ಮಕ್ಕಳ ಭವಿಷ್ಯದ ಜತೆ ಆಟ ಆಡಬೇಡಿ: ಕರ್ನಾಟಕದಲ್ಲಿ ಎನ್ಇಪಿ ರದ್ದು ನಿರ್ಧಾರ ಬಗ್ಗೆ ಧರ್ಮೇಂದ್ರ ಪ್ರಧಾನ್ ಪ್ರತಿಕ್ರಿಯೆ

ಕನ್ನಡ ಮತ್ತು ಇತರ ಭಾರತೀಯ ಭಾಷಾ ಶಿಕ್ಷಣವನ್ನು ಅವರು ವಿರೋಧಿಸುತ್ತಾರೆಯೇ? NEET, CUET, JEE ಯಂತಹ ಪರೀಕ್ಷೆಗಳು ಕನ್ನಡ ಸೇರಿದಂತೆ ಭಾರತೀಯ ಭಾಷೆಯಲ್ಲಿ ಪಾರದರ್ಶಕವಾಗಿ ನಡೆಯಬೇಕೆಂದು ಅವರು ಬಯಸುವುದಿಲ್ಲವೇ?  ಅವರು ಬಹುಶಿಸ್ತಿನ ಶಿಕ್ಷಣವನ್ನು ವಿರೋಧಿಸುತ್ತಾರೆಯೇ? ಅವರು ವೃತ್ತಿಪರ ಶಿಕ್ಷಣ, ದೈಹಿಕ ಶಿಕ್ಷಣ, ಕಲೆ ಮತ್ತು ಕ್ರೀಡೆಗಳನ್ನು ಶಾಲಾ ಶಿಕ್ಷಣದಲ್ಲಿ ಅಧ್ಯಯನದ ನಿರ್ಣಾಯಕ ಕ್ಷೇತ್ರಗಳಾಗಿ ಏಕೀಕರಿಸುವುದನ್ನು ವಿರೋಧಿಸುತ್ತಾರೆಯೇ? ಎಂದು ಡಿಕೆಶಿಗೆ ಎಂಟು ಪ್ರಶ್ನೆಗಳನ್ನು ಕೇಳಿದ ಧರ್ಮೇಂದ್ರ ಪ್ರಧಾನ್.

ಮಕ್ಕಳ ಭವಿಷ್ಯದ ಜತೆ ಆಟ ಆಡಬೇಡಿ: ಕರ್ನಾಟಕದಲ್ಲಿ ಎನ್ಇಪಿ ರದ್ದು ನಿರ್ಧಾರ ಬಗ್ಗೆ ಧರ್ಮೇಂದ್ರ ಪ್ರಧಾನ್ ಪ್ರತಿಕ್ರಿಯೆ
ಧರ್ಮೇಂದ್ರ ಪ್ರಧಾನ್
Follow us
ರಶ್ಮಿ ಕಲ್ಲಕಟ್ಟ
|

