ಮಕ್ಕಳಲ್ಲಿ ಮೊಬೈಲ್ ಬಳಕೆ ಮತ್ತು ಜಂಕ್ ಫುಡ್ ಅಭ್ಯಾಸ: ಪೋಷಕರು ತಿಳಿಯಲೇಬೇಕಾದ ವಿಷಯಗಳು
ಮಕ್ಕಳು ಮೊಬೈಲ್ ನೋಡುತ್ತಾ ಚಿಪ್ಸ್, ಚಾಕೊಲೇಟ್ ಸೇರಿದಂತೆ ಜಂಕ್ ಫುಡ್ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಜಂಕ್ ಫುಡ್‌ನಲ್ಲಿರುವ ಹೆಚ್ಚಿನ ಉಪ್ಪು, ಸಕ್ಕರೆ ಮತ್ತು ಕೊಬ್ಬು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಅಷ್ಟೇಅಲ್ಲ, ಇದರಿಂದ ನಾನಾ ರೀತಿಯ ತೊಂದರೆಗಳು ಉಂಟಾಗಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ಇಂದಿನ ದಿನಗಳಲ್ಲಿ ಮಕ್ಕಳ ಕೈಯಲ್ಲಿ ಮೊಬೈಲ್ ಫೋನ್ ಇರುವುದು ಸಾಮಾನ್ಯವಾಗಿದೆ. ಇದರ ಜೊತೆಗೆ ಮೊಬೈಲ್ ನೋಡುತ್ತಾ ಚಿಪ್ಸ್, ಚಾಕೊಲೇಟ್, ಬಿಸ್ಕತ್ ಸೇರಿದಂತೆ ಪ್ಯಾಕೆಟ್ ಫುಡ್ ಸೇವಿಸುವ ಅಭ್ಯಾಸವೂ ಹೆಚ್ಚುತ್ತಿದೆ. ಪೋಷಕರು, ಅಜ್ಜ-ಅಜ್ಜಿಯರು ಮಕ್ಕಳಿಗೆ ಇಂತಹ ಆಹಾರ ನೀಡುವುದನ್ನು ಪ್ರೀತಿಯ ಸಂಕೇತವೆಂದು ಭಾವಿಸಬಹುದು. ಆದರೆ ಮೊಬೈಲ್ ಬಳಕೆ ಮತ್ತು ಜಂಕ್ ಫುಡ್ ಸಂಯೋಜನೆ ಮಕ್ಕಳ ಆರೋಗ್ಯದ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರುವ ಸಾಧ್ಯತೆಯಿದೆ. ಹೌದು, ಇದರಿಂದ ನಾನಾ ರೀತಿಯ ತೊಂದರೆಗಳು ಉಂಟಾಗಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.
ಮೊಬೈಲ್ ನೋಡುತ್ತಾ ತಿನ್ನುವುದರಿಂದ ಏನಾಗಬಹುದು?
ಮಕ್ಕಳು ಮೊಬೈಲ್‌ನಲ್ಲಿ ಮುಳುಗಿ ಊಟ ಮಾಡುವಾಗ ಆಹಾರದ ಮೇಲೆ ಗಮನ ಕಡಿಮೆಯಾಗಬಹುದು. ಇದರಿಂದ ಎಷ್ಟು ತಿನ್ನುತ್ತಿದ್ದಾರೆ ಅಥವಾ ಹೊಟ್ಟೆ ತುಂಬಿದೆಯೇ ಎಂಬುದನ್ನು ಗಮನಿಸದೆ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವಿಸುವ ಸಾಧ್ಯತೆಯಿದೆ. ವಿಶೇಷವಾಗಿ ಚಿಪ್ಸ್ ಮತ್ತು ಇತರ ಪ್ಯಾಕೆಟ್ ಆಹಾರಗಳನ್ನು ಹೀಗೆ ಸೇವಿಸುವುದರಿಂದ ಅನಗತ್ಯ ಕ್ಯಾಲೊರಿಗಳ ಸೇವನೆ ಹೆಚ್ಚಾಗಬಹುದು.
ಜಂಕ್ ಫುಡ್ ಏಕೆ ಸಮಸ್ಯೆಯಾಗಬಹುದು?
