ದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಜಮ್ಮು ಕಾಶ್ಮೀರದ ರಾಜಕೀಯ ನಾಯಕರ ಜೊತೆಗಿನ ಸುದೀರ್ಘ ಮಾತುಕತೆ ಮುಕ್ತಾಯವಾಗಿದೆ. ಈ ವೇಳೆ ಪ್ರಧಾನಿ ಎದುರು ಐದು ಪ್ರಮುಖ ಬೇಡಿಕೆಗಳನ್ನು ಜಮ್ಮು ಕಾಶ್ಮೀರದ ನಾಯಕರು ಇಟ್ಟರು. ರಾಜ್ಯದ ಸ್ಥಾನಮಾನವನ್ನು ಮತ್ತೆ ನೀಡಬೇಕು, ಪ್ರಜಾಪ್ರಭುತ್ವ ಮರುಸ್ಥಾಪನೆಗಾಗಿ ವಿಧಾನಸಭೆ ಚುನಾವಣೆ ನಡೆಸಬೇಕು, ಕಾಶ್ಮೀರಿ ಪಂಡಿತರಿಗೆ ಕಾಶ್ಮೀರದಲ್ಲಿ ಪುನರ್ವಸತಿ ಕಲ್ಪಿಸಬೇಕು, ರಾಜಕೀಯ ಬಂಧಿಗಳನ್ನು ಬಿಡುಗಡೆ ಮಾಡಬೇಕು, ಸ್ಥಳೀಯ ಆಡಳಿತದ ಬಗ್ಗೆ ಚರ್ಚೆ ನಡೆಯಬೇಕು ಎಂದು ಪ್ರಧಾನಿಯೊಂದಿಗೆ ಗುರುವಾರ ನಡೆದ ಮಾತುಕತೆ ವೇಳೆ ರಾಜಕೀಯ ಮುಖಂಡರು ಮನವಿ ಮಾಡಿದರು.
ಪ್ರಧಾನಿಯೊಂದಿಗೆ ನಡೆದ ಸಭೆ ಸೌಹಾರ್ದಯುತವಾಗಿತ್ತು ಮತ್ತು ನಮ್ಮ ಆಶೋತ್ತರಗಳಿಗೆ ಅನುಗುಣವಾಗಿಯೇ ಇತ್ತು ಎಂದು ಪೀಪಲ್ಸ್ ಕಾನ್ಫರೆನ್ಸ್ ಪಕ್ಷದ ನಾಯಕ ಮುಖಾಫರ್ ಹುಸೇನ್ ಬೇಗ್ ಹೇಳಿದರು. ಮಾತುಕತೆಯ ವೇಳೆ ಜಮ್ಮು ಕಾಶ್ಮೀರದಲ್ಲಿ ಸಂಘರ್ಷಗಳು ನಿಲ್ಲಬೇಕು, ಅದು ಶಾಂತಿವಲಯವಾಗಿ ಬದಲಾಗಬೇಕು ಎಂದು ಮೋದಿ ನುಡಿದರು. ಎಲ್ಲ ನಾಯಕರೂ ಜಮ್ಮು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು. ಈ ಕುರಿತು ಸಭೆಯಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ, ಮೊದಲು ಕ್ಷೇತ್ರ ಪುನರ್ ವಿಂಗಡಣೆ ನಿರ್ಧಾರ ಪ್ರಕ್ರಿಯೆ ಅಂತಿಮಗೊಳ್ಳಲಿ. ನಂತರ ಇತರ ವಿಚಾರಗಳನ್ನು ಪರಿಶೀಲಿಸಲಾಗುವುದು ಎಂದರು. ಈ ಸಭೆಯು ತೃಪ್ತಿದಾಯಕವಾಗಿತ್ತು. ಜಮ್ಮು ಕಾಶ್ಮೀರದಲ್ಲಿ ಶಾಂತಿ ಮರುಸ್ಥಾಪನೆ ಬಗ್ಗೆ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು ಎಂದು ಬೇಗ್ ತಿಳಿಸಿದರು.
ಸಭೆಗೂ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗುಲಾಮ್ ಅಹ್ಮದ್ ಮಿರ್, ಪ್ರಧಾನಿ ಸಮಕ್ಷಮ ಜಮ್ಮು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ನೀಡುವ ಬಗ್ಗೆ ಎಲ್ಲರೂ ಪ್ರಸ್ತಾಪಿಸಲಿದ್ದಾರೆ ಎಂದು ಹೇಳಿದ್ದರು. ಜಮ್ಮು ಕಾಶ್ಮೀರದ ಜನರು 2019ರ ಬೆಳವಣಿಗೆಗಳಿಂದ ಆಘಾತ ಅನುಭವಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇಂದಿನ ಸಭೆಯಲ್ಲಿ ಯಾವೆಲ್ಲಾ ವಿಷಯಗಳನ್ನು ಪ್ರಸ್ತಾಪಿಸಲಿದ್ದಾರೆ ಎಂಬುದನ್ನು ಗಮನಿಸಿ ಪ್ರತಿಕ್ರಿಯಿಸುತ್ತೇವೆ ಎಂದು ಹೇಳಿದ್ದರು.
