Jaffar Express Hijack: ಭಯೋತ್ಪಾದನೆಗೆ ಪ್ರೋತ್ಸಾಹ ಆರೋಪ, ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ಭಾರತ
ಭಾರತವು ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿದೆ ಎನ್ನುವ ಪಾಕಿಸ್ತಾನದ ಆರೋಪವನ್ನು ತಳ್ಳಿ ಹಾಕಿರುವ ಭಾರತವು ‘‘ಭಯೋತ್ಪಾದನೆಯ ಕೇಂದ್ರಬಿಂದು ಎಲ್ಲಿದೆ ಎಂಬುದು ಇಡೀ ಜಗತ್ತಿಗೆ ತಿಳಿದಿದೆ’’ ಎಂದು ಹೇಳಿದೆ. ಪಾಕಿಸ್ತಾನ ಮಾಡಿರುವ ಆಧಾರರಹಿತ ಆರೋಪಗಳನ್ನು ನಾವು ಬಲವಾಗಿ ತಿರಸ್ಕರಿಸುತ್ತೇವೆ. ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದು ಎಲ್ಲಿದೆ ಎಂದು ಇಡೀ ಜಗತ್ತಿಗೆ ತಿಳಿದಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ

ನವದೆಹಲಿ, ಮಾರ್ಚ್ 14: ಭಾರತವು ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿದೆ ಎನ್ನುವ ಪಾಕಿಸ್ತಾನದ ಆರೋಪವನ್ನು ತಳ್ಳಿ ಹಾಕಿರುವ ಭಾರತವು ‘‘ಭಯೋತ್ಪಾದನೆಯ ಕೇಂದ್ರಬಿಂದು ಎಲ್ಲಿದೆ ಎಂಬುದು ಇಡೀ ಜಗತ್ತಿಗೆ ತಿಳಿದಿದೆ’’ ಎಂದು ಹೇಳಿದೆ. ಪಾಕಿಸ್ತಾನ ಮಾಡಿರುವ ಆಧಾರರಹಿತ ಆರೋಪಗಳನ್ನು ನಾವು ಬಲವಾಗಿ ತಿರಸ್ಕರಿಸುತ್ತೇವೆ. ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದು ಎಲ್ಲಿದೆ ಎಂದು ಇಡೀ ಜಗತ್ತಿಗೆ ತಿಳಿದಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. ಪಾಕಿಸ್ತಾನವು ಇತರರ ಬಗ್ಗೆ ಬೆರಳು ತೋರಿಸುವ ಮೊದಲು ತನ್ನ ಆಂತರಿಕ ಸಮಸ್ಯೆಗಳು, ವೈಫಲ್ಯಗಳ ಬಗ್ಗೆ ಆತ್ಮವಿಮರ್ಷೆ ಮಾಡಲಿ ಎಂದು ಹೇಳಿದ್ದಾರೆ.
ಮಂಗಳವಾರ ಜಾಫರ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ನಡೆದ ಮಾರಕ ದಾಳಿಯ ನಂತರ ಪಾಕಿಸ್ತಾನವು ಆರೋಪ ಮಾಡಿತ್ತು. ಭಾರತವು ಪಾಕಿಸ್ತಾನದ ವಿರುದ್ಧ ಉಗ್ರರನ್ನು ಎತ್ತಿಕಟ್ಟುತ್ತಿದೆ ಎಂದು ಪಾಕ್ ವಕ್ತಾರ ಶಫ್ಕತ್ ಅಲಿ ಖಾನ್ ಹೇಳಿದ್ದರು. ಪಾಕಿಸ್ತಾನದ ವಕ್ತಾರರು ಅಫ್ಘಾನಿಸ್ತಾನವು ಈ ದಾಳಿಯ ಹೊಣೆ ಹೊರಬೇಕು ಎಂದು ಒತ್ತಾಯಿಸಿದರು. ಆದರೆ ತಾಲಿಬಾನ್ ಪಾಕಿಸ್ತಾನದ ಹೇಳಿಕೆಗಳನ್ನು ತಿರಸ್ಕರಿಸಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ದುಲ್ ಬಾಲ್ಖಿ ಮಾತನಾಡಿ, ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವ ಬದಲು ತನ್ನ ಭದ್ರತಾ ಸವಾಲುಗಳತ್ತ ಗಮನಹರಿಸಬೇಕು ಎಂದು ಹೇಳಿದರು. ಆಗಾಗ ಗಡಿ ಘರ್ಷಣೆಗಳು ಸಂಭವಿಸುವುದರಿಂದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಸಂಬಂಧಗಳು ಹದಗೆಟ್ಟಿವೆ. 400 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ಅನ್ನು ಅಪಹರಿಸಿದ 33 ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಬಂಡುಕೋರರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ಭದ್ರತಾ ಪಡೆಗಳು ಹೇಳಿತ್ತು.
