ನಾಗ್ಪುರದಲ್ಲಿ ಬೋರ್ಡಿಂಗ್ ಗೇಟ್‌ನಲ್ಲಿ ಕುಸಿದು ಬಿದ್ದು ಇಂಡಿಗೋ ಪೈಲಟ್ ಸಾವು
ಬುಧವಾರ ಇದೇ ಪೈಲಟ್ ತಿರುವನಂತಪುರದಿಂದ ಪುಣೆ ಮತ್ತು ನಂತರ ಪುಣೆಯಿಂದ ನಾಗ್ಪುರಕ್ಕೆ ಮುಂಜಾನೆ 3 ರಿಂದ 7 ರವರೆಗೆ ವಿಮಾನ ಹಾರಾಟ ನಡೆಸಿದ್ದರು. ಇದರ ನಂತರ, ಅವರು 27 ಗಂಟೆಗಳ ವಿಶ್ರಾಂತಿ ಅವಧಿಯನ್ನು ಹೊಂದಿದ್ದರು. ಗುರುವಾರ ನಾಲ್ಕು ಮಾರ್ಗಗಳಲ್ಲಿ ಹಾರಲು ಯೋಜಿಸಲಾಗಿತ್ತು, ಮೊದಲ ನಿರ್ಗಮನವನ್ನು ಮಧ್ಯಾಹ್ನ 1 ಗಂಟೆಗೆ ನಿಗದಿಪಡಿಸಲಾಗಿತ್ತು.
ನಾಗ್ಪುರ: ಇಂಡಿಗೋಗೆ (IndiGo) ಸೇರಿದ ವಾಣಿಜ್ಯ ವಿಮಾನದ ಪೈಲಟ್ ಗುರುವಾರ ನಾಗ್ಪುರದ (Nagpur) ಬೋರ್ಡಿಂಗ್ ಗೇಟ್‌ನಲ್ಲಿ ಕುಸಿದು ಸಾವಿಗೀಡಾಗಿದ್ದಾರೆ. ಪೈಲಟ್ (IndiGo pilot) ನಾಗ್ಪುರ-ಪುಣೆ ವಿಮಾನವನ್ನು ನಿರ್ವಹಿಸಲು ಸಿದ್ಧರಾಗಿದ್ದರು. ಕುಸಿದು ಬಿದ್ದ ಪೈಲಟ್‌ನ್ನು ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ಬುಧವಾರ ಇದೇ ಪೈಲಟ್ ತಿರುವನಂತಪುರದಿಂದ ಪುಣೆ ಮತ್ತು ನಂತರ ಪುಣೆಯಿಂದ ನಾಗ್ಪುರಕ್ಕೆ ಮುಂಜಾನೆ 3 ರಿಂದ 7 ರವರೆಗೆ ವಿಮಾನ ಹಾರಾಟ ನಡೆಸಿದ್ದರು. ಇದರ ನಂತರ, ಅವರು 27 ಗಂಟೆಗಳ ವಿಶ್ರಾಂತಿ ಅವಧಿಯನ್ನು ಹೊಂದಿದ್ದರು. ಗುರುವಾರ ನಾಲ್ಕು ಮಾರ್ಗಗಳಲ್ಲಿ ಹಾರಲು ಯೋಜಿಸಲಾಗಿತ್ತು, ಮೊದಲ ನಿರ್ಗಮನವನ್ನು ಮಧ್ಯಾಹ್ನ 1 ಗಂಟೆಗೆ ನಿಗದಿಪಡಿಸಲಾಗಿತ್ತು. ಗುರುವಾರದಂದು ಅವರ ಆರಂಭಿಕ ಮಾರ್ಗವು ನಾಗ್ಪುರದಿಂದ ಪ್ರಾರಂಭವಾಗಲಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶಕ (ಡಿಜಿಸಿಎ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಂದು ವಾರದಲ್ಲಿ ಮೂವರು ಪೈಲಟ್ ಗಳ ಸಾವು ಸಂಭವಿಸಿದೆ . ಅವರಲ್ಲಿ ಇಬ್ಬರು ಭಾರತೀಯ ಪೈಲಟ್‌ಗಳು ಮತ್ತು ಮೂರನೆಯವರು ಕತಾರ್ ಏರ್‌ವೇಸ್‌ನವರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿಯಾಗಿದೆ.
