AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನ್ಯಾಯಾಲಯದ ದಾರಿ ತಪ್ಪಿಸಬೇಡಿ’; ಕಾಮಿಡಿಯನ್ ಸಮಯ್ ರೈನಾಗೆ 3 ಲಕ್ಷ ರೂ. ದಂಡ ವಿಧಿಸಿದ ಸುಪ್ರೀಂ ಕೋರ್ಟ್!

ಪ್ರಸಿದ್ಧ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಹಾಗೂ ಯೂಟ್ಯೂಬರ್ ಸಮಯ್ ರೈನಾ ಅವರಿಗೆ ಇಂದು ಸುಪ್ರೀಂ ಕೋರ್ಟ್ ಭಾರಿ ಛೀಮಾರಿ ಹಾಕಿದೆ. ಕೋರ್ಟ್ ನೀಡಿದ್ದ ಆದೇಶವನ್ನು ಪಾಲಿಸದೆ, ನ್ಯಾಯಾಲಯದ ದಾರಿತಪ್ಪಿಸಲು ಯತ್ನಿಸಿದ ಸಮಯ್ ರೈನಾ ಮತ್ತು ಇತರ ನಾಲ್ವರಿಗೆ ನ್ಯಾಯಾಲಯವು ತಲಾ 3 ಲಕ್ಷ ರೂ. ದಂಡ ವಿಧಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರಿದ್ದ ಪೀಠವು ಇಂದು ಈ ಮಹತ್ವದ ತೀರ್ಪು ನೀಡಿದೆ.

'ನ್ಯಾಯಾಲಯದ ದಾರಿ ತಪ್ಪಿಸಬೇಡಿ'; ಕಾಮಿಡಿಯನ್ ಸಮಯ್ ರೈನಾಗೆ 3 ಲಕ್ಷ ರೂ. ದಂಡ ವಿಧಿಸಿದ ಸುಪ್ರೀಂ ಕೋರ್ಟ್!
Samay RainaImage Credit source: TV9
ಸುಷ್ಮಾ ಚಕ್ರೆ
|

Updated on: Jul 14, 2026 | 9:26 PM

Share

ನವದೆಹಲಿ, ಜುಲೈ 14: ತಮ್ಮ ಜನಪ್ರಿಯ ಯೂಟ್ಯೂಬ್ ಶೋ ‘ಇಂಡಿಯಾಸ್ ಗಾಟ್ ಲೇಟೆಂಟ್’ ವಿವಾದಕ್ಕೆ (India’s Got Latent controversy) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿದ ಹಾಗೂ ಕೋರ್ಟ್ ಆದೇಶವನ್ನು ಉಲ್ಲಂಘಿಸಿದ ಪ್ರಸಿದ್ಧ ಕಾಮಿಡಿಯನ್ ಸಮಯ್ ರೈನಾ (Samay Raina) ಅವರಿಗೆ ಸುಪ್ರೀಂ ಕೋರ್ಟ್ 3 ಲಕ್ಷ ರೂ. ದಂಡ ವಿಧಿಸಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಲ್ಯ ಬಾಗ್ಚಿ ಮತ್ತು ಜೆ.ವಿ. ಮೋಹನಾ ಅವರನ್ನೊಳಗೊಂಡ ನ್ಯಾಯಪೀಠವು ಈ ಆದೇಶ ಹೊರಡಿಸಿದೆ. “ನೀವು ನ್ಯಾಯಾಲಯದ ದಾರಿತಪ್ಪಿಸಿದ್ದೀರಿ” ಎಂದು ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಏನಿದು ವಿವಾದ?:

ಸಮಯ್ ರೈನಾ ಅವರ ‘ಇಂಡಿಯಾಸ್ ಗಾಟ್ ಲೇಟೆಂಟ್’ ಶೋನ ಮೊದಲ ಸೀಸನ್‌ನಲ್ಲಿ ಸ್ಪೈನಲ್ ಮಸ್ಕುಲರ್ ಅಟ್ರೋಫಿ (SMA) ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವವರ ಕುರಿತು ಲೇವಡಿ ಮಾಡಲಾಗಿತ್ತು. ಇದರ ವಿರುದ್ಧ ‘ಕ್ಯೂರ್ ಎಸ್‌ಎಂಎ ಇಂಡಿಯಾ ಫೌಂಡೇಶನ್’ ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೋರ್ಟ್‌ನಲ್ಲಿ ನಡೆಯುತ್ತಿದೆ. ಈ ಹಿಂದೆ ನ್ಯಾಯಾಲಯವು ಸಮಯ್ ರೈನಾ ಅವರಿಗೆ ಎಸ್‌ಎಂಎ ಫೌಂಡೇಶನ್ ಹಾಗೂ ಆ ಕಾಯಿಲೆಯಿಂದ ಬಳಲುತ್ತಿರುವವರನ್ನು ಸಂಪರ್ಕಿಸಿ, ಅವರಿಗೆ ನೆರವಾಗುವಂತೆ ಆದೇಶಿಸಿತ್ತು. ತಿಂಗಳಿಗೆ ಕನಿಷ್ಠ ಎರಡು ಕಾರ್ಯಕ್ರಮಗಳನ್ನು ನಡೆಸಿ ಅಂಗವಿಕಲರ ಚಿಕಿತ್ಸಾ ನಿಧಿಗೆ ಹಣ ಸಂಗ್ರಹಿಸಬೇಕು. ವಿಶೇಷ ಚೇತನರನ್ನು ಗೌರವಯುತವಾಗಿ ತಮ್ಮ ಶೋಗಳಿಗೆ ಆಹ್ವಾನಿಸಿ ಪ್ರೋತ್ಸಾಹಿಸಬೇಕು ಎಂದು ಆದೇಶಿಸಿತ್ತು. ಆದರೆ, ಸಮಯ್ ರೈನಾ ಆ ಕೆಲಸ ಮಾಡಿರಲಿಲ್ಲ.

ಕೋರ್ಟ್ ಆದೇಶ ಉಲ್ಲಂಘನೆ:

ವಿಚಾರಣೆಯ ವೇಳೆ ದೂರುದಾರ ಸಂಸ್ಥೆಯ ಪರ ವಾದ ಮಂಡಿಸಿದ ಹಿರಿಯ ವಕೀಲೆ ಅಪರಾಜಿತಾ ಸಿಂಗ್, “ಸಮಯ್ ರೈನಾ ಅವರು ಸರಣಿ ಶೋಗಳನ್ನು ನಡೆಸುತ್ತಿದ್ದಾರೆ. ಆದರೆ ನ್ಯಾಯಾಲಯದ ಆದೇಶದಂತೆ ಅವರು ಇದುವರೆಗೆ ಎಸ್‌ಎಂಎ ಫೌಂಡೇಶನ್ ಅಥವಾ ಆ ಕಾಯಿಲೆಯಿಂದ ಬಳಲುತ್ತಿರುವ ಯಾರನ್ನೂ ಸಂಪರ್ಕಿಸಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮತ್ತೆ ವಿವಾದದಲ್ಲಿ ‘ಇಂಡಿಯಾಸ್ ಗಾಟ್ ಲೇಟೆಂಟ್ 2’; ಮತ್ತೆ ಬ್ಯಾನ್ ಭೀತಿ

ಕೋರ್ಟ್ ಪ್ರಕ್ರಿಯೆಗೆ ಲೇವಡಿ:

ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಮಯ್ ರೈನಾ ನಡವಳಿಕೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದರು. “ಸಮಯ್ ರೈನಾ ಇತ್ತೀಚೆಗೆ ಹೊಸ ಶೋ ಒಂದನ್ನು ಆರಂಭಿಸಿದ್ದಾರೆ. ಅದರ ಮೊದಲ ಎಪಿಸೋಡ್​​ನಲ್ಲಿಯೇ ಮೊದಲ ಸರಣಿಯಲ್ಲಿ ಮಾಡದ ಕೆಲಸವನ್ನು ಈಗ ಮಾಡುತ್ತಿದ್ದೇನೆ ಎಂದು ಹೇಳುತ್ತಾ ಶೋನಲ್ಲಿ ‘ನಿಂಬೆಹಣ್ಣು-ಮೆಣಸಿನಕಾಯಿ’ ನೇತುಹಾಕಿದ್ದಾರೆ. ಅವರು ಯಾರ ಹೆಸರನ್ನೂ ನೇರವಾಗಿ ಉಲ್ಲೇಖಿಸದಿದ್ದರೂ, ಅವರ ನಡವಳಿಕೆ ನ್ಯಾಯಾಲಯದ ಕಾನೂನು ಪ್ರಕ್ರಿಯೆಯನ್ನು ಅಣಕಿಸುವಂತಿತ್ತು ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ” ಎಂದು ಮೆಹ್ತಾ ಕೋರ್ಟ್‌ಗೆ ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಮಯ್ ರೈನಾ ಪರ ವಕೀಲರು, “ಫೌಂಡೇಶನ್ ಅನ್ನು ಸಂಪರ್ಕಿಸದಿರುವುದು ಯಾವುದೇ ಅಹಂಕಾರದಿಂದ ಮಾಡಿದ್ದಲ್ಲ. ನ್ಯಾಯಾಲಯದ ಅಧಿಕಾರಿಗಳಾಗಿ ನಮ್ಮ ಕಕ್ಷಿದಾರರಿಗೆ ಕೋರ್ಟ್ ಆದೇಶ ಪಾಲಿಸುವಂತೆ ನಾವು ಮನವರಿಕೆ ಮಾಡಿಕೊಡುತ್ತೇವೆ” ಎಂದು ಭರವಸೆ ನೀಡಿದ್ದಾರೆ.

ಸಿಜೆಐ ಸೂರ್ಯ ಕಾಂತ್ ಖಡಕ್ ಎಚ್ಚರಿಕೆ:

ಸಮಯ್ ರೈನಾ ಅವರ ಈ ಧೋರಣೆಯಿಂದ ತೀವ್ರ ಆಕ್ರೋಶಗೊಂಡ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ತರಾಟೆಗೆ ತೆಗೆದುಕೊಂಡಿದ್ದಾರೆ. “ಕೆಲವರು ದೇಶದ ಹೊರಗೆ ಕುಳಿತುಕೊಂಡು, ತಾವು ಭಾರತೀಯ ಕಾನೂನು ಮತ್ತು ನ್ಯಾಯಾಲಯದ ವ್ಯಾಪ್ತಿಯಿಂದ ಆಚೆಗಿದ್ದೇವೆ ಎಂದು ಭಾವಿಸಿದ್ದಾರೆ. ಈಗ ಅವರು ಇದರ ಪರಿಣಾಮವನ್ನು ಅನುಭವಿಸಲಿ. ಸಮಯ್ ರೈನಾ ಅವರ ಈ ವರ್ತನೆ ಅಹಂಕಾರವಲ್ಲದಿದ್ದರೆ ನಾವು ಆಕ್ಸ್‌ಫರ್ಡ್ ಡಿಕ್ಷನರಿಯನ್ನೇ ಬದಲಾಯಿಸಬೇಕಾಗುತ್ತದೆ!” ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಮತ್ತೆ ಬರುತ್ತಿದೆ ವಿವಾದಾತ್ಮಕ ಶೋ, ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ ಸಮಯ್ ರೈನಾ

ಸುಪ್ರೀಂ ಕೋರ್ಟ್ ಸಮಯ್ ರೈನಾ ಅವರಿಗೆ 3 ಲಕ್ಷ ರೂಪಾಯಿ ದಂಡ ವಿಧಿಸಿದ್ದು, ಈ ಮೊತ್ತವನ್ನು 2 ವಾರಗಳ ಒಳಗೆ ಜಮಾ ಮಾಡುವಂತೆ ಆದೇಶಿಸಿದೆ. ಮೊದಲು ತಲಾ 10 ಲಕ್ಷ ರೂ. ದಂಡ ವಿಧಿಸಲು ಕೋರ್ಟ್ ಯೋಚಿಸಿತ್ತಾದರೂ, ನಂತರ ಅದನ್ನು 3 ಲಕ್ಷಕ್ಕೆ ಇಳಿಸಲಾಗಿದೆ. ಆದರೆ, ಒಂದು ವೇಳೆ ನೀವು ಕೋರ್ಟ್ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ, ಈ ದಂಡದ ಮೊತ್ತ 30 ಲಕ್ಷ ರೂ. ಆಗಲಿದೆ ಎಂದು ಸುಪ್ರೀಂ ಕೋರ್ಟ್ ಅಂತಿಮ ಎಚ್ಚರಿಕೆ ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us