಹೆಚ್ಚಿನ ಭಾರತೀಯರು ಹೇಗೋ ಏನೋ, ಹೇಗಾದರೂ ಮಾಡಿ ದೈನಂದಿನ ಜೀವನವನ್ನು ನಿರ್ವಹಿಸುತ್ತಾರೆ. ಕೆಲಸವೇ ಇಲ್ಲದಿರುವ ಕಠಿಣ ನಿರುದ್ಯೋಗದ ಸಮಸ್ಯೆ ಭಾರತದಲ್ಲಿ ಎಂದಿಗೂ ಪ್ರಮುಖ ಸಮಸ್ಯೆಯಾಗಿರಲಿಲ್ಲ.

ಎರಡನೆಯ ಪ್ರಶ್ನೆ ಎಂದರೆ, ಭವಿಷ್ಯಕ್ಕಾಗಿ ಸ್ವಲ್ಪ ಭದ್ರತೆಯನ್ನು ನೀಡುವ, ಸ್ಥಿರವಾದ ಹಾಗೂ ತಕ್ಕಷ್ಟು ವೇತನವಿರುವ ಕೆಲಸ ಜನರಿಗೆ ಸಿಗುತ್ತಿದೆಯೇ ಎಂಬುದು. ಈ ಮಾನದಂಡದ ಮೂಲಕ ನೋಡಿದಾಗ ಚಿತ್ರಣವು ತೀರ ಅಸಮಾಧಾನಕರವಾಗಿರುತ್ತದೆ. ಒಪ್ಪಂದವಿಲ್ಲದ ಕಾರ್ಮಿಕರನ್ನು ಯಾವುದೇ ಮುನ್ಸೂಚನೆಯಿಲ್ಲದೆ ಕೆಲಸದಿಂದ ತೆಗೆದುಹಾಕಬಹುದು. ಭವಿಷ್ಯ ನಿಧಿ ಉಳಿತಾಯವಿಲ್ಲದ ಕಾರ್ಮಿಕರಿಗೆ ವೃದ್ಧಾಪ್ಯಕ್ಕೆ ಯಾವುದೇ ಭದ್ರತೆಯಿರುವುದಿಲ್ಲ. ದಿನಗೂಲಿ ಪಡೆಯುವ ಕಾರ್ಮಿಕರಿಗೆ ತಾವು ಎಷ್ಟು ಗಂಟೆಗಳ ಕಾಲ ಕಷ್ಟಪಟ್ಟು ಕೆಲಸ ಮಾಡಿದ್ದರೂ, ಕುಟುಂಬದ ಭವಿಷ್ಯವನ್ನು ರೂಪಿಸಲು ನಿಗದಿತ ಆದಾಯವಿರುವುದಿಲ್ಲ.

ಕುಟುಂಬದ ಮದುವೆಯಂತಹ ಸಾಮಾನ್ಯ ಉದಾಹರಣೆಯ ಮೂಲಕ ಈ ಎರಡೂ ರೀತಿಯ ಕೆಲಸಗಳ ನಡುವಿನ ವ್ಯತ್ಯಾಸವನ್ನು ಗಮನಿಸಿ. ವೇತನ ಸಹಿತ ರಜೆ ಹೊಂದಿರುವ ಉದ್ಯೋಗಿಯೊಬ್ಬರು ಕೆಲವು ದಿನಗಳ ಕಾಲ ರಜೆ ತೆಗೆದುಕೊಂಡರೂ ತಮ್ಮ ಆದಾಯವನ್ನು ಪಡೆಯುತ್ತಾರೆ. ಆದರೆ ಅದೇ ದಿನಗೂಲಿ ಕಾರ್ಮಿಕರೊಬ್ಬರು ರಜೆ ತೆಗೆದುಕೊಂಡರೆ ಸಂಪೂರ್ಣ ಕೂಲಿ ಕಳೆದುಕೊಳ್ಳಬೇಕಾಗುತ್ತದೆ — ಮದುವೆಗೆ ಹೋಗಬೇಕೋ ಬೇಡವೋ ಎಂಬುದು ಕೂಡ ಅವರಿಗೆ ಆರ್ಥಿಕ ನಿರ್ಧಾರವಾಗಿರುತ್ತದೆ.

ಈ ಕಾರಣಕ್ಕಾಗಿಯೇ ಕೆಲವು ಅರ್ಥಶಾಸ್ತ್ರಜ್ಞರು “ನಿರುದ್ಯೋಗ”ದ ಬದಲು “ಕಡಿಮೆ ಉದ್ಯೋಗ” (Underemployment) ಮತ್ತು “ಅನೌಪಚಾರಿಕತೆ”ಯ (Informality) ಬಗ್ಗೆ ಹೆಚ್ಚು ಮಾತನಾಡುತ್ತಾರೆ; ಏಕೆಂದರೆ ಇದು ವಾಸ್ತವದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಿಖರವಾಗಿ ಪ್ರತಿಬಿಂಬಿಸುತ್ತದೆ. ಲಕ್ಷಾಂತರ ಜನರು ಪ್ರತಿದಿನ ದುಡಿಯುತ್ತಿದ್ದರೂ ಕೂಡ, ಮುಂದಿನ ದಶಕದ ಕಥೆ ಹಾಗಿರಲಿ, ಕನಿಷ್ಠ ಮುಂದಿನ ವರ್ಷವನ್ನಾದರೂ ಆತ್ಮವಿಶ್ವಾಸದಿಂದ ಯೋಜಿಸಲು ಅನುವು ಮಾಡಿಕೊಡುವಂತಹ ಉದ್ಯೋಗಗಳ ಕೊರತೆ ದೇಶದಲ್ಲಿದೆ.

