10 ವರ್ಷ ನಂತರ ದಂಪತಿಗೆ ಮಗು: ಹಾಲಿಗೆ ಹಾಕಿದ ಒಂದು ತೊಟ್ಟು ನೀರಿನಿಂದ ಹೋಯ್ತು ಕಂದಮ್ಮನ ಜೀವ
ಹತ್ತು ವರ್ಷಗಳ ಕಾಯುವಿಕೆಯ ನಂತರ ಜನಿಸಿದ 6 ತಿಂಗಳ ಮಗು ಅಯಾನ್, ಇಂದೋರ್‌ನಲ್ಲಿ ಕಲುಷಿತ ನೀರನ್ನು ಸೇವಿಸಿ ದುರಂತ ಅಂತ್ಯ ಕಂಡಿದೆ. ಹಾಲಿಗೆ ಬೆರೆಸಿದ ನಲ್ಲಿ ನೀರು ಮಗುವಿನ ಜೀವವನ್ನು ತೆಗೆದಿದೆ. ಈ ಘಟನೆ ಪೋಷಕರಿಗೆ ಅಪಾರ ನೋವುಂಟು ಮಾಡಿದೆ. ಅದರಲ್ಲೂ ಮಗುವಿನ ಅಜ್ಜಿ, ಮೊಮ್ಮಗನ ಕಳೆದುಕೊಂಡು ಗೋಳಾಡಿದ್ದಾಳೆ.

ಇಂದೋರ್, ಜ.2: ಹಲವು ವರ್ಷಗಳಿಂದ ಮಕ್ಕಳಿಲ್ಲ ಎಂದು ಕೊರಗಿನಲ್ಲಿದ್ದ ದಂಪತಿಗೆ 10 ವರ್ಷಗಳ ನಂತರ ಮಗುವವೊಂದು ಜನಿಸಿತ್ತು. ಇದೀಗ ಆ ಮಗುವನ್ನು ಕೂಡ ದೇವರು ಕಿತ್ತುಕೊಂಡಿದ್ದಾನೆ. ಹೌದು ಮಧ್ಯಪ್ರದೇಶದ ಇಂದೋರ್‌ನ ಭಾಗೀರಥಪುರ ಪ್ರದೇಶದಲ್ಲಿ (Indore baby death) ದಂಪತಿಗಳು ಮಕ್ಕಳಿಲ್ಲ ಎಂದು ಸಿಕ್ಕ ಸಿಕ್ಕ ದೇವರಿಗೆ ಹರಕೆ ಕಟ್ಟಿ 10 ವರ್ಷಗಳ ನಂತರ ಒಂದು ಮಗುವನ್ನು ಪಡೆದುಕೊಂಡಿದ್ದಾರೆ. ಇದೀಗ ಈ 6 ತಿಂಗಳು ಮಗು ಸ್ಮಶಾನ ಸೇರಿದೆ. ಮಗುವಿಗೆ ಕುಡಿಸುವ ಹಾಲಿಗೆ ಬೆರೆಸಿದ್ದ ನಲ್ಲಿ ನೀರು ಮಗುವಿನ ಜೀವವನ್ನೇ ತೆಗೆದಿದೆ. 6 ತಿಂಗಳ ಅಯಾನ್ ಎಂಬ ಮಗು ಕಲುಷಿತ ನೀರನ್ನು ಸೇವಿಸಿ ಸಾವನ್ನಪ್ಪಿದೆ. ಅಯಾನ್ ಅಜ್ಜಿ ಮೊಮ್ಮಗನನ್ನು ಕಳೆದುಕೊಂಡು ಗೋಳಾಡಿದ್ದಾರೆ. ಹತ್ತು ವರ್ಷಗಳ ಹಿಂದೆ ತನ್ನ ಕುಟುಂಬದಲ್ಲಿ ಒಂದಾದರೂ ಮಗು ಹುಟ್ಟಲಿ ಎಂದು ಎಲ್ಲ ದೇವಸ್ಥಾನ ಸುತ್ತಿ ಪ್ರಾರ್ಥನೆ ಮಾಡಿದ್ದೇನೆ. ಆದರೆ ಇದೀಗ ಆ ದೇವರು ಮಗುವನ್ನು ತನ್ನ ಬಳಿಗೆ ಕರೆಸಿಕೊಂಡಿದ್ದಾನೆ ಎಂದು ಹೇಳಿದ್ದಾರೆ.