ದೆಹಲಿಯಿಂದ ದೋಹಾಗೆ ಪ್ರಯಾಣಿಕನಾಗಿ ಪ್ರಯಾಣಿಸುತ್ತಿದ್ದ ಕತಾರ್ ಏರ್‌ವೇಸ್ ಪೈಲಟ್ ಬುಧವಾರ ಅಸ್ವಸ್ಥಗೊಂಡು ಸಾವಿಗೀಡಾಗಿದ್ದಾರೆ. ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ವಿಮಾನವನ್ನು ದುಬೈಗೆ ತಿರುಗಿಸಲಾಗಿದೆ.
ಯುಎಸ್ ಪೈಲಟ್ ಸಾವು
ಮತ್ತೊಂದು ಘಟನೆಯಲ್ಲಿ, ಮಿಯಾಮಿಯಿಂದ ಸ್ಯಾಂಟಿಯಾಗೊಗೆ LATAM ಏರ್‌ಲೈನ್ಸ್ ವಿಮಾನದ ಪೈಲಟ್, ವಿಮಾನದ ಶೌಚಾಲಯದಲ್ಲಿ ಕುಸಿದು ಬಿದ್ದು ಸಾವಿಗೀಡಾಗಿದ್ದರು. ಸೋಮವಾರ ವಿಮಾನ ಟೇಕ್ ಆಫ್ ಆದ ಮೂರು ಗಂಟೆಗಳ ನಂತರ ಈ ಘಟನೆ ನಡೆದಿದೆ. 56 ವರ್ಷದ ಪೈಲಟ್ ಇವಾನ್ ಅಂದೌರ್ ಅವರು ಹಾರಾಟದ ಸಮಯದಲ್ಲಿ ತೀವ್ರ ಹೃದಯ ಸ್ತಂಭನಕ್ಕೆ ಒಳಗಾಗಿದ್ದು ಅದು ಅವರ ಸಾವಿಗೆ ಕಾರಣವಾಯಿತು ಎಂದು ವರದಿಗಳು ಸೂಚಿಸುತ್ತವೆ. 271 ಪ್ರಯಾಣಿಕರನ್ನು ಹೊತ್ತಿದ್ದ ವಿಮಾನವು ಪನಾಮ ನಗರದ ಟೊಕುಮೆನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು.
ಇದನ್ನೂ ಓದಿ: ವಿಮಾನದ ಟಾಯ್ಲೆಟ್ನಲ್ಲಿ ಕುಸಿದು ಬಿದ್ದು ಪೈಲಟ್ ಸಾವು, ವಿಮಾನ ತುರ್ತು ಭೂಸ್ಪರ್ಶ
ವಿಮಾನವು ಪನಾಮ ಸಿಟಿಯ ಟೊಕುಮೆನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಾಗ, ವೈದ್ಯರು ಪೈಲಟ್ ಅನ್ನು ಪರೀಕ್ಷಿಸಲು ಧಾವಿಸಿದರು, ಆದರೆ ಅಷ್ಟೊರೊಳಗೆ ಅವರು ಮೃತಪಟ್ಟಿದ್ದರು.ಇವಾನ್ ಅವರು 25 ವರ್ಷಗಳ ಅನುಭವ ಹೊಂದಿರುವ ಅನುಭವಿ ಪೈಲಟ್.ವಿಮಾನವು ಮಂಗಳವಾರ ಪನಾಮ ನಗರದಿಂದ ಹೊರಟು ಚಿಲಿಯ ಕಡೆಗೆ ತನ್ನ ಪ್ರಯಾಣವನ್ನು ಮುಂದುವರೆಸಿತು.
ಇವಾನ್ಅಂದೌರ್ಗೆ 56 ವರ್ಷ. ಅವರ 25 ವರ್ಷಗಳ ಸೇವೆ, ಸಮರ್ಪಣೆ, ಅಮೂಲ್ಯ ಕೊಡುಗೆಗಾಗಿ ನಾವು ಕೃತಜ್ಞರಾಗಿದ್ದೇವೆ, ಹಾರಾಟದ ಸಮಯದಲ್ಲಿ ಪೈಲಟ್ ಜೀವ ಉಳಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಯಿತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:07 pm, Thu, 17 August 23