
ಟೆಹ್ರಾನ್, ಜೂನ್ 24: ಇರಾನ್‌ನ ಇಸ್ಲಾಮಿಕ್ ಗಣರಾಜ್ಯದ ಅತ್ಯುನ್ನತ ಧಾರ್ಮಿಕ ಮತ್ತು ರಾಜಕೀಯ ನಾಯಕರಾದ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರ ನಿಧನದ ಬೆನ್ನಲ್ಲೇ ಭಾರಿ ರಾಜಕೀಯ ಬೆಳವಣಿಗೆಯೊಂದು ನಡೆದಿದೆ. ಮುಂದಿನ ತಿಂಗಳು ಟೆಹ್ರಾನ್‌ನಲ್ಲಿ ನಡೆಯಲಿರುವ ಅಲಿ ಖಮೇನಿ ಅವರ ಸನ್ಮಾನಪೂರ್ವಕ ಸರ್ಕಾರಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಂತೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧಿಕೃತ ಆಹ್ವಾನ ನೀಡಿದ್ದಾರೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.
ಇರಾನ್ ಮತ್ತು ಭಾರತದ ನಡುವಿನ ಐತಿಹಾಸಿಕ ಹಾಗೂ ಆರ್ಥಿಕ ಸಂಬಂಧಗಳನ್ನು ಗಮನದಲ್ಲಿಟ್ಟುಕೊಂಡು ಇರಾನ್ ಅಧ್ಯಕ್ಷ ಪೆಜೆಶ್ಕಿಯನ್ ಅವರು ಪ್ರಧಾನಿ ಮೋದಿಗೆ ಈ ವಿಶೇಷ ಆಹ್ವಾನವನ್ನು ಕಳುಹಿಸಿದ್ದಾರೆ. ಚಾಬಹಾರ್ ಬಂದರು ಅಭಿವೃದ್ಧಿ ಸೇರಿದಂತೆ ಹಲವು ಕಾರ್ಯತಂತ್ರದ ಪಾಲುದಾರಿಕೆಗಳನ್ನು ಹೊಂದಿರುವ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧದ ದೃಷ್ಟಿಯಿಂದ ಈ ಭೇಟಿ ಅತ್ಯಂತ ಮಹತ್ವದ್ದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: ಮೊಜ್ತಬಾ ಖಮೇನಿ ಬದುಕಿದ್ದಾರಾ? ಶಾಂತಿ ಮಾತುಕತೆ ಯಾವ ಹಾದಿಯಲ್ಲಿದೆ, ಮಾರ್ಕೊ ರುಬಿಯೊ ಹೇಳಿದ್ದೇನು ಇಲ್ಲಿದೆ ಮಾಹಿತಿ
ಅಯತೊಲ್ಲಾ ಅಲಿ ಖಮೇನಿ ಅವರು 1989ರಿಂದ ಇರಾನ್‌ನ ಅತ್ಯುನ್ನತ ನಾಯಕರಾಗಿ ಸರ್ವಾಧಿಕಾರ ನಡೆಸುತ್ತಿದ್ದರು. ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಅಮೆರಿಕದೊಂದಿಗೆ ಇರಾನ್ ಹೊಂದಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ಖಮೇನಿ ಅವರ ಅಂತ್ಯಕ್ರಿಯೆ ನಡೆಯುತ್ತಿರುವುದರಿಂದ ವಿಶ್ವದ ಹಲವು ಪ್ರಮುಖ ನಾಯಕರು ಇದರಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಇರಾನ್ ಅಧ್ಯಕ್ಷರಿಂದ ಅಧಿಕೃತ ಆಹ್ವಾನ ಬಂದಿದ್ದರೂ, ನವದೆಹಲಿಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಕುರಿತು ಇನ್ನು ಯಾವುದೇ ಅಂತಿಮ ನಿರ್ಧಾರವನ್ನು ಪ್ರಕಟಿಸಿಲ್ಲ. ಪ್ರಸ್ತುತ ದೇಶದಲ್ಲಿ ಸಚಿವ ಸಂಪುಟ ಪುನಾರಚನೆಯ ಸಾಧ್ಯತೆಗಳು ಮತ್ತು ದೇಶೀಯ ರಾಜಕೀಯದ ನಡುವೆ ಪ್ರಧಾನಿ ಮೋದಿ ಅವರ ಈ ಇರಾನ್ ಪ್ರವಾಸದ ವೇಳಾಪಟ್ಟಿ ಇನ್ನೂ ಅಧಿಕೃತವಾಗಿ ಖಚಿತವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಮುಂದಿನ ತಿಂಗಳು ನಡೆಯಲಿರುವ ಈ ಅಂತ್ಯಕ್ರಿಯೆಗೆ ಭಾರತದ ಪರವಾಗಿ ಪ್ರಧಾನಿಯವರೇ ಹೋಗಲಿದ್ದಾರೆಯೇ ಅಥವಾ ಹಿರಿಯ ಸಚಿವರ ನಿಯೋಗವನ್ನು ಕಳುಹಿಸಲಾಗುತ್ತದೆಯೇ ಎಂಬುದು ಕೆಲವೇ ದಿನಗಳಲ್ಲಿ ಸ್ಪಷ್ಟವಾಗಲಿದೆ.