Updated on: Aug 22, 2023 | 6:44 PM

ದೆಹಲಿ ಆಗಸ್ಟ್ 22: ಕರ್ನಾಟಕದಲ್ಲಿ (Karnataka) ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಷ್ಟ್ರೀಯ ಶಿಕ್ಷಣ ನೀತಿ (National Education Policy- NEP)  ರದ್ದು ಮಾಡುವುದಾಗಿ ಭರವಸೆ ನೀಡಿದ್ದೆವು. ಇದಕ್ಕೆ ನಾವು ಬದ್ಧ ಎಂದು ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಆಗಸ್ಟ್ 18ರಂದು ಸಾಮಾಜಿಕ ಮಾಧ್ಯಮ X ನಲ್ಲಿ ಟ್ವೀಟ್ ಮಾಡಿದ ಡಿಕೆಶಿ, ಅಧಿಕಾರಕ್ಕೆ ಬಂದ ನಂತರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಮಾಡುತ್ತೇವೆ ಎಂದು ಮಾತು ಕೊಟ್ಟಿದ್ದೆವು ಆ‌ ಮಾತಿಗೆ ನಾವು ಬದ್ಧರಾಗಿದ್ದೇವೆ. ಕರ್ನಾಟಕದಲ್ಲೇ ಮೊದಲು ಎನ್ಇಪಿ‌ ಜಾರಿ ಮಾಡುವ ತರಾತುರಿ ಏನಿದೆ? ಗುಜರಾತ್, ಉತ್ತರ ಪ್ರದೇಶದಲ್ಲಿ ಏಕೆ ಎನ್ಇಪಿ ಜಾರಿ ಮಾಡಿಲ್ಲ? ಕರ್ನಾಟಕದಲ್ಲಿರುವ ಶಿಕ್ಷಣ ವ್ಯವಸ್ಥೆ ದೇಶಕ್ಕೇ ಮಾದರಿಯಾಗಿದೆ. ಅದರಿಂದಾಗಿಯೇ ಇಂದು ಬೆಂಗಳೂರು ಐಟಿ ರಾಜಧಾನಿಯಾಗಿರುವುದು. ರಾಜ್ಯದಲ್ಲಿನ ಅದೆಷ್ಟೋ ಜನ ವಿದೇಶದಲ್ಲಿ ಒಳ್ಳೆ ಸ್ಥಾನದಲ್ಲಿದ್ದಾರೆ, ಅದಕ್ಕೂ ನಮ್ಮ ಶಿಕ್ಷಣ ವ್ಯವಸ್ಥೆಯೇ ಕಾರಣ ಎಂದು ಹೇಳಿದ್ದಾರೆ.

ಇದೀಗ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಎಂಟು ಪ್ರಶ್ನೆಗಳನ್ನು ಟ್ವೀಟ್ ಮಾಡಿದ್ದಾರೆ. ಸಚಿವರ ಟ್ವೀಟ್ ಹೀಗಿದೆ.

