ಜಮ್ಮು ಕಾಶ್ಮೀರಕ್ಕೆ ಸದ್ಯದಲ್ಲೇ ರಾಜ್ಯದ ಸ್ಥಾನಮಾನ; ಯಾವುದೇ ಕಾರಣಕ್ಕೂ ವಿಶೇಷ ಸ್ಥಾನ ನೀಡಲ್ಲ- ಮೋದಿ ಲೆಕ್ಕಾಚಾರವೇನು?
PM Narendra Modi: ಜಮ್ಮು ಕಾಶ್ಮೀರಕ್ಕೆ ಮತ್ತೆ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡುವ ಭರವಸೆಯನ್ನು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್ ಶಾ ನೀಡಿದ್ದರು. ಅದರಂತೆ ಈಗ ಜಮ್ಮು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಯಾವುದೇ ಕಾರಣಕ್ಕೂ ಮೊದಲಿದ್ದಂತೆ, ಸಂವಿಧಾನದ 370ನೇ ವಿಧಿಯಡಿ ಇದ್ದ ವಿಶೇಷ ಸ್ಥಾನಮಾನ ನೀಡಲ್ಲ ಎಂದಿದೆ.
ಪ್ರಧಾನಿ ನರೇಂದ್ರ ಮೋದಿ ಜೂನ್ 24ರಂದು ಜಮ್ಮು ಕಾಶ್ಮೀರದ ಸರ್ವಪಕ್ಷಗಳ ಸಭೆಯನ್ನು ದೆಹಲಿಯಲ್ಲಿ ಕರೆದಿದ್ದಾರೆ. ಈ ಸಭೆಯಲ್ಲಿ ಮಹತ್ವದ ತೀರ್ಮಾನವೊಂದರನ್ನು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಲಿದ್ದಾರೆ. ಜಮ್ಮು ಕಾಶ್ಮೀರಕ್ಕೆ ಆದಷ್ಟು ಬೇಗ ರಾಜ್ಯದ ಸ್ಥಾನಮಾನ ನೀಡುವ ತೀರ್ಮಾನವನ್ನು ಸರ್ವಪಕ್ಷ ಸಭೆಯಲ್ಲೇ ಪ್ರಕಟಸಲಿದ್ದಾರೆ. ಈ ಮೂಲಕ ಜಮ್ಮು ಕಾಶ್ಮೀರದಲ್ಲಿ ರಾಜಕೀಯ ಚಟುವಟಿಕೆಗಳಿಗೆ ಚಾಲನೆ ಸಿಗಲಿದೆ. ಬಳಿಕ ಆದಷ್ಟು ಬೇಗ ಜಮ್ಮು ಕಾಶ್ಮೀರದ ವಿಧಾನಸಭೆಗೂ ಚುನಾವಣೆ ನಡೆಸುವ ಇರಾದೆ ಕೇಂದ್ರ ಸರ್ಕಾರಕ್ಕೆ ಇದೆ.
ಜಮ್ಮು ಕಾಶ್ಮೀರ ಭಾರತದ ಮುಕುಟಮಣಿ. ಭೂಲೋಕದ ಸ್ವರ್ಗ. ಭಾರತದ ಶಿರ ಇದ್ದಂತೆ ಜಮ್ಮು ಕಾಶ್ಮೀರ. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು 2019ರ ಆಗಸ್ಟ್ 5 ರಂದು ಲೋಕಸಭೆಯಲ್ಲಿ ಮಸೂದೆ ಅಂಗೀಕರಿಸುವ ಮೂಲಕ ರದ್ದುಪಡಿಸಲಾಗಿದೆ. ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಣೆ ಮಾಡಲಾಗಿದೆ. ವಿಧಾನಸಭೆ ಹೊಂದಿರುವ ಜಮ್ಮು ಕಾಶ್ಮೀರ ಹಾಗೂ ವಿಧಾನಸಭೆ ಇಲ್ಲದ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲಾಗಿದೆ. ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ಜಿಲ್ಲಾ ಅಭಿವೃದ್ದಿ ಮಂಡಳಿಯ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲಾಗಿದೆ. ಜನರು, ರಾಜಕೀಯ ಪಕ್ಷಗಳು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿವೆ.