ಪ್ರಧಾನಿ ನರೇಂದ್ರ ಮೋದಿ ಗುಪ್ಕರ್ ಮೈತ್ರಿಕೂಟದ ರಾಜಕೀಯ ನಾಯಕರನ್ನು ಭೇಟಿಯಾಗಲು ಮುಂದಾದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. 2019ರಲ್ಲಿ ಜಮ್ಮು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ಹಿಂಪಡೆದ ನಂತರ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರವು ಅಲ್ಲಿನ ರಾಜಕೀಯ ಮುಖಂಡರ ಜೊತೆಗೆ ಮಾತುಕತೆ ನಡೆಸುತ್ತಿದೆ. ಜೂನ್ 2018ರಿಂದ ಜಾರಿಯಲ್ಲಿರುವ ಕೇಂದ್ರದ ಆಡಳಿತ ಕೊನೆಗಾಣಿಸುವ ನಿಟ್ಟಿನಲ್ಲಿ ಇದು ಮಹತ್ವದ ಕ್ರಮ ಎನಿಸಿದೆ. ಎರಡೂ ಕೇಂದ್ರಾಡಳಿತ ಪ್ರದೇಶಗಳಿಗೆ ವಿಧಾನಸಭೆ ಚುನಾವಣೆ ನಡೆಸಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಜಮ್ಮು ಕಾಶ್ಮೀರದಲ್ಲಿ ಚುನಾವಣಾ ಪ್ರಕ್ರಿಯೆ ಪುನರ್ ಆರಂಭಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಕ್ಷೇತ್ರ ಪುನರ್ ವಿಂಗಡಣೆ ಬಳಿಕ ವಿಧಾನಸಭೆ ಚುನಾವಣೆ ನಡೆಸಲು ಪ್ರಧಾನಿ ಒಲವು ತೋರಿದರು. ಸಂವಿಧಾನದ 370ನೇ ವಿಧಿ ಪುನರ್ ಸ್ಥಾಪನೆಗೆ ರಾಜಕೀಯ ಪಕ್ಷಗಳು ಒತ್ತಾಯಿಸಿದವು. ಈ ಕುರಿತು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ಪ್ರಧಾನಿ ಒಪ್ಪಲಿಲ್ಲ. ‘ಈ ಪ್ರಕರಣ ಸುಪ್ರೀಂಕೋರ್ಟ್ನಲ್ಲಿದೆ. ಹೀಗಾಗಿ ಈ ಬಗ್ಗೆ ಚರ್ಚೆ ಬೇಡ’ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.
ಶಾಂತಿ ವ್ಯವಸ್ಥೆ ಕಾಪಾಡಲು, ಕ್ಷೇತ್ರ ಪುನರ್ ವಿಂಗಡಣೆಗೆ ಸಹಕಾರ ಕೊಡಿ ಎಂದು ಪ್ರಧಾನಿ ಕೋರಿದರು. ಜಮ್ಮು ಕಾಶ್ಮೀರದಲ್ಲಿ ಪೂರ್ಣ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬದ್ಧ. ದೆಹಲಿ ದೂರ ಎಂಬ ಭಾವನೆ ಬಿಡಿ, ಚುನಾವಣೆ ನಡೆಸುವುದು ಸರ್ಕಾರದ ಆದ್ಯತೆ ಎಂದು ಭರವಸೆ ನೀಡಿದರು. ಸಭೆಯಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಸಾ, ಜಮ್ಮು ಕಾಶ್ಮೀರಕ್ಕೆ ರಾಜ್ಯದ ಪೂರ್ಣ ಸ್ಥಾನಮಾನ ನೀಡುವ ಭರವಸೆ ನೀಡಿದರು. ಚುನಾವಣೆಗೆ ಯಾವುದೇ ಕಾಲಮಿತಿ ಒಪ್ಪಿಕೊಳ್ಳಲು ಪ್ರಧಾನಿ ಮತ್ತು ಗೃಹ ಸಚಿವರು ಒಪ್ಪಲಿಲ್ಲ.
(Jammu Kashmir Leaders Meeting with PM Narendra Modi ends Gupkar says asked for restoration of statehood)
ಇದನ್ನೂ ಓದಿ: ಜಮ್ಮು ಕಾಶ್ಮೀರಕ್ಕೆ ಸದ್ಯದಲ್ಲೇ ರಾಜ್ಯದ ಸ್ಥಾನಮಾನ; ಯಾವುದೇ ಕಾರಣಕ್ಕೂ ವಿಶೇಷ ಸ್ಥಾನ ನೀಡಲ್ಲ- ಮೋದಿ ಲೆಕ್ಕಾಚಾರವೇನು?
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಸಭೆಯಲ್ಲಿ ಪಾಲ್ಗೊಳ್ಳುತ್ತೇವೆ ಎಂದ ಜಮ್ಮು-ಕಾಶ್ಮೀರ ಗುಪ್ಕಾರ್ ಮೈತ್ರಿಕೂಟ