ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಸಭೆಯಲ್ಲಿ ಪಾಲ್ಗೊಳ್ಳುತ್ತೇವೆ ಎಂದ ಜಮ್ಮು-ಕಾಶ್ಮೀರ ಗುಪ್ಕಾರ್ ಮೈತ್ರಿಕೂಟ
ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ ಮೆಹಬೂಬಾ ಮುಫ್ತಿ, ನ್ಯಾಶನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರುಕ್ ಅಬ್ದುಲ್ಲಾ, ಮೊಹಮ್ಮದ್ ಯೂಸುಫ್ ತರಿಗಾಮಿ ತಾವು ಈ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿಕೊಂಡಿದ್ದಾರೆ.
ಶ್ರೀನಗರ: ಪ್ರಧಾನಿ ನರೇಂದ್ರ ಮೋದಿಯವರು ಜೂ.24ರಂದು ದೆಹಲಿಯಲ್ಲಿ ಕರೆದಿರುವ ಜಮ್ಮು-ಕಾಶ್ಮೀರದ ಸರ್ವಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಗುಪ್ಕಾರ್ ಮೈತ್ರಿ ಕೂಟ ತಿಳಿಸಿದೆ. ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನ ಮಾನ ಮತ್ತು ಆರ್ಟಿಕಲ್ 35ಎಯನ್ನು ಪುನಃ ಸ್ಥಾಪಿಸಲು ಒತ್ತಾಯಿಸಿ ಫಾರೂಕ್ ಅಬ್ದುಲ್ಲಾ ನೇತೃತ್ವದಲ್ಲಿ ರಚನೆಯಾದ ಈ ಗುಪ್ಕಾರ್ ಮೈತ್ರಿ ಕೂಟ, ಪ್ರಧಾನಿ ನರೇಂದ್ರ ಮೋದಿಯವರ ಸಭೆಯಲ್ಲಿ ಭಾಗವಹಿಸುವುದಾಗಿ ಹೇಳಿಕೊಂಡಿದೆ.
ಸದ್ಯ ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು-ಕಾಶ್ಮೀರಕ್ಕೆ ರಾಜ್ಯತ್ವ ಸ್ಥಾನಮಾನ ನೀಡುವ ಸಂಬಂಧ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರು ಜೂ.24ರಂದು ಜಮ್ಮು-ಕಾಶ್ಮೀರದ ಸರ್ವಪಕ್ಷಗಳ ಸಭೆ ಕರೆದಿದ್ದಾರೆ ಎಂದು ಮೂಲಗಳಿಂದ ವರದಿಯಾಗಿತ್ತು. 2019ರಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನ ಮಾನ ರದ್ದುಗೊಳಿಸಿದಾಗಿನಿಂದಲೂ ಅಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದೆ. ಹಾಗೇ ಒಂದೂವರೆ ವರ್ಷದ ನಂತರ ಇದೇ ಮೊದಲ ಬಾರಿಗೆ ಮೋದಿಯವರು ಇಂಥದ್ದೊಂದು ಮಹತ್ವದ ಸಭೆ ನಡೆಸುತ್ತಿದ್ದಾರೆ.
ಇದೀಗ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ ಮೆಹಬೂಬಾ ಮುಫ್ತಿ, ನ್ಯಾಶನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರುಕ್ ಅಬ್ದುಲ್ಲಾ, ಮೊಹಮ್ಮದ್ ಯೂಸುಫ್ ತರಿಗಾಮಿ ತಾವು ಈ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಈ ಗುಪ್ಕಾರ್ ಮೈತ್ರಿಯಲ್ಲಿ ಒಟ್ಟು ಏಳು ಪ್ರಮುಖ ಪಕ್ಷಗಳಿದ್ದು, ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ಪುನಃ ಸ್ಥಾಪಿಸಲು ಕೇಂದ್ರಸರ್ಕಾರವನ್ನು ಆಗ್ರಹಿಸುತ್ತಿವೆ. ಹಾಗೇ, ಪ್ರಧಾನಿ ಮೋದಿಯವರೊಂದಿಗಿನ ಸಭೆಯಲ್ಲಿ ನಮ್ಮ ಅಭಿಪ್ರಾಯ ಹೇಳಿಕೊಳ್ಳಲು ಅವಕಾಶ ಸಿಗುತ್ತದೆ ಎಂದು ನಂಬಿದ್ದೇವೆ. ಆರ್ಟಿಕಲ್ 370 ಮತ್ತು 35 ಎ ವಿಚಾರದಲ್ಲಿ ಯಾವುದೇ ರಾಜಿಯೂ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರದ ಎಲ್ಲ ಪ್ರಮುಖ ಪಕ್ಷಗಳ ನಾಯಕರೊಂದಿಗೆ ಪ್ರಧಾನಿ ಮೋದಿ ಸಭೆ; ಕುತೂಹಲ ಮೂಡಿಸಿದ ಹೆಜ್ಜೆ
We Will Participate In Pm Narendra Modis Kashmir Meeting said Gupkar Alliance in Jammu-Kashmir