ಈಗ ಜಮ್ಮು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನವನ್ನು ಮರಳಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಜಮ್ಮು ಕಾಶ್ಮೀರದ ರಾಜಕೀಯ ಪಕ್ಷಗಳ ಜೊತೆಗೆ ಚರ್ಚೆ ನಡೆಸಿ, ಅವುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಹೆಜ್ಜೆ ಇಡಲು ಕೇಂದ್ರ ಸರ್ಕಾರ ಜೂನ್ 24ರ ಗುರುವಾರ ಜಮ್ಮು ಕಾಶ್ಮೀರದ ಸರ್ವಪಕ್ಷಗಳ ಸಭೆ ಕರೆದಿದೆ. ದೆಹಲಿಯಲ್ಲಿ ನಡೆಯುವ ಜಮ್ಮು ಕಾಶ್ಮೀರದ ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ.
(ಲೇಖನ: ಎಸ್. ಚಂದ್ರಮೋಹನ್, ಹಿರಿಯ ವರದಿಗಾರ, ಟಿವಿ9)
ಜಮ್ಮು ಕಾಶ್ಮೀರಕ್ಕೆ ಮತ್ತೆ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡುವ ಭರವಸೆಯನ್ನು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್ ಶಾ ನೀಡಿದ್ದರು. ಅದರಂತೆ ಈಗ ಜಮ್ಮು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಅಧಿಕೃತ ಘೋಷಣೆಯನ್ನು ಜೂನ್ 24ರ ಸಭೆಯಲ್ಲಿ ಮಾಡಲಿದೆ ಎಂಬ ಮಾಹಿತಿಯನ್ನು ಕೇಂದ್ರ ಸರಕಾರದ ಅಧಿಕಾರಿಗಳು ನೀಡಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಮೊದಲಿದ್ದಂತೆ, ಸಂವಿಧಾನದ 370ನೇ ವಿಧಿಯಡಿ ಇದ್ದ ವಿಶೇಷ ಸ್ಥಾನಮಾನ ನೀಡಲ್ಲ ಎಂದು ಈ ಬಗ್ಗೆ ಚರ್ಚೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಈಗ ಕ್ಷೇತ್ರ ಪುನರ್ ವಿಂಗಡಣಾ ಆಯೋಗದಿಂದ ವಿಧಾನಸಭಾ ಕ್ಷೇತ್ರ ಪುನರ್ ವಿಂಗಡಣೆ ನಡೆಯುತ್ತಿದೆ. ಈ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ಮುಗಿದ ಬಳಿಕ ಜಮ್ಮು ಕಾಶ್ಮೀರದ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಸಲು ಕೇಂದ್ರ ಸರಕಾರ ಮನಸ್ಸು ಮಾಡಿದೆ.
