‘ಮೊಬೈಲ್, ಇಂಟರ್ನೆಟ್ ಬಳಸುವುದು ಮಕ್ಕಳ ಮೂಲಭೂತ ಹಕ್ಕು’; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಇಂಟರ್ನೆಟ್ ಬಳಕೆಯನ್ನು ವಯಸ್ಸಿನ ಆಧಾರದ ಮೇಲೆ ಸಂಪೂರ್ಣವಾಗಿ ನಿಷೇಧಿಸುವುದನ್ನು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ. ಮಕ್ಕಳು ಕೂಡ ಇಂಟರ್ನೆಟ್ ಅನ್ನು ಬಳಸಲು ಮೂಲಭೂತ ಹಕ್ಕನ್ನು ಹೊಂದಿದ್ದಾರೆ ಎಂದಿರುವ ಸುಪ್ರೀಂ ಕೋರ್ಟ್ ಆನ್‌ಲೈನ್‌ನಲ್ಲಿ ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯಗಳನ್ನು ತಡೆಯಲು ಕಠಿಣ ಚೌಕಟ್ಟನ್ನು ರೂಪಿಸುವಂತೆ ಕೋರಿದೆ. ಮಕ್ಕಳ ಸುರಕ್ಷತೆ ಮತ್ತು ಇಂಟರ್ನೆಟ್ ಬಳಸುವ ಅವರ ಸ್ವಾತಂತ್ರ್ಯ ಎರಡೂ ಮುಖ್ಯ. ಮಕ್ಕಳ ಸುರಕ್ಷತೆಗಾಗಿ ಅವರ ಮೂಲಭೂತ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಮೊಬೈಲ್, ಇಂಟರ್ನೆಟ್ ಬಳಸುವುದು ಮಕ್ಕಳ ಮೂಲಭೂತ ಹಕ್ಕು; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಮಕ್ಕಳ ಮೊಬೈಲ್ ಬಳಕೆ
Image Credit source: Getty Images

Updated on: Oct 17, 2026 | 3:08 PM

ಮುಖ್ಯಾಂಶಗಳು

  • ವಯಸ್ಸಿನ ಆಧಾರದಲ್ಲಿ ಮಕ್ಕಳಿಗೆ ಇಂಟರ್ನೆಟ್ ನಿಷೇಧಿಸಲಾಗದು ಎಂದ ಸುಪ್ರೀಂ ಕೋರ್ಟ್
  • ಇಂಟರ್ನೆಟ್, ಮೊಬೈಲ್ ಬಳಕೆಯೂ ಮಕ್ಕಳ ಮೂಲಭೂತ ಹಕ್ಕು ಎಂದು ತೀರ್ಪು
  • ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸೂಚನೆ

ನವದೆಹಲಿ, ಅಕ್ಟೋಬರ್ 17: ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳು ಕೂಡ ಮೊಬೈಲ್, ಇಂಟರ್ನೆಟ್ ಬಳಕೆಯಿಂದ ಡಿಜಿಟಲ್ ವಂಚನೆಗೆ ಸಿಲುಕುವ, ಮಾನಸಿಕ ಶೋಷಣೆಗೆ ಒಳಗಾಗುವ ಪ್ರಕರಣಗಳು ಹೆಚ್ಚಾಗಿರುವುದರಿಂದ ವಯೋಮಿತಿಯ ಆಧಾರದ ಮೇಲೆ ಮಕ್ಕಳಿಗೆ ಇಂಟರ್ನೆಟ್ ಬಳಕೆಯನ್ನು ನಿಷೇಧಿಸಬೇಕೆಂದು ಅರ್ಜಿ ಸಲ್ಲಿಕೆಯಾಗಿತ್ತು. ಈ ಬಗ್ಗೆ ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, “ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಇಂಟರ್ನೆಟ್ ಬಳಕೆ ಮೂಲಭೂತ ಹಕ್ಕು. ಇದಕ್ಕೆ ಮಕ್ಕಳು ಕೂಡ ಹೊರತಾಗಿಲ್ಲ. ಮಕ್ಕಳಿಗೂ ಇಂಟರ್ನೆಟ್ (ಅಂತರ್ಜಾಲ) ಸೌಲಭ್ಯವನ್ನು ಪಡೆಯುವುದು ಮತ್ತು ಬಳಸುವುದು ಸಂವಿಧಾನದ ವಿಧಿ 21 ಹಾಗೂ ವಿಧಿ 19(1)(ಎ) ಅಡಿಯಲ್ಲಿ ಸಿಗುವ ಮೂಲಭೂತ ಹಕ್ಕು” ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಮಕ್ಕಳ ಭದ್ರತೆಯ ನೆಪದಲ್ಲಿ ಅವರಿಗೆ ಇಂಟರ್ನೆಟ್ ಬಳಕೆಯನ್ನು ಸಂಪೂರ್ಣವಾಗಿ ನಿರಾಕರಿಸುವುದು ಅತ್ಯಂತ ಹಾಸ್ಯಾಸ್ಪದವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಪ್ರತಿಪಾದಿಸಿದೆ.