ಹಲವು ಜಂಕ್ ಫುಡ್‌ಗಳಲ್ಲಿ ಉಪ್ಪು, ಸಕ್ಕರೆ ಮತ್ತು ಕೊಬ್ಬಿನ ಪ್ರಮಾಣ ಹೆಚ್ಚಿರಬಹುದು. ಇಂತಹ ಆಹಾರವನ್ನು ಪದೇಪದೇ ಸೇವಿಸುವುದರಿಂದ ಮಕ್ಕಳ ಒಟ್ಟಾರೆ ಆಹಾರ ಗುಣಮಟ್ಟ ಹದಗೆಡಬಹುದು. ದೀರ್ಘಕಾಲದಲ್ಲಿ ಅತಿಯಾದ ಕ್ಯಾಲೊರಿ ಸೇವನೆ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಸಮತೋಲಿತ ಆಹಾರದ ಬದಲು ಇಂತಹ ಆಹಾರಕ್ಕೆ ಹೆಚ್ಚು ಆದ್ಯತೆ ನೀಡಿದರೆ ಅಗತ್ಯ ಪೋಷಕಾಂಶಗಳ ಕೊರತೆಯೂ ಉಂಟಾಗಬಹುದು.
ಇದನ್ನೂ ಓದಿ: ಚೀಟ್ ಡೇ ಹೃದಯಕ್ಕೆ ಹಾನಿಕರವೇ? ಇಷ್ಟದ ಆಹಾರ ತಿನ್ನುವಾಗ ಈ ವಿಷಯ ನೆನಪಿರಲಿ!
ದೈಹಿಕ ಚಟುವಟಿಕೆ ಮತ್ತು ನಿದ್ರೆಯ ಮೇಲೂ ಪರಿಣಾಮ
ಹೆಚ್ಚಿನ ಸ್ಕ್ರೀನ್ ಸಮಯದಿಂದ ಮಕ್ಕಳು ಆಟ, ವ್ಯಾಯಾಮ ಮತ್ತು ಇತರ ದೈಹಿಕ ಚಟುವಟಿಕೆಗಳಿಗೆ ನೀಡುವ ಸಮಯ ಕಡಿಮೆಯಾಗಬಹುದು. ದೀರ್ಘಕಾಲದ ಸ್ಕ್ರೀನ್ ಬಳಕೆ, ವಿಶೇಷವಾಗಿ ರಾತ್ರಿ ಸಮಯದಲ್ಲಿ, ನಿದ್ರೆಯ ಅವಧಿ ಮತ್ತು ಗುಣಮಟ್ಟದ ಮೇಲೂ ಪರಿಣಾಮ ಬೀರಬಹುದು.
ಪೋಷಕರು ಏನು ಮಾಡಬೇಕು?
ಮಕ್ಕಳು ಊಟ ಮಾಡುವಾಗ ಮೊಬೈಲ್, ಟಿವಿ ಸೇರಿದಂತೆ ಸ್ಕ್ರೀನ್‌ಗಳಿಂದ ದೂರವಿರುವ ಅಭ್ಯಾಸ ಬೆಳೆಸಿಕೊಳ್ಳುವುದು ಉತ್ತಮ. ಅವರ ಆಹಾರದಲ್ಲಿ ಮನೆಯಲ್ಲೇ ತಯಾರಿಸಿದ ಪೌಷ್ಟಿಕ ಆಹಾರ, ಹಣ್ಣುಗಳು, ತರಕಾರಿಗಳು, ಬೇಳೆಕಾಳುಗಳು ಮತ್ತು ಇತರ ಸಮತೋಲಿತ ಆಹಾರಗಳನ್ನು ಸೇರಿಸಬೇಕು. ಪ್ರತಿದಿನ ವಯಸ್ಸಿಗೆ ಅನುಗುಣವಾಗಿ ಆಟ ಮತ್ತು ದೈಹಿಕ ಚಟುವಟಿಕೆಗೆ ಸಮಯ ನೀಡುವುದು ಸಹ ಮುಖ್ಯ. ಮಕ್ಕಳಿಗೆ ಮೊಬೈಲ್ ಸಂಪೂರ್ಣವಾಗಿ ನಿಷೇಧಿಸುವುದಕ್ಕಿಂತ ಊಟದ ಸಮಯವನ್ನು ಸ್ಕ್ರೀನ್-ಮುಕ್ತವಾಗಿಸುವುದು, ಜಂಕ್ ಫುಡ್ ಸೇವನೆಯನ್ನು ಮಿತಿಗೊಳಿಸುವುದು ಮತ್ತು ಆರೋಗ್ಯಕರ ಆಹಾರ ಪದ್ಧತಿ ಬೆಳೆಸುವುದು ಹೆಚ್ಚು ಉಪಯುಕ್ತ ಕ್ರಮವಾಗಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