ಜಮ್ಮು ಕಾಶ್ಮೀರದ ಮುಂದಿನ ಹೆಜ್ಜೆ ಬಗ್ಗೆ ಸಭೆಯಲ್ಲಿ ಚರ್ಚೆ:
ಜಮ್ಮು ಕಾಶ್ಮೀರದಲ್ಲಿ ಮುಂದೆ ನಡೆಯುವ ರಾಜಕೀಯ ಪ್ರಕ್ರಿಯೆ, ತಮ್ಮ ಪ್ಲ್ಯಾನ್ ಗಳ ಬಗ್ಗೆ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದ 14 ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಭೆಯಲ್ಲಿ ವಿಧಾನಸಭೆ ಚುನಾವಣೆ ನಡೆಸುವ ಪ್ಲ್ಯಾನ್ ಅನ್ನು ಎಲ್ಲ ರಾಜಕೀಯ ಪಕ್ಷಗಳ ಮುಂದೆ ಇಡಲಾಗುತ್ತೆ. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಸೇರಿದಂತೆ ವಿಧಾನಸಭೆ ಚುನಾವಣೆ ನಡೆಸುವವರೆಗೂ ಕೇಂದ್ರ ಸರ್ಕಾರ ತನ್ನದೇ ಆದ ಪ್ಲ್ಯಾನ್ ಹಾಕಿಕೊಂಡಿದೆ. ಅದರ ಪ್ರಕಾರವೇ ಈಗ ಒಂದೊಂದೇ ಹೆಜ್ಜೆ ಇಡುತ್ತಿದೆ. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ್ರೆ, ಬೆಂಕಿ ಬೀಳುತ್ತೆ, ಕಾಶ್ಮೀರ ಭಾರತದಲ್ಲಿ ಉಳಿಯಲ್ಲ ಎಂದೆಲ್ಲಾ ಕಾಶ್ಮೀರದ ರಾಜಕೀಯ ನಾಯಕರು ಬೆದರಿಕೆ ಹಾಕಿದ್ದರು. ಇವೆಲ್ಲವನ್ನೂ ತಣ್ಣಗಾಗಿಸುವಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಯಶಸ್ವಿಯಾಗಿದೆ.
ಜಮ್ಮು ಕಾಶ್ಮೀರದಲ್ಲಿ ಭದ್ರತೆಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಪಾಕಿಸ್ತಾನವು ಈ ವರ್ಷದ ಫೆಬ್ರವರಿಯಲ್ಲಿ ಭಾರತದೊಂದಿಗೆ ಗಡಿಯಲ್ಲಿ ಕದನ ವಿರಾಮ ಘೋಷಿಸಿದೆ. ಗೃಹ ಬಂಧನದಲ್ಲಿದ್ದ ಜಮ್ಮು ಕಾಶ್ಮೀರದ ರಾಜಕೀಯ ನಾಯಕರನ್ನು ಬಿಡುಗಡೆ ಮಾಡಲಾಗಿದೆ. ರಾಜಕೀಯ ನಾಯಕರು ಮತ್ತೆ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ಹಿನ್ನಲೆಯಲ್ಲಿ ಜೂನ್ 24 ರ ಸಭೆ ಮಹತ್ವ ಪಡೆದುಕೊಂಡಿದೆ. ಕೇಂದ್ರ ಸರ್ಕಾರ ನೇರವಾಗಿ ಜಮ್ಮು ಕಾಶ್ಮೀರದ ರಾಜಕೀಯ ಪಕ್ಷಗಳೊಂದಿಗೆ ಚರ್ಚೆ ನಡೆಸುತ್ತಿದೆ. ಜಮ್ಮುಕಾಶ್ಮೀರದ ಪ್ರಮುಖ ಪಕ್ಷಗಳಾದ ಪಿಡಿಪಿ, ನ್ಯಾಷನಲ್ ಕಾನ್ಪರೆನ್ಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳನ್ನ ಪ್ರಧಾನಿ ಅಧ್ಯಕ್ಷತೆಯ ಸಭೆಗೆ ಈಗಾಗಲೇ ಕೇಂದ್ರ ಗೃಹ ಇಲಾಖೆ ಆಹ್ವಾನಿಸಿದೆ. ಸಭೆಯಲ್ಲಿ ಜಮ್ಮುಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ನೀಡುವ ಘೋಷಣೆಯಾಗುವ ನಿರೀಕ್ಷೆ ಇದೆ. ಆದರೇ, ಲಡಾಖ್‌ನ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ಲಡಾಖ್ ಈಗಿರುವಂತೆ ಕೇಂದ್ರಾಡಳಿತ ಪ್ರದೇಶವಾಗಿಯೇ ಅಲ್ಲಿನ ಜನರ ಅಪೇಕ್ಷೆಯಂತೆ ಮುಂದುವರೆಯಲಿದೆ. ಜಮ್ಮು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ನೀಡಬೇಕೆಂಬುದು ಅಲ್ಲಿನ ರಾಜಕೀಯ ಪಕ್ಷಗಳ ಬೇಡಿಕೆ ಕೂಡ ಆಗಿದೆ.
ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಸುವ ಭರವಸೆಯನ್ನು ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡುವರು. ಸದ್ಯ ನಡೆಯುತ್ತಿರುವ ಕ್ಷೇತ್ರ ಪುನರ್ ವಿಂಗಡಣಾ ಪ್ರಕ್ರಿಯೆ ಮುಗಿದ ಬಳಿಕ ವಿಧಾನಸಭಾ ಚುನಾವಣೆ ನಡೆಯಲಿದೆ. ಕ್ಷೇತ್ರ ಪುನರ್ ವಿಂಗಡಣಾ ಆಯೋಗವು ಜಮ್ಮು ಪ್ರಾಂತ್ಯದಲ್ಲಿ ಹೆಚ್ಚಿನ ವಿಧಾನಸಭಾ ಕ್ಷೇತ್ರಗಳನ್ನು ರಚಿಸುವ ನಿರೀಕ್ಷೆ ಇದೆ . ಜಮ್ಮು ಪ್ರಾಂತ್ಯದಲ್ಲಿ ಬಿಜೆಪಿ ಪಕ್ಷ ಪ್ರಬಲವಾಗಿದೆ. ಈ ಮೂಲಕ ಬಿಜೆಪಿಗೆ ಅನುಕೂಲವಾಗುವಂತೆ ಕ್ಷೇತ್ರ ಪುನರ್ ವಿಂಗಡಣೆ ನಡೆಯುವ ಸಾಧ್ಯತೆ ಇದೆ.
ಹೀಗಾಗಿಯೇ ಕ್ಷೇತ್ರ ಪುನರ್ ವಿಂಗಡಣಾ ಪ್ರಕ್ರಿಯೆಯನ್ನು ಪಿಡಿಪಿ, ನ್ಯಾಷನಲ್ ಕಾನ್ಪರೆನ್ಸ್ ವಿರೋಧಿಸುತ್ತಿವೆ. ಏನೇ ಆದರೂ, ಜಮ್ಮು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ಸಿಗುತ್ತಿದೆ ಎಂದು ಜನರು ಸಮಾಧಾನಪಟ್ಟುಕೊಳ್ಳಬಹುದು. ಜೂನ್ 24ರ ದೆಹಲಿಯ ಸರ್ವಪಕ್ಷ ಸಭೆಯಲ್ಲಿ ಪಿಡಿಪಿ ಮುಖ್ಯಸ್ಥೆ ಮೆಹಬೂಬ್ ಮುಫ್ತಿ ಭಾಗವಹಿಸುವ ಸಾಧ್ಯತೆ ಕಡಿಮೆ. ಆದರೆ, ನ್ಯಾಷನಲ್ ಕಾನ್ಪರೆನ್ಸ್ ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಪುತ್ರ ಓಮರ್ ಅಬ್ದುಲ್ಲಾ ಭಾಗವಹಿಸುವರು. ಗುಪ್ಕರ್ ಮೈತ್ರಿಕೂಟದ ಪ್ರತಿನಿಧಿಯಾಗಿ ಫಾರೂಕ್ ಅಬ್ದುಲ್ಲಾ ಭಾಗಿಯಾಗಲಿದ್ದಾರೆ. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಉಳಿದ ಪಕ್ಷಗಳ ನಾಯಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.
(restoration of statehood to jammu kashmir on the card says pm narendra modi)
Published On - 12:13 pm, Mon, 21 June 21