ಖಾಸಗಿ ಕೊರಿಯರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಅಯಾನ್ ತಂದೆ ಸುನಿಲ್ ಸಾಹು ಅವರು ಹತ್ತು ವರ್ಷಗಳ ನಂತರ ಮಗು ಪಡೆದ ಖುಷಿಯಲ್ಲಿದ್ದರು. ಅಯಾನ್ ಜನಿಸಿದ್ದು ಜುಲೈನಲ್ಲಿ, 10 ವರ್ಷಗಳ ನಂತರ ನಮ್ಮ ಮನೆಯಲ್ಲಿ ಮಗುವಿನ ಕೂಗು ಕೇಳುವ ಭಾಗ್ಯ ಅ ದೇವರು ಕೊಟ್ಟ, ಆದರೆ ಇದೀಗ ಅವನೇ ಅದನ್ನು ಕಿತ್ತುಕೊಂಡ ಎಂದು ಅಯಾನ್ ಅಜ್ಜಿ ಮನೆ ಮೂಲೆಯಲ್ಲಿ ಕುಳಿತು ಗೋಳಾಡಿದ್ದಾರೆ. ಮಗನಿಗೆ ಮದುವೆಯಾಗಿ 10 ವರ್ಷಗಳ ಕಾಲ ಮಕ್ಕಳಿರಲಿಲ್ಲ. ನನ್ನ ಸೊಸೆಯನ್ನು ಇಡೀ ಊರು ಬಂಜೆ ಎಂದರು. ಇದೀಗ ನನ್ನ ಸೊಸೆಗೆ ಮಗು ಜನಿಸಿದೆ ಎಂಬ ಖುಷಿಯಲ್ಲಿದ್ದೆ, ಇತ್ತೀಚೆಗೆ ಸೊಸೆಗೆ ಎದೆಯಲ್ಲಿ ಹಾಲು ಬರುತ್ತಿರಲಿಲ್ಲ. ಅದಕ್ಕೆ ಪ್ಯಾಕೇಟ್ ಹಾಲನ್ನು ಕೊಡಲು ವೈದ್ಯರು ಸಲಹೆ ನೀಡಿದ್ದರು. ಹಾಗಾಗಿ ಗಟ್ಟಿ ಹಾಲಿಗೆ ಸ್ವಲ್ಪ ನೀರು ಹಾಕಿದ್ದೇವೆ. ಆದರೆ ಆ ನೀರು ಕಲುಷಿತಗೊಂಡಿತು. ಇದೀಗ ಆ ನೀರೇ ನಮ್ಮ ಮನೆಯ ಬೆಳಕನ್ನು ಹಾರಿಸಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆಸ್ತಿಗಾಗಿ ನಿವೃತ್ತ ವಾಯುಪಡೆ ಅಧಿಕಾರಿಯನ್ನು ಕೊಂದ ಪುತ್ರರು
ಈ ನೀರು ಕುಡಿದ ನಂತರ ಮಗು ಆರೋಗ್ಯವಾಗಿತ್ತು. ಆದರೆ ಎರಡು ದಿನಗಳ ನಂತರ ಮಗುವಿಗೆ ಜ್ವರ, ಭೇದಿ ಕಾಣಿಸಿಕೊಂಡಿತು. ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ವೈದ್ಯರು ಚಿಕಿತ್ಸೆ ನೀಡಿದ್ರೂ ಯಾವುದೇ ಪ್ರಯೋಜ ಆಗಿಲ್ಲ. ಭಾನುವಾರ ರಾತ್ರಿ ಮಗುವಿನ ಸ್ಥಿತಿ ಗಂಭೀರವಾಯಿತು. ಸೋಮವಾರ ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಮಗು ಬದುಕಲಿಲ್ಲ. ಮಗು ಕಲುಷಿತ ನೀರಿನಿಂದಲ್ಲೇ ಸತ್ತಿದೆ ಎಂದು ಯಾರೂ ನಮಗೆ ಹೇಳಿಲ್ಲ.ನೆರೆಹೊರೆಯವರೂ ಇದೇ ನೀರು ಬಳಸುತ್ತಿದ್ದು, ಅವರು ಕೂಡ ನಮಗೆ ವಿಷಯ ಹೇಳಲಿಲ್ಲ ಎಂದು ಮಗುವಿನ ತಂದೆ ಸುನಿಲ್ ಅಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಬಡವರು, ಇದರಲ್ಲಿ ಯಾರನ್ನೂ ದೂರುವುದಿಲ್ಲ. ದೇವರು ಕೊಟ್ಟ, ಅವನೇ ಕಿತ್ತುಕೊಂಡ ಎಂದು ಮಗುವಿನ ಅಜ್ಜಿ ಹೇಳಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:21 pm, Fri, 2 January 26