ಮಕ್ಕಳ ಹಕ್ಕುಗಳಿಗಾಗಿ ಶ್ರಮಿಸುವ ‘ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಅಲೈಯನ್ಸ್’ ಎಂಬ ಎನ್‌ಜಿಒ ಮತ್ತು ಇತರ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ. ಬಿ. ಪಾರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠವು ಈ ಮಹತ್ವದ ತೀರ್ಪು ನೀಡಿದೆ.

“ಸಂವಿಧಾನದ ವಿಧಿ 21 ಮತ್ತು ವಿಧಿ 19(1)(ಎ) ಅಡಿಯಲ್ಲಿ ಇಂಟರ್ನೆಟ್ ಪಡೆಯುವುದು ಮತ್ತು ಬಳಸುವುದು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕು ಎಂದು ಹೇಳಲು ನಮಗೆ ಯಾವುದೇ ಹಿಂಜರಿಕೆಯಿಲ್ಲ. ವಯಸ್ಸಿನ ವ್ಯತ್ಯಾಸವಿಲ್ಲದೆ ನಮ್ಮ ಮಕ್ಕಳೂ ಸಹ ಅದೇ ಹಕ್ಕುಗಳನ್ನು ಪಡೆಯುತ್ತಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಮಾಹಿತಿಯನ್ನು ಪಡೆಯುವ ಮತ್ತು ಹಂಚಿಕೊಳ್ಳುವ ಹಕ್ಕನ್ನೂ ಒಳಗೊಂಡಿದೆ. ಇಂಟರ್ನೆಟ್ ಸೃಜನಶೀಲತೆ ಮತ್ತು ಜ್ಞಾನದ ಮಾರುಕಟ್ಟೆಯಾಗಿದೆ. ವಿಶೇಷವಾಗಿ ಗ್ರಾಮೀಣ ಮತ್ತು ದೂರದ ಪ್ರದೇಶಗಳ ಮಕ್ಕಳಿಗೆ ಇಂಟರ್ನೆಟ್ ಒಂದೇ ಕಲಿಕೆಯ ಆಸರೆಯಾಗಿದೆ. ಅಷ್ಟೇ ಅಲ್ಲದೆ, ವಿಶೇಷ ಚೇತನ ಮಕ್ಕಳಿಗೆ ತಮ್ಮಂತಹ ಇತರರೊಂದಿಗೆ ಸಂವಹನ ನಡೆಸಲು ಇದು ಏಕೈಕ ಮಾಧ್ಯಮವಾಗಿದೆ. ಹೀಗಾಗಿ, ಮಕ್ಕಳಿಗೆ ಇಂಟರ್ನೆಟ್ ಬಳಕೆ ನಿಷೇಧಿಸಲು ಸಾಧ್ಯವಿಲ್ಲ” ಎಂದು ನ್ಯಾಯಪೀಠ ಹೇಳಿದೆ.

ಇದನ್ನೂ ಓದಿ: ಇಸ್ಲಾಂಗೆ ಮತಾಂತರಗೊಂಡರೆ ಮೀಸಲಾತಿ ಸಿಗಲ್ಲ: ಸಾಮಾಜಿಕ ಹಿಂದುಳಿದಿರುವಿಕೆ ವರ್ಗಾಯಿಸಲಾಗದು ಎಂದ ಸುಪ್ರೀಂ ಕೋರ್ಟ್

ಸಂಪೂರ್ಣ ನಿಷೇಧ ಪರಿಹಾರವಲ್ಲ:

ಇಂಟರ್ನೆಟ್ ಸಂಪೂರ್ಣವಾಗಿ ಸುರಕ್ಷಿತವಾಗಿಲ್ಲ ಎಂಬುದನ್ನು ಒಪ್ಪಿಕೊಂಡ ನ್ಯಾಯಪೀಠ, “ಸಾಮಾಜಿಕ ಜಾಲತಾಣಗಳು ಹಾನಿಕಾರಕ ವಿಷಯಗಳನ್ನು ತಡೆಯಲು ವಿಫಲವಾಗಿವೆ ಎಂಬ ಕಾರಣಕ್ಕೆ ಮಕ್ಕಳನ್ನು ಇಂಟರ್ನೆಟ್‌ನಿಂದ ದೂರವಿಡುವುದು ಸಂತ್ರಸ್ತರನ್ನೇ ಅಪರಾಧಿಗಳನ್ನಾಗಿ ಮಾಡಿದಂತಾಗುತ್ತದೆ. ಒಂದುವೇಳೆ ನಾವು ಕಾನೂನುಬದ್ಧವಾಗಿ ನಿಷೇಧಿಸಿದರೂ ಮಕ್ಕಳು ಇಂಟರ್ನೆಟ್ ಬಳಕೆಯನ್ನು ನಿಲ್ಲಿಸುವುದಿಲ್ಲ. ಅದರ ಬದಲಿಗೆ ನಿಯಂತ್ರಣವಿಲ್ಲದ ಹಾಗೂ ಮತ್ತಷ್ಟು ಅಪಾಯಕಾರಿಯಾದ ವೆಬ್‌ಸೈಟ್‌ಗಳತ್ತ ಮುಖ ಮಾಡುತ್ತಾರೆ.  ನಿಷೇಧ ಹೇರಿದರೆ, ಆನ್‌ಲೈನ್‌ನಲ್ಲಿ ಬೆದರಿಕೆ ಅಥವಾ ಶೋಷಣೆಗೆ ಒಳಗಾಗುವ ಮಕ್ಕಳು ಪೋಷಕರಿಂದ ಬೈಗುಳ ತಿನ್ನಬೇಕಾಗುತ್ತದೆ ಎಂಬ ಭಯದಿಂದ ವಿಷಯವನ್ನು ಮುಚ್ಚಿಡುತ್ತಾರೆ. ವಯಸ್ಸಿನ ಆಧಾರದ ಮೇಲೆ ತೀವ್ರ ನಿರ್ಬಂಧ ಹೇರಲು ಬಳಕೆದಾರರ ಸೂಕ್ಷ್ಮ ಡೇಟಾವನ್ನು ಸಂಗ್ರಹಿಸಬೇಕಾಗುತ್ತದೆ. ಇದು ಅತಿಯಾದ ಕಣ್ಗಾವಲು ಮತ್ತು ಮಾಹಿತಿಯ ದುರ್ಬಳಕೆಗೆ ದಾರಿ ಮಾಡಿಕೊಡುತ್ತದೆ” ಎಂದು ಅಭಿಪ್ರಾಯಪಟ್ಟಿದೆ.

ಚೈಲ್ಡ್ ಮೋಡ್ ಬಳಕೆಗೆ ಸೂಚನೆ:

ಸಾಮಾಜಿಕ ಜಾಲತಾಣಗಳಲ್ಲಿ ಪ್ರಿ-ಟೀನ್ (ಹದಿಹರೆಯಕ್ಕೂ ಮೊದಲ) ವಯಸ್ಸಿನ ಮಕ್ಕಳಿಗೆ ಖಾತೆ ತೆರೆಯಲು ಪೋಷಕರ ಸಮ್ಮತಿಯನ್ನು ಕಡ್ಡಾಯಗೊಳಿಸುವುದು, ಮಕ್ಕಳ ಖಾತೆಗಳನ್ನು ಡೀಫಾಲ್ಟ್ ಆಗಿ ‘ಪ್ರೈವೇಟ್’ ಮಾಡುವುದು, ಅಪರಿಚಿತರಿಂದ ಮೆಸೇಜ್ ಬರುವುದನ್ನು ತಡೆಯುವುದು ಹಾಗೂ ಜಾಹೀರಾತುಗಳನ್ನು ನಿಯಂತ್ರಿಸುವ ‘ಚೈಲ್ಡ್ ಮೋಡ್’ ಮಾದರಿಯ ವ್ಯವಸ್ಥೆಯನ್ನು ಜಾರಿಗೆ ತರಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಮಕ್ಕಳ ಸುರಕ್ಷತೆಗೂ ಸರ್ಕಾರ ಆದ್ಯತೆ ನೀಡಲಿ:

ಇದರ ಜೊತೆಗೆ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ನಿರತರಾಗಿರುವಾಗ, ಆ ಡಿಜಿಟಲ್ ಲೋಕವು ಅವರ ಮೇಲೆ ಬೀರುತ್ತಿರುವ ಪರಿಣಾಮಗಳ ಕುರಿತ ಕಳವಳದ ಬಗ್ಗೆಯೂ ಸುಪ್ರೀಂ ಕೋರ್ಟ್ ಗಮನಹರಿಸಿದೆ. ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ಮಿತಿಗೊಳಿಸಲು ಕಾನೂನಾತ್ಮಕ ಸುರಕ್ಷತಾ ಕ್ರಮಗಳನ್ನು ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ನೋಟೀಸ್ ಜಾರಿ ಮಾಡಿದೆ. ಈ ಪ್ರಕರಣವು ಆನ್‌ಲೈನ್ ಸುರಕ್ಷತೆ, ಮಾನಸಿಕ ಆರೋಗ್ಯ ಹಾಗೂ ತಂತ್ರಜ್ಞಾನ ಕಂಪನಿಗಳ ಜವಾಬ್ದಾರಿಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: ಮಕ್ಕಳಲ್ಲಿ ಮೊಬೈಲ್ ಬಳಕೆ ಮತ್ತು ಜಂಕ್ ಫುಡ್ ಅಭ್ಯಾಸ: ಪೋಷಕರು ತಿಳಿಯಲೇಬೇಕಾದ ವಿಷಯಗಳು

‘ಬಾರ್ ಆ್ಯಂಡ್ ಬೆಂಚ್’ ವರದಿಯ ಪ್ರಕಾರ, ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 7ಕ್ಕೆ ನಿಗದಿಪಡಿಸಿದೆ. ಇಂದೋರ್‌ನ ‘ಎಮರಾಲ್ಡ್ ಹೈಟ್ಸ್ ಇಂಟರ್‌ನ್ಯಾಷನಲ್ ಸ್ಕೂಲ್’ ಮತ್ತು ಅದರ ನಿರ್ದೇಶಕ ಸಿದ್ಧಾರ್ಥ್ ಸಿಂಗ್ ಅವರು ಮಕ್ಕಳ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಉಂಟಾಗುವ ಅಪಾಯಗಳನ್ನು ತಡೆಯಲು ಸಮಗ್ರ ನಿಯಂತ್ರಣ ವ್ಯವಸ್ಥೆ ರೂಪಿಸುವಂತೆ ಕೋರಿ ಈ ಅರ್ಜಿ ದಾಖಲಿಸಿದ್ದಾರೆ.

ಸಾಮಾಜಿಕ ಜಾಲತಾಣಗಳನ್ನು ಬಳಸಲು ನಿರ್ದಿಷ್ಟ ವಯಸ್ಸಿನ ಮಿತಿಯನ್ನು ನಿಗದಿಪಡಿಸಬೇಕು ಮತ್ತು ಅಪ್ರಾಪ್ತರು ಖಾತೆಗಳನ್ನು ತೆರೆಯುವ ಹಾಗೂ ನಿರ್ವಹಿಸುವ ಕುರಿತು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಮಕ್ಕಳಲ್ಲಿ ಆತಂಕ, ಖಿನ್ನತೆ, ದೇಹದ ಆಕಾರದ ಬಗ್ಗೆ ಕಳವಳ, ನಿದ್ರಾಹೀನತೆ ಮುಂತಾದ ಮಾನಸಿಕ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ಈ ಬಗ್ಗೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೋರಿರುವುದರಿಂದ, ಮಕ್ಕಳ ಡಿಜಿಟಲ್ ಬದುಕಿನ ರಕ್ಷಣೆ ಹಾಗೂ ತಂತ್ರಜ್ಞಾನ ಸೇವೆಗಳ ನಿಯಂತ್ರಣದ ನಡುವಿನ ಸಮತೋಲನದ ಕುರಿತು ಮುಂಬರುವ ದಿನಗಳಲ್ಲಿ ಮಹತ್ವದ ಚರ್ಚೆಗಳು ನಡೆಯುವ ನಿರೀಕ್ಷೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

 

Published On - 3:07 pm, Sat, 17 October 26

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us