ಮತ್ತಷ್ಟು ಓದಿ: ಪಾಕಿಸ್ತಾನದ ರೈಲು ಹೈಜಾಕ್; ಉಗ್ರರಿಂದ 50 ಒತ್ತೆಯಾಳುಗಳ ಹತ್ಯೆ
ಮಂಗಳವಾರ ಬೋಲಾನ್ ಜಿಲ್ಲೆಯ ಬಳಿ ಪೇಶಾವರಕ್ಕೆ ಹೋಗುವ ರೈಲಿನಿಂದ ಅಪಹರಿಸಲ್ಪಟ್ಟ 50 ಒತ್ತೆಯಾಳುಗಳನ್ನು ಕೊಂದಿದ್ದೇವೆ ಎಂದು ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಉಗ್ರರು ಖಚಿತಪಡಿಸಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಒತ್ತೆಯಾಳುಗಳನ್ನು ಗಲ್ಲಿಗೇರಿಸಲಾಗುವುದು ಎಂದು ಉಗ್ರರು ಎಚ್ಚರಿಕೆ ನೀಡಿದ್ದಾರೆ.
ಉಗ್ರಗಾಮಿ ಗುಂಪು ನೀಡಿದ ಹೇಳಿಕೆಯಲ್ಲಿ “ಇಂದು ಮಿಲಿಟರಿ ಪಡೆಗಳು ಭಾರೀ ಫಿರಂಗಿ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿಗೆ ಪ್ರಯತ್ನಿಸಿದವು. ಇದು ತೀವ್ರ ಘರ್ಷಣೆಗೆ ಕಾರಣವಾಯಿತು. ಪಾಕಿಸ್ತಾನದ ನಿರಂತರ ಆಕ್ರಮಣಕ್ಕೆ ನೇರ ಪ್ರತೀಕಾರವಾಗಿ ಕಳೆದ 1 ಗಂಟೆಯೊಳಗೆ ನಾವು 50 ಒತ್ತೆಯಾಳುಗಳನ್ನು ಗಲ್ಲಿಗೇರಿಸಿದ್ದೇವೆ” ಎಂದು ಹೇಳಿದೆ.
ಉಗ್ರಗಾಮಿಗಳು ರೈಲ್ವೆ ಹಳಿಗಳ ಮೇಲೆ ಬಾಂಬ್ ಸ್ಫೋಟಿಸಿ ಎಂಜಿನ್ ಮತ್ತು ಅದರ 9 ಬೋಗಿಗಳಿಗೆ ಹಾನಿ ಮಾಡಿದಾಗ ರೈಲು ನಿಶ್ಚಲವಾಯಿತು ಎಂದು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ. ಗುಂಡಿನ ದಾಳಿಯಲ್ಲಿ ಚಾಲಕ ತೀವ್ರವಾಗಿ ಗಾಯಗೊಂಡಿದ್ದು, ಭದ್ರತಾ ಸಿಬ್ಬಂದಿಯ ಮೇಲೆ ದಾಳಿ ನಡೆದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:59 pm, Fri, 14 March 25