ಜುಲೈ 4ರಂದು ಟೆಹ್ರಾನ್‌ನ ಗ್ರಾಂಡ್ ಮೊಸಲ್ಲಾ ಸಂಕೀರ್ಣದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಖಮೇನಿ ಅವರ ಪಾರ್ಥಿವ ಶರೀರವನ್ನು ಇಡಲಾಗುವುದು. ಅಂದಿನಿಂದಲೇ ಸರ್ಕಾರಿ ಅಂತ್ಯಕ್ರಿಯೆ ಆರಂಭವಾಗಲಿದೆ. ಟೆಹ್ರಾನ್ ಮತ್ತು ಕೋಮ್ ನಗರಗಳಲ್ಲಿ ಬೃಹತ್ ಸಾರ್ವಜನಿಕ ಮೆರವಣಿಗೆಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ ಇರಾಕ್‌ನ ಪವಿತ್ರ ನಗರಗಳಾದ ನಜಾಫ್ ಮತ್ತು ಕರ್ಬಲಾದಲ್ಲೂ ವಿಶೇಷ ಪ್ರಾರ್ಥನೆಗಳು ನಡೆಯಲಿವೆ.
ಇದನ್ನೂ ಓದಿ: ಮೊಜ್ತಬಾ ಖಮೇನಿ ಬದುಕಿದ್ದಾರಾ? ಶಾಂತಿ ಮಾತುಕತೆ ಯಾವ ಹಾದಿಯಲ್ಲಿದೆ, ಮಾರ್ಕೊ ರುಬಿಯೊ ಹೇಳಿದ್ದೇನು ಇಲ್ಲಿದೆ ಮಾಹಿತಿ
ಜುಲೈ 9ರಂದು ಖಮೇನಿ ಅವರ ರಸದಾದ ಮಶಾದ್‌ನಲ್ಲಿರುವ ಪ್ರಸಿದ್ಧ ‘ಇಮಾಮ್ ರೆಜಾ’ ದರ್ಗಾದಲ್ಲಿ ಅಂತಿಮ ದಫನ ಪ್ರಕ್ರಿಯೆ ನೆರವೇರಲಿದೆ. ಕಳೆದ 4 ದಶಕಗಳ ಕಾಲ ಇರಾನ್‌ನ ರಾಜಕೀಯ ವ್ಯವಸ್ಥೆಯನ್ನು ಮುನ್ನಡೆಸಿದ್ದ ಧೀಮಂತ ನಾಯಕನಿಗೆ ವಿದಾಯ ಹೇಳಲು ಕೋಟ್ಯಂತರ ಜನರು ಈ ಸಂದರ್ಭದಲ್ಲಿ ಸೇರುವ ನಿರೀಕ್ಷೆಯಿದೆ.
ಫೆಬ್ರವರಿಯಲ್ಲಿ ಇಸ್ರೇಲ್ ದಾಳಿಯಲ್ಲಿ ಖಮೇನಿ ನಿಧನರಾದ ತಕ್ಷಣ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ನವದೆಹಲಿಯಲ್ಲಿರುವ ಇರಾನ್ ರಾಯಭಾರ ಕಚೇರಿಗೆ ಭೇಟಿ ನೀಡಿ ಭಾರತ ಸರ್ಕಾರದ ಪರವಾಗಿ ಸಂತಾಪ ಪುಸ್ತಕಕ್ಕೆ ಸಹಿ ಹಾಕಿದ್ದರು. ಭಾರತವು ಇರಾನ್‌ನೊಂದಿಗೆ ಸಾಂಸ್ಕೃತಿಕ ಮತ್ತು ರಾಜತಾಂತ್ರಿಕವಾಗಿ ಸುದೀರ್ಘ ಹಾಗೂ ನಿಕಟ ಸಂಬಂಧವನ್ನು ಹೊಂದಿದೆ. ಪಶ್ಚಿಮ ಏಷ್ಯಾದಲ್ಲಿ 40 ದಿನಗಳ ಕಾಲ ನಡೆದ ಸಂಘರ್ಷದ ಅವಧಿಯಲ್ಲಿ ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇರಾನ್ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು.
ಇರಾನ್ ಈ ಅಂತ್ಯಕ್ರಿಯೆಗೆ ಜಾಗತಿಕ ಮಟ್ಟದ ಹಲವು ದೇಶಗಳಿಗೆ ಆಹ್ವಾನ ನೀಡಿದ್ದು, ಈಗಾಗಲೇ ಇರಾಕ್, ಪಾಕಿಸ್ತಾನ, ಅಫ್ಘಾನಿಸ್ತಾನ, ಸಿರಿಯಾ, ಲೆಬನಾನ್, ರಷ್ಯಾ, ಚೀನಾ ಮತ್ತು ಮಧ್ಯ ಏಷ್ಯಾದ ಹಲವು ದೇಶಗಳ ಹಿರಿಯ ನಿಯೋಗಗಳು ಇದರಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿವೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