ಇದನ್ನೂ ಓದಿ: ಭಾರತೀಯ ಸಂವಿಧಾನದ ಮೂಲಭೂತ ಕರ್ತವ್ಯಗಳು: ಹಕ್ಕುಗಳ ಜೊತೆಗಿರುವ ಪ್ರಜೆಗಳ ಜವಾಬ್ದಾರಿಗಳೇನು ತಿಳಿಯಿರಿ

ಇದರರ್ಥ ಸ್ವಯಂ ಉದ್ಯೋಗ ಅಥವಾ ಅನೌಪಚಾರಿಕ ಕೆಲಸಕ್ಕೆ ಯಾವುದೇ ಗೌರವ ಅಥವಾ ಮೌಲ್ಯವಿಲ್ಲ ಎಂದಲ್ಲ. ಅನೇಕ ಸಣ್ಣ ಉದ್ಯಮಿಗಳು ಇದರ ಮೂಲಕವೇ ನಿಜವಾಗಿಯೂ ಯಶಸ್ವಿ ಮತ್ತು ಸುರಕ್ಷಿತ ಜೀವನೋಪಾಯವನ್ನು ಕಟ್ಟಿಕೊಂಡಿದ್ದಾರೆ. ಇಲ್ಲಿಯ ಆತಂಕವೆಂದರೆ ಅನೌಪಚಾರಿಕ ಕೆಲಸಗಳ ಅಸ್ತಿತ್ವದ ಬಗ್ಗೆ ಅಲ್ಲ, ಬದಲಿಗೆ ಅದರ ಅಗಾಧ ಪ್ರಮಾಣದ ಬಗ್ಗೆ ಮತ್ತು ಇದು ಸುರಕ್ಷಿತ ಆಯ್ಕೆ ಎನಿಸದೆ, ಹೆಚ್ಚಿನ ಮಂದಿಗೆ ಅನಿವಾರ್ಯ ಆಯ್ಕೆಯಾಗಿ ಉಳಿದುಕೊಂಡಿದೆ ಎಂಬುದರ ಬಗ್ಗೆ.

ಜನರನ್ನು ಸತತವಾಗಿ ಬ್ಯುಸಿಯಾಗಿರಿಸುವ ಆರ್ಥಿಕತೆಗೂ ಮತ್ತು ಜನರಿಗೆ ಭದ್ರತೆಯನ್ನು ನೀಡುವ ಆರ್ಥಿಕತೆಗೂ ದೊಡ್ಡ ವ್ಯತ್ಯಾಸವಿದೆ. ಭಾರತವು ದಶಕಗಳಿಂದ ಮೊದಲನೆಯದರಲ್ಲಿ ಅತ್ಯಂತ ಯಶಸ್ವಿಯಾಗಿದೆ. ಆದರೆ ಎರಡನೆಯದನ್ನು ನಿರ್ಮಿಸುವುದು ಮಾತ್ರ ದೇಶದ ಅತ್ಯಂತ ಕಷ್ಟಕರವಾದ, ಕಡಿಮೆ ಚರ್ಚಿತವಾದ ಹಾಗೂ ಅತ್ಯಂತ ನಿರ್ಣಾಯಕವಾದ ಅಪೂರ್ಣ ಕಾರ್ಯವಾಗಿ ಉಳಿದಿದೆ.

ಮುಂದಿನ ಬಾರಿ ಉದ್ಯೋಗದ ಅಂಕಿಅಂಶಗಳು ಬಿಡುಗಡೆಯಾದಾಗ, “ಎಷ್ಟು ಜನರು ಕೆಲಸ ಮಾಡುತ್ತಿದ್ದಾರೆ” ಎಂದು ಕೇಳುವುದಕ್ಕಿಂತ ಹೆಚ್ಚು ನಿಖರವಾದ ಪ್ರಶ್ನೆಯನ್ನು ಕೇಳುವುದು ಸೂಕ್ತ. ಈ ಪ್ರಶ್ನೆ ಕೇಳಿ: “ಅವರಲ್ಲಿ ಎಷ್ಟು ಮಂದಿ ಆ ಕೆಲಸವನ್ನು ನಂಬಿ ತಮ್ಮ ಮುಂದಿನ ವರ್ಷದ ಜೀವನವನ್ನು ಯಾವುದೇ ಅಂಜಿಕೆಯಿಲ್ಲದೆ ಆತ್ಮವಿಶ್ವಾಸದಿಂದ ಯೋಜಿಸಬಲ್ಲರು?”

ಆಧಾರಗಳು: ಆವರ್ತಕ ಕಾರ್ಮಿಕ ಶಕ್ತಿ ಸಮೀಕ್ಷೆ (PLFS), ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ, ಭಾರತ ಸರ್ಕಾರ; ‘ಡೇಟಾ ಫಾರ್ ಇಂಡಿಯಾ’ (Data For India), ಭಾರತದ ಅನೌಪಚಾರಿಕ ವಲಯದ ಗಾತ್ರದ ಕುರಿತ ವಿಶ್ಲೇಷಣೆ; ಭಾರತ ಉದ್ಯೋಗ ವರದಿ 2024, ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) ಮತ್ತು ಮಾನವ ಅಭಿವೃದ್ಧಿ ಸಂಸ್ಥೆ (IHD).

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Santosh Nair

Santosh Nair is Editor (Network Coordination), TV9 Network. With over two decades in media, he has played pivotal roles in some of the best newsrooms in the country. He is an avid reader who pens his thoughts after deep-diving into the subject matter.

Read More
Loading...
Unable to load recommendations.
Follow Us