ನನ್ನ ಗೆಳೆಯ ಡಿಕೆ ಶಿವಕುಮಾರ್ ಅವರಿಗೆ ಪ್ರಶ್ನೆಗಳು

  1. ಅವರು ಮತ್ತು ಕಾಂಗ್ರೆಸ್ ಪಕ್ಷವು ಔಪಚಾರಿಕ ಶಿಕ್ಷಣದ ಭಾಗವಾಗಿ ಬಾಲ್ಯದ ಆರೈಕೆ ಮತ್ತು ಶಿಕ್ಷಣವನ್ನು ವಿರೋಧಿಸುತ್ತದೆಯೇ? ನಮ್ಮ ಮಕ್ಕಳು 2ನೇ ತರಗತಿಯನ್ನು ಪೂರ್ಣಗೊಳಿಸುವುದರೊಳಗೆ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರವನ್ನು ಸಾಧಿಸಬೇಕೆಂದು ಅವರು ಬಯಸುವುದಿಲ್ಲವೇ?
  2.  ಅವರು ಸ್ಥಳೀಯ ಭಾರತೀಯ ಆಟಿಕೆಗಳು, ಆಟಗಳು ಮತ್ತು ನಮ್ಮ ಮಕ್ಕಳಿಗೆ ಆಟದ ಆಧಾರಿತ ಕಲಿಕೆಯನ್ನು ವಿರೋಧಿಸುತ್ತಾರೆಯೇ? ಕರ್ನಾಟಕದಲ್ಲಿ ‘ಚೆನ್ನೆಮಣೆ’ಯನ್ನು ವಿರೋಧಿಸುತ್ತಾರಾ?
  3.  ಕನ್ನಡ ಮತ್ತು ಇತರ ಭಾರತೀಯ ಭಾಷಾ ಶಿಕ್ಷಣವನ್ನು ಅವರು ವಿರೋಧಿಸುತ್ತಾರೆಯೇ? NEET, CUET, JEE ಯಂತಹ ಪರೀಕ್ಷೆಗಳು ಕನ್ನಡ ಸೇರಿದಂತೆ ಭಾರತೀಯ ಭಾಷೆಯಲ್ಲಿ ಪಾರದರ್ಶಕವಾಗಿ ನಡೆಯಬೇಕೆಂದು ಅವರು ಬಯಸುವುದಿಲ್ಲವೇ?
  4.  ಅವರು ಬಹುಶಿಸ್ತಿನ ಶಿಕ್ಷಣವನ್ನು ವಿರೋಧಿಸುತ್ತಾರೆಯೇ? ಅವರು ವೃತ್ತಿಪರ ಶಿಕ್ಷಣ, ದೈಹಿಕ ಶಿಕ್ಷಣ, ಕಲೆ ಮತ್ತು ಕ್ರೀಡೆಗಳನ್ನು ಶಾಲಾ ಶಿಕ್ಷಣದಲ್ಲಿ ಅಧ್ಯಯನದ ನಿರ್ಣಾಯಕ ಕ್ಷೇತ್ರಗಳಾಗಿ ಏಕೀಕರಿಸುವುದನ್ನು ವಿರೋಧಿಸುತ್ತಾರೆಯೇ?
  5.  ಕರ್ನಾಟಕದ ಯುವಕರು ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಮೂಲಕ ವಿಶ್ವದರ್ಜೆಯ ಸಂಶೋಧನಾ ಸೌಲಭ್ಯಗಳನ್ನು ಪಡೆಯಬೇಕೆಂದು ಅವರು ಬಯಸುವುದಿಲ್ಲವೇ?
  6.  21 ನೇ ಶತಮಾನದಲ್ಲಿ ವಿದ್ಯಾರ್ಥಿಗಳು ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಬಗ್ಗೆ ಕಲಿಯಲು ಅವರು ಬಯಸುವುದಿಲ್ಲವೇ? 21ನೇ ಶತಮಾನದ ಶಿಕ್ಷಣಕ್ಕೆ ಸಂಬಂಧಿಸಿದ ಹೊಸ ಪಠ್ಯಪುಸ್ತಕಗಳು ಅವರಿಗೆ ಬೇಡವೇ?
  7.  ಕಲಿಯುವಾಗ ಗಳಿಸುವ ಅವಕಾಶಗಳನ್ನು ಅವರು ವಿರೋಧಿಸುತ್ತಾರೆ?
  8.  ಡಯಟ್‌ಗಳನ್ನು(DIET) ಶ್ರೇಷ್ಠತೆಯ ಕೇಂದ್ರಗಳಾಗಿ ಮರು ರೂಪಿಸುವ ಮೂಲಕ ನಮ್ಮ ಶಿಕ್ಷಕರ ಸಾಮರ್ಥ್ಯವನ್ನು ಬಲಪಡಿಸಲು ಅವರು ಬಯಸುವುದಿಲ್ಲವೇ?

ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಅಕ್ಬರ್​-ಬೀರಬಲ್​ ಬುದ್ಧಿವಂತಿಕೆ ಬಳಸಿ ಬಿಜೆಪಿ ನಾಯಕರನ್ನು ಅಣಕಿಸಿದ್ದು ಹೀಗೆ

ಎನ್‌ಇಪಿಯ ಮೇಲಿನ ಇಂತಹ ಅಸಂಬದ್ಧ ಹೇಳಿಕೆಗಳು ದೆಹಲಿಯಲ್ಲಿರುವ ಅವರ ರಾಜಕೀಯ ಯಜಮಾನರನ್ನು ಮೆಚ್ಚಿಸಬಹುದು. ಆದರೆ ಇದು ಕರ್ನಾಟಕದ ವಿದ್ಯಾರ್ಥಿಗಳ ಹಿತಾಸಕ್ತಿಗಳಿಗೆ ಧಕ್ಕೆ ತರುತ್ತದೆ ಎಂದು ಪ್ರಧಾನ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