ಭಾರತದ ಶಕ್ತಿಗೆ ಬೆಚ್ಚಿದವಾ ಜಾಗತಿಕ ಶಕ್ತಿಗಳು? ಉರಿದುಬೀಳುತ್ತಿವೆಯಾ ಚೀನಾ, ಅಮೆರಿಕ?
Navroop Singh speaks of India Pakistan conflict: ಪಾಕಿಸ್ತಾನದ ಮಿಲಿಟರಿ ನೆಲೆಗಳನ್ನು ಭಾರತ ಗುರಿಯಾಗಿ ಹೊಡೆದದ್ದು ಜಾಗತಿಕ ಶಕ್ತಿಗಳನ್ನು ಬೆಚ್ಚಿಬೀಳಿಸಿದೆ. ಪಾಕಿಸ್ತಾನವು ಭಾರತದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಮಾಡಿದ ದಾಳಿಗೆ ಪ್ರತಿಯಾಗಿ ಭಾರತ ಈ ಪ್ರತಿದಾಳಿ ಮಾಡಿತ್ತು. ಪಾಕಿಸ್ತಾನವನ್ನು ಆರ್ಥಿಕವಾಗಿ, ಮಿಲಿಟರಿಯಾಗಿ ಪೋಷಿಸುತ್ತಿರುವ ಅಮೆರಿಕ, ಚೀನಾ, ಟರ್ಕಿ ದೇಶಗಳ ಜಾಲಕ್ಕೆ ಭಾರತದ ಪರಾಕ್ರಮ ಈಗ ನುಂಗಲಾರದ ತುತ್ತಾಗಿದೆ.

ನವದೆಹಲಿ, ಮೇ 13: ಆಪರೇಷನ್ ಸಿಂದೂರದಲ್ಲಿ (Operation Sindoor) ಸಿಕ್ಕಾಪಟ್ಟೆ ಕ್ಯಾತೆ ತೆಗೆಯುತ್ತಿದ್ದ ಪಾಕಿಸ್ತಾನಕ್ಕೆ ಭಾರತ ಮರ್ಮಾಘಾತ ಕೊಟ್ಟಿತ್ತು. ಇಷ್ಟು ದೊಡ್ಡ ಮಟ್ಟದಲ್ಲಿ ಭಾರತ ಪ್ರತಿದಾಳಿ ಎಸಗುತ್ತದೆ ಎಂದು ಪಾಕಿಸ್ತಾನ ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ಪಾಕಿಸ್ತಾನದ 10 ಮಿಲಿಟರಿ ನೆಲೆಗಳನ್ನು ಭಾರತದ ಕ್ಷಿಪಣಿ ಮತ್ತು ಡ್ರೋನ್ಗಳು ಚಿಂದಿ ಮಾಡಿದವು. ಈ ಘಟನೆಯು ಭಾರತದ ಮಿಲಿಟರಿ ಶಕ್ತಿಯನ್ನು ತೋರಿಸಿದ್ದರ ಜೊತೆಗೆ, ಪಾಕಿಸ್ತಾನದ ರಕ್ಷಣಾ ದೌರ್ಬಲ್ಯವನ್ನು ಬೆಳಕಿಗೆ ತಂದಿತ್ತು. ಭಾರತದ ಈ ಪರಾಕ್ರಮವು ಪಾಕಿಸ್ತಾನ ಮಾತ್ರವಲ್ಲ, ವಿಶ್ವದ ಕೆಲ ದೊಡ್ಡ ಶಕ್ತಿಗಳನ್ನೂ ಗಾಬರಿಗೊಳಿಸಿತ್ತು. ಜಾಗತಿಕ ರಾಜಕೀಯ ತಜ್ಞರಾದ ನವರೂಪ್ ಸಿಂಗ್ ಪ್ರಕಾರ, ಚೀನಾ ಹಾಗೂ ಪಾಶ್ಚಿಮಾತ್ಯ ಶಕ್ತಿಗಳು (ಅಮೆರಿಕ) ಭಾರತದ ಮಿಲಿಟರಿ ಶಕ್ತಿ ಕಂಡು ಗಲಿಬಿಲಿಗೊಂಡಿದ್ದಾರೆ. ಯಾರೂ ಕೂಡ ಭಾರತದಿಂದ ಪಾಕಿಸ್ತಾನಕ್ಕೆ ಇಂಥ ಪೆಟ್ಟು ಬೀಳುತ್ತದೆ ಎಂದೆಣಿಸಿರಲಿಲ್ಲ.
ಪಾಕಿಸ್ತಾನದ ಬತ್ತಳಿಕೆಯಲ್ಲಿ ಟರ್ಕಿ, ಚೀನಾ ಆಯುಧಗಳು…
ಪಾಕಿಸ್ತಾನದ ಬಳಿ ಹೇರಳ ಸಂಖ್ಯೆಯಲ್ಲಿ ಸಶಸ್ತ್ರ ಡ್ರೋನ್ಗಳಿವೆ. ಅವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಪಾಕಿಸ್ತಾನ ಸ್ವಂತವಾಗಿ ವೃದ್ಧಿಸಿಕೊಂಡ ಶಕ್ತಿಯಲ್ಲ. ಟರ್ಕಿ, ಚೀನಾ ಮತ್ತು ಪಶ್ಚಿಮ ದೇಶಗಳೊಂದಿಗಿನ ಆಳದ ಸಂಬಂಧ ಇದಕ್ಕೆ ಕಾರಣ ಎನ್ನುತ್ತಾರೆ ‘ದಿ ಗ್ರೇಟ್ ರೀಸೆಟ್’ ಪುಸ್ತಕ ಕರ್ತೃ ನವರೂಪ್ ಸಿಂಗ್.
ಪಾಕಿಸ್ತಾನವು ತನ್ನ ಮಿಲಿಟರಿ ಬತ್ತಳಿಕೆಯಲ್ಲಿ ಯಿಹಾ-3 ಡ್ರೋನ್ಗಳನ್ನು ಬಹಳ ಸಂಖ್ಯೆಯಲ್ಲಿ ಸೇರಿಸಿದೆ. ಟರ್ಕಿಯ ಡ್ರೋನ್ ಕಂಪನಿಗಳು ತಯಾರಿಸಿರುವ ಈ ಡ್ರೋನ್ಗಳು ಪ್ರಬಲವಾಗಿವೆ. ಲಿಬಿಯಾ, ಸಿರಿಯಾ ಯುದ್ಧಗಳಲ್ಲಿ ಮಾಡಲಾದ ಪ್ರಯೋಗಗಳು, ಅನುಭವಗಳು ಈ ಡ್ರೋನ್ ತಯಾರಿಕೆ ಹಿಂದಿವೆ. ಇವುಗಳ ಸಂಖ್ಯೆ, ಗಾತ್ರ, ಹಾರಾಟ ವಿಧಾನದಿಂದಾಗಿ ಇವುಗಳ ದಾಳಿಯನ್ನು ಎದುರಿಸುವುದು ಕ್ಲಿಷ್ಟಕರ, ಹಾಗೆಯೇ ಆರ್ಥಿಕವಾಗಿಯೂ ಹೊರೆ. ನಿರಂತರವಾಗಿ ರಾಡಾರ್ ಸಕ್ರಿಯಗೊಳಿಸಬೇಕು, ಕ್ಷಿಪಣಿಗಳನ್ನು ಸಜ್ಜುಗೊಳಿಸಿರಬೇಕು ಎಂದು ನವರೂಪ್ ಸಿಂಗ್ ವಿವರಿಸುತ್ತಾರೆ.
ಇದನ್ನೂ ಓದಿ: ಪಾಕಿಸ್ತಾನದ ಚೀನೀ ಅಸ್ತ್ರಗಳು ಮೇಡ್ ಇನ್ ಇಂಡಿಯಾ ವೆಪನ್ಸ್ಗೆ ಸಾಟಿಯಾ? ಜಾನ್ ಸ್ಪೆನ್ಸರ್ ಬಿಚ್ಚಿಟ್ಟ ಸತ್ಯ
ಇದು ಪಾಕಿಸ್ತಾನದೊಂದಿಗಿನ ಯುದ್ಧ ಮಾತ್ರವಲ್ಲ…
ಭಾರತ ಬೆಳೆಯುತ್ತಿರುವುದನ್ನು ಜಾಗತಿಕ ಪ್ರಬಲ ಶಕ್ತಿಗಳು ಸಹಿಸಿಕೊಳ್ಳುತ್ತಿಲ್ಲ. ಅಂತೆಯೇ, ಭಾರತದ ವಿರುದ್ಧ ಯುದ್ಧಕ್ಕೆ ಪಾಕಿಸ್ತಾನಕ್ಕೆ ಶಕ್ತಿ ತುಂಬುತ್ತಿರುವ ಶಕ್ತಿಗಳು ಹಲವಿವೆ. ಆಪರೇಷನ್ ಸಿಂದೂರದಲ್ಲಿ ಭಾರತವು ಪಾಕಿಸ್ತಾನದ ವಾಯುನೆಲೆಗಳನ್ನು ಹೊಡೆದದ್ದು, ರಾಡಾರ್ಗಳು, ಡ್ರೋನ್ ಡಿಪೋಗಳು ಮತ್ತು ಡಿಫೆನ್ಸ್ ಗ್ರಿಡ್ಗಳನ್ನು ಕೆಲವೇ ಗಂಟೆಯಲ್ಲಿ ಹೊಡೆದು ಹಾಕಿದ್ದು, ಈ ಜಾಗತಿಕ ಶಕ್ತಿಗಳನ್ನು ಬೆಚ್ಚಿಬೀಳಿಸಿದೆ ಎನ್ನುತ್ತಾರೆ ವಿದೇಶಾಂಗ ವ್ಯವಹಾರಗಳ ಕ್ಷೇತ್ರದಲ್ಲಿ ನಿಪುಣರೂ ಆಗಿರುವ ನವರೂಪ್ ಸಿಂಗ